Saturday 19 November 2022

ಮಕ್ಕಳ ಸಾಹಿತ್ಯ ನೀತಿಕತೆ : ಆಸಕ್ತಿ


(ಗೂಗಲ್ ಚಿತ್ರ)

ಮಕ್ಕಳ ನೀತಿಕತೆ : ಆಸಕ್ತಿ
ಸಿಂಧು ಭಾರ್ಗವ ಬೆಂಗಳೂರು


ರಾಮಾಪುರ ಎಂಬ ಹಳ್ಳಿಯಲ್ಲಿ ಚಕ್ರಪಾಣಿ ತನ್ನ ಮಗನನ್ನು ಸೈಕಲಿನಲ್ಲಿ ಕೂರಿಸಿಕೊಂಡು ಸಂತೆಗೆ ಹೋಗುತ್ತಿದ್ದ. ಅಲ್ಲದೇ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದ. ಅವನ ಮಗ ರಾಜುವಿಗೆ ಸೈಕಲ್ ಕಲಿಯುವ ಆಸೆಯಾಯಿತು. ತಂದೆಯಲ್ಲಿ ಕೇಳಿದಾಗ ನೀನಿನ್ನು ಚಿಕ್ಕವನು ಇನ್ನೂ ಎರಡು ವರುಷ ಕಳೆಯಲಿ‌ ಎಂದರು. ಐದನೇ ತರಗತಿ ರಜಾ ಸಮಯದಲ್ಲಿ ರಾಜು ತಂದೆಯ ಸೈಕಲ್ ಏರಿ ಸವಾರಿ ಮಾಡಲು ಕಲಿತ. ಒಮ್ಮೆ‌ ಚರಂಡಿಗೆ ಹೋಗಿ ಬಿದ್ದು ಪೆಟ್ಟು ಮಾಡಿಕೊಂಡು ಬಂದ. ತಂದೆಗೆ ತಿಳಿದು ಚೆನ್ನಾಗಿ ಬೈದರು. ಒಂದು ವಾರ ಸೈಕಲ್‌ ಮುಟ್ಟಲು ಹೋಗಲಿಲ್ಲ. ನಂತರ ಮತ್ತೆ ತಂದೆ‌ಯ ಕಣ್ತಪ್ಪಿಸಿ ಸೈಕಲ್‌ ನಲ್ಲಿ ಸುತ್ತಾಡುತ್ತಿದ್ದ. ಅವನಿಗೆ ತುಂಬಾ ಚೆನ್ನಾಗಿ ಅಭ್ಯಾಸವಾಯಿತು. ಭಯ ಓಡಿಹೋಗಿ ಧೈರ್ಯ ಬಂದಿತು.


ವರುಷಗಳು ಕಳೆದವು. ರಾಜು ಹೈಸ್ಕೂಕು ಮೆಟ್ಟಿಲು ಏರಿದಾಗ ಚಕ್ರಪಾಣಿ ದ್ವಿಚಕ್ರ ವಾಹನ ಖರೀದಿಸಿದರು‌. ತನ್ನ ಹೊಲಕ್ಕೆ ಹೋಗುವುದು, ಡೈರಿಗೆ ಹೋಗಿ ಹಾಲುಕೊಡುವುದು ಮಾಡುತ್ತಿದ್ದರು. ಮಗನ ಗಮನ ದ್ವಿಚಕ್ರ ವಾಹನದ ಕಡೆಗೆ ಜಾರಿತು. ತಂದೆ ಹೇಗೆ ಚಲಾಯಿಸುತ್ತಾರೆ ಎಂದು ಗಮನಿಸುತ್ತಲೇ‌ ಇದ್ದ. ಒಮ್ಮೆ ಮಗನ ಗಮನಿಸಿದ ತಂದೆ "ನೋಡು, ಸ್ಕೂಟರ್ ಬಿಡಲು ಹದಿನೆಂಟು ವಯಸ್ಸು ದಾಟಿರಬೇಕು. ಎಲ್ಲಿಯಾದರೂ ಪೋಲಿಸರ‌ ಕೈಗೆ ಸಿಕ್ಕಿಬಿದ್ದರೆ ಅಷ್ಟೆ... ನಾನು ಹೇಳುವ ತನಕ ಸ್ಕೂಟರ್ ಮುಟ್ಟಬೇಡ..." ಎಂದು ಗದರಿಸಿದರು.

ರಾಜು ಸಪ್ಪೆ ಮುಖ ಮಾಡಿಕೊಂಡು ಮನೆಯೊಳಗೆ‌ ನಡೆದ.  ಆದರೂ ಅದನ್ನು ತೊಳೆಯುವುದು, ಚೆನ್ನಾಗಿ ತೊಳೆದು ಒರೆಸಿ ಪಳಪಳ ಹೊಳೆಯುವಂತೆ ಮಾಡುವುದು, ನಿಂತಿದ್ದ ಸ್ಕೂಟರ್ ಏರಿ ಹಾರನ್ ಹಾಕುವುದು, ವಿಪರೀತ ಆಸಕ್ತಿ ತೋರಿಸುತ್ತಿದ್ದ. ನಂತರ ತಂದೆಯೇ ಒಂದೊಳ್ಳೆ ದಿನ ನೋಡಿ ಸ್ಕೂಟರ್ ಕಲಿಸಿಕೊಡಲು ಮುಂದಾದರು. ರಾಜು ಬಹಳ ಉತ್ಸಾಹದಿಂದ ಅದನ್ನು ಕಲಿತ. ನಂತರ ಕಾಲೇಜು ಶಿಕ್ಷಣ ಪಡೆಯಲು ಹಾಸ್ಟೇಲು ಸೇರಿದ. ಅಲ್ಲಿ ಗೆಳೆಯರ ಜೊತೆ ಸೇರಿ ತನಗಿದ್ದ ಆಸಕ್ತಿಯನ್ನು ಬೆಳೆಸಿಕೊಂಡು ಕಾರು ಚಲಾಯಿಸಲು ಕಲಿತ.



ಡಿಗ್ರಿ ಮುಗಿಸಿ ಉದ್ಯೋಗ ಅರಸಿ ನಗರದ ಕಡೆಗೆ ಮುಖ ಮಾಡಿದ ರಾಜುವಿಗೆ ಯಾವ ಕೆಲಸವೂ ಸಿಗಲಿಲ್ಲ. ಬೇಸರವಾಯಿತು. ತಂದೆ ವಾಪಾಸು ಹಳ್ಳಿಗೆ ಬಂದು ಅವರ ಹೈನುಗಾರಿಕೆಯನ್ನೇ ಮುಂದುವರಿಸಲು ಹೇಳಿದರು. ರಾಜುವಿಗೆ ಇಷ್ಟವಿರಲಿಲ್ಲ. ಏನಾದರು ಮಾಡಿ‌ ನಗರದಲ್ಲಿ ಕೆಲಸಗಿಟ್ಟಿಸಿಕೊಳ್ಳಲು ಹೋರಾಡಿದನು. ಕೊನೆಗೆ ಕಾರು ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಳ್ಳಲು ಮುಂದಾದನು.


ಕಾರುಗಳ ಮಾಲಿಕ ಮಹಾದೇವಪ್ಪ ಅವರ ಬಳಿ ಕಾರಿನ ಡ್ರೈವರ್ ಆಗಿ ಕೆಲಸ ಕೇಳಿ ನಿಂತನು. ಆಗ "ನಿನ್ನ ಬಗ್ಗೆ ನಂಬಿಕೆ ಮೂಡಬೇಕಾದರೆ ನೀನು ಮೊದಲು ಕ್ಲೀನರ್ ಆಗಿ ಕೆಲಸ ಮಾಡು. ನಿನ್ನ ನಿಯತ್ತನ್ನು ಪರೀಕ್ಷಿಸಿ ಡ್ರೈವರ್ ಕೆಲಸ ಕೊಡಿಸುವೆ.." ಎಂದರು. ರಾಜು ಒಪ್ಪಿದ. ಕ್ಲೀನರ್ ಕೆಲಸಕ್ಕೆ ಸೇರಿಕೊಂಡನು. ಆದರೆ ಮನೆಗೆ ಕರೆಮಾಡಿ ತಾನು ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿರುವೆ ಎಂದು ಹೇಳಿದನು. ಸುಳ್ಳೆಂದು ಭಾವಿಸಿದರೂ ಅದು ಅವನಲ್ಲಿನ ಆತ್ಮವಿಶ್ವಾಸವಾಗಿತ್ತು. ಹೀಗೆ ಮೂರು ಮಾಸಗಳು ಕಳೆಯುವಷ್ಟರಲ್ಲಿ ಕಾರನ್ನು ಚೆನ್ನಾಗಿ ತೊಳೆಯುವುದಲ್ಲದೇ, ರಿಪೇರಿ ಕೆಲಸ ಮಾಡುವುದನ್ನು ಕಲಿತಿದ್ದ. ಈತನ ಆಸಕ್ತಿ ಹಾಗೂ ಚುರುಕುತನ ಗಮನಿಸಿ ಮಹಾದೇವಪ್ಪನವರು ತಮ್ಮಲ್ಲೇ ಡ್ರೈವರ್ ಕೆಲಸವನ್ನು ಕೊಡಿಸಿದರು.

ನೋಡಿದರಾ ಮಕ್ಕಳೇ ನಮ್ಮಲ್ಲಿರುವ ಆಸಕ್ತಿಯೇ ನಮ್ಮ‌ ಜೀವನಕ್ಕೆ ದಾರಿಯಾಗುವುದು. ಬದುಕು ಕಟ್ಟಿಕೊಡುವುದು. ಹಾಗಾಗಿ ಏನಾದರೂ ಒಂದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೊಸತನಕ್ಕೆ ಒಗ್ಗಿಕೊಳ್ಳಬೇಕು. ಏನಾದರೊಂದು ಕಲಿಯುವ ತುಡಿತ ನಮ್ಮಲ್ಲಿರಬೇಕು.

...

 

ಮಕ್ಕಳ ಸಾಹಿತ್ಯ ಶಿಶುಗೀತೆ : ಚಂದಮಾಮ

ಶಿಶುಪ್ರಾಸ :: ಮಕ್ಕಳ ಸಾಹಿತ್ಯ

(ಗೂಗಲ್ ಚಿತ್ರ)

ಶೀರ್ಷಿಕೆ  : ಚಕ್ಕುಲಿಮಾಮ


ಚಂದಮಾಮ ಚಕ್ಕುಲಿಯಂತೆ ದುಂಡಗಿರುವನು

ಬೆಳ್ಳಗಿನ ಹಾಲಿನಂತೆ ಹೊಳೆಯುತಿರುವನು

ತೆಂಗಿನ ಗರಿಗಳ ನಡುವೆ ನಗುತಲಿರುವನು

ಕಚ್ಚಾಮುಚ್ಚಾಲೆ ಆಟವಾಡಲು ಸಹಾಯ ಮಾಡುವನು

ಮಿನುಗುವ ತಾರೆಗಳೇ ಅವಗೆ ಗೆಳೆಯರು

ನಾನು ಸೋಮು, ಸೀನನಂತೆ ಜೊತೆಗೆ ಇರುವರು


- ಸಿಂಧು ಭಾರ್ಗವ ಬೆಂಗಳೂರು

ಮಕ್ಕಳ ಸಾಹಿತ್ಯ ಶಿಶುಪ್ರಾಸ ಇತ್ತ ಕೇಳಿರಿ ಮುದ್ದು ಮಕ್ಕಳೇ...

ಶಿಶುಪ್ರಾಸ : ಇತ್ತ ಕೇಳಿರಿ ಮುದ್ದು ಮಕ್ಕಳೇ....


ಗೂಗಲ್ ಚಿತ್ರ ಕೃಪೆ



 ಮಕ್ಕಳ ಪದ್ಯ : ಇತ್ತ ಕೇಳಿರಿ ಮುದ್ದು ಮಕ್ಕಳೇ....



ಹಕ್ಕಿಗಳಂತೆ ಹಾರುತಿರಿ

ಹೂವುಗಳಂತೆ ಅರಳುತಿರಿ

ಮಕ್ಕಳ ಕಲರವ ಕೇಳುತಲಿರಲಿ

ಮನದ ನೋವು ಆರುತಿರಲಿ


ಹೊನ್ನಿನ ಗುಣವು ನಿಮ್ಮದಾಗಲಿ

ಕಂಗಳಲ್ಲಿ ಕಾಂತಿ ತುಂಬಲಿ

ಆಶಾಭಾವವು ಮನದಲ್ಲಿರಲಿ

ಕನಸುಗಳೆಲ್ಲವು ಕೈಗೂಡಲಿ


ಮೋಸದ ಜಾಲಕೆ ಸಿಲುಕದಿರಿ

ನಾಜೂಕಿನ ಮಾತಿಗೆ ಸೋಲದಿರಿ

ದ್ವೇಷವನೆಂದಿಗೂ ಕಾರದಿರಿ

ಬದುಕನು ವಿನಾಶಕೆ ನೂಕದಿರಿ


ಬದುಕಿನ ಬಗೆಗೆ ಗುರಿಯೊಂದಿರಲಿ

ಸೋತರು ಗೆಲ್ಲುವ ಛಲವೊಂದಿರಲಿ

ಹಿರಿಯರ ಕಂಡರೆ ಗೌರವವಿರಲಿ

ನಡತೆಯಲ್ಲಿ ವಿನಯವು ಇರಲಿ


- ಸಿಂಧು ಭಾರ್ಗವ ಬೆಂಗಳೂರು

Friday 1 October 2021

Kannada Nursery Rhymes For Kids ಶಿಶುಗೀತೆಗಳು ಮಕ್ಕಳ ಸಾಹಿತ್ಯ

ಮಕ್ಕಳ ಸಾಹಿತ್ಯ ಐದು ಶಿಶುಗೀತೆಗಳು

Kannada Nursery Rhymes. Kids songs Lyrics. 


೧) ಮುದ್ದು ತಮ್ಮ

ಬಾ ಬಾರೋ ತಮ್ಮ ನನ್ನ ಪ್ರೀತಿಯ ತಮ್ಮ
ಬಾ ಬಾರೋ ತಮ್ಮ ಅಮ್ಮನ ಮುದ್ದು ಗುಮ್ಮ
ಗೊಂಬೆ ಜೊತೆಗೆ ಆಟವಾಡಿ ಕುಣಿದಾಡುವ
ಕಿಟಕಿಯಿಂದ ಹೊರನೋಡಿ ಚಪ್ಪಾಳೆ ತಟ್ಟುವ
ಅಂಬೆಗಾಲಿಡುತ ಮನೆಯೆಲ್ಲ ಸುತ್ತುವ
ಗೊಂಬೆಯ ಕಸಿದರೆ ಬೇಕೆಂದು ಹಠಹಿಡಿಯುವ
ಅಮ್ಮ ಬಂದು ಎತ್ತಿಕೊಂಡು ಮುತ್ತನಿಟ್ಟರೆ
ಕಿಲಕಿಲನೆ ನಗುತ ಅಳುವ ನಿಲ್ಲಿಸುವ!!



(೨) ಹಕ್ಕಿ ಗೂಡು

ನಮ್ಮ‌ ಮನೆಯ ಹಿತ್ತಲಲ್ಲಿ ತೊಗರಿ ಗಿಡವೊಂದಿದೆ
ಗುಬ್ಬಿಯೊಂದು ಸಣ್ಣದಾದ ಗೂಡುಕಟ್ಟಿದೆ
ಚಿಕ್ಕ ಚಿಕ್ಕ ಮೊಟ್ಟೆಯಿಟ್ಟು ಕಾವು ಕೊಡುತಲಿರುವುದು
ಹಗಲು ರಾತ್ರಿ ತತ್ತಿಯನ್ನು ಆರೈಕೆ ಮಾಡುವುದು

ದಿನಗಳುರುಳಿ ಮೊಟ್ಟೆ ಒಡೆದು ಮರಿಗಳು ಹೊರಬಂದವು
ಗುಬ್ಬಿಯ ಸಂತಸವು ಮುಗಿಲು ಮುಟ್ಟಿದೆ!!



(೩) ಪುಟ್ಟನ ಪ್ರಶ್ನೆ

ಅಮ್ಮ ಅಮ್ಮ ಚಿಟ್ಟೆಗಳೇಕೆ
ಹೂವಿಂದ ಹೂವಿಗೆ ಹಾರುವವು?
ಸಿಹಿಸಿಹಿಯಾದ ಮಕರಂದವ ಹೀರಲು
ಹೂವುಗಳ ಭೇಟಿ ಮಾಡುವವು..

ಅಮ್ಮ ಅಮ್ಮ ಮೀನುಗಳೇಕೆ ನೀರಿನಲಿ ಈಜುವವು
ನೆಲದಲಿ ಮೀನು ಉಸಿರಾಡಲು ಆಗದೆ ಹೊರಳಿ ಹೊರಳಿ ಸಾಯುವವು
ಅಮ್ಮ ಅಮ್ಮ ಮೋಡಗಳೇಕೆ ಕಪ್ಪು ಕಪ್ಪಾಗಿದೆ?!
ಮಳೆಯು ಬರಲು ಕರಿಮೋಡವು ಬೇಕು ಮಗುವೆ..




(೪) ಬಣ್ಣದ ಗೊಂಬೆ

ನನ್ನಯ ಮುದ್ದಿನ ಗೊಂಬೆ
ಬಣ್ಣ ಬಣ್ಣದ ಗೊಂಬೆ
ಹಬ್ಬದಲ್ಲಿ ಕಂಡ ಗೊಂಬೆ
ಅಪ್ಪ ಕೊಡಿಸಿದ ಗೊಂಬೆ

ಅಣ್ಣನು ಕಸಿದುಕೊಂಡನು
ನೀರಲಿ ಎಸೆದು ಬಿಟ್ಟನು
ಗೊಂಬೆಯ ಬಣ್ಣವು ಕರಗಿತು
ಬೇಸರದಿ ಅಳುವು ಬಂದಿತು!!




(೫) ಪುಟ್ಟಿಯ ಕೋಪ

ಅಮ್ಮನ ಮೇಲೆ ಬಂದಿದೆ ಕೋಪವು
ಅಂಗಳದಲ್ಲಿ ಕುಳಿತಳು ಪುಟ್ಟಿಯು
ನ್ನವ ಕಲಸಿ ಅಮ್ಮನು ಬಂದರು
ಆಗಸದಲ್ಲಿನ ಚಂದ್ರನ ತೋರಿಸಿದರು

ಹುಣ್ಣಿಮೆ ಬೆಳಕು ಅಂಗಳದಲ್ಲಿ
ಮಲ್ಲಿಗೆ ಮೊಗ್ಗು ಅರಳಿದೆ ನೋಡಲ್ಲಿ
ಬಿಡು ಮಗುವೆ ಕೋಪವನು
ಗೊಂಬೆಯ ನಾನು ಕೊಡಿಸುವೆನು

ಚಂದಿರನ ತೋರಿಸುತ , ಮಲ್ಲಿಗೆಯ ಕೈಗಿಡುತ
ಅಮ್ಮ ಕತೆಯನು ಹೇಳುತ ಊಟವ ಮಾಡಿಸಿದಳು..
ಮುನಿಸನು ಮರೆತು ಪುಟ್ಟಿಯು ಅಮ್ಮನ ಅಪ್ಪಿಕೊಂಡಳು..

- ಸಿಂಧು ಭಾರ್ಗವ, ಬೆಂಗಳೂರು



Tuesday 28 September 2021

ಮಕ್ಕಳ ನೀತಿ ಕತೆ ತಂದೆಯ ಜಾಣ್ಮೆ

 

Source images Kannada kids Stories

ಅಜ್ಜಿ ಹೇಳಿದ ಕಥೆ: ತಂದೆಯ ಜಾಣ್ಮೆ

ಪುಟ್ಟಿ ರಕ್ಷಾ ಬಂಧನದ ದಿನ ಬೇಸರ ಮಾಡಿಕೊಂಡು ಕುಳಿತಿದ್ದಳು. ನನಗೆ ಅಣ್ಣ ಇಲ್ಲ. ರಾಖಿ ಕಟ್ಟಬೇಕು ಎಂದು ಅಳುತ್ತಿದ್ದಳು. ಅಮ್ಮ ಎಷ್ಟು ಸಮಾಧಾನ ಮಾಡಿದರು ಸರಿಯಾಗಲಿಲ್ಲ. ಶಾಲೆಗೆ ಹೋಗುವುದಿಲ್ಲ ಎಂದು ಅಳುತ್ತಿದ್ದಳು. "ನನಗೆ ಅಣ್ಣ ಬೇಕು...." ಎಂದು ಅಳುವುದು ಜೋರಾಯಿತು. ತಂದೆಗೆ ತಲೆಬಿಸಿಯಾಯಿತು‌. ಆಗ ಒಂದು ಉಪಾಯ ಮಾಡಿದರು. ಅಂಗಡಿಗೆ ಹೋಗಿ ಸುಂದರವಾದ
ರಾಖಿಗಳನ್ನು ತಂದರು. ನಂತರ ಅಕ್ಕಪಕ್ಕದ ಮನೆಯ ಮಕ್ಕಳನ್ನೆಲ್ಲ ಕರೆದು ಒಂದೊಂದು ರಾಖಿ ನೀಡಿ "ನಿಮ್ಮ ಪುಟ್ಟ ತಂಗಿಗೆ ಪ್ರೀತಿಯಿಂದ ರಾಖಿ ಕಟ್ಟಲು ಹೇಳಿ.." ಎಂದರು. ರಕ್ಷಾ ಬಂಧನಕ್ಕೆ ಮೆರುಗು ಬಂದಿತು. ಮನೆಗೆ ಬಂದ ಮಕ್ಕಳಿಗೆ ಸಿಹಿಯನ್ನು ಹಂಚಿದರು. ಮಕ್ಕಳಿಗೂ ಖುಷಿಯಾಯಿತು. ಪುಟ್ಟಿಗೆ ಕೂಡ ಎಲ್ಲಿಲ್ಲದ ಸಂಭ್ರಮ.

- ಸಿಂಧು ಭಾರ್ಗವ, ಬೆಂಗಳೂರು




ಮಕ್ಕಳ ಪದ್ಯ ಬೆಳ್ಳಕ್ಕಿ ಹಾಗೂ ಸಲಗನ ಗೆಳೆತನ

 



ಮಕ್ಕಳ ಪದ್ಯ  : ಬೆಳ್ಳಕ್ಕಿ ಹಾಗೂ ಸಲಗನ ಗೆಳೆತನ ( Friendship)

ಕೆರೆಯ ಬಳಿಯು ಸಲಗವೊಂದು
ಹುಲ್ಲು ತಿನ್ನಲು ಬರುವುದು
ಬೆಳ್ಳಕ್ಕಿಯು ಅದರ ಬೆನ್ನನೇರಿ
ಕುಳಿತುಕೊಳುವುದು//

ಹೇನುಗಳ ಕಾಟವೊಮ್ಮೆ
ವಿಪರೀತ ಅನಿಸಿತು
ಗಜದ ಮೈಗೆ ಕಚ್ಚಿ ಕಚ್ಚಿ
ರಕುತ ಹೀರುತ್ತಿದ್ದವು//

ಆನೆ ತನ್ನ ಸೋಂಡಿನಿಂದ
ಮೈಗೆ ಬಡಿದುಕೊಳ್ಳಲು,
ಕೊಕ್ಕರೆಯು ಕ್ಷಣಕೆ ಬಂದು
ಸಲಹೆಯನ್ನು ನೀಡಿತು//

ನಿನ್ನ ಮೈಯಲಿರುವ ಹೇನ
ನಾನು ತಿನುವೆ ಎಂದಿತು
ಹರುಷದಿಂದ ಗಜವು ಒಪ್ಪಿ
ಚಿಂತೆ ಕಳೆದುಕೊಂಡಿತು//

ಕೊಕ್ಕರೆಯು ಹೊಟ್ಟೆ ತುಂಬಾ
ಹೇನುಗಳ ತಿಂದಿತು
ಗಜದ ಜೊತೆಗೆ ಅನುದಿನವು
ನೇಹ ಬೆಳೆಸಿಕೊಂಡಿತು//

- ಸಿಂಧು ಭಾರ್ಗವ ,ಬೆಂಗಳೂರು

ಶಿಶುಗೀತೆಗಳು ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ

 

ಐದು ಶಿಶುಗೀತೆಗಳು - 

ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ 



Source Images. Kannada Kids Rhymes


ಶಿಶುಗೀತೆ : ಚಿಟ್ಟೆ

ಕಪ್ಪು ರೆಕ್ಕೆಯ ಚಿಟ್ಟೆಯೇ
ಬಿಳಿಯ ಚುಕ್ಕಿಯನ್ಯಾರು ಇಟ್ಟರು??
ನಿನ್ನಯ ರೂಪ ಸೌಂದರ್ಯವ
ಸುಂದರವಾಗಿಸಿದವರು ಯಾರು??

ಹೂವಿಂದ ಹೂವಿಗೆ ಹಾರುತ
ಗುಸುಗುಸು ಮಾತನಾಡುವೆ ನೀನು
ಹೂವಿನ ಮಧುವನು ಹೀರುತ
ಹೊಟ್ಟೆಯ ತುಂಬಿಸಿಕೊಳ್ಳುವೆ ನೀನು

(೨)

ಕಾಲಗಳು

ಮಳೆಗಾಲ ಬೇಡವೇ ಬೇಡವಮ್ಮ
ಶಾಲೆಗೆ ಹೋಗಲು ಅಡೆತಡೆಯಮ್ಮ
ಸಮವಸ್ತ್ರವು ಹಾಳಾಗುವುದು
ಗುಡುಗು ಮಿಂಚಿಗೆ ಮನ ಹೆದರುವುದು

ಬೇಸಿಗೆ ಕಾಲವೇ ಬಲುಚಂದ
ಮನೆಮಂದಿಯೆಲ್ಲ ಜೊತೆಗೆ ಸೇರಿ
ಹಪ್ಪಳ ಸೆಂಡಿಗೆ ಮಾಡುವ ಚಂದ

ಚಳಿಗಾಲಕೆ ,ಚಳಿ ವಿಪರೀತ
ಗಡಗಡ ನಡುಗುವ ಗಮ್ಮತ್ತ
ಕಂಬಳಿ ಹೊದ್ದು ಮಲಗಿದರೆ
ಮುಂಜಾನೆ ಏಳಲು ಮನಸ್ಸಿಲ್ಲ, ಖರೆ.!!

೩) ಸಾಧನೆ

ಸಾಧನೆ ಮಾಡಿದ ಮಹಾಪುರುಷರ
ಕತೆಯನು ಗುರುಗಳು ಹೇಳುವರು
ಹುರುಪನು ನೀಡುತ ಮಕ್ಕಳ ಮನದಲಿ
ಕನಸುಗಳ ತುಂಬುವರು

ಭವಿಷ್ಯದ ಕುಡಿಗಳು ನಾವೆಲ್ಲರು
ಜೊತೆಯಾಗಿ ಸಾಗೋಣ
ವಿದ್ಯೆ ಕಲಿತು ಯಶವ ಸಾಧಿಸಿ
ಹೆತ್ತವರಿಗೆ ಕೀರ್ತಿಯ ತರೋಣ.

Source Images : Kannada kids rhymes. 


೪) ಸಮಾನತೆ
ಇರಬೇಕು ಎಲ್ಲ ಕಡೆ ಸಮಾನತೆಯ ಗಂಧ
ಹರಡಲಿ ಸ್ನೇಹ ಸೌಹಾರ್ದತೆ ಸೌಗಂಧ
ಜಾತಿಮತದ ಕೊಳೆಯ ತೊಳೆದು ಹಾಕೋಣ
ಮಾನವೀಯತೆಯ ಹೂವ ಕೈಗೆ ನೀಡೋಣ

ಎಲ್ಲರೂ ಒಂದೆ ಇಲ್ಲಿ ಭಾರತಾಂಬೆಯ ಮಕ್ಕಳು
ಎಲ್ಲರ ದೇಹದಲ್ಲಿ ಹರಿವುದು ಕೆಂಪು ನೆತ್ತರು
ಹೊಡೆದಾಟ ಬಡಿದಾಟ ಬೇಡವೇ ಬೇಡ
ಶಾನಮತಿಯ ಪಾರಿವಾಳ ಹಾರಲಿ ಈಗ

೫) ಸಂತೆಗೆ ಹೋಗೋಣ
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ
ಬಣ್ಣ ಬಣ್ಣದ ರಿಬ್ಬನ್ ಬಲೂನನು ನನಗೆ ಕೊಡಿಸಣ್ಣ
ಕಬ್ಬಿನ ಹಾಲನು ಕುಡಿದು ನಾವು ಗಟ್ಟಿಯಾಗೋಣ
ದೊಡ್ಡ ಚಕ್ರದ ತೊಟ್ಟಿಲಲಿ ಕುಳಿತು ಸುತ್ತು ಸುತ್ತೋಣ!!

ಅಮ್ಮನಿಗಾಗಿ ಗಾಜಿನ ಬಳೆಗಳು
ಅಪ್ಪನಿಗಾಗಿ ಕೂಲಿಂಗ್ಲಾಸು
ತಮ್ಮನಿಗಾಗಿ ಆಟಿಕೆ ತೆಗೆದು ಮನೆಗೆ ಸಾಗೋಣ..
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ!!

- ಸಿಂಧು ಭಾರ್ಗವ, ಬೆಂಗಳೂರು
ಮಕ್ಕಳ ಸಾಹಿತಿ.