Showing posts with label 8th century. Show all posts
Showing posts with label 8th century. Show all posts

Tuesday, 28 September 2021

Kids stories ಮಕ್ಕಳ ಕತೆ : ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳು

 

ಮಕ್ಕಳ ಕತೆ : ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳು



Source image Kannada Kids Moral Stories.


ರಾಮಪುರ ಎಂಬ ಸುಂದರ ಗ್ರಾಮವು ಹಸಿರುಹೊದ್ದ ಕಾನವಾಗಿತ್ತು. ಅಲ್ಲಿನ ಪ್ರತಿಯೊಬ್ಬರು ಕೃಷಿ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಮಹದಾಸೆ ಎಲ್ಲ ಹೆತ್ತವರ ಮನದಲ್ಲಿತ್ತು. ಅದೊಂದು ರಸ್ತೆಯೂ ಇಲ್ಲದ ಬಸ್ಸು ಬಾರದ ಕುಗ್ರಾಮವಾಗಿತ್ತು. ಹೀಗಿದ್ದರು ಸಣ್ಣದೊಂದು ಶಾಲೆ ತಲೆಎತ್ತಿ ನಿಂತಾಗ ಪ್ರತಿಮನೆಯಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ರಾಮಣ್ಣನ ಮಕ್ಕಳು ಪುಷ್ಪ ಮತ್ತು ಪ್ರಸಾದ್ ಅಣ್ಣ ತಂಗಿಯರು ಕೂಡ ಬಹಳ ಉತ್ಸಾಹದಿಂದ ಶಾಲೆಗೆ ಹೋಗುತ್ತಿದ್ದರು. ಏಳನೇ ತರಗತಿ ಮುಗಿಸಿ ಹೈಸ್ಕೂಲ್ ಗೆ ಹೋಗುವ ಸಮಯ ಬಂದಿತು. ಕಾಡು ಮಾರ್ಗದಲ್ಲಿ  ಹೋಗುವುದು ಭಯವಾಗುತ್ತಿತ್ತು. ಹಾಗಾಗಿ ಹೆಣ್ಮಕ್ಕಳಿಗೆ ಮನೆಯವರು ಕಳುಹಿಸುತ್ತಿರಲಿಲ್ಲ. ಹುಡುಗರು ತಮ್ಮ ಸೈಕಲ್ ಏರಿ ಹೈಸ್ಕೂಲ್ ಮುಗಿಸಿದರು. ಇದರಿಂದ ಪುಷ್ಪಳಿಗೆ ಬಹಳ ಬೇಸರವಾಯಿತು‌. ತನ್ನ ಓದುವ ಕನಸು ಕಮರಿಹೋಯಿತು.

ಹೀಗಿದ್ದಾಗ ತಂದೆಗೆ ಒತ್ತಾಯ ಮಾಡಿ ಶಾಲೆಗೆ ಕಳುಹಿಸಲು ಹೇಳಿದಳು. ಮೊದಮೊದಲು ಒಪ್ಪದ ತಂದೆ ನಂತರದಲ್ಲಿ ಒಪ್ಪಿಗೆ ಸೂಚಿಸಿದರು. ಆ ಹಳ್ಳಿಯಲ್ಲಿ ಅವಳೊಬ್ಬಳೇ ಹೈಸ್ಕೂಲು ಮೆಟ್ಟಿಲು ಹತ್ತಿದವಳು ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಇದು ಅವಳಲ್ಲಿ ಜಂಭೂಡಿಸದಲು ಎಡೆಮಾಡಿಕೊಟ್ಟಿತು. ತಂದೆಯ ಬಳಿ ಯಾವಾಗಲೂ ಹಣ ಕೇಳುವುದು. ಕಂಡದ್ದನ್ನೆಲ್ಲ ಖರೀದಿಸಿ ದುಂದುವೆಚ್ಚ ಮಾಡುವುದು. ತಂದೆ ಏಕೆ ಇಷ್ಟು ಹಣ? ಎಂದು ಕೇಳಿದರೆ "ಶಾಲೆಯಲ್ಲಿ ಹೇಳಿದ್ದಾರೆ... " ಎಂದು ಸುಳ್ಳು ಹೇಳುವುದು.

ಹೀಗೆ ಒಂಭತ್ತನೇ ತರಗತಿಗೆ ಬರುವಷ್ಟರಲ್ಲಿ ಸ್ನೇಹಿತರ ದೊಡ್ಡ ಗುಂಪೇ ಅವಳೊಂದಿಗೆ ಜೊತೆಯಾಗಿತ್ತು. ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು. ಸುದ್ದಿ ಕೇಳಿದ ತಂದೆಗೆ ಎಲ್ಲಿಲ್ಲದ ಆಘಾತವಾಯಿತು. ಜೊತೆಗೆ ಅಂಕಪಟ್ಟಿಗೆ ಸಹಿ ಹಾಕಲು ಶಾಲೆಗೆ ಬರಲು ಹೇಳಿದ್ದರು. ಒಮ್ಮೆಯೂ ಶಾಲೆ ಕಡೆಗೆ ಮುಖ ಮಾಡದ ರಾಮಣ್ಣನಿಗೆ ಅವಮಾನವಾಯಿತು. ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಮಾತು ಕೇಳಿ ತಮ್ಮ ಕಿವಿಯನ್ನೇ ನಂಬಲು ಅಸಾಧ್ಯವಾಯಿತು. "ನಿಮ್ಮ ಮಗಳು ಓದಿನಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ತರಗತಿಗೂ ಸರಿಯಾಗಿ ಬರುತ್ತಿಲ್ಲ. ಬದಲಾಗಿ ಹುಡುಗರ ಜೊತೆಗೆ ಅಲ್ಲಲ್ಲಿ ತಿರುಗಾಡುತ್ತಿರುವುದನ್ನುಉಳಿದ ವಿದ್ಯಾರ್ಥಿಗಳು, ಶಿಕ್ಷಕರು ಸಹ ನೋಡಿದ್ದಾರೆ. ಅವಳು ಹಾದಿ ತಪ್ಪುವ ಮೊದಲು ಬೈದು ಬುದ್ದಿಹೇಳಿ. ಈ ವಿಷಯವನ್ನು ತಿಳಿಸಲೆಂದೇ ನಿಮ್ಮನ್ನು ವೈಯಕ್ತಿಕವಾಗಿ ಕರೆಯಬೇಕಾಯಿತು ಎಂದರು.

ತಂದೆಗೆ ತಲೆಬಿಸಿಯಾಯಿತು‌. ಸಂಜೆ ಮಗಳು ಮನೆಗೆ ಬರುವುದನ್ನೇ ಕಾಯುತ್ತ ಕುಳಿತಿದ್ದರು. ಮಗನ ಜೊತೆಗೆ ಬಾರದೇ ಇರುವುದನ್ನು ನೋಡಿ ಕೋಪ ನೆತ್ತಿಗೇರಿತು. ತನ್ನ ಮಡದಿಯನ್ನು ಕರೆದು ಮಗ ಬರುವ ತನಕ ಕಾದು ಎಲ್ಲರೂ ಜೊತೆಗಿದ್ದ ಸಮಯ ನೋಡಿ ಮಗಳಿಗೆ ಚೆನ್ನಾಗಿ ಬೈದು ಬುದ್ದಿಮಾತನ್ನು ಹೇಳಿದರು. ಅವರು ಕೇಳಿದ ಪ್ರಶ್ನೆಗಳಿಗೆ ಅಣ್ಣನು ಕೂಡ ಹೌದು, ನಾನೆಷ್ಟು ಹೇಳಿದರು ನನ್ನ ಮಾತನ್ನು ಕೇಳುತ್ತಿಲ್ಲ. ಎಲ್ಲ ಹುಡುಗರ ಎದುರೇ ಅವಮಾನ ಮಾಡುತ್ತಾಳೆ ಎಂದನು.

ಮಗಳಿಗೆ ನೀಡಿದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಚಿತವಾಯಿತು. ನೀನಿನ್ನು ಶಾಲೆಗೆ ಹೋಗುವುದು ಬೇಡ ಎಂದು ಗದರಿಸಿದರು. ಒಂಭತ್ತನೇ ತರಗತಿಯು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಪುಷ್ಪಾಳಿಗೆ ಎಲ್ಲಿಲ್ಲದ ದುಃಖವಾಯಿತು. ಒಮ್ಮೆ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದಾಗ ತಂದೆಯ ಕೋಣೆಗೆ ಹೋಗಿ ಕಾಲಿಗೆ ಬಿದ್ದಳು. " ಇಲ್ಲ ಅಪ್ಪ ನಾನಿನ್ನು ಈ ತರಹ ಮಾಡುವುದಿಲ್ಲ. ದಯಮಾಡಿ ಓದಲು ಕಳುಹಿಸಿ. ನಾನು ಅಣ್ಣನಂತೆ ಚೆನ್ನಾಗಿ ಓದಿ ಕೆಲಸಕ್ಕೆ ಸೇರುವೆ. ಕಾಲೇಜು ಡಿಗ್ರಿ ಓದುವ ಕನಸಿದೆ. ನನ್ನ ತಪ್ಪಿನ ಅರಿವಾಗಿದೆ..." ಎಂದು ಕೇಳಿಕೊಂಡಳು.

Source image. Kannada kids Stories. 


ಮರುದಿನ ಮಗಳನ್ನು ಕರೆದುಕೊಂಡು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರ ಬಳಿ ಮಾತನಾಡಿ ಮತ್ತೆ ಶಾಲೆಗೆ ಬರಲು ಅನುಮತಿ ದೊರಕಿತು. ಪರೀಕ್ಷೆಯಲ್ಲಿ ಪಾಸಾದಳು. ಮುಂದೆಂದೂ ಈ ರೀತಿಯ ತಪ್ಪನ್ನು ಮಾಡಲು ಹೋಗಲಿಲ್ಲ.

ಓದುವ ವಯಸ್ಸಿನಲ್ಲಿ ಅನ್ಯ ವಿಷಯದ ಬಗ್ಗೆ ಆಸಕ್ತಿ ಆಕರ್ಷಣೆ ಮೂಡುವುದು ಸಹಜ. ಏನೂ ಅರಿಯದ, ಮುಂದಾಗುವ ಅಪಾಯವನ್ನೇ ಊಹಿಸದ ಹರೆಯದ ಮನಸ್ಸು ಮನೆಯವರೇ ದೂರದವರಂತೆ ಭಾವಿಸಿ ಹೊರಗಿನವರನ್ನು ನೆಚ್ಚಿಕೊಳ್ಳುವುದು. ಹೆತ್ತವರು ಸರಿಯಾದ ಮಾರ್ಗದರ್ಶನ ನೀಡಿ ಸರಿದಾರಿಗೆ ತರುವುದು ದೊಡ್ಡ ಜವಾಬ್ದಾರಿಯಾಗಿದೆ.

- ಸಿಂಧು ಭಾರ್ಗವ ಬೆಂಗಳೂರು

Thursday, 6 June 2019

Kanakadhara stotram behind story in kannada

(Google pick ) Adi Shankaracharyaru

Kanakadhara stotra.( Google pick)

ಪೌರಾಣಿಕ ಕಥೆ : ಶಂಕರಾಚಾರ್ಯ ಕೃತ ಕನಕಧಾರಾ ಸ್ತೋತ್ರ

ಇದು ೮ನೇ ಶತಮಾನದ ಕಥೆ‌ . ತಮ್ಮ ಎಂಟನೇ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ ಬಾಲ ಶಂಕರಾಚಾರ್ಯರು ಎಂದಿನಂತೆ ತಮ್ಮ ಶಿಷ್ಯರೊಡನೆ ಕೇರಳದ ಹಳ್ಳಿಯೊಂದಕ್ಕೆ ಬರುತ್ತಾರೆ. ಮಧುಕರ ವೃತ್ತಿಯನ್ನು ಅನುಸರಿಸುತ್ತಾ ಹೊರಟಿದ್ದರು. ಹೀಗೆ ಮಾರ್ಗಮಧ್ಯದಲ್ಲಿ ಒಂದು ಮುರುಕು‌ಮನೆ ಕಾಣಿಸಿತು. ಆ ಮನೆಯ ಎದುರು ನಿಂತು "ಭವತಿ ಭಿಕ್ಷಾಂದೇಹಿ" ಎಂದು ಕೂಗಿದರು. ಆಗ ಮನೆಯ ಬಡಬ್ರಾಹ್ಮಣ ಹೆಂಗಸಿಗೆ ದಿಗಿಲಾಯಿತು. ಕಾರಣ ಕಿತ್ತು ತಿನ್ನುವ ಬಡತನ. ಭಿಕ್ಷೆಗೆ ಕೊಡಲು ಏನೂ ಅವರಲ್ಲಿ ಇರಲಿಲ್ಲ. ಹಾಗೆಯೆ ಯತಿಗಳಿಗೆ ಇಲ್ಲ ಎಂದು ಮುಂದೆ ಕಳುಹಿಸಲೂ ಆಗದು. ಆದ ಕಾರಣ ಮತ್ತೆ ಮನೆಯನ್ನೆಲ್ಲ ತಡಕಾಡಿದಳು. ಆಗ ಅವಳಿಗೆ ಒಂದು  ಒಣಗಿದ ನೆಲ್ಲಿಕಾಯಿ ಸಿಕ್ಕಿತು‌. ಅದು ಕೂಡ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪಾನಕ ಮಾಡಿ ಕುಡಿಯಲೋಸುಗ ಇಟ್ಟಿದ್ದರು. ಅದನ್ನು ದಾಕ್ಷಣ್ಯದಿಂದಲೇ ವಟುವಿಗೆ ನೀಡಲು‌ ನಿರ್ಧರಿಸಿದಳು‌. ತನ್ನ ಗುಡಿಸಿಲಿನ ಮುಂದೆ ಕಾಯುತ್ತ ನಿಂತಿದ್ದ ಶಂಕರರಿಗೆ ನಮಸ್ಕರಿಸಿ "ಸ್ವಾಮಿ ನಾವು ಕಡುಬಡವರು. ನಿಮಗೆ ಕೊಡಲು ಏನೂ ಇಲ್ಲ. ಹಾಗಾಗಿ ಈ ನೆಲ್ಲಿಕಾಯಿಯನ್ನೇ ಭಕ್ತಿಯಿಂದ ನೀಡುತ್ತಿರುವೆ.ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು" ಎಂದು ಕಾಲಿಗೆ ಬಿದ್ದು ನಮಸ್ಕರಿಸಿದಳು.  
 ಆ ಬಡ ಬ್ರಾಹ್ಮಣ ಹೆಂಗಸಿನ ದಯನೀಯ ಸ್ಥಿತಿ ಕಂಡು ಶಂಕರಾಚಾರ್ಯರಿಗೆ ಮನ ಕಲಕಿತು‌. ಅವಳ ತ್ಯಾಗ ಮತ್ತು ಭಕ್ತಿಯನ್ನು ನೋಡಿ ಅರಿತುಕೊಂಡರು. ಕೂಡಲೇ ಪರಮ ಪಾವನಿ , ಐಶ್ವರ್ಯ ಸ್ವರೂಪಿಣಿ ಜ್ಞಾನಿಗಳ ಅಂತರಂಗದಲ್ಲಿ ನೆಲೆಸಿರುವ ಬುದ್ಧಿಸ್ವರೂಪಿಣಿ, ಬೇಡಿದ ವರಕೊಡುವ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತಾರೆ. ಈ ಬಡ ಕುಟುಂಬವನ್ನು ಉದ್ಧಾರಮಾಡಬೇಕೆಂದು ಕೋರಿಕೆಯನ್ನಿಡುತ್ತಾರೆ. ನಿಂತ ಜಾಗದಲ್ಲಿಯೇ ೨೧ಶ್ಲೋಕವನ್ನು ರಚಿಸಿ ಹಾಡುತ್ತಾರೆ. ಮಹಾಮಾತೆ ಲಕ್ಷ್ಮಿಯನ್ನು ಪರಿ ಪರಿಯಾಗಿ ವರ್ಣಿಸುತ್ತಾರೆ. 

ಸರಸಿಜ ನಿಲಯೇ ಸರೋಜ ಹಸ್ತೇ
ಧನಲ ತಮಾಂಶುಕ ಗಂಧಮಾಲ್ಯ ಶೋಭೆ!
ಭಗವತೀ ಹರಿವಲ್ಲಭೇ ಮನೋಜ್ಞೆ!
 ತ್ರಿಭುವನ ಭುತಿಕರೀ ಪ್ರಸೀದ ಮಹ್ಯಂ!
          ಈ ಇಪ್ಪತ್ತೊಂದು ಶ್ಲೋಕಗಳ ಮಹಾಮಹಿಮ ಸ್ತೋತ್ರವೇ "ಕನಕಧಾರಾ ಸ್ತೋತ್ರ" ಇಲ್ಲ "ಕನಕವೃಷ್ಟಿಸ್ತೋತ್ರ" ವೆಂದು ಕರೆಯಲಾಯಿತು.

ಅವರ ಶ್ರದ್ಧಾ ಭಕ್ತಿಗೆ ಮೆಚ್ಚಿ ಜಗನ್ಮಾತೆ ಮಹಾಲಕ್ಷ್ಮಿ ಗುಡಿಸಲಿನ ಹಿಂದುಗಡೆಯಿಂದ ಪ್ರತ್ಯಕ್ಷಳಾಗಿ "ಎಲೈ ಬಾಲಕನೇ ನಿನಗೆ ಏನು ವರ ಬೇಕು ಕೇಳು" ಎಂದು ಹೇಳಿದಳು. ಆಗ ಬಾಲಕ ಶಂಕರರು ನನಗೇನು ಬೇಡ ತಾಯಿ. ಈ ಬಡ ಕುಟುಂಬದ ಕಷ್ಟವನ್ನೆಲ್ಲ ಬಗೆಹರಿಸಿ ಅವರನ್ನು ಉದ್ಧರಿಸು ಎಂದನು. ಮಹಾಲಕ್ಷ್ಮಿಯು "ಪೂರ್ವಜನ್ಮದ ಕರ್ಮಫಲವಾಗಿ ಈ ಜನ್ಮದಲಿ‌ ಮನುಷ್ಯನ ಜನನವಾಗುತ್ತದೆ. ಅದನ್ನು ಅನುಭವಿಸಲೇ ಬೇಕು. ಅಲ್ಲದೇ ಅವಳು ಪೂರ್ವಜನ್ಮದಲ್ಲಿ ಅಂತಹ ಪುಣ್ಯದ ಕೆಲಸ ಮಾಡಲಿಲ್ಲ. ಹಾಗಾಗಿ ಬದಲಾಯಿಸಲು ಸಾಧ್ಯವಾಗದು " ಎಂದಳು. ಅದಕ್ಕೆ ಶಂಕರಾಚಾರ್ಯರು "ಮಾತೇ ಭಗವತೀ... ಒಂದು ಮಹಿಳೆಗೆ ಮಾತ್ರ ಬ್ರಹ್ಮನೇ ಬರೆದಿರುವ ಹಣೆಬರಹವನ್ನು ಬದಲಾಯಿಸಲು ಸಾಧ್ಯ. ಹಾಗಾಗಿ ಇವಳಿಗೆ ನೀನೇ ಕರುಣೆ ತೋರಿಸಬೇಕು ಎಂದರು. ಮಹಾಲಕ್ಷ್ಮಿಗೆ ಮಂದಸ್ಮಿತಳಾಗಿ ಮೆಚ್ಚಿದೆ ನಿನ್ನ ಮಾತಿಗೆ ಎಂದು ಸಂಪೂರ್ಣ ಚಿನ್ನದ ನೆಲ್ಲಿಕಾಯಿಗಳನ್ನೆ ಮಳೆಗೆರೆದಳು.  ಶಂಕರಭಗವತ್ಪಾದರ ಪವಾಡ, ಅನುಗ್ರಹದಿಂದ ಬಡಬ್ರಾಹ್ಮಣ ಮಹಿಳೆಯ ಮನೆಯ ಚಿತ್ರಣವೇ ಬದಲಾಯಿತು. ಕುಟುಂಬವೇ ಆನಂದದಿಂದ ನಲಿದಾಡಿದರು‌ . ಶಂಕರರ ಶಿಷ್ಯವೃಂದ ಇದನ್ನು ಕಂಡು ದಿಗ್ಮೂಢವಾಗುತ್ತದೆ.  ಬಡಬ್ರಾಹ್ಮಣ ದಂಪತಿಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತದೆ. ಮತ್ತೊಮ್ಮೆ ಶಂಕರರ ದಿವ್ಯ ಪಾದಗಳಿಗೆ ಎರಗಿ ತಮ್ಮನ್ನು ಉದ್ಧಾರ ಮಾಡಿದಕ್ಕಾಗಿ ನಮಸ್ಕರಿಸುತ್ತಾರೆ. ಆಗ ಇದು ನಮ್ಮಲ್ಲಿರುವ ಅಚಲ ಭಗವದ್ಭಕ್ತಿ, ಶ್ರದ್ಧೆ, ಶರಣಾಗತಿ , ಆತ್ಮಸಮರ್ಪಣೆಗಳ ಫಲವೇ ಆಗಿದೆ. ಯಾರು ಸೃವಶಕ್ತನಾದ ಪರಮಾತ್ಮನಲ್ಲಿ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸುಖ, ಆತ್ಮನಿವೇದೆಗಳೆಂಬ ನವವಿಧ ಭಕುತಿಯಿಂದ ಪ್ರಾರ್ಥಿಸುತ್ತಾರೋ ಅವರು ಎಂದೂ ನಾಶವಾಗುವುದಿಲ್ಲ ಎಂದು ಸಾರಿ ತಮ್ಮ ವಿಜಯಯಾತ್ರೆಯನ್ನು ಮುಂದುವರೆಸುತ್ತಾರೆ. 

ಹಾಗಾಗಿ ಅಂದಿನಿಂದ ಇಂದಿನವರೆಗೂ ಭಕ್ತಾದಿಗಳು ಬಹಳ ಶ್ರದ್ಧೆಯಿಂದ ಆತ್ಮನಿವೇದನೆ ಮಾಡಿಕೊಳ್ಳುತ್ತಾರೆ‌ . ಕನಕಧಾರಾ ಸ್ತೋತ್ರವನ್ನು ಪ್ರತೀ ಶುಕ್ರವಾರ ಪಠಿಸಿ ಜಗನ್ಮಾತೆ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. 


ಸಿಂಧು ಭಾರ್ಗವ್.
ಬೆಂಗಳೂರು-೨೧