Thursday, 6 June 2019

Kanakadhara stotram behind story in kannada

(Google pick ) Adi Shankaracharyaru

Kanakadhara stotra.( Google pick)

ಪೌರಾಣಿಕ ಕಥೆ : ಶಂಕರಾಚಾರ್ಯ ಕೃತ ಕನಕಧಾರಾ ಸ್ತೋತ್ರ

ಇದು ೮ನೇ ಶತಮಾನದ ಕಥೆ‌ . ತಮ್ಮ ಎಂಟನೇ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ ಬಾಲ ಶಂಕರಾಚಾರ್ಯರು ಎಂದಿನಂತೆ ತಮ್ಮ ಶಿಷ್ಯರೊಡನೆ ಕೇರಳದ ಹಳ್ಳಿಯೊಂದಕ್ಕೆ ಬರುತ್ತಾರೆ. ಮಧುಕರ ವೃತ್ತಿಯನ್ನು ಅನುಸರಿಸುತ್ತಾ ಹೊರಟಿದ್ದರು. ಹೀಗೆ ಮಾರ್ಗಮಧ್ಯದಲ್ಲಿ ಒಂದು ಮುರುಕು‌ಮನೆ ಕಾಣಿಸಿತು. ಆ ಮನೆಯ ಎದುರು ನಿಂತು "ಭವತಿ ಭಿಕ್ಷಾಂದೇಹಿ" ಎಂದು ಕೂಗಿದರು. ಆಗ ಮನೆಯ ಬಡಬ್ರಾಹ್ಮಣ ಹೆಂಗಸಿಗೆ ದಿಗಿಲಾಯಿತು. ಕಾರಣ ಕಿತ್ತು ತಿನ್ನುವ ಬಡತನ. ಭಿಕ್ಷೆಗೆ ಕೊಡಲು ಏನೂ ಅವರಲ್ಲಿ ಇರಲಿಲ್ಲ. ಹಾಗೆಯೆ ಯತಿಗಳಿಗೆ ಇಲ್ಲ ಎಂದು ಮುಂದೆ ಕಳುಹಿಸಲೂ ಆಗದು. ಆದ ಕಾರಣ ಮತ್ತೆ ಮನೆಯನ್ನೆಲ್ಲ ತಡಕಾಡಿದಳು. ಆಗ ಅವಳಿಗೆ ಒಂದು  ಒಣಗಿದ ನೆಲ್ಲಿಕಾಯಿ ಸಿಕ್ಕಿತು‌. ಅದು ಕೂಡ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪಾನಕ ಮಾಡಿ ಕುಡಿಯಲೋಸುಗ ಇಟ್ಟಿದ್ದರು. ಅದನ್ನು ದಾಕ್ಷಣ್ಯದಿಂದಲೇ ವಟುವಿಗೆ ನೀಡಲು‌ ನಿರ್ಧರಿಸಿದಳು‌. ತನ್ನ ಗುಡಿಸಿಲಿನ ಮುಂದೆ ಕಾಯುತ್ತ ನಿಂತಿದ್ದ ಶಂಕರರಿಗೆ ನಮಸ್ಕರಿಸಿ "ಸ್ವಾಮಿ ನಾವು ಕಡುಬಡವರು. ನಿಮಗೆ ಕೊಡಲು ಏನೂ ಇಲ್ಲ. ಹಾಗಾಗಿ ಈ ನೆಲ್ಲಿಕಾಯಿಯನ್ನೇ ಭಕ್ತಿಯಿಂದ ನೀಡುತ್ತಿರುವೆ.ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು" ಎಂದು ಕಾಲಿಗೆ ಬಿದ್ದು ನಮಸ್ಕರಿಸಿದಳು.  
 ಆ ಬಡ ಬ್ರಾಹ್ಮಣ ಹೆಂಗಸಿನ ದಯನೀಯ ಸ್ಥಿತಿ ಕಂಡು ಶಂಕರಾಚಾರ್ಯರಿಗೆ ಮನ ಕಲಕಿತು‌. ಅವಳ ತ್ಯಾಗ ಮತ್ತು ಭಕ್ತಿಯನ್ನು ನೋಡಿ ಅರಿತುಕೊಂಡರು. ಕೂಡಲೇ ಪರಮ ಪಾವನಿ , ಐಶ್ವರ್ಯ ಸ್ವರೂಪಿಣಿ ಜ್ಞಾನಿಗಳ ಅಂತರಂಗದಲ್ಲಿ ನೆಲೆಸಿರುವ ಬುದ್ಧಿಸ್ವರೂಪಿಣಿ, ಬೇಡಿದ ವರಕೊಡುವ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತಾರೆ. ಈ ಬಡ ಕುಟುಂಬವನ್ನು ಉದ್ಧಾರಮಾಡಬೇಕೆಂದು ಕೋರಿಕೆಯನ್ನಿಡುತ್ತಾರೆ. ನಿಂತ ಜಾಗದಲ್ಲಿಯೇ ೨೧ಶ್ಲೋಕವನ್ನು ರಚಿಸಿ ಹಾಡುತ್ತಾರೆ. ಮಹಾಮಾತೆ ಲಕ್ಷ್ಮಿಯನ್ನು ಪರಿ ಪರಿಯಾಗಿ ವರ್ಣಿಸುತ್ತಾರೆ. 

ಸರಸಿಜ ನಿಲಯೇ ಸರೋಜ ಹಸ್ತೇ
ಧನಲ ತಮಾಂಶುಕ ಗಂಧಮಾಲ್ಯ ಶೋಭೆ!
ಭಗವತೀ ಹರಿವಲ್ಲಭೇ ಮನೋಜ್ಞೆ!
 ತ್ರಿಭುವನ ಭುತಿಕರೀ ಪ್ರಸೀದ ಮಹ್ಯಂ!
          ಈ ಇಪ್ಪತ್ತೊಂದು ಶ್ಲೋಕಗಳ ಮಹಾಮಹಿಮ ಸ್ತೋತ್ರವೇ "ಕನಕಧಾರಾ ಸ್ತೋತ್ರ" ಇಲ್ಲ "ಕನಕವೃಷ್ಟಿಸ್ತೋತ್ರ" ವೆಂದು ಕರೆಯಲಾಯಿತು.

ಅವರ ಶ್ರದ್ಧಾ ಭಕ್ತಿಗೆ ಮೆಚ್ಚಿ ಜಗನ್ಮಾತೆ ಮಹಾಲಕ್ಷ್ಮಿ ಗುಡಿಸಲಿನ ಹಿಂದುಗಡೆಯಿಂದ ಪ್ರತ್ಯಕ್ಷಳಾಗಿ "ಎಲೈ ಬಾಲಕನೇ ನಿನಗೆ ಏನು ವರ ಬೇಕು ಕೇಳು" ಎಂದು ಹೇಳಿದಳು. ಆಗ ಬಾಲಕ ಶಂಕರರು ನನಗೇನು ಬೇಡ ತಾಯಿ. ಈ ಬಡ ಕುಟುಂಬದ ಕಷ್ಟವನ್ನೆಲ್ಲ ಬಗೆಹರಿಸಿ ಅವರನ್ನು ಉದ್ಧರಿಸು ಎಂದನು. ಮಹಾಲಕ್ಷ್ಮಿಯು "ಪೂರ್ವಜನ್ಮದ ಕರ್ಮಫಲವಾಗಿ ಈ ಜನ್ಮದಲಿ‌ ಮನುಷ್ಯನ ಜನನವಾಗುತ್ತದೆ. ಅದನ್ನು ಅನುಭವಿಸಲೇ ಬೇಕು. ಅಲ್ಲದೇ ಅವಳು ಪೂರ್ವಜನ್ಮದಲ್ಲಿ ಅಂತಹ ಪುಣ್ಯದ ಕೆಲಸ ಮಾಡಲಿಲ್ಲ. ಹಾಗಾಗಿ ಬದಲಾಯಿಸಲು ಸಾಧ್ಯವಾಗದು " ಎಂದಳು. ಅದಕ್ಕೆ ಶಂಕರಾಚಾರ್ಯರು "ಮಾತೇ ಭಗವತೀ... ಒಂದು ಮಹಿಳೆಗೆ ಮಾತ್ರ ಬ್ರಹ್ಮನೇ ಬರೆದಿರುವ ಹಣೆಬರಹವನ್ನು ಬದಲಾಯಿಸಲು ಸಾಧ್ಯ. ಹಾಗಾಗಿ ಇವಳಿಗೆ ನೀನೇ ಕರುಣೆ ತೋರಿಸಬೇಕು ಎಂದರು. ಮಹಾಲಕ್ಷ್ಮಿಗೆ ಮಂದಸ್ಮಿತಳಾಗಿ ಮೆಚ್ಚಿದೆ ನಿನ್ನ ಮಾತಿಗೆ ಎಂದು ಸಂಪೂರ್ಣ ಚಿನ್ನದ ನೆಲ್ಲಿಕಾಯಿಗಳನ್ನೆ ಮಳೆಗೆರೆದಳು.  ಶಂಕರಭಗವತ್ಪಾದರ ಪವಾಡ, ಅನುಗ್ರಹದಿಂದ ಬಡಬ್ರಾಹ್ಮಣ ಮಹಿಳೆಯ ಮನೆಯ ಚಿತ್ರಣವೇ ಬದಲಾಯಿತು. ಕುಟುಂಬವೇ ಆನಂದದಿಂದ ನಲಿದಾಡಿದರು‌ . ಶಂಕರರ ಶಿಷ್ಯವೃಂದ ಇದನ್ನು ಕಂಡು ದಿಗ್ಮೂಢವಾಗುತ್ತದೆ.  ಬಡಬ್ರಾಹ್ಮಣ ದಂಪತಿಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತದೆ. ಮತ್ತೊಮ್ಮೆ ಶಂಕರರ ದಿವ್ಯ ಪಾದಗಳಿಗೆ ಎರಗಿ ತಮ್ಮನ್ನು ಉದ್ಧಾರ ಮಾಡಿದಕ್ಕಾಗಿ ನಮಸ್ಕರಿಸುತ್ತಾರೆ. ಆಗ ಇದು ನಮ್ಮಲ್ಲಿರುವ ಅಚಲ ಭಗವದ್ಭಕ್ತಿ, ಶ್ರದ್ಧೆ, ಶರಣಾಗತಿ , ಆತ್ಮಸಮರ್ಪಣೆಗಳ ಫಲವೇ ಆಗಿದೆ. ಯಾರು ಸೃವಶಕ್ತನಾದ ಪರಮಾತ್ಮನಲ್ಲಿ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸುಖ, ಆತ್ಮನಿವೇದೆಗಳೆಂಬ ನವವಿಧ ಭಕುತಿಯಿಂದ ಪ್ರಾರ್ಥಿಸುತ್ತಾರೋ ಅವರು ಎಂದೂ ನಾಶವಾಗುವುದಿಲ್ಲ ಎಂದು ಸಾರಿ ತಮ್ಮ ವಿಜಯಯಾತ್ರೆಯನ್ನು ಮುಂದುವರೆಸುತ್ತಾರೆ. 

ಹಾಗಾಗಿ ಅಂದಿನಿಂದ ಇಂದಿನವರೆಗೂ ಭಕ್ತಾದಿಗಳು ಬಹಳ ಶ್ರದ್ಧೆಯಿಂದ ಆತ್ಮನಿವೇದನೆ ಮಾಡಿಕೊಳ್ಳುತ್ತಾರೆ‌ . ಕನಕಧಾರಾ ಸ್ತೋತ್ರವನ್ನು ಪ್ರತೀ ಶುಕ್ರವಾರ ಪಠಿಸಿ ಜಗನ್ಮಾತೆ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. 


ಸಿಂಧು ಭಾರ್ಗವ್.
ಬೆಂಗಳೂರು-೨೧

Story_Don't be selfish ಸ್ವಾರ್ಥಿಯಾಗದಿರಿ

ಮಕ್ಕಳ ಕಥೆ:-  ಸ್ವಾರ್ಥಿಯಾಗದಿರಿ
Google pick

ಕಾನನದ ಮಧ್ಯದಲ್ಲಿ ಒಂದು ಗಿಡುಗನ ಗೂಡು ಹಾಗೂ ಕಾಗೆಯ ಗೂಡಿತ್ತು. ಎರಡೂ ತಮ್ತಮ್ಮ ಗೂಡಿನಲ್ಲಿ ಮರಿಗಳ ಜೊತೆಗೆ ವಾಸವಾಗಿದ್ದವು. "ಚೀವ್ ಚೀವ್..." ಎಂಬ ಚಿಲಿಪಿಲಿಯು ಯಾವಾಗಲೂ  ಕೇಳಿಸುತಲಿತ್ತು. ಗಿಡುಗನು ತನ್ನ ಗೂಡಿನ ಮೇಲೆಯೇ ಗಸ್ತು ಹೊಡೆಯುತ್ತಾ ಇರುತ್ತಿತ್ತು. ದೂರದೂರಿಗೆ ಹಾರಿ ಹೋಗಿ ಗಂಡು ಗಿಡುಗವು ಆಹಾರ ತರುವ ತನಕ ಹೆಣ್ಣು ಗಿಡುಗವು ಮರಿಗಳನ್ನು ಕಾಯುತಲಿತ್ತು. ಇದನ್ನೆಲ್ಲ ದೂರದಿಂದ  ನೋಡುತ್ತಿದ್ದ ಕಾಗೆಗೆ , "ಆ ಗೂಡಿನಲ್ಲಿವೇನಿರಬಹುದು. ಈ ಗಿಡುಗ ಏಕೆ ಗಸ್ತು ಹೊಡೆಯುತ್ತಿದೆ.."ಎಂದು ಪ್ರಶ್ನೆ ಮೂಡಿತು‌. ಒಮ್ಮೆ ಹೋಗಿ ನೋಡಲೇ ಬೇಕು ಎಂಬ ಕುತೂಹಲ ಹೆಚ್ಚಿತು. ಆದರೆ ಆ ಹೆಣ್ಣು ಗಿಡುಗವೂ ಎಲ್ಲಿಗೂ ಕದಲುತ್ತ ಇರಲಿಲ್ಲ‌.

ಒಮ್ಮೆ ಆ ಸಮಯ ಬಂದೇ ಬಿಟ್ಟಿತು. ಹೆಣ್ಣು ಗಿಡುಗ ಆಕಾಶದೆತ್ತರಕ್ಕೆ ಹಾರಿ ಮಾಯವಾಯಿತು. ಆಗ ಕಾಗೆಗೆ ಬಹಳ ಸಂತೋಷವಾಗಿ  ಗಿಡುಗನ ಗೂಡಿನ ಬಳಿ ಹಾರಿ ಬಂದಿತು. ಅಲ್ಲಿ ನೋಡಿದರೆ ಪರಮಾಶ್ಚರ್ಯ. " ಗಿಡುಗನಿಗೆ ಪುಟ್ಟಪುಟ್ಟ ಮೂರು ಮರಿಗಳಿದ್ದವು. ಎಳೆಮರಿಗಳ ನೋಡಿ ಕಾಗೆಯೆ ಬಾಯಲ್ಲಿ ನೀರು ಬಂದಿತು. ಹೇಗಾದರೂ ಮಾಡಿ ಇದನ್ನು ಹೊತ್ತೊಯ್ದು ತನ್ನ ಮರಿಗಳಿಗೆ ಆಹಾರವಾಗಿ ಕೊಡಬೇಕು ಎಂಬ ಕೆಟ್ಟ ಆಲೋಚನೆ ಮಾಡಿತು. ಹಾಗೆಯೇ ಒಂದನ್ನು ಅಲ್ಲಿಯೇ ತಿಂದು, ಒಂದನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಸಾಯಿಸಿತು. ಹಾಗೆಯೇ ಸತ್ತ ಗಿಡುಗನ ಮರಿಯನ್ನು ಕಾಲಿನಲ್ಲಿ ಬಿಗಿಹಿಡಿತು ತನ್ನ ಗೂಡಿನತ್ತ ಹಾರಿಹೋಯಿತು.

ಅಲ್ಲಿ ನೋಡಿದರೆ ಏನ್ ಆಶ್ಚರ್ಯ. ಗಾಬರಿ ಹುಟ್ಟಿಸುವ ಘಟನೆ ನಡೆದಿತ್ತು. ತನ್ನ ಮರಿಗಳ ಪುಕ್ಕಗಳೆಲ್ಲ ಚೆಲ್ಲಪಿಲ್ಲಿಯಾಗಿ ಬಿದ್ದಿದ್ದವು. ಮರಿಗಳು ಕಾಣಿಸುತ್ತಿಲ್ಲ. "ಅಯ್ಯೋ... ನನ್ನ ಮರಿಗಳೆಲ್ಲಿ ??" ಎಂದು ಗೋಳಾಡಿತು. "ನಾನು ಅವುಗಳಿಗೆ ತಂದ ಈ ಹಸಿ ಮಾಂಸವನ್ನು ಏನು ಮಾಡಲಿ. ಇದನ್ನು ತಿನ್ನಲು ಈಗ ನನ್ನ ಮರಿಗಳೇ ಇಲ್ಲವಲ್ಲ .." ಎಂದು ಕೊರಗುತ್ತಾ  ಕುಳಿತಿತು. ಆಗ ದೂರದಲ್ಲಿ ಅದೇ ಗಿಡುಗ ತನ್ನ ಕಾಲಿನಲ್ಲಿ ಏನೋ ಆಹಾರ ಹಿಡಿದಿರುವುದು ಕಾಣಿಸಿತು. ಏನೆಂದು ಕಾಗೆ ಅದರ ಕಡೆಗೆ ಧಾವಿಸಿ ನೋಡಿದರೆ ತನ್ನ ಮರಿಯ ಹಸಿಮಾಂಸವೇ ಆಗಿತ್ತು. ಅತ್ತ ಗಿಡುಗನಿಗೆ ಉಳಿದಿದ್ದ ಒಂದು ಮರಿ ಗಾಬರಿಯಿಂದ ಕಿರುಚುತ್ತ ಅಮ್ಮ ಬರುವುದನ್ನೇ ಕಾಯುತಲಿತ್ತು.

ನೀತಿ: ನಾವು ಕೇಡು ಬಯಸಿದರೆ ನಮಗೂ ಕೇಡು ಸಂಭವಿಸುತ್ತದೆ ‌ ಕಾಗೆ ಗಿಡುಗನ ಮರಿಗಳನ್ನು ಸಾಯಿಸಿದ ಹಾಗೆ ಗಿಡುಗವೂ ಸ್ವಾರ್ಥಿಯಾಗಿ ಕಾಗೆಯ ಮರಿಯನ್ನು ಸಾಯಿಸಿತ್ತು.

2.

ಕನ್ನಡಕದೊಳಗೆ ಕಂಡ ಇನ್ನೊಂದು ನಾನು

ಆದಿತ್ಯ ಹನ್ನೆರಡು ವರ್ಷದ ಹುಡುಗ. ಅವನು ಬುದ್ಧಿವಂತನಾಗಿದ್ದರೂ ಒಂದು ಕೆಟ್ಟ ಅಭ್ಯಾಸವಿತ್ತು. ತನ್ನಿಂದ ತಪ್ಪಾದಾಗ ಅದನ್ನು ಒಪ್ಪಿಕೊಳ್ಳಲು ಅವನಿಗೆ ಇಷ್ಟವಿರಲಿಲ್ಲ.

“ನಾನು ಮಾಡಿಲ್ಲ.”

“ಅವನೇ ಮಾಡಿದ್ದು.”

“ನನಗೆ ಗೊತ್ತಿಲ್ಲ.”

ಹೀಗೆ ಹೇಳಿ ತನ್ನ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕಿಬಿಡುತ್ತಿದ್ದ.

ಒಂದು ದಿನ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ವಿಜ್ಞಾನ ಮಾದರಿ ತಯಾರಿಸಲು ಹೇಳಿದರು. ಆದಿತ್ಯ ತನ್ನ ಸ್ನೇಹಿತ ರೋಹನ್ ಜೊತೆ ಸೇರಿ ಸೌರಮಂಡಲದ ಸುಂದರವಾದ ಮಾದರಿಯೊಂದನ್ನು ತಯಾರಿಸಿದ. ಅದನ್ನು ಶಾಲೆಯ ಪ್ರದರ್ಶನದಲ್ಲಿ ಇಡಲಾಗಿತ್ತು.

ಎಲ್ಲರೂ ಮಾದರಿಯನ್ನು ನೋಡಿ ಮೆಚ್ಚಿಕೊಂಡರು.

ಮರುದಿನ ಬೆಳಿಗ್ಗೆ ಶಾಲೆಗೆ ಬಂದಾಗ ಮಾದರಿಯ ಒಂದು ಭಾಗ ಮುರಿದಿತ್ತು.

ಶಿಕ್ಷಕಿ ಕೇಳಿದರು,

“ಇದನ್ನು ಯಾರು ಮುರಿದಿದ್ದಾರೆ?”

ಆದಿತ್ಯನಿಗೆ ಹಿಂದಿನ ದಿನ ತಾನು ಮಾದರಿಯ ಹತ್ತಿರ ಆಟವಾಡುತ್ತಿದ್ದದ್ದು ನೆನಪಾಯಿತು. ಚೆಂಡು ತಪ್ಪಿ ಮಾದರಿಗೆ ಬಡಿದಿತ್ತು. ಆದರೆ ಅವನು ಭಯದಿಂದ ಯಾರಿಗೂ ಹೇಳಿರಲಿಲ್ಲ.

“ರೋಹನ್ ಹತ್ತಿರ ನಿಂತಿದ್ದ. ಬಹುಶಃ ಅವನಿಂದ ಆಗಿರಬಹುದು,” ಎಂದು ಆದಿತ್ಯ ಹೇಳಿಬಿಟ್ಟ.

ರೋಹನ್ ಬೆಚ್ಚಿಬಿದ್ದ.

“ಇಲ್ಲ ಮೇಡಂ! ನಾನು ಮುಟ್ಟಲೂ ಇಲ್ಲ,” ಎಂದನು.

ಆದರೆ ಆದಿತ್ಯ ತನ್ನ ಮಾತಿನಲ್ಲೇ ನಿಂತ.

ರೋಹನ್ ತುಂಬಾ ಬೇಸರಗೊಂಡ. ಅವನು ಆ ದಿನ ಪೂರ್ತಿ ಯಾರೊಂದಿಗೂ ಮಾತನಾಡಲಿಲ್ಲ.

ಸಂಜೆ ಮನೆಗೆ ಬಂದ ಆದಿತ್ಯನಿಗೆ ಮನಸ್ಸಿನಲ್ಲಿ ಏನೋ ಕಾಡುತ್ತಿತ್ತು.

ಅವನ ತಾಯಿ ಗಮನಿಸಿ,

“ಏನಾಯಿತು? ಇಂದು ಏಕೆ ಮೌನವಾಗಿದ್ದೀಯ?” ಎಂದು ಕೇಳಿದರು.

ಆದಿತ್ಯ ನಡೆದ ವಿಷಯವನ್ನು ಹೇಳಿದ.

ತಾಯಿ ಸ್ವಲ್ಪ ಹೊತ್ತು ಮೌನವಾಗಿದ್ದು,

“ನೀನು ನಿಜವಾಗಿ ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಹುದು. ಆದರೆ ತಪ್ಪನ್ನು ಮರೆಮಾಚಿದರೆ ಸಮಸ್ಯೆ ದೊಡ್ಡದಾಗುತ್ತದೆ. ಕನ್ನಡಕದ ಮುಂದೆ ನಿಂತಾಗ ನಮ್ಮ ಮುಖವನ್ನು ಹೇಗೆ ಮರೆಮಾಚಲು ಸಾಧ್ಯವಿಲ್ಲವೋ, ಹಾಗೆಯೇ ನಮ್ಮ ಮನಸ್ಸಿನ ಮುಂದೆ ನಮ್ಮ ತಪ್ಪನ್ನು ಮರೆಮಾಚಲು ಸಾಧ್ಯವಿಲ್ಲ,” ಎಂದರು.

ಆ ರಾತ್ರಿ ಆದಿತ್ಯ ತನ್ನ ಕೋಣೆಯಲ್ಲಿದ್ದ ದೊಡ್ಡ ಕನ್ನಡಕದ ಮುಂದೆ ನಿಂತ.

ಅವನು ತನ್ನ ಮುಖವನ್ನು ನೋಡಿದ.

“ನಾನು ನಿಜವಾಗಿಯೂ ತಪ್ಪು ಮಾಡಿದ್ದೇನೆ,” ಎಂದು ನಿಧಾನವಾಗಿ ಹೇಳಿಕೊಂಡ.

ಅವನಿಗೆ ಕನ್ನಡಕದೊಳಗೆ ತನ್ನ ಮುಖ ಮಾತ್ರವಲ್ಲ, ತನ್ನ ತಪ್ಪನ್ನು ಮರೆಮಾಚಿದ ಮತ್ತೊಂದು ‘ನಾನು’ ಕಾಣಿಸಿದಂತೆ ಅನಿಸಿತು.

ಒಂದು ಕಡೆ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಬಯಸುವ ಆದಿತ್ಯ.

ಮತ್ತೊಂದು ಕಡೆ ತನ್ನ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಬಯಸುವ ಆದಿತ್ಯ.

ಸ್ವಲ್ಪ ಸಮಯದ ನಂತರ ಅವನು ನಿರ್ಧಾರಕ್ಕೆ ಬಂದ.

ಮರುದಿನ ಶಾಲೆಗೆ ಹೋದ ತಕ್ಷಣ ಶಿಕ್ಷಕಿಯ ಬಳಿಗೆ ಹೋಗಿ,

“ಮೇಡಂ, ನಿನ್ನೆ ನಾನು ಸುಳ್ಳು ಹೇಳಿದೆ. ಮಾದರಿ ನನ್ನಿಂದಲೇ ಮುರಿದಿತ್ತು. ಚೆಂಡು ತಪ್ಪಿ ಅದಕ್ಕೆ ಬಡಿದಿತ್ತು. ಭಯದಿಂದ ರೋಹನ್ ಮೇಲೆ ತಪ್ಪು ಹಾಕಿದೆ. ನನ್ನನ್ನು ಕ್ಷಮಿಸಿ,” ಎಂದನು.

ಶಿಕ್ಷಕಿ ಅವನನ್ನು ಗಮನದಿಂದ ನೋಡಿದರು.

“ಆದಿತ್ಯ, ತಪ್ಪು ಮಾಡಿದ್ದಕ್ಕೆ ನನಗೆ ಬೇಸರವಿಲ್ಲ. ಆದರೆ ತಪ್ಪನ್ನು ಒಪ್ಪಿಕೊಳ್ಳಲು ನಿನಗೆ ಒಂದು ದಿನ ಬೇಕಾಯಿತು. ಇಂದು ನೀನು ಸತ್ಯ ಹೇಳಲು ಧೈರ್ಯ ತೋರಿಸಿದ್ದಕ್ಕೆ ನನಗೆ ಸಂತೋಷವಾಗಿದೆ,” ಎಂದರು.

ನಂತರ ಆದಿತ್ಯ ರೋಹನ್ ಬಳಿಗೆ ಹೋಗಿ ಕ್ಷಮೆ ಕೇಳಿದ.

“ನನ್ನಿಂದ ನಿನಗೆ ನೋವಾಯಿತು. ಇನ್ನು ಮುಂದೆ ನನ್ನ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದಿಲ್ಲ,” ಎಂದನು.

ರೋಹನ್ ಅವನನ್ನು ಕ್ಷಮಿಸಿದ.

ಇಬ್ಬರೂ ಸೇರಿ ಮುರಿದ ಮಾದರಿಯನ್ನು ಮತ್ತೆ ಸರಿಪಡಿಸಿದರು.

ಆ ದಿನದಿಂದ ಆದಿತ್ಯನಲ್ಲಿ ನಿಧಾನವಾಗಿ ಬದಲಾವಣೆ ಆರಂಭವಾಯಿತು. ತಪ್ಪಾದಾಗ ಅದನ್ನು ಮರೆಮಾಚದೆ ಒಪ್ಪಿಕೊಳ್ಳುತ್ತಿದ್ದ. ಯಾರಿಗಾದರೂ ನೋವುಂಟು ಮಾಡಿದರೆ ಕ್ಷಮೆ ಕೇಳುತ್ತಿದ್ದ. ತನ್ನ ತಪ್ಪಿನಿಂದ ಪಾಠ ಕಲಿಯುತ್ತಿದ್ದ.

ಕೆಲವು ದಿನಗಳ ನಂತರ ಅವನು ಮತ್ತೆ ಕನ್ನಡಕದ ಮುಂದೆ ನಿಂತ.

ಈ ಬಾರಿ ಅವನ ಮುಖದಲ್ಲಿ ಆತ್ಮವಿಶ್ವಾಸದ ನಗು ಇತ್ತು.

ಅವನಿಗೆ ಅರ್ಥವಾಗಿತ್ತು—

ನಮ್ಮನ್ನು ಬದಲಾಯಿಸುವ ದೊಡ್ಡ ಶಕ್ತಿ ಹೊರಗಿಲ್ಲ. ಅದು ನಮ್ಮೊಳಗೇ ಇದೆ.

ಕನ್ನಡಕ ಅವನ ಮುಖವನ್ನು ಮಾತ್ರ ತೋರಿಸಲಿಲ್ಲ. ತನ್ನ ತಪ್ಪನ್ನು ಒಪ್ಪಿಕೊಂಡು ಉತ್ತಮ ವ್ಯಕ್ತಿಯಾಗುವ ದಾರಿಯನ್ನೂ ತೋರಿಸಿತ್ತು.

ನೀತಿ:

ತಪ್ಪು ಮಾಡುವುದು ಸಹಜ. ಆದರೆ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಿಕೊಳ್ಳುವುದು ನಿಜವಾದ ಧೈರ್ಯ. ತನ್ನ ತಪ್ಪಿನಿಂದ ಪಾಠ ಕಲಿತು ಬದಲಾಗುವವನೇ ನಿಜವಾದ ವಿಜಯಿ.

- ಸಿಂಧು ಭಾರ್ಗವ್.
 ಬೆಂಗಳೂರು- ೨೧

Tuesday, 4 June 2019

ಪರಿವರ್ತನೆ

ಮಕ್ಕಳ ಕಥೆ: ಪರಿವರ್ತನೆ(ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬಾಳಿರಿ)




ಒಬ್ಬ ರಾಜ ತನ್ನ ರಾಜ್ಯವನ್ನು ನೋಡಲು ಕುದುರೆಯನೇರಿ ಹೊರಟನು. ಅವನ ರಾಜ್ಯದ ಜನರ ಸ್ಥಿತಿಗತಿಯನ್ನು ಪರೀಕ್ಷಿಸಿ ಕಷ್ಟನೋವುಗಳನ್ನು ಕೇಳಿ ಅವರಿಗೆ ಸಮಾಧಾನ ಮಾಡಿ, ಕೈಲಾದ ಸಹಾಯ ಮಾಡಲು ಹೊರಟಿದ್ದನಂತೆ. ಹೀಗೆ ಒಂದು ಊರಿನ ಹಾದಿಯಲ್ಲಿ ಹೋಗುವಾಗ ತುಂಬಾ ಹಸಿವಾಯಿತಂತೆ. ತಿನ್ನಲು ಏನೂ  ಕೊಂಡೊಯ್ದಿರದ ಕಾರಣ ಸುತ್ತಮುತ್ತ ನೋಡಿದ. ಆಗ ಒಂದು ಬ್ರಹದಾಕಾರದ ಮರದಲ್ಲಿ ತುಂಬಾ ಹಣ್ಣುಗಳು ಜೋತುಬಿದ್ದಿದ್ದವು. ಅದನ್ನು ಕಂಡು ಬಾಯಿಯಲ್ಲಿ ನೀರು ಬಂದಿತು. ಆದರೆ ಆ ಮರ ಎತ್ತರವಿದ್ದ ಕಾರಣ ಒಂದು ಹಣ್ಣೂ ಕೈಗೆ ಎಟಕುತ್ತ ಇರಲಿಲ್ಲ. ಹಾಗಾಗಿ ಅವನಿಗೆ ಬೇಸರವಾಯಿತು‌. ಆಗ ಅಲ್ಲೇ ಇದ್ದ ಒಬ್ಬ ಮರ ಕಡಿಯುವವನಲ್ಲಿ ಆ ಹಣ್ಣುಗಳನ್ನು ಕೊಯ್ದುಕೊಡಲು ಹೇಳಿದನು. ಅವನು "ಓ ನಮ್ಮ ಮಹರಾಜರು. ನಿಮಗೆ ಇಲ್ಲ ಎನ್ನಲಾಗುವುದೇ?.." ಎಂದು ಸಾಕಷ್ಟು ಹಣ್ಣನ್ನು ಕೊಯ್ದು ಅವನಿಗೆ ಬುಟ್ಟಿಯಲ್ಲಿ ತುಂಬಿಸಿಕೊಟ್ಟನಂತೆ. ಆಗ ಮೊದಲೇ ಹಸಿದಿದ್ದ ರಾಜನು ಆ ಹಣ್ಣುಗಳನ್ನು ನೋಡಿ ಗಬಗಬ ತಿಂದನಂತೆ. ದೀರ್ಘವಾಗಿ ಒಂದು ತೇಗು ಬರಿಸಿ "ಮೆಚ್ಚಿದೆ ನಿನ್ನ . ನೀನು ಮಾಡಿದ ಸಹಾಯಕ್ಕೆ ತಗೋ ಕೈತುಂಬಾ ಚಿನ್ನದ ನಾಣ್ಯಗಳನ್ನು ಕೊಡುವೆ .." ಎಂದು ಹೇಳಿ ಒಂದು ರೇಶಿಮೆ ಗಂಟನ್ನು ನೀಡಿದನು‌. ಕುದುರೆಯನ್ನೇರಿ ಮುಂದೆ ಹೋದನು. ಹೀಗೆ ಸಾಗುವಾಗ ಒಂದು ಆಲೋಚನೆ ಹೊಳೆಯಿತಂತೆ. "ನಾನು ರಾಜನಾದರೂ ನನಗೆ ಒಂದು ಮರ ಏರಲು ತಿಳಿದಿಲ್ಲ. ಇದು ಎಂತಹ ಅವಮಾನ.." ಎಂದು ಮನದಲ್ಲೇ ಮರುಗಿದನು.

ನಂತರ ಬಹಳಷ್ಟು ದೂರ ಸಾಗುತ್ತಲೇ ಬಿಸಿಲು ಹೆಚ್ಚಾಗಿ ಸುಸ್ತಿನ ಜೊತೆಗೆ ನಿದಿರೆ ಬರಲು ಶುರುವಾಯಿತು. ಸುತ್ತಮುತ್ತ ನೋಡಿದರೆ ಎಲ್ಲೂ ಮಲಗಲು ಜಾಗವಿಲ್ಲ . ಅವನಿಗೆ ಏನು ಮಾಡುವುದು ಎಂದು ತಿಳಿಯದೇ ಕುದುರೆಯಿಂದ ಕೆಳಗಿಳಿದು  ಅಲ್ಲೇ ಮರದ ಕೆಳಗೆ ಕುಳಿತನು‌ . ಹಾಗೆ ಮಲಗಿದನು. ಆದರೆ ಎಷ್ಟು ಸಮಯವಾದರೂ ನಿದಿರೆ ಬರುತ್ತಿರಲಿಲ್ಲ. ಆಗ ದೂರದಲ್ಲಿ ಒಬ್ಬ ಮರಗೆಲಸದವನು ತನ್ನ ತಲೆಗೆ ಕಟ್ಟಿದ್ದ ತುಂಡು ಬಟ್ಟೆಯನ್ನು ಹಾಸಿ ಗಾಢ ನಿದಿರೆಗೆ ಜಾರಿದ್ದ. ಅವನ ಗೊರಕೆಯ ಸದ್ದು ರಾಜನವರೆಗೂ ಕೇಳಿಸುತಲಿತ್ತು‌ . ರಾಜನಿಗೆ ಮತ್ತೆ ಯೋಚನೆ ಹತ್ತಿತು‌. "ಅವನಿಗೆ ಆ ಭಗವಂತ ಅದೆಷ್ಟು ಸುಖನಿದ್ರೆ ಕರುಣಿಸಿದ್ದಾನೆ. ಏನೂ ಇಲ್ಲದೆ, ಕಲ್ಲು ಮಣ್ಣು ತರಗೆಲೆಯ ಮೇಲೆಯೇ ಗಾಢನಿದಿರೆ ಮಾಡುತ್ತಿರುವನಲ್ಲ.. ನನಗೇಕೆ ನಿದಿರೆ ಬರುತ್ತಿಲ್ಲ.." ಎಂದು. ಮತ್ತೆ ಅವನ ಕರೆದು ಕೇಳಿದನಂತೆ "ನಿನಗೆ ಹೇಗೆ ಇಷ್ಟು ನಿದಿರೆ ಬರುತ್ತದೆ. ಈ ಮಣ್ಣು ಧೂಳಿನಲ್ಲಿ ನನಗೆ ಕೂರಲು ಮನಸ್ಸಾಗುತ್ತಿಲ್ಲ.." ಎಂದು. ಆಗ ಮರಗೆಲಸದವನು ಒಮ್ಮೆ ರಾಜನನ್ನು ನೋಡಿ ಖುಷಿಯಾಗಿ ಮತ್ತೆ ಬೆಸ್ತುಬಿದ್ದು ಸಾವರಿಸಿಕೊಂಡು  ಹೇಳಿದನಂತೆ " ಬುದ್ಧೀ ನೀವು. ನೀವೇಕೆ ಇಲ್ಲಿ ಬಂದಿರಿ‌ ನಮ್ಮ ಬದುಕೇ ಹೀಗೆ. ಕಷ್ಟಪಟ್ಟು ದುಡಿದರೆ ದೇಹಕ್ಕೆ ಆಯಾಸವಾಗುತ್ತದೆ. ಆಗ ಎಲ್ಲಿ ಮಲಗಿದರೂ ನಿದಿರೆ ಬರುತ್ತದೆ. ನಮ್ಮದು ಮರಕಡಿಯುವ ಕೆಲಸ ಸ್ವಾಮಿ. ರೆಟ್ಟೆ ಮುರಿದು ಕೆಲಸ ಮಾಡಬೇಕು. ಆಗಲೇ ಮೂರ್ಕಾಸು ಸಿಗುತ್ತದೆ. ಎಂದು.  ರಾಜನಿಗೆ ಬೇಸರವಾಯಿತು. ತಾನು ತಂದಿದ್ದ ರೇಶಿಮೆ ಗಂಟನ್ನು ಅವನ ಕೈಗಿತ್ತು ಕುದುರೆಯನ್ನೇರಿದನು. ದಾರಿ ಮಧ್ಯೆಯಲ್ಲಿ ಮತ್ತೆ ಚಿಂತೆ ಕಾಡಿತು‌.

ಹೀಗೆ ಮುಂದೆ ಹೋಗುವಾಗ ನದಿ ಕಾಣಿಸಿತು. ರಾಜನಿಗೆ ಈಜು ಬರುತ್ತಿರಲಿಲ್ಲ. ಅಲ್ಲಿ ನೋಡಿದರೆ ಚಿಕ್ಕ ಮಕ್ಕಳೆಲ್ಲ ನೀರಿನಲ್ಲಿ ಈಜುತ್ತಾ ಆಟವಾಡುತ್ತಾ ಇದ್ದರು. ಕತ್ತಲಾಗುತ್ತಾ ಬಂದಿತ್ತು. ರಾಜನಿಗೆ ನದಿ ದಾಟಿ ಅರಮನೆ ತಲುಪಲೇ ಬೇಕಾಯಿತು. ಆದರೆ ಏನು ಮಾಡುವುದು.? ಕೂಡಲೇ ಅಲ್ಲಿದ್ದ ಜನರನ್ನು ಕರೆದ‌. ಹೇಳಲು ಮುಜುಗರವಾಯಿತು. ಆದರೆ ತೋರಿಸಿಕೊಳ್ಳದೇ ಗಾಂಭೀರ್ಯದಿಂದ "ನಾನು ರಾಜ , ಆಜ್ಞೆ ಮಾಡುತ್ತಿರುವೆ. ನನ್ನನ್ನು ಮತ್ತು ಕುದುರೆಯನ್ನು ಈ ನದಿಯಿಂದ ದಾಟಿಸಿ ಆ ದಡಕ್ಕೆ ಕೊಂಡೊಯ್ಯಿರಿ..." ಎಂದು. ಜನರೆಲ್ಲರೂ ಓಡೋಡಿ ಬಂದು ರಾಜನನ್ನೂ ಹೊತ್ತು ನದಿಯಲ್ಲಿ ನಡೆದರು‌ ಕುದುರೆಯನ್ನು ಎಳೆದುಕೊಂಡು ಸಾಗಿ ದಡ ಮುಟ್ಟಿಸಿದರು. ರಾಜನಿಗೆ ಒಳಗೊಳಗೆ ದಡ ಸೇರಿದ ಖುಷಿಯಾಯಿತು. ಮತ್ತೆ ತಂದಿದ್ದ ರೇಶಿಮೆ ಗಂಟನ್ನು ಅವರ ಕೈಗಿಟ್ಟು ಈ ಚಿನ್ನದ ನಾಣ್ಯಗಳನ್ನು ಎಲ್ಲರೂ ಹಂಚಿಕೊಳ್ಳಲು ತಿಳಿಸಿದನು. ಕುದುರೆಯನ್ನೇರಿ ಅರಮನೆ ಕಡೆಗೆ ಸಾಗಿದನು. ಆದರೆ ಏನೇನೋ ಪ್ರಶ್ನೆಗಳು, ಚಿಂತೆಗಳು ಕಾಡಿದವು. ಹಾಗೆ ತಲೆತಗ್ಗಿಸಿಕೊಂಡು ಅರಮನೆಯಲ್ಲಿನ ತನ್ನ ಅಂತಃಪುರಕ್ಕೆ ತೆರಳಿದನು‌.

ತನ್ನ ಮಡದಿ ಮಹಾರಾಣಿಯನ್ನು ಕರೆದು ಬಳಿಯಲ್ಲಿ ಕುಳಿತುಕೊಳ್ಳಲು ಹೇಳಿದನು. ಹಾಗೆಯೇ ಆ ದಿನ ನಡೆದ ಘಟನೆಯನ್ನೆಲ್ಲ ವಿವರಿಸಿದನು. "ನಾನು ರಾಜ. ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲ ಎಂದನಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ..."
"ನಾನು ರಾಜ. ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ. ಎಂದೆನಿಸಿದ್ದೆ.  ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ. ನನಗೆ ಅಲ್ಲಿ ನಿದಿರೆಯೇ ಬರಲಿಲ್ಲ.."
"ನಾನು ರಾಜ. ಆದರೂ ಈಜಿ ನದಿ ದಾಟಲು ತಿಳಿದಿಲ್ಲ.."
"ಈ ಅರಮನೆಯಿಂದ ಒಮ್ಮೆಯೂ ಹೊರಗೆ ಹೋದವನೇ ಅಲ್ಲ. ಈ ಆಸ್ತಿ ಧನಕನಕದಲ್ಲಿಯೇ ನಾನು ಬದುಕುತ್ತಾ ಇದ್ದೇನೆ. ಇದನ್ನೇ ಸುಖ ಜೀವನ ಎಂದು ಭಾವಿಸಿರುವೆ. ಆದರೆ ಅವರೆಲ್ಲ ಅಷ್ಟೋ ಇಷ್ಟೋ ಹಣದಲ್ಲಿ ಹೇಗೆ ಸುಖವಾಗಿದ್ದಾರೆ ನೋಡು.

ಆಗ ಮಹಾರಾಣಿ ಹೇಳಿದಳಂತೆ, "ನೀವು ರಾಜ" ಎಂಬ ಮನಸ್ಥಿತಿಯೇ ನಿಮಗೆ ಮುಳ್ಳಾಗಿದೆ‌. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿರಿ. ಆಗ ಎಲ್ಲವೂ ನಿಮಗೆ ಸಿದ್ಧಿಸುತ್ತದೆ.  ಪ್ರಜೆಗಳು ಬಹಳ ಕಷ್ಟದಲ್ಲಿ ಅವರ ಬದುಕು ನಡೆಸುತ್ತಾ ಇದ್ದಾರೆ. ನೀವು ಅರಿತುಕೊಳ್ಳಿ. ಎಂದು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು‌. ಹಣ-ವೈಭೋಗದಿಂದ ಸುಖಸಿಗುವುದಿಲ್ಲ ಎಂದು. ಮುಂದೆ ಪ್ರಜೆಗಳ ಒಳಿತಿಗಾಗಿ ಅನೇಕ ನಿಯಮಗಳನ್ನು ಜಾರಿಗೆ ತಂದನು. ಅವರಿಗಾಗಿಯೇ ಬದುಕಿದನು.

ಸಿಂಧು ಭಾರ್ಗವ್.
ಬೆಂಗಳೂರು-೨೧