Tuesday 7 July 2020

ಮಕ್ಕಳ ಕತೆ : ತಿರುಗಿ ಬಂದ ಅದೃಷ್ಟ


ಮಕ್ಕಳ ಕಥೆ:  ತಿರುಗಿ ಬಂದ ಅದೃಷ್ಟ
ಸೀತಮ್ಮ ಸುಂದರ್ಹಳ್ಳಿ ಎನ್ನುವ ಪುಟ್ಟ ಹಳ್ಳಿಯಲ್ಲಿ ತನ್ನ ಗಂಡನ ಜೊತೆ ವಾಸಿಸುತ್ತಿದ್ದಳು. ಬಡತನದ ಬದುಕಿಗೆ ಮಡಿಕೆ ಮಾಡುವುದೇ ಕಾಯಕವಾಗಿತ್ತು. ಅನುದಿನವೂ ಗಂಡ ರಾಮಯ್ಯನ ಜೊತೆ ಮಡಿಕೆ ತಯಾರಿಸಿ ಸಂತೆಗೆ ಹೋಗಿ ಮಾರಿ ಬರುತ್ತಿದ್ದರು. ವರುಷಗಳು ಉರುಳಿದರೂ  ಅವರಿಗೆ ಲಾಭವೇನೂ ಆಗಲೇ‌ ಇಲ್ಲ. " ಉಂಡು ತಿಂದು ಮಲಗುವುದೇ ಆಯ್ತು. ಈ ಹರಕಲು ಗುಡಿಸಲಿನಲ್ಲಿಯೇ ಎಷ್ಟು ದಿನ ಇರುವುದು? ಇನ್ನು ಹೆಚ್ಚು ಮಡಿಕೆ ತಯಾರಿಸುವ ..." ಎಂದು ರಾಮಯ್ಯನ ಹತ್ತಿರ ಹೇಳಿದಳು. ಆಗ ರಾಮಯ್ಯ ಈಗ ಕಾಲ ಬದಲಾಗಿದೆ. ಮಡಿಕೆ‌ ಕೊಳ್ಳುವವರು ಯಾರೂ ಇಲ್ಲ. ನಮ್ಮ ಮಡಿಕೆಗೆ ಬೆಲೆ ಇಲ್ಲ..." ಎಂದನು.

ಅದೇ ಚಿಂತೆಯಲ್ಲಿ  ಸೀತಮ್ಮ ಮುಂಜಾನೆಯ ತಿಂಡಿಯನ್ನೂ ತಿನ್ನದೇ ಒಂದಷ್ಟು ಮಡಿಕೆಗಳನ್ನು ತಲೆಮೇಲೆ ಇರಿಸಿಕೊಂಡು ಸಂತೆಗೆ ನಡೆದಳು. ಹಾಗೆ ಹಾದಿ ಮಧ್ಯೆ ಮಂಗಗಳ ಹಿಂಡೊಂದು ಮರದಲ್ಲಿ ಆಟವಾಡುತ್ತಿದ್ದವು. ಅದರಲ್ಲಿ ಒಂದು ಕೋತಿ ಏನೋ ಗಂಟನ್ನು ಹಿಡಿದುಕೊಂಡಿತ್ತು. ಇನ್ನೊಂದು ಕೋತಿ ಅದನ್ನು ಎಳೆಯಲು ಪ್ರಯತ್ನಿಸಿತು.  ಹೀಗೆ ಮೇಲಿಂದ ಮೇಲೆ ಜಳಗ‌ ಮಾಡಿಕೊಳ್ಳುವಾಗ ಆ ಗಂಟು ಸೀತಮ್ಮನ ಮಡಿಕೆಯೊಳಗೆ ಕೈತಪ್ಪಿ ಬಿದ್ದು ಬಿಟ್ಟಿತು. ಇದನ್ನು ಅರಿಯದ ಸೀತಮ್ಮ ಮಡಿಕೆಗಳನ್ನು ಮಾರಲು ಸಂತೆಗೆ ಹೋಗಿ ತನ್ನ ಮಾಮೂಲಿ ಜಾಗದಲ್ಲಿ ಕುಳಿತುಕೊಂಡಳು. ಒಂದೊಂದೇ ಮಡಿಕೆಗಳನ್ನು ಸಾಲಾಗಿ ಮೇಲಿಂದ ಮೇಲೆ ಹೊಂದಿಸಲು ಶುರುವಿಟ್ಟಳು. ಅದೇ ಸಮಯದಲ್ಲಿ‌ ಒಂದು ಮಡಿಕೆಯಿಂದ "ಟಣ್-ಟಣಾ" "ಟಣ್-ಟಣಾ..." ಎಂದು ಶಬ್ದ ಬರುವುದು ಕೇಳಿಸಿತು. ಅಚ್ಚರಿಯಿಂದ ಮಡಿಕೆ‌ ನೋಡಿದರೆ ಅದರಲ್ಲಿ ಪುಟ್ಟ ಗಂಟಿತ್ತು. ಬಿಡಿಸಿ ನೋಡಿದಾಗ ಐನೂರರ ಒಂದಷ್ಟು ನೋಟುಗಳ ಕಟ್ಟು ಹಾಗೆಯೇ ಒಂದಷ್ಟು ನಾಣ್ಯಗಳು ಜೊತೆಗೆ ಚಿನ್ನದ ಒಂದು ನಾಣ್ಯ ಕೂಡ ಹೊಳೆಯುತ್ತಿತ್ತು.  ಆದರೆ ಅದು ಹೇಗೆ ಬಂತು? ಯಾರದ್ದು? ಒಂದೂ ಅರಿವಾಗಲಿಲ್ಲ. ಅದರ ಬಗ್ಗೆಯೇ ಯೋಚಿಸ ತೊಡಗಿದಳು. ಒಮ್ಮೆ ಮನಸ್ಸಿಗೆ ದಿಗಿಲಾಗಿ "ಇಲ್ಲಿಂದ ನೇರ ಮನೆಗೆ ಹೋಗುವುದೇ ಸರಿ‌" ಎಂದು ಭಾವಿಸಿದಳು. 
ಮನೆಗೆ ವೇಗವಾಗಿ ಧಾವಿಸಿ ಗಂಡನನ್ನು ಕರೆದಳು. ರಾಮಯ್ಯಗೆ ಮಡಿಕೆ ತಯಾರಿಸಿ ತುಂಬಾ ಆಯಾಸವಾಗಿತ್ತು. ಮಧ್ಯಾಹ್ನದ ಸಮಯ, ಮಲಗಿದ್ದನು. ಸೀತಮ್ಮ ಬೇಗನೆ ಹಿಂತಿರುಗಿ ಬಂದದ್ದು ನೋಡಿ ಅಚ್ಚರಿಯಾಯಿತು. ಏಕೆ ? ಏನಾಯಿತು? ಎಂದು ಕೇಳಿದನು. ಅವಳು ನಡೆದ ಕತೆಯನ್ನೆಲ್ಲ ಹೇಳಿದಳು. ಆಗ ರಾಮಯ್ಯನಿಗೆ ತಲೆಬಿಸಿಯಾಯಿತು. ಸತ್ಯವಂತ, ನಿಷ್ಠಾವಂತ ರಾಮಯ್ಯನಿಗೆ ಆ ಹಣವು ಪಾಷಾಣದಂತೆ ಕಂಡಿತು. "ಒಂದು ಕೆಲಸ ಮಾಡುವ.. ಯಾರಾದರೂ ಈ ಹಣದ ಬಗ್ಗೆ ಮಾತನಾಡುತ್ತಾ ಇದ್ದಾರಾ? ಯಾರ ಹಣದ ಕೈಚೀಲ ಕಳೆದುಹೋಗಿದೆಯೋ ಎಂದು ಊರೆಲ್ಲ ಕೇಳಿ ಬರುತ್ತೇನೆ. ವಾರಸುದಾರರಿಗೆ ಮರಳಿಸೋಣ" ಎಂದನು.
ಸೀತಮ್ಮನು ಒಪ್ಪಿದಳು. ಹೀಗೆ ಮನೆಮನೆಗೂ ಕೇಳುತ್ತ ಹೊರಟನು. ಯಾರೂ ತನ್ನದಲ್ಲ ಎಂದರು. ರಾಮಯ್ಯ ವಾಪಾಸಾದನು. ಮರುದಿನ ಪತ್ರಿಕೆಯಲ್ಲಿ ಕಳೆದು ಕೊಂಡವರ ಬಗ್ಗೆ ಏನಾದರೂ ಮಾಹಿತಿ ಬಂದಿದೆಯಾ...? ಎಂದು ಕಣ್ಣಾಡಿಸಿದನು. ಅಲ್ಲಿಯೂ ಏನೂ ಮಾಹಿತಿ ಇರಲಿಲ್ಲ. ಏನು ಮಾಡುವುದು ಈ ಹಣವನ್ನು ಎಂದು ಸುಮ್ಮನೆ ಕುಳಿತನು. ಆಗ ಸೀತಮ್ಮ "ನಾವು ನಮ್ಮ ಪ್ರಯತ್ನವೆಲ್ಲ ಮಾಡಿದೆವು, ನಮ್ಮ‌ಹಣ ಕಳೆದುಹೋಗಿದೆ ಎಂದು ಯಾರೂ ಕೇಳಿಕೊಂಡು ಬರಲಿಲ್ಲ. ಅದು ಯಾರದ್ದು ಎಂದೂ ತಿಳಿದಿಲ್ಲ, ನಾವೇ ಉಪಯೋಗಿಸುವ ಎಂದಳು.  ರಾಮಯ್ಯನಿಗೆ ಸರಿ ಕಾಣಿಸಲಿಲ್ಲ. ಆ ಸಣ್ಣ ಗಂಟನ್ನು ಹಿಡಿದುಕೊಂಡು ಸಂತೆ ಹಾದಿಯಲ್ಲಿ  ಸಾಗಿ ಅದೇ ಮಂಗಗಳ ಹಿಂಡಿರುವ ಮರದ ಕೊಂಬೆ ಮೇಲೆ ಇರಿಸಿದನು. ಒಂದು ಕೋತಿಯು ಬಂದು ಎತ್ತಿಕೊಂಡು ಹೋಯಿತು. ಮತ್ತೆ ಕಿತ್ತಾಡಲು ಶುರುಮಾಡಿದವು. ರಾಮಯ್ಯನಿಗೆ ನೋಡಿ ಬೇಸರವಾಯಿತು. ಹಣವು ಮಹಾಲಕ್ಷ್ಮಿ ಇದ್ದಂತೆ. ಇವಕ್ಕೆ ಏನು ಗೊತ್ತಿದೆ ಅದರ ಮಹತ್ವ.. ಈ ಮಂಗಗಳ ಕೈಗೆ ಸಿಕ್ಕರೆ ಹರಿದು ಚಿಂದಿ ಮಾಡಿಬಿಟ್ಟಾವು ಎಂದೆನಿಸಿ ಮತ್ತೆ ಆ ಗಂಟನ್ನು ಮನೆಗೆ ವಾಪಾಸು ತೆಗೆದುಕೊಂಡು ಹೋದನು. ಕಷ್ಟ ಎಂದಾಗೆಲ್ಲ ಆ ಲಕ್ಷ್ಮಿ ಫೋಟೋಗೆ ನಮಸ್ಕರಿಸಿ ಆ ಹಣವನ್ನು ತೆಗೆದುಕೊಳ್ಳುತ್ತಿದ್ದರು.
ನೀತಿ : ಕೆಲವು ನಮಗಾಗಿಯೇ ಅದೃಷ್ಟ ಬಂದಾಗ ಬೇಡ ಎನ್ನಬಾರದು.


ಕಥೆಗಾರ್ತಿ : ಸಿಂಧು ಭಾರ್ಗವ್ | ಬೆಂಗಳೂರು-೨೧