Friday 1 October 2021

Kannada Nursery Rhymes For Kids ಶಿಶುಗೀತೆಗಳು ಮಕ್ಕಳ ಸಾಹಿತ್ಯ

ಮಕ್ಕಳ ಸಾಹಿತ್ಯ ಐದು ಶಿಶುಗೀತೆಗಳು

Kannada Nursery Rhymes. Kids songs Lyrics. 


೧) ಮುದ್ದು ತಮ್ಮ

ಬಾ ಬಾರೋ ತಮ್ಮ ನನ್ನ ಪ್ರೀತಿಯ ತಮ್ಮ
ಬಾ ಬಾರೋ ತಮ್ಮ ಅಮ್ಮನ ಮುದ್ದು ಗುಮ್ಮ
ಗೊಂಬೆ ಜೊತೆಗೆ ಆಟವಾಡಿ ಕುಣಿದಾಡುವ
ಕಿಟಕಿಯಿಂದ ಹೊರನೋಡಿ ಚಪ್ಪಾಳೆ ತಟ್ಟುವ
ಅಂಬೆಗಾಲಿಡುತ ಮನೆಯೆಲ್ಲ ಸುತ್ತುವ
ಗೊಂಬೆಯ ಕಸಿದರೆ ಬೇಕೆಂದು ಹಠಹಿಡಿಯುವ
ಅಮ್ಮ ಬಂದು ಎತ್ತಿಕೊಂಡು ಮುತ್ತನಿಟ್ಟರೆ
ಕಿಲಕಿಲನೆ ನಗುತ ಅಳುವ ನಿಲ್ಲಿಸುವ!!



(೨) ಹಕ್ಕಿ ಗೂಡು

ನಮ್ಮ‌ ಮನೆಯ ಹಿತ್ತಲಲ್ಲಿ ತೊಗರಿ ಗಿಡವೊಂದಿದೆ
ಗುಬ್ಬಿಯೊಂದು ಸಣ್ಣದಾದ ಗೂಡುಕಟ್ಟಿದೆ
ಚಿಕ್ಕ ಚಿಕ್ಕ ಮೊಟ್ಟೆಯಿಟ್ಟು ಕಾವು ಕೊಡುತಲಿರುವುದು
ಹಗಲು ರಾತ್ರಿ ತತ್ತಿಯನ್ನು ಆರೈಕೆ ಮಾಡುವುದು

ದಿನಗಳುರುಳಿ ಮೊಟ್ಟೆ ಒಡೆದು ಮರಿಗಳು ಹೊರಬಂದವು
ಗುಬ್ಬಿಯ ಸಂತಸವು ಮುಗಿಲು ಮುಟ್ಟಿದೆ!!



(೩) ಪುಟ್ಟನ ಪ್ರಶ್ನೆ

ಅಮ್ಮ ಅಮ್ಮ ಚಿಟ್ಟೆಗಳೇಕೆ
ಹೂವಿಂದ ಹೂವಿಗೆ ಹಾರುವವು?
ಸಿಹಿಸಿಹಿಯಾದ ಮಕರಂದವ ಹೀರಲು
ಹೂವುಗಳ ಭೇಟಿ ಮಾಡುವವು..

ಅಮ್ಮ ಅಮ್ಮ ಮೀನುಗಳೇಕೆ ನೀರಿನಲಿ ಈಜುವವು
ನೆಲದಲಿ ಮೀನು ಉಸಿರಾಡಲು ಆಗದೆ ಹೊರಳಿ ಹೊರಳಿ ಸಾಯುವವು
ಅಮ್ಮ ಅಮ್ಮ ಮೋಡಗಳೇಕೆ ಕಪ್ಪು ಕಪ್ಪಾಗಿದೆ?!
ಮಳೆಯು ಬರಲು ಕರಿಮೋಡವು ಬೇಕು ಮಗುವೆ..




(೪) ಬಣ್ಣದ ಗೊಂಬೆ

ನನ್ನಯ ಮುದ್ದಿನ ಗೊಂಬೆ
ಬಣ್ಣ ಬಣ್ಣದ ಗೊಂಬೆ
ಹಬ್ಬದಲ್ಲಿ ಕಂಡ ಗೊಂಬೆ
ಅಪ್ಪ ಕೊಡಿಸಿದ ಗೊಂಬೆ

ಅಣ್ಣನು ಕಸಿದುಕೊಂಡನು
ನೀರಲಿ ಎಸೆದು ಬಿಟ್ಟನು
ಗೊಂಬೆಯ ಬಣ್ಣವು ಕರಗಿತು
ಬೇಸರದಿ ಅಳುವು ಬಂದಿತು!!




(೫) ಪುಟ್ಟಿಯ ಕೋಪ

ಅಮ್ಮನ ಮೇಲೆ ಬಂದಿದೆ ಕೋಪವು
ಅಂಗಳದಲ್ಲಿ ಕುಳಿತಳು ಪುಟ್ಟಿಯು
ನ್ನವ ಕಲಸಿ ಅಮ್ಮನು ಬಂದರು
ಆಗಸದಲ್ಲಿನ ಚಂದ್ರನ ತೋರಿಸಿದರು

ಹುಣ್ಣಿಮೆ ಬೆಳಕು ಅಂಗಳದಲ್ಲಿ
ಮಲ್ಲಿಗೆ ಮೊಗ್ಗು ಅರಳಿದೆ ನೋಡಲ್ಲಿ
ಬಿಡು ಮಗುವೆ ಕೋಪವನು
ಗೊಂಬೆಯ ನಾನು ಕೊಡಿಸುವೆನು

ಚಂದಿರನ ತೋರಿಸುತ , ಮಲ್ಲಿಗೆಯ ಕೈಗಿಡುತ
ಅಮ್ಮ ಕತೆಯನು ಹೇಳುತ ಊಟವ ಮಾಡಿಸಿದಳು..
ಮುನಿಸನು ಮರೆತು ಪುಟ್ಟಿಯು ಅಮ್ಮನ ಅಪ್ಪಿಕೊಂಡಳು..

- ಸಿಂಧು ಭಾರ್ಗವ, ಬೆಂಗಳೂರು



Tuesday 28 September 2021

ಮಕ್ಕಳ ನೀತಿ ಕತೆ ತಂದೆಯ ಜಾಣ್ಮೆ

 

Source images Kannada kids Stories

ಅಜ್ಜಿ ಹೇಳಿದ ಕಥೆ: ತಂದೆಯ ಜಾಣ್ಮೆ

ಪುಟ್ಟಿ ರಕ್ಷಾ ಬಂಧನದ ದಿನ ಬೇಸರ ಮಾಡಿಕೊಂಡು ಕುಳಿತಿದ್ದಳು. ನನಗೆ ಅಣ್ಣ ಇಲ್ಲ. ರಾಖಿ ಕಟ್ಟಬೇಕು ಎಂದು ಅಳುತ್ತಿದ್ದಳು. ಅಮ್ಮ ಎಷ್ಟು ಸಮಾಧಾನ ಮಾಡಿದರು ಸರಿಯಾಗಲಿಲ್ಲ. ಶಾಲೆಗೆ ಹೋಗುವುದಿಲ್ಲ ಎಂದು ಅಳುತ್ತಿದ್ದಳು. "ನನಗೆ ಅಣ್ಣ ಬೇಕು...." ಎಂದು ಅಳುವುದು ಜೋರಾಯಿತು. ತಂದೆಗೆ ತಲೆಬಿಸಿಯಾಯಿತು‌. ಆಗ ಒಂದು ಉಪಾಯ ಮಾಡಿದರು. ಅಂಗಡಿಗೆ ಹೋಗಿ ಸುಂದರವಾದ
ರಾಖಿಗಳನ್ನು ತಂದರು. ನಂತರ ಅಕ್ಕಪಕ್ಕದ ಮನೆಯ ಮಕ್ಕಳನ್ನೆಲ್ಲ ಕರೆದು ಒಂದೊಂದು ರಾಖಿ ನೀಡಿ "ನಿಮ್ಮ ಪುಟ್ಟ ತಂಗಿಗೆ ಪ್ರೀತಿಯಿಂದ ರಾಖಿ ಕಟ್ಟಲು ಹೇಳಿ.." ಎಂದರು. ರಕ್ಷಾ ಬಂಧನಕ್ಕೆ ಮೆರುಗು ಬಂದಿತು. ಮನೆಗೆ ಬಂದ ಮಕ್ಕಳಿಗೆ ಸಿಹಿಯನ್ನು ಹಂಚಿದರು. ಮಕ್ಕಳಿಗೂ ಖುಷಿಯಾಯಿತು. ಪುಟ್ಟಿಗೆ ಕೂಡ ಎಲ್ಲಿಲ್ಲದ ಸಂಭ್ರಮ.

- ಸಿಂಧು ಭಾರ್ಗವ, ಬೆಂಗಳೂರು




ಮಕ್ಕಳ ಪದ್ಯ ಬೆಳ್ಳಕ್ಕಿ ಹಾಗೂ ಸಲಗನ ಗೆಳೆತನ

 



ಮಕ್ಕಳ ಪದ್ಯ  : ಬೆಳ್ಳಕ್ಕಿ ಹಾಗೂ ಸಲಗನ ಗೆಳೆತನ ( Friendship)

ಕೆರೆಯ ಬಳಿಯು ಸಲಗವೊಂದು
ಹುಲ್ಲು ತಿನ್ನಲು ಬರುವುದು
ಬೆಳ್ಳಕ್ಕಿಯು ಅದರ ಬೆನ್ನನೇರಿ
ಕುಳಿತುಕೊಳುವುದು//

ಹೇನುಗಳ ಕಾಟವೊಮ್ಮೆ
ವಿಪರೀತ ಅನಿಸಿತು
ಗಜದ ಮೈಗೆ ಕಚ್ಚಿ ಕಚ್ಚಿ
ರಕುತ ಹೀರುತ್ತಿದ್ದವು//

ಆನೆ ತನ್ನ ಸೋಂಡಿನಿಂದ
ಮೈಗೆ ಬಡಿದುಕೊಳ್ಳಲು,
ಕೊಕ್ಕರೆಯು ಕ್ಷಣಕೆ ಬಂದು
ಸಲಹೆಯನ್ನು ನೀಡಿತು//

ನಿನ್ನ ಮೈಯಲಿರುವ ಹೇನ
ನಾನು ತಿನುವೆ ಎಂದಿತು
ಹರುಷದಿಂದ ಗಜವು ಒಪ್ಪಿ
ಚಿಂತೆ ಕಳೆದುಕೊಂಡಿತು//

ಕೊಕ್ಕರೆಯು ಹೊಟ್ಟೆ ತುಂಬಾ
ಹೇನುಗಳ ತಿಂದಿತು
ಗಜದ ಜೊತೆಗೆ ಅನುದಿನವು
ನೇಹ ಬೆಳೆಸಿಕೊಂಡಿತು//

- ಸಿಂಧು ಭಾರ್ಗವ ,ಬೆಂಗಳೂರು

ಶಿಶುಗೀತೆಗಳು ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ

 

ಐದು ಶಿಶುಗೀತೆಗಳು - 

ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ 



Source Images. Kannada Kids Rhymes


ಶಿಶುಗೀತೆ : ಚಿಟ್ಟೆ

ಕಪ್ಪು ರೆಕ್ಕೆಯ ಚಿಟ್ಟೆಯೇ
ಬಿಳಿಯ ಚುಕ್ಕಿಯನ್ಯಾರು ಇಟ್ಟರು??
ನಿನ್ನಯ ರೂಪ ಸೌಂದರ್ಯವ
ಸುಂದರವಾಗಿಸಿದವರು ಯಾರು??

ಹೂವಿಂದ ಹೂವಿಗೆ ಹಾರುತ
ಗುಸುಗುಸು ಮಾತನಾಡುವೆ ನೀನು
ಹೂವಿನ ಮಧುವನು ಹೀರುತ
ಹೊಟ್ಟೆಯ ತುಂಬಿಸಿಕೊಳ್ಳುವೆ ನೀನು

(೨)

ಕಾಲಗಳು

ಮಳೆಗಾಲ ಬೇಡವೇ ಬೇಡವಮ್ಮ
ಶಾಲೆಗೆ ಹೋಗಲು ಅಡೆತಡೆಯಮ್ಮ
ಸಮವಸ್ತ್ರವು ಹಾಳಾಗುವುದು
ಗುಡುಗು ಮಿಂಚಿಗೆ ಮನ ಹೆದರುವುದು

ಬೇಸಿಗೆ ಕಾಲವೇ ಬಲುಚಂದ
ಮನೆಮಂದಿಯೆಲ್ಲ ಜೊತೆಗೆ ಸೇರಿ
ಹಪ್ಪಳ ಸೆಂಡಿಗೆ ಮಾಡುವ ಚಂದ

ಚಳಿಗಾಲಕೆ ,ಚಳಿ ವಿಪರೀತ
ಗಡಗಡ ನಡುಗುವ ಗಮ್ಮತ್ತ
ಕಂಬಳಿ ಹೊದ್ದು ಮಲಗಿದರೆ
ಮುಂಜಾನೆ ಏಳಲು ಮನಸ್ಸಿಲ್ಲ, ಖರೆ.!!

೩) ಸಾಧನೆ

ಸಾಧನೆ ಮಾಡಿದ ಮಹಾಪುರುಷರ
ಕತೆಯನು ಗುರುಗಳು ಹೇಳುವರು
ಹುರುಪನು ನೀಡುತ ಮಕ್ಕಳ ಮನದಲಿ
ಕನಸುಗಳ ತುಂಬುವರು

ಭವಿಷ್ಯದ ಕುಡಿಗಳು ನಾವೆಲ್ಲರು
ಜೊತೆಯಾಗಿ ಸಾಗೋಣ
ವಿದ್ಯೆ ಕಲಿತು ಯಶವ ಸಾಧಿಸಿ
ಹೆತ್ತವರಿಗೆ ಕೀರ್ತಿಯ ತರೋಣ.

Source Images : Kannada kids rhymes. 


೪) ಸಮಾನತೆ
ಇರಬೇಕು ಎಲ್ಲ ಕಡೆ ಸಮಾನತೆಯ ಗಂಧ
ಹರಡಲಿ ಸ್ನೇಹ ಸೌಹಾರ್ದತೆ ಸೌಗಂಧ
ಜಾತಿಮತದ ಕೊಳೆಯ ತೊಳೆದು ಹಾಕೋಣ
ಮಾನವೀಯತೆಯ ಹೂವ ಕೈಗೆ ನೀಡೋಣ

ಎಲ್ಲರೂ ಒಂದೆ ಇಲ್ಲಿ ಭಾರತಾಂಬೆಯ ಮಕ್ಕಳು
ಎಲ್ಲರ ದೇಹದಲ್ಲಿ ಹರಿವುದು ಕೆಂಪು ನೆತ್ತರು
ಹೊಡೆದಾಟ ಬಡಿದಾಟ ಬೇಡವೇ ಬೇಡ
ಶಾನಮತಿಯ ಪಾರಿವಾಳ ಹಾರಲಿ ಈಗ

೫) ಸಂತೆಗೆ ಹೋಗೋಣ
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ
ಬಣ್ಣ ಬಣ್ಣದ ರಿಬ್ಬನ್ ಬಲೂನನು ನನಗೆ ಕೊಡಿಸಣ್ಣ
ಕಬ್ಬಿನ ಹಾಲನು ಕುಡಿದು ನಾವು ಗಟ್ಟಿಯಾಗೋಣ
ದೊಡ್ಡ ಚಕ್ರದ ತೊಟ್ಟಿಲಲಿ ಕುಳಿತು ಸುತ್ತು ಸುತ್ತೋಣ!!

ಅಮ್ಮನಿಗಾಗಿ ಗಾಜಿನ ಬಳೆಗಳು
ಅಪ್ಪನಿಗಾಗಿ ಕೂಲಿಂಗ್ಲಾಸು
ತಮ್ಮನಿಗಾಗಿ ಆಟಿಕೆ ತೆಗೆದು ಮನೆಗೆ ಸಾಗೋಣ..
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ!!

- ಸಿಂಧು ಭಾರ್ಗವ, ಬೆಂಗಳೂರು
ಮಕ್ಕಳ ಸಾಹಿತಿ.

Kids stories ಮಕ್ಕಳ ಕತೆ : ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳು

 

ಮಕ್ಕಳ ಕತೆ : ರೆಕ್ಕೆಬಿಚ್ಚಿ ಹಾರುವ ಹಕ್ಕಿಗಳು



Source image Kannada Kids Moral Stories.


ರಾಮಪುರ ಎಂಬ ಸುಂದರ ಗ್ರಾಮವು ಹಸಿರುಹೊದ್ದ ಕಾನವಾಗಿತ್ತು. ಅಲ್ಲಿನ ಪ್ರತಿಯೊಬ್ಬರು ಕೃಷಿ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಮಹದಾಸೆ ಎಲ್ಲ ಹೆತ್ತವರ ಮನದಲ್ಲಿತ್ತು. ಅದೊಂದು ರಸ್ತೆಯೂ ಇಲ್ಲದ ಬಸ್ಸು ಬಾರದ ಕುಗ್ರಾಮವಾಗಿತ್ತು. ಹೀಗಿದ್ದರು ಸಣ್ಣದೊಂದು ಶಾಲೆ ತಲೆಎತ್ತಿ ನಿಂತಾಗ ಪ್ರತಿಮನೆಯಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ರಾಮಣ್ಣನ ಮಕ್ಕಳು ಪುಷ್ಪ ಮತ್ತು ಪ್ರಸಾದ್ ಅಣ್ಣ ತಂಗಿಯರು ಕೂಡ ಬಹಳ ಉತ್ಸಾಹದಿಂದ ಶಾಲೆಗೆ ಹೋಗುತ್ತಿದ್ದರು. ಏಳನೇ ತರಗತಿ ಮುಗಿಸಿ ಹೈಸ್ಕೂಲ್ ಗೆ ಹೋಗುವ ಸಮಯ ಬಂದಿತು. ಕಾಡು ಮಾರ್ಗದಲ್ಲಿ  ಹೋಗುವುದು ಭಯವಾಗುತ್ತಿತ್ತು. ಹಾಗಾಗಿ ಹೆಣ್ಮಕ್ಕಳಿಗೆ ಮನೆಯವರು ಕಳುಹಿಸುತ್ತಿರಲಿಲ್ಲ. ಹುಡುಗರು ತಮ್ಮ ಸೈಕಲ್ ಏರಿ ಹೈಸ್ಕೂಲ್ ಮುಗಿಸಿದರು. ಇದರಿಂದ ಪುಷ್ಪಳಿಗೆ ಬಹಳ ಬೇಸರವಾಯಿತು‌. ತನ್ನ ಓದುವ ಕನಸು ಕಮರಿಹೋಯಿತು.

ಹೀಗಿದ್ದಾಗ ತಂದೆಗೆ ಒತ್ತಾಯ ಮಾಡಿ ಶಾಲೆಗೆ ಕಳುಹಿಸಲು ಹೇಳಿದಳು. ಮೊದಮೊದಲು ಒಪ್ಪದ ತಂದೆ ನಂತರದಲ್ಲಿ ಒಪ್ಪಿಗೆ ಸೂಚಿಸಿದರು. ಆ ಹಳ್ಳಿಯಲ್ಲಿ ಅವಳೊಬ್ಬಳೇ ಹೈಸ್ಕೂಲು ಮೆಟ್ಟಿಲು ಹತ್ತಿದವಳು ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಇದು ಅವಳಲ್ಲಿ ಜಂಭೂಡಿಸದಲು ಎಡೆಮಾಡಿಕೊಟ್ಟಿತು. ತಂದೆಯ ಬಳಿ ಯಾವಾಗಲೂ ಹಣ ಕೇಳುವುದು. ಕಂಡದ್ದನ್ನೆಲ್ಲ ಖರೀದಿಸಿ ದುಂದುವೆಚ್ಚ ಮಾಡುವುದು. ತಂದೆ ಏಕೆ ಇಷ್ಟು ಹಣ? ಎಂದು ಕೇಳಿದರೆ "ಶಾಲೆಯಲ್ಲಿ ಹೇಳಿದ್ದಾರೆ... " ಎಂದು ಸುಳ್ಳು ಹೇಳುವುದು.

ಹೀಗೆ ಒಂಭತ್ತನೇ ತರಗತಿಗೆ ಬರುವಷ್ಟರಲ್ಲಿ ಸ್ನೇಹಿತರ ದೊಡ್ಡ ಗುಂಪೇ ಅವಳೊಂದಿಗೆ ಜೊತೆಯಾಗಿತ್ತು. ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು. ಸುದ್ದಿ ಕೇಳಿದ ತಂದೆಗೆ ಎಲ್ಲಿಲ್ಲದ ಆಘಾತವಾಯಿತು. ಜೊತೆಗೆ ಅಂಕಪಟ್ಟಿಗೆ ಸಹಿ ಹಾಕಲು ಶಾಲೆಗೆ ಬರಲು ಹೇಳಿದ್ದರು. ಒಮ್ಮೆಯೂ ಶಾಲೆ ಕಡೆಗೆ ಮುಖ ಮಾಡದ ರಾಮಣ್ಣನಿಗೆ ಅವಮಾನವಾಯಿತು. ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಮಾತು ಕೇಳಿ ತಮ್ಮ ಕಿವಿಯನ್ನೇ ನಂಬಲು ಅಸಾಧ್ಯವಾಯಿತು. "ನಿಮ್ಮ ಮಗಳು ಓದಿನಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ತರಗತಿಗೂ ಸರಿಯಾಗಿ ಬರುತ್ತಿಲ್ಲ. ಬದಲಾಗಿ ಹುಡುಗರ ಜೊತೆಗೆ ಅಲ್ಲಲ್ಲಿ ತಿರುಗಾಡುತ್ತಿರುವುದನ್ನುಉಳಿದ ವಿದ್ಯಾರ್ಥಿಗಳು, ಶಿಕ್ಷಕರು ಸಹ ನೋಡಿದ್ದಾರೆ. ಅವಳು ಹಾದಿ ತಪ್ಪುವ ಮೊದಲು ಬೈದು ಬುದ್ದಿಹೇಳಿ. ಈ ವಿಷಯವನ್ನು ತಿಳಿಸಲೆಂದೇ ನಿಮ್ಮನ್ನು ವೈಯಕ್ತಿಕವಾಗಿ ಕರೆಯಬೇಕಾಯಿತು ಎಂದರು.

ತಂದೆಗೆ ತಲೆಬಿಸಿಯಾಯಿತು‌. ಸಂಜೆ ಮಗಳು ಮನೆಗೆ ಬರುವುದನ್ನೇ ಕಾಯುತ್ತ ಕುಳಿತಿದ್ದರು. ಮಗನ ಜೊತೆಗೆ ಬಾರದೇ ಇರುವುದನ್ನು ನೋಡಿ ಕೋಪ ನೆತ್ತಿಗೇರಿತು. ತನ್ನ ಮಡದಿಯನ್ನು ಕರೆದು ಮಗ ಬರುವ ತನಕ ಕಾದು ಎಲ್ಲರೂ ಜೊತೆಗಿದ್ದ ಸಮಯ ನೋಡಿ ಮಗಳಿಗೆ ಚೆನ್ನಾಗಿ ಬೈದು ಬುದ್ದಿಮಾತನ್ನು ಹೇಳಿದರು. ಅವರು ಕೇಳಿದ ಪ್ರಶ್ನೆಗಳಿಗೆ ಅಣ್ಣನು ಕೂಡ ಹೌದು, ನಾನೆಷ್ಟು ಹೇಳಿದರು ನನ್ನ ಮಾತನ್ನು ಕೇಳುತ್ತಿಲ್ಲ. ಎಲ್ಲ ಹುಡುಗರ ಎದುರೇ ಅವಮಾನ ಮಾಡುತ್ತಾಳೆ ಎಂದನು.

ಮಗಳಿಗೆ ನೀಡಿದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಚಿತವಾಯಿತು. ನೀನಿನ್ನು ಶಾಲೆಗೆ ಹೋಗುವುದು ಬೇಡ ಎಂದು ಗದರಿಸಿದರು. ಒಂಭತ್ತನೇ ತರಗತಿಯು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಪುಷ್ಪಾಳಿಗೆ ಎಲ್ಲಿಲ್ಲದ ದುಃಖವಾಯಿತು. ಒಮ್ಮೆ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದಾಗ ತಂದೆಯ ಕೋಣೆಗೆ ಹೋಗಿ ಕಾಲಿಗೆ ಬಿದ್ದಳು. " ಇಲ್ಲ ಅಪ್ಪ ನಾನಿನ್ನು ಈ ತರಹ ಮಾಡುವುದಿಲ್ಲ. ದಯಮಾಡಿ ಓದಲು ಕಳುಹಿಸಿ. ನಾನು ಅಣ್ಣನಂತೆ ಚೆನ್ನಾಗಿ ಓದಿ ಕೆಲಸಕ್ಕೆ ಸೇರುವೆ. ಕಾಲೇಜು ಡಿಗ್ರಿ ಓದುವ ಕನಸಿದೆ. ನನ್ನ ತಪ್ಪಿನ ಅರಿವಾಗಿದೆ..." ಎಂದು ಕೇಳಿಕೊಂಡಳು.

Source image. Kannada kids Stories. 


ಮರುದಿನ ಮಗಳನ್ನು ಕರೆದುಕೊಂಡು ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರ ಬಳಿ ಮಾತನಾಡಿ ಮತ್ತೆ ಶಾಲೆಗೆ ಬರಲು ಅನುಮತಿ ದೊರಕಿತು. ಪರೀಕ್ಷೆಯಲ್ಲಿ ಪಾಸಾದಳು. ಮುಂದೆಂದೂ ಈ ರೀತಿಯ ತಪ್ಪನ್ನು ಮಾಡಲು ಹೋಗಲಿಲ್ಲ.

ಓದುವ ವಯಸ್ಸಿನಲ್ಲಿ ಅನ್ಯ ವಿಷಯದ ಬಗ್ಗೆ ಆಸಕ್ತಿ ಆಕರ್ಷಣೆ ಮೂಡುವುದು ಸಹಜ. ಏನೂ ಅರಿಯದ, ಮುಂದಾಗುವ ಅಪಾಯವನ್ನೇ ಊಹಿಸದ ಹರೆಯದ ಮನಸ್ಸು ಮನೆಯವರೇ ದೂರದವರಂತೆ ಭಾವಿಸಿ ಹೊರಗಿನವರನ್ನು ನೆಚ್ಚಿಕೊಳ್ಳುವುದು. ಹೆತ್ತವರು ಸರಿಯಾದ ಮಾರ್ಗದರ್ಶನ ನೀಡಿ ಸರಿದಾರಿಗೆ ತರುವುದು ದೊಡ್ಡ ಜವಾಬ್ದಾರಿಯಾಗಿದೆ.

- ಸಿಂಧು ಭಾರ್ಗವ ಬೆಂಗಳೂರು