Friday 1 October 2021

Kannada Nursery Rhymes For Kids ಶಿಶುಗೀತೆಗಳು ಮಕ್ಕಳ ಸಾಹಿತ್ಯ

ಮಕ್ಕಳ ಸಾಹಿತ್ಯ ಐದು ಶಿಶುಗೀತೆಗಳು

Kannada Nursery Rhymes. Kids songs Lyrics. 


೧) ಮುದ್ದು ತಮ್ಮ

ಬಾ ಬಾರೋ ತಮ್ಮ ನನ್ನ ಪ್ರೀತಿಯ ತಮ್ಮ
ಬಾ ಬಾರೋ ತಮ್ಮ ಅಮ್ಮನ ಮುದ್ದು ಗುಮ್ಮ
ಗೊಂಬೆ ಜೊತೆಗೆ ಆಟವಾಡಿ ಕುಣಿದಾಡುವ
ಕಿಟಕಿಯಿಂದ ಹೊರನೋಡಿ ಚಪ್ಪಾಳೆ ತಟ್ಟುವ
ಅಂಬೆಗಾಲಿಡುತ ಮನೆಯೆಲ್ಲ ಸುತ್ತುವ
ಗೊಂಬೆಯ ಕಸಿದರೆ ಬೇಕೆಂದು ಹಠಹಿಡಿಯುವ
ಅಮ್ಮ ಬಂದು ಎತ್ತಿಕೊಂಡು ಮುತ್ತನಿಟ್ಟರೆ
ಕಿಲಕಿಲನೆ ನಗುತ ಅಳುವ ನಿಲ್ಲಿಸುವ!!



(೨) ಹಕ್ಕಿ ಗೂಡು

ನಮ್ಮ‌ ಮನೆಯ ಹಿತ್ತಲಲ್ಲಿ ತೊಗರಿ ಗಿಡವೊಂದಿದೆ
ಗುಬ್ಬಿಯೊಂದು ಸಣ್ಣದಾದ ಗೂಡುಕಟ್ಟಿದೆ
ಚಿಕ್ಕ ಚಿಕ್ಕ ಮೊಟ್ಟೆಯಿಟ್ಟು ಕಾವು ಕೊಡುತಲಿರುವುದು
ಹಗಲು ರಾತ್ರಿ ತತ್ತಿಯನ್ನು ಆರೈಕೆ ಮಾಡುವುದು

ದಿನಗಳುರುಳಿ ಮೊಟ್ಟೆ ಒಡೆದು ಮರಿಗಳು ಹೊರಬಂದವು
ಗುಬ್ಬಿಯ ಸಂತಸವು ಮುಗಿಲು ಮುಟ್ಟಿದೆ!!



(೩) ಪುಟ್ಟನ ಪ್ರಶ್ನೆ

ಅಮ್ಮ ಅಮ್ಮ ಚಿಟ್ಟೆಗಳೇಕೆ
ಹೂವಿಂದ ಹೂವಿಗೆ ಹಾರುವವು?
ಸಿಹಿಸಿಹಿಯಾದ ಮಕರಂದವ ಹೀರಲು
ಹೂವುಗಳ ಭೇಟಿ ಮಾಡುವವು..

ಅಮ್ಮ ಅಮ್ಮ ಮೀನುಗಳೇಕೆ ನೀರಿನಲಿ ಈಜುವವು
ನೆಲದಲಿ ಮೀನು ಉಸಿರಾಡಲು ಆಗದೆ ಹೊರಳಿ ಹೊರಳಿ ಸಾಯುವವು
ಅಮ್ಮ ಅಮ್ಮ ಮೋಡಗಳೇಕೆ ಕಪ್ಪು ಕಪ್ಪಾಗಿದೆ?!
ಮಳೆಯು ಬರಲು ಕರಿಮೋಡವು ಬೇಕು ಮಗುವೆ..




(೪) ಬಣ್ಣದ ಗೊಂಬೆ

ನನ್ನಯ ಮುದ್ದಿನ ಗೊಂಬೆ
ಬಣ್ಣ ಬಣ್ಣದ ಗೊಂಬೆ
ಹಬ್ಬದಲ್ಲಿ ಕಂಡ ಗೊಂಬೆ
ಅಪ್ಪ ಕೊಡಿಸಿದ ಗೊಂಬೆ

ಅಣ್ಣನು ಕಸಿದುಕೊಂಡನು
ನೀರಲಿ ಎಸೆದು ಬಿಟ್ಟನು
ಗೊಂಬೆಯ ಬಣ್ಣವು ಕರಗಿತು
ಬೇಸರದಿ ಅಳುವು ಬಂದಿತು!!




(೫) ಪುಟ್ಟಿಯ ಕೋಪ

ಅಮ್ಮನ ಮೇಲೆ ಬಂದಿದೆ ಕೋಪವು
ಅಂಗಳದಲ್ಲಿ ಕುಳಿತಳು ಪುಟ್ಟಿಯು
ನ್ನವ ಕಲಸಿ ಅಮ್ಮನು ಬಂದರು
ಆಗಸದಲ್ಲಿನ ಚಂದ್ರನ ತೋರಿಸಿದರು

ಹುಣ್ಣಿಮೆ ಬೆಳಕು ಅಂಗಳದಲ್ಲಿ
ಮಲ್ಲಿಗೆ ಮೊಗ್ಗು ಅರಳಿದೆ ನೋಡಲ್ಲಿ
ಬಿಡು ಮಗುವೆ ಕೋಪವನು
ಗೊಂಬೆಯ ನಾನು ಕೊಡಿಸುವೆನು

ಚಂದಿರನ ತೋರಿಸುತ , ಮಲ್ಲಿಗೆಯ ಕೈಗಿಡುತ
ಅಮ್ಮ ಕತೆಯನು ಹೇಳುತ ಊಟವ ಮಾಡಿಸಿದಳು..
ಮುನಿಸನು ಮರೆತು ಪುಟ್ಟಿಯು ಅಮ್ಮನ ಅಪ್ಪಿಕೊಂಡಳು..

- ಸಿಂಧು ಭಾರ್ಗವ, ಬೆಂಗಳೂರು