ಶಿಶುಗೀತೆಗಳು -
ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ
ಶಿಶುಗೀತೆ : ಚಿಟ್ಟೆ
ಕಪ್ಪು ರೆಕ್ಕೆಯ ಚಿಟ್ಟೆಯೇ
ಬಿಳಿಯ ಚುಕ್ಕಿಯನ್ಯಾರು ಇಟ್ಟರು??
ನಿನ್ನಯ ರೂಪ ಸೌಂದರ್ಯವ
ಸುಂದರವಾಗಿಸಿದವರು ಯಾರು??
ಹೂವಿಂದ ಹೂವಿಗೆ ಹಾರುತ
ಗುಸುಗುಸು ಮಾತನಾಡುವೆ ನೀನು
ಹೂವಿನ ಮಧುವನು ಹೀರುತ
ಹೊಟ್ಟೆಯ ತುಂಬಿಸಿಕೊಳ್ಳುವೆ ನೀನು
(೨) ಕಾಲಗಳು
ಮಳೆಗಾಲ ಬೇಡವೇ ಬೇಡವಮ್ಮ
ಶಾಲೆಗೆ ಹೋಗಲು ಅಡೆತಡೆಯಮ್ಮ
ಸಮವಸ್ತ್ರವು ಹಾಳಾಗುವುದು
ಗುಡುಗು ಮಿಂಚಿಗೆ ಮನ ಹೆದರುವುದು
ಬೇಸಿಗೆ ಕಾಲವೇ ಬಲುಚಂದ
ಮನೆಮಂದಿಯೆಲ್ಲ ಜೊತೆಗೆ ಸೇರಿ
ಹಪ್ಪಳ ಸೆಂಡಿಗೆ ಮಾಡುವ ಚಂದ
ಚಳಿಗಾಲಕೆ ,ಚಳಿ ವಿಪರೀತ
ಗಡಗಡ ನಡುಗುವ ಗಮ್ಮತ್ತ
ಕಂಬಳಿ ಹೊದ್ದು ಮಲಗಿದರೆ
ಮುಂಜಾನೆ ಏಳಲು ಮನಸ್ಸಿಲ್ಲ, ಖರೆ.!!
೩) ಸಾಧನೆ
ಸಾಧನೆ ಮಾಡಿದ ಮಹಾಪುರುಷರ
ಕತೆಯನು ಗುರುಗಳು ಹೇಳುವರು
ಹುರುಪನು ನೀಡುತ ಮಕ್ಕಳ ಮನದಲಿ
ಕನಸುಗಳ ತುಂಬುವರು
ಭವಿಷ್ಯದ ಕುಡಿಗಳು ನಾವೆಲ್ಲರು
ಜೊತೆಯಾಗಿ ಸಾಗೋಣ
ವಿದ್ಯೆ ಕಲಿತು ಯಶವ ಸಾಧಿಸಿ
ಹೆತ್ತವರಿಗೆ ಕೀರ್ತಿಯ ತರೋಣ.
೪) ಸಮಾನತೆ
ಇರಬೇಕು ಎಲ್ಲ ಕಡೆ ಸಮಾನತೆಯ ಗಂಧ
ಹರಡಲಿ ಸ್ನೇಹ ಸೌಹಾರ್ದತೆ ಸೌಗಂಧ
ಜಾತಿಮತದ ಕೊಳೆಯ ತೊಳೆದು ಹಾಕೋಣ
ಮಾನವೀಯತೆಯ ಹೂವ ಕೈಗೆ ನೀಡೋಣ
ಎಲ್ಲರೂ ಒಂದೆ ಇಲ್ಲಿ ಭಾರತಾಂಬೆಯ ಮಕ್ಕಳು
ಎಲ್ಲರ ದೇಹದಲ್ಲಿ ಹರಿವುದು ಕೆಂಪು ನೆತ್ತರು
ಹೊಡೆದಾಟ ಬಡಿದಾಟ ಬೇಡವೇ ಬೇಡ
ಶಾನಮತಿಯ ಪಾರಿವಾಳ ಹಾರಲಿ ಈಗ
೫) ಸಂತೆಗೆ ಹೋಗೋಣ
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ
ಬಣ್ಣ ಬಣ್ಣದ ರಿಬ್ಬನ್ ಬಲೂನನು ನನಗೆ ಕೊಡಿಸಣ್ಣ
ಕಬ್ಬಿನ ಹಾಲನು ಕುಡಿದು ನಾವು ಗಟ್ಟಿಯಾಗೋಣ
ದೊಡ್ಡ ಚಕ್ರದ ತೊಟ್ಟಿಲಲಿ ಕುಳಿತು ಸುತ್ತು ಸುತ್ತೋಣ!!
ಅಮ್ಮನಿಗಾಗಿ ಗಾಜಿನ ಬಳೆಗಳು
ಅಪ್ಪನಿಗಾಗಿ ಕೂಲಿಂಗ್ಲಾಸು
ತಮ್ಮನಿಗಾಗಿ ಆಟಿಕೆ ತೆಗೆದು ಮನೆಗೆ ಸಾಗೋಣ..
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ!!
ಪುಸ್ತಕವೇ ನನ್ನ ಗೆಳೆಯ
ಪುಸ್ತಕವೇ ನನ್ನ ಮುದ್ದು ಗೆಳೆಯ,
ಪ್ರತಿದಿನವೂ ಜೊತೆಯಿರುವ ಗೆಳೆಯ.
ತೆರೆದಾಗ ಹೊಸ ಲೋಕ ಕಾಣುವುದು,
ಹೊಸ ಹೊಸ ಜ್ಞಾನವು ಸಿಗುವುದು.
ಕಥೆ ಹೇಳುವುದು, ಹಾಡು ಕಲಿಸುವುದು,
ಸಿಹಿ ಕನಸುಗಳನು ಮೂಡಿಸುವುದು.
ರಾಜರ ಕಥೆಯನು ತಿಳಿಸುವುದು,
ಪ್ರಾಣಿಗಳ ಲೋಕವನು ತೋರಿಸುವುದು.
ದೂರದ ದೇಶಗಳ ಪರಿಚಯ ಮಾಡುವುದು,
ಅದ್ಭುತ ವಿಚಾರಗಳನು ಕಲಿಸುವುದು.
ಪ್ರಶ್ನೆ ಕೇಳಿದರೆ ಉತ್ತರ ನೀಡುವುದು,
ತಪ್ಪು ಮಾಡಿದರೆ ಪಾಠ ಕಲಿಸುವುದು.
ಒಂಟಿಯಾಗಿದ್ದಾಗ ಜೊತೆಯಾಗುವುದು,
ದುಃಖ ಬಂದಾಗ ನಗು ತರಿಸುವುದು.
ಜ್ಞಾನದ ದೀಪವನು ಹಚ್ಚುವುದು,
ಕಲ್ಪನೆಯ ರೆಕ್ಕೆಗಳನು ನೀಡುವುದು.
ಪುಸ್ತಕ ಓದುವ ಹವ್ಯಾಸ ಬೆಳೆಸೋಣ,
ಜ್ಞಾನದಿಂದ ಜೀವನ ಬೆಳಗಿಸೋಣ!
ಪುಸ್ತಕವೇ ನನ್ನ ನಿಜ ಗೆಳೆಯ,
ಎಂದೆಂದಿಗೂ ನನ್ನ ಪ್ರೀತಿಯ ಗೆಳೆಯ!
ಮೋಡದ ಮಳೆ ಕನಸು
ಆಕಾಶದಲ್ಲಿ ಮೋಡವೊಂದು,
ಕಂಡಿತು ಒಂದು ಸಿಹಿ ಕನಸು.
“ಮಳೆಯಾಗಿ ನಾನು ಸುರಿಯಬೇಕು,
ಭೂಮಿಯ ದಾಹವನು ತಣಿಸಬೇಕು.”
ತಂಪು ಗಾಳಿಯ ಜೊತೆ ಸೇರಿ,
ನೀಲಿ ಬಾನಿನಲ್ಲಿ ಹಾರಿತು.
ಮಿಂಚಿನ ಬೆಳಕು ಕಂಡು ನಕ್ಕು,
ಗುಡುಗಿನ ಹಾಡನು ಕೇಳಿತು.
ಮಳೆ ಹನಿಗಳಾಗಿ ಬದಲಾಗಿ,
ಭೂಮಿಯ ಮೇಲೆ ಸುರಿಯಿತು.
ಒಣಗಿದ್ದ ಗಿಡವು ನಕ್ಕಿತು,
ಹೊಸ ಮೊಳಕೆಯೊಂದು ಚಿಗುರಿತು.
ಹೂವು ಅರಳಿ ಪರಿಮಳ ಬೀರಿತು,
ಹಸಿರು ಹೊಲವು ನಲಿಯಿತು.
ಪುಟ್ಟ ಹಕ್ಕಿಗಳು ಹಾಡಿದವು,
ಕಪ್ಪೆಗಳು ಕುಣಿದು ಕುಪ್ಪಳಿಸಿದವು.
ಮಳೆ ನಿಂತ ಮೇಲೆ ಬಾನಿನಲ್ಲಿ,
ಕಾಮನಬಿಲ್ಲು ಮೂಡಿತು.
ತನ್ನ ಕನಸು ನನಸಾಯಿತೆಂದು,
ಮೋಡವು ನಗುತ್ತ ತೇಲಿತು!
- ಸಿಂಧು ಭಾರ್ಗವ, ಬೆಂಗಳೂರು
ಮಕ್ಕಳ ಸಾಹಿತಿ.


No comments:
Post a Comment