Showing posts with label ಮರ ಮತ್ತು ಮಾಲಿ. Show all posts
Showing posts with label ಮರ ಮತ್ತು ಮಾಲಿ. Show all posts

Friday, 8 May 2020

ಮಕ್ಕಳ ‌ನೀತಿ ಕಥೆ ಮರ ಮತ್ತು ಮಾಲಿ


ಮಕ್ಕಳ ಕಥೆ ೦೨  ಮರ ಮತ್ತು ಮಾಲಿ

ಒಮ್ಮೆ ಮಾಲಿ ಮರಕಡಿಯಲು ಕಾಡಿಗೆ ಹೋಗಿದ್ದನು. ಆಗ ಒಂದು ಕರಡಿ ಎದುರಿಗೆ ಬಂದು‌ ಮರ ಕಡಿಯಲು ಅಡ್ಡವಾಗಿ ನಿಂತಿತು. "ಏಕೆ ಕರಡಿಯಣ್ಣ, ಏಕೆ ಮರ ಕಡಿಯಲು ಬಿಡುತ್ತಿಲ್ಲ. ಏಳು ಇಲ್ಲಿಂದ.." ಎಂದು ಮಾಲಿ ಹೇಳಿದನು.
ಆಗ ಕರಡಿಯು "ಬೇಡ ಮಾಲಿ, ಮರವನ್ನು ಕಡಿಯದಿರು. ಇದರಲ್ಲಿ ತುಂಬಾ ಹಲಸಿನ ಹಣ್ಣು ಸಿಗುತ್ತದೆ. ಹಾಗೆಯೇ ಜೇನುಗೂಡುಗಳಿವೆ. ನೀನು ಮರ ಕಡಿದರೆ ನನ್ನಂತಹ ಅದೆಷ್ಟೋ ಕರಡಿಗಳಿಗೆ ಆಹಾರ ತಪ್ಪಿಹೋಗುತ್ತದೆ. ಜೇನುಹುಳಗಳಿಗೂ ಬದುಕಲು ತೊಂದರೆಯಾಗುತ್ತದೆ ಎಂದಿತು. ಪಾಪ.. ಎನಿಸಿ ಮಾಲಿ ಮರ ಕಡಿಯುವುದನ್ನು ಬಿಟ್ಟು ಮುಂದಕ್ಕೆ ಹೋದನು‌‌. ಒಂದಷ್ಟು ದೂರ ಹೋದ ಮೇಲೆ ಮತ್ತೊಂದು ಹಳೆಯ ಮರವನ್ನು ನೋಡಿ ಕಡಿಯಲು ಮುಂದಾದನು. ಆಗ ಒಂದಷ್ಟು ಹಕ್ಕಿಗಳ ಹಿಂಡು "ಸರಕ್ಕನೆ" ಅವನ ಹಣೆಗೆ ಚುಚ್ಚಿ ಹಾರಿಹೋದವು. ಕೆಲವು ಕಿರುಚಲು ಶುರುಮಾಡಿದವು. ಆಗ ಮುದಿಹಕ್ಕಿಯೊಂದು ಬಂದು "ಬೇಡ ಮಾಲಿ ಮರವನ್ನು ಕಡಿಯಬೇಡ. ನೀನು ಮರ ಕಡಿದರೆ ನಮ್ಮಂತಹ ಅದೆಷ್ಟೋ ಪಕ್ಷಿಗಳಿಗೆ ವಾಸಿಸಲು ಮನೆಯೇ ಇರದಂತಾಗುತ್ತದೆ. ಹಾಗೆಯೇ ಸೊಪ್ಪುಗಳನ್ನು ತಿನ್ನಲು ಬರುವ ಪ್ರಾಣಿಗಳಿಗೂ ಉಪವಾಸವಿರಬೇಕಾಗುತ್ತದೆ. ನೆರಳು ಬಯಸಿ ಬರುವ ಜನರೂ ನೆರಳಿಲ್ಲದೇ ವಾಪಾಸ್ಸಾಗುವರು, ಮಳೆ -ಬೆಳೆ ಎಲ್ಲವೂ ಕ್ಷೀಣಿಸುತ್ತದೆ." ಎಂದನು. ಆ ಮುದಿಪಕ್ಕಿಯ ಮಾತು ಕೇಳಿ ಮಾಲಿಗೆ ಹೌದೆನಿಸಿ ಮನೆಗೆ ವಾಪಸ್ಸಾದನು.
ಮನೆ ತಲುಪುವಾಗಲೇ ರಾತ್ರಿಯಾದ ಕಾರಣ, ಊಟ ಮಾಡಿ ನಿದಿರೆಗೆ ಜಾರಿದನು. ಆಗ ಒಂದು ಸದ್ದು ಕೇಳಿಸತೊಡಗಿತು. ಕರ್ರ್...ರ್ರ್...ರ್ರ್... ಎಂಬ ಶಬ್ದವು ಮನೆಹೊರಗಿನಿಂದ ಜೋರಾಗಿ ಕೇಳಿಸುತ್ತಲಿತ್ತು. ಆಗ ಹೊರಗೆ ಹೋಗಿ ನೋಡಿದರೆ ಯಾರೂ ಇರಲಿಲ್ಲ‌. ಮತ್ತೆ ಮಲಗಲು ಹೋದನು. ಮತ್ತದೇ ಶಬ್ದ ಕೇಳಿ ಬಂದಾಗ ಮನೆಯ ಹಿತ್ತಲಿನ ಕಡೆಗೆ ಹೋದನು. ಆಗ ಹಿತ್ತಲಿನಲ್ಲೊಬ್ಬ ತನ್ನ ಮನೆಯದೇ ಮರವನ್ನು ಕಡಿಯುತ್ತಾ ಇದ್ದನು. ಅದನ್ನು ನೋಡಿ ಅಚ್ಚರಿಯಾಯಿತು. ಕೋಪಬಂದು ಅವನನ್ನು ಚೆನ್ನಾಗಿ ಹೊಡೆದು ಮರಕ್ಕೆ ಕಟ್ಟಿ ಹಾಕಿದನು. ನಂತರ ಹೇಳು "ಯಾರು ಮರ ಕಡಿಯಲು ಹೇಳಿದ್ದು... ಹ್ಮ.ಬೇಗ ಹೇಳು" ಎಂದು ದಬಾಯಿಸಿದನು. ಆಗ ಮರಕಡಿಯುವವ ಹೆದರಿಕೆಯಿಂದ "ನಾನಲ್ಲ ಬುದ್ಧಿ.. ನಂದೇನು ತಪ್ಪಿಲ್ಲ. ನಿಮ್ಮ ಹೆಂಡತಿಯೇ ಮರಕಡಿಯಲು ಹೇಳಿದ್ದು, ನನ್ನ ಬಿಟ್ಟುಬಿಡಿ ಎಂದು ಗೋಗರೆದನು.
ಮಾಲಿಗೆ ಎಲ್ಲಿಲ್ಲದ ಕೋಪ ಬಂದಿತು. ಹೆಂಡತಿಯ ಕರೆದು ಚೆನ್ನಾಗಿ ಬೈದನು. " ನನ್ನನ್ನು ಕೇಳದೇ ಮರವನ್ನು ಏಕೆ ಕಡಿಯಲು ಹೇಳಿದೆ. ನನ್ನ ತಂದೆಯವರು ನೆಟದಟ ಗಿಡವಿದು‌ ಈಗ ಹೆಮ್ಮರವಾಗಿ ಬೆಳೆದಿದೆ‌. ಈ ಮರದಿಂದ ಎಷ್ಟೆಲ್ಲ ಉಪಯೋಗ ಪಡೆದಿದ್ದೀ ನೀನು. ಈಗೇನು ಸಮಸ್ಯೆ ಎದುರಾಯಿತು‌ ಏಕೆ ಮರ ಕಡಿಯಲು ಹೇಳಿದೆ? ಅದು ನಿನಗೇನು ಮಾಡಿತ್ತು? ಎಂದು ಹೊಡೆಯಲು ಮುಂದಾದನು.
ಆಗ ಹೆಂಡತಿಯು ಹೆದರುತ್ತಾ "ತಪ್ಪಾಯ್ತು ಕ್ಷಮಿಸಿಬಿಡಿ.. ಹಣದ ಆಸೆಗೆ ಮರ ಕಡಿಯಲು ಹೇಳಿದೆ. ನಿಮಗೆ ಗೊತ್ತಾಗ ಬಾರದೆಂದು ರಾತ್ರಿ ಬರಲು ಹೇಳಿದೆ. ಇನ್ನೆಂದೂ ಈ ತಪ್ಪನ್ನು ಮಾಡಲಾರೆ " ಎಂದು ಕೈಮುಗಿದು ಬೇಡಿಕೊಂಡಳು.
ಮರದಿಂದ ನೆರಳು, ಹಣ್ಣು ಹೂವು, ಪಕ್ಷಿಗಳಿಗೆ ಇರಲು ವಾಸಸ್ಥಾನ, ಕಟ್ಟಿಗೆ ಗೊಬ್ಬರಕ್ಕೆ ಸೊಪ್ಪು ಹೀಗೆ ಎಷ್ಟೆಲ್ಲ ಉಪಯೋಗವಿದೆ. ಹಾಗಾಗಿ,ಮಕ್ಕಳೇ ಮರವನ್ನು ಕಡಿಯಲು ಬಿಡಬೇಡಿ. ಗಿಡವನ್ನು ನೆಡಿ.
.
.
ಕಥೆಗಾರ್ತಿ : ಸಿಂಧು ಭಾರ್ಗವ್. ಬೆಂಗಳೂರು-೨೧