Showing posts with label ಸಿಂಧು ಭಾರ್ಗವ್. Show all posts
Showing posts with label ಸಿಂಧು ಭಾರ್ಗವ್. Show all posts

Friday, 8 May 2020

ಮಕ್ಕಳ ನೀತಿ ಕಥೆ ಜಂಬದ ಡಿಂಕು ಮೊಲ


ಮಕ್ಕಳ ಕಥೆ ೧೩: ಜಂಭದ ಡಿಂಕು ಮೊಲ


ಒಮ್ಮೆ ಬಂಟಿ ಆಮೆ ನಿಧಾನವಾಗಿ  ಹಾದಿಯಲ್ಲಿ ಹೋಗುತ್ತಿದ್ದಾಗ ಅದಕ್ಕೆ ಡಿಂಕು ಮೊಲವೊಂದು ಮಾರ್ಗಮಧ್ಯದಲ್ಲಿ ಭೇಟಿಯಾಯಿತು‌. ಮೊಲಕ್ಕೆ ತಾನು ಅತೀವೇಗವಾಗಿ ಓಡುವೆನೆಂದು ಜಂಭವಿರುವ ಕಾರಣ ಬೇಕಂತಲೇ ಆಮೆಯ ಹತ್ತಿರ ಒಂದು ಪಂದ್ಯ ಏರ್ಪಡಿಸಿ "ನಮ್ಮಿಬ್ಬರಲ್ಲಿ ಯಾರು ವೇಗವಾಗಿ ನಡೆಯುವುದು ನೋಡುವ" ಎಂದು ಕೇಳಿತು‌. ಆಮೆಗೆ ಮೊದಲೆ ಗೊತ್ತಿರುವ ಕಾರಣ, "ಇದೆಲ್ಲ ಬೇಡ. ನೀನೇ ವೇಗವಾಗಿ ಓಡುವುದು ಎಂದು ಈ ಕಾಡಿನ ಎಲ್ಲ ಸ್ನೇಹಿತರಿಗೂ ಗೊತ್ತಿದೆ. ಹಾಗಾಗಿ ನೀನೇ ಗೆಲ್ಲುವುದು, ಮತ್ತೆ ಸ್ಪರ್ಧೆ ಏಕೆ.." ಎಂದು ಹೇಳಿತು‌.
ಅದೆಲ್ಲ ಹಳೆಯ ಕತೆ. ಈಗ ಇನ್ನೊಮ್ಮೆ ಸ್ಪರ್ಧೆ ನಡೆಸುವ. "ಯಾರು ವೇಗವಾಗಿ ನಡೆಯಿತ್ತಾರೆ" ಎಂದು ಒತ್ತಾಯಿಸಿತು. ಆಗ ಬಂಟಿ ಆಮೆಯು "ಸರಿ ಹಾಗಾದರೆ, ಮಂಗಣ್ಣನನ್ನು ಕರೆ. ಅವನೇ ಹೇಳಲಿ ಯಾರು ವೇಗವಾಗಿ  ನಡೆಯುತ್ತಾರೆ ಎಂದು. ಅಲ್ಲದೇ ಉಳಿದ ಎಲ್ಲ ಸ್ನೇಹಿತರನ್ನು ವೀಕ್ಷಕರಾಗಿ ಬರಲು ಹೇಳು, ನಾವಿಬ್ಬರೇ ಭಾಗವಹಿಸಿದರೆ ಸರಿಯಾಗದು ಎಂದು ಹೇಳಿತು‌. ಬಂಟಿಯ ಮಾತಿಗೆ ಒಪ್ಪಿ ಡಿಂಕುವು ಕಾಡಿನ ಎಲ್ಲ  ಪ್ರಾಣಿಗಳನ್ನು ಸಾಕ್ಷಿಗೆ ಕರೆಯಿಸಿದವು. ಮಂಗವು ಒಂದು ಪ್ರಾರಂಭದ ಗೆರೆ ಎಳೆದು ಸೀಟಿ ಊದಿತು‌. ಆಮೆ ನಡೆಯಲು ಪ್ರಾರಂಭಿಸಿತು. ಮೊಲಕ್ಕೆ ನಡೆಯುವುದೆಂದರೆ ಕಷ್ಟವೇ ಸರಿ. ಹಾಗಾಗಿ ಓಡಲು ಶುರುಮಾಡಿತು. ಆಮೆ "ಇದು ಮೋಸ ನೀ‌ನು ನಡೆಯಲೇ ಬೇಕು. ಓಡಬಾರದು" ಎಂದು ಹೇಳಿತು. ಅದಕ್ಕೆ ಮೊಲವು "ನಾನು ಒಂದಷ್ಟು ದೂರ ಓಡಿ ಮರದಡಿಯಲ್ಲಿ ಕುಳಿತಿರುತ್ತೇನೆ. ನೀನು ಬಾ. ಹೇಗೂ ನಾನೇ ಗೆಲ್ಲುವುದು.." ಎಂದು ನಗುತ್ತ ಜಂಭದಿಂದ ಓಡಲು‌ ಪ್ರಾರಂಭಿಸಿತು. ಉಳಿದ ಪ್ರಾಣಿಗಳು "ಇದು ಮೋಸ ಬಂಟಿ ಮೊಲವು ಮೋಸಗಾರ ಎಂದು ಜೋರಾಗಿ ಬೊಬ್ಬೆ ಹಾಕಲು ಪ್ರಾರಂಭಿಸಿದವು.
ಆದರೆ ಇದನ್ನೆಲ್ಲ ಕೇಳಿಸಿಕೊಳ್ಳದೇ ಮೊಲವು ಓಡುತ್ತಲೇ ಇತ್ತು. ಸುಸ್ತಾಗಿ ಒಂದು ದೊಡ್ಡ ಮರದ ಕೆಳಗೆ ಕುಳಿತುಕೊಂಡಿತು. ಆ ಮರದ ಮೇಲೆ ಕಾಡುಬೆಕ್ಕು ತನ್ನ ಅಂದಿನ ಆಹಾರಕ್ಕಾಗಿ ಕಾದು ಕುಳಿತಿತ್ತು. ದಣಿದ ಮೊಲವನ್ನು ನೋಡಿ ಸುತ್ತಮುತ್ತ ಯಾರು ಇಲ್ಲದ್ದನ್ನು ಗಮನಿಸಿತು‌. ಕದಲದೇ ಕುಳಿತಿರುವುದನ್ನು ನೋಡಿ  ಹೊಂಚುಹಾಕಿ ಅದರ ಮೇಲೆ ಎರಗಿ ಕತ್ತಿಗೆ ಬಾಯಿ ಹಾಕಿತು. ಡಿಂಕು ಮೊಲಕ್ಕೆ ಕೂಗಲು ಆದರೆ ಉಸಿರು ಕಟ್ಟಿ ಸತ್ತುಹೋಯಿತು. ಇತ್ತ ಬಂಟಿಆಮೆ ನಿಧಾನವಾಗಿ ನಡೆಯುತ್ತ ಬಂದು ಒಂದೊಂದೇ ಮರದ ಕೆಳಗೆ ನೋಡಿದರೂ ಮೊಲವು ಕಾಣಿಸಲಿಲ್ಲ. ನಂತರ ತನ್ನ ಗುರಿಯತ್ತ ಸಾಗಿ ನೋಡಿದರೂ ಅಲ್ಲಿ ಕೂಡ ಮೊಲವಿರಲಿಲ್ಲ. ಉಳಿದ ಪ್ರಾಣಿಗಳೆಲ್ಲ ಆಮೆಯೇ ವಿಜೇತ ಎಂದು ಸಂತಸದಿಂದ ಕುಣಿದಾಡಿದವು. ಮೊಲವು ಇನ್ನೂ ಬರಲಿಲ್ಲ ಎಂದು ಹೇಳಿ ಹುಡುಕಲು ಶುರುಮಾಡಿದವು.
ಕೊನೆಗೆ ರಕ್ತಸಿಕ್ತ ಮೊಲವನ್ನು ಕಾಡುಬೆಕ್ಕು ತಿನ್ನುತ್ತಿರುವುದು ಕಾಣಿಸಿತು‌. ಉಳಿದ ಪ್ರಾಣಿಗಳು ಬಂದುದನ್ನು ನೋಡಿ ಹೆದರಿ ಸತ್ತ ಮೊಲವನ್ನು ಅಲ್ಲೇ ಬಿಟ್ಟು ಓಡಿ ಹೋಯಿತು. "ನಾನೇ ಶ್ರೇಷ್ಠ" ಎಂದು ಜಂಭ ಪಡಬಾರದು‌.‌ ಅಲ್ಲದೇ ಅವಸರವೇ ಅಪಾಯಕ್ಕೆ ಕಾರಣವಾಗಿ ಮೊಲದ ಜೀವವೇ ಹೋಯಿತು.
.
.
ಕಥೆಗಾರ್ತಿ :- ಸಿಂಧು ಭಾರ್ಗವ್ ‌.ಬೆಂಗಳೂರು-೨೧

ಮಕ್ಕಳ ನೀತಿ ಕತೆ ತುತ್ತು ಅನ್ನ


ಮಕ್ಕಳ ಕಥೆ ೧೨ : ತುತ್ತು ಅನ್ನ ಯಾರ ಪಾಲಿಗೆ?


ಒಂದು ಹಳ್ಳಿಯಲ್ಲಿ ಅಜ್ಜಿ ಮೊಮ್ಮಗ ಇಬ್ಬರು ವಾಸಿಸುತ್ತಿದ್ದರು. ಅಜ್ಜಿ ದಿನವೂ ರೊಟ್ಟಿ ಮಾಡಿ ಮೊಮ್ಮಗ ಬರುವ ತನಕ ಕಾಯುತ್ತಿದ್ದಳು‌. ಮೊಮ್ಮಗನು ಅಲ್ಲಿ ಇಲ್ಲಿ ಗೆಳೆಯರ ಜೊತೆ ಆಟವಾಡಿಕೊಂಡು ಖುಷಿಖುಷಿಯಿಂದ ಕಾಲ ಕಳೆಯುತ್ತಿದ್ದ. ಹೀಗಿರುವಾಗ ಒಂದು ದಿನ ಕಾಗೆಯೊಂದು ಅಜ್ಜಿಯ ಮನೆ ಎದುರು ಹಾರಿ ಬಂದು ಮರದ ಮೇಲೆ ಕುಳಿತಿತು‌‌. ರೊಟ್ಟಿ ಘಮವು ಕಾಗೆಯನ್ನು ತಲುಪಿತು‌. ಅದರ ಬಾಯಲ್ಲಿ ನೀರೂರಿ "ಅಜ್ಜಿ.. ಅಜ್ಜಿ... ನನಗೂ ರೊಟ್ಟಿ ಕೊಡು.." ಎಂದು ಕೇಳಿತು. ಆದರೆ ಅಜ್ಜಿ "ಇಲ್ಲ.. ಇಲ್ಲ... ನನ್ನ ಮೊಮ್ಮಗ ಈಗ ಬರುವವನಿದ್ದಾನೆ. ಅವನಿಗಾಗಿಯೇ ನಾನು ರೊಟ್ಟಿ ಮಾಡುವುದು. ಬೇರೆ ಯಾರಿಗೂ ಕೊಡುವುದಿಲ್ಲ." ಎಂದು ಹೇಳಿದಳು. ಕಾಗೆಗೆ ಬೇಸರವಾಗಿ ಅಲ್ಲಿಂದ ಹಾರಿಹೋಯಿತು.
ಆದರೆ ಅಲ್ಲೇ ಇದ್ದ ಇನ್ನೊಂದು ಮರದ ಕೊಂಬೆಯ ಮೇಲೆ ಕುಳಿತಿತ್ತು‌. ಹಸಿವೆ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ರೊಟ್ಟಿಯ ಘಮವು ಸುತ್ತಲೂ ಹರಡಿದ್ದ ಕಾರಣ ಅಲ್ಲಿಂದ ಕದಲಲೂ ಮನಸ್ಸಿರಲಿಲ್ಲ.
ಅದೇ ಸಮಯಕ್ಕೆ ಪುಟ್ಟ ಆಟವಾಡಿ ಮನೆ ಕಡೆಗೆ ಬಂದ. ಯಾವಾಗಲೂ ಏನಾದರೂ ಹಾಡು ಹಾಡುತ್ತ ತನ್ನದೇ ಲೋಕದಲ್ಲಿ ಮುಳುಗಿರುತ್ತಿದ್ದ. ಅಜ್ಜಿ ಅವನನ್ನು ಕರೆದು "ಪುಟ್ಟಾ... ಬೇಗ ಕೈಕಾಲು ತೊಳೆದು ಬಾ.. ನಿನಗೆ ಬಿಸಿಬಿಸಿ ರೊಟ್ಟಿ ಕೊಡುವೆನು‌ ಹೊಟ್ಟೆ ತುಂಬಾ ತಿನ್ನುವಿಯಂತೆ.." ಎಂದಳು.
ಮೊಮ್ಮಗನೂ ಖುಷಿಯಿಂದ ಕೈಕಾಲು ತೊಳೆದು ರೊಟ್ಟಿ ತಿನ್ನಲು ಕುಳಿತ‌. ಅರ್ಧ ರೊಟ್ಟಿ ತಿನ್ನುವಾಗ ಅದೇನಾಯಿತೋ ಏನೋ? ಕೂಡಲೇ ಎದ್ದು ಮನೆಯ ಎದುರಿನ ಅಂಗಳಕ್ಕೆ ಹೋದ. ಮರದ ಮೇಲಿನ ಕಾಗೆಯ ನೋಡಿ "ಶ್...ಶ್.." ಎಂದು ಓಡಿಸಲು ಮುಂದಾದ. ಮತ್ತೆ ತನ್ನದೇ ಲೋಕದಲ್ಲಿ ಹಾಡು ಹೇಳುತ್ತ ಕುಣಿಯುತ್ತ ರೊಟ್ಟಿ ತಿನ್ನಲು ಶುರುಮಾಡಿದ. ಅವನ ನಲಿಕೆಗೆ ರೊಟ್ಟಿ ಕೈತಪ್ಪಿ ನೆಲಕ್ಕೆ ಬಿದ್ದಿತು‌. ಇದಕ್ಕೇ ಕಾಯುತ್ತ ಕುಳಿತಿದ್ದ ಕಾಗೆಯು ರಪಕ್ಕನೆ ಬಂದು ರೊಟ್ಟಿಯನ್ನು ಕಚ್ಚಿಕೊಂಡು "ಪುರ್ರನೆ‌‌‌‌..." ಹಾರಿ ಹೋಯಿತು.
ಮೊಮ್ಮಗನಿಗೆ ಗಲಿಬಿಲಿಯಾಯಿತು. ಕಾಗೆಗೆ ಹೊಡೆಯಲು ಕಲ್ಲನ್ನು ಎಸೆದ. ಆದರೂ ಅದು ತಪ್ಪಿಸಿಕೊಂಡು ಹಾರಿ ಹೋಯಿತು. "ಅಜ್ಜೀ..ನನ್ನ ರೊಟ್ಟಿ ಹೋಯಿತು...." ಎಂದು ಅಳುತ್ತಾ ಮನೆಯೊಳಗೆ ಓಡಿದ‌.
ಮಕ್ಕಳೇ ಪ್ರತಿಯೊಂದು ತುತ್ತಿನಲ್ಲೂ ಒಬ್ಬರ ಹೆಸರು ಬರೆದಿರುತ್ತದೆ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆ ರೊಟ್ಟಿ ಕಾಗೆಗೆ ಸೇರಬೇಕಿತ್ತು‌. ಹಾಗಾಗಿ ಅಜ್ಜಿ ಕೊಡದೇ ಇದ್ದರು ಕೂಡ ಇನ್ನೊಂದು ರೂಪದಲ್ಲಿ ಕಾಗೆಗೆ ಸೇರಿತು‌. ಅಲ್ಲವೇ??
.
.
ಕಥೆಗಾರ್ತಿ : ಸಿಂಧು ಭಾರ್ಗವ್ . ಬೆಂಗಳೂರು

ಮಕ್ಕಳ ನೀತಿ ಕಥೆ ಸುಳ್ಳು ಕಹಿಯಾಗಿರುವುದು


ಮಕ್ಕಳ ಕಥೆ: ೧೦ ಸುಳ್ಳು ಕಹಿಯಾಗಿರುವುದು

.
ಜೀವಂತ್ ಅಪ್ಪ ಅಮ್ಮನ ಮುದ್ದಿನ ಮಗ. ಆದರೂ ಅವನಿಗೆ ಬೇಕು ಬೇಕಾದ್ದನೆಲ್ಲ ಕೊಡಿಸುತ್ತ ಇರಲಿಲ್ಲ. ಹಣದ ಬೆಲೆ ತಿಳಿಯಲೆಂದು ಹಾಗೆ ಮಾಡುತ್ತಿದ್ದರು. ಆದರೆ ಅಪ್ಪ ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದರು. ಆದ ಕಾರಣ ಮನೆಗೆ ಬರುವಾಗ ರಾತ್ರಿ ಎಂಟು ಘಂಟೆಯಾಗುತ್ತಿತ್ತು. ಶಾಲೆಗೆ ಹೋಗುವ ಪುಟ್ಟ ಜೀವಂತ್, ಮನೆಗೆ ಬಂದರೆ ಯಾರೂ ಇರುತ್ತಿರಲಿಲ್ಲ‌. ಹತ್ತು ವರುಷದ ಹುಡುಗನಾದ್ದರಿಂದ ಹೆತ್ತವರಿಗೂ ಏನೂ ಭಯವಿರಲಿಲ್ಲ‌ ಅವನಾಗೇ ಮನೆಗೆ ಬಂದು ಬಾಗಿಲು ತೆರೆದು ಊಟ ಮಾಡಿ, ಹಾಲು ಕುಡಿದು ಟಿ.ವಿ.ನೋಡುತ್ತ ಕುಳಿತು ಕೊಳ್ಳುತ್ತಿದ್ದ. ಆಮೇಲೆ  ಒಂದಷ್ಟು ಹೋಮ್ ವರ್ಕ್ ಮಾಡುತ್ತಿದ್ದ. ಇಷ್ಟಾದರೂ ಮತ್ತೂ ಸಮಯ ಉಳಿಯುವ ಕಾರಣ ಹೊರಗಿನ ಬೀದಿಯಲ್ಲಿ ಅವನ ಅನೇಕ ಸ್ನೇಹಿತರ ಜೊತೆಗೆ ಆಡುತ್ತಿದ್ದ.‌ಆದರೆ ಅಲ್ಲಿನ ಹುಡುಗರ ಮನಸ್ಥಿತಿ ಬೇರೆಯದೇ ಆಗಿತ್ತು. ಗುಂಪುಕಟ್ಟಿಕೊಂಡು  ಜಗಳ ಮಾಡುವುದು. ಸಣ್ಣ ವಯಸ್ಸಿನಲ್ಲಿಯೇ ಹಣದ ವ್ಯವಹಾರ ನಡೆಸುವುದು ಹೀಗೇ ಅಲ್ಲಿನ ವಾತಾವರಣ ಚೆನ್ನಾಗಿರಲಿಲ್ಲ. ಆ ಮಕ್ಕಳ ಗುಂಪಿನಲ್ಲಿ ಒಬ್ಬ ಹುಡುಗನಿದ್ದ. ಅವನು ಉಳಿದ ಮಕ್ಕಳ ವಯಸ್ಸಿಗಿಂತ ದೊಡ್ಡವನಾಗಿದ್ದ. ಅವನೇ ಅಲ್ಲಿ‌ ಬಾಸ್ ಎಂದು ಉಳಿದ ಮಕ್ಕಳಿಗೆ ಹೆದರಿಸುತ್ತ ಇದ್ದ.‌ ಅವನನ್ನು ಎಲ್ಲರೂ "ಸೀನಿಯರ್ " ಎಂದು ಕರೆಯಬೇಕಿತ್ತು.
ಹಾಗಾಗಿ ದಿನವೂ ಅವನಿಗೆ ಉಳಿದ ಮಕ್ಕಳು ಸಂಜೆಗೆ ತಿನ್ನಲು ತಿಂಡಿ ಕೊಡಿಸಬೇಕಿತ್ತು‌. ಎಲ್ಲರೂ ಹೆತ್ತವರ ಹತ್ತಿರ ಹಣ ಕೇಳಿ ತಂದು ಅವನಿಗಾಗಿ ಖರ್ಚು ಮಾಡುತ್ತಿದ್ದರು‌. ಒಮ್ಮೆ ಜೀವಂತ್ ನ ಸರದಿ ಕೂಡ ಬಂದಿತು‌. ಆಗ ಅವನ ಬಳಿ ಹಣವಿರದ ಕಾರಣ ಅವನು "ಏನು ಹೇಳುವುದು? ಅಪ್ಪ ಅಮ್ಮ ಹಣ ಕೊಡುವುದಿಲ್ಲ. ಇವರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಸುಳ್ಳು ಹೇಳಿದ. ಹೀಗೆ ಎರಡು ಮೂರು ಬಾರಿ ಕೈಯಲ್ಲಿ ಹಣವಿಲ್ಲದ ಕಾರಣ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದ. ಕೊನೆಗೆ ಅವನ ಸ್ನೇಹಿತರ ದಂಡು ಹಿಯಾಳಿಸಲು ಶುರು ಮಾಡಿದರು. " ನಿನ್ನಲ್ಲಿ ಒಂದು ಪಪ್ಸ್ ತೆಗಿಸಿಕೊಡಲು ಹಣ ಇಲ್ಲ. ನಮ್ಮ ಗ್ರೂಪ್ ಅಲ್ಲಿ ಇರಲು ಯೋಗ್ಯತೆ ಇಲ್ಲ ನಿನಗೆ ಹೋಗು..." ಎಂದು ಬೈದು ಅವಮಾನ ಮಾಡಿದರು‌‌.
ಇದರಿಂದ ಬೇಸತ್ತ ಹುಡುಗ ದುಃಖಿತನಾಗಿ ಮನೆಗೆ ವಾಪಾಸ್ಸಾದ. ಹಾಗೆಯೇ ಅಪ್ಪನ ಕೈಯಲ್ಲಿ ಹಣಕೇಳಲೇ ಬೇಕು ಎಂದು ಯೋಚಿಸಿದ. ರಾತ್ರಿ ಕೆಲಸ ಮುಗಿಸಿ ಅಪ್ಪ ಬಂದರು. ಊಟ ಮಾಡುವ ತನಕ ಕಾದು ಕುಳಿತ ಜೀವಂತ್ "ಅಪ್ಪ ನನಗೆ ಮಿಸ್ ಹಣ ತರಲು ಹೇಳಿದ್ದಾರೆ. ಸ್ಪೋರ್ಟ್ಸ್ ಡೇ ಇದೆ... ಐನೂರು ರೂಪಾಯಿ ಹಣ ಕೊಡಬೇಕು." ಎಂದು ಸುಳ್ಳು ಹೇಳಿದೆ. ಇದನ್ನು ಅರಿಯದ ತಂದೆ ಹಣ ಕೊಟ್ಟರು. ಇವನೋ ಮರುದಿನ ಹೀರೋ ತರಹ ಹೋಗಿ "ಏನು ಬೇಕು ನಿನಗೆ..?? ಆ ಬೇಕರಿಗೆ ಹೋಗಿ ಎಲ್ಲ ತಗೊಂಡು ತಿನ್ನು. ಹಣ ಇಲ್ಲದವ ಅಂತ ನನಗೇ ಹಿಯಾಳಿಸ್ತೀಯಾ..? ನನ್ನ ಅಪ್ಪ ಅಮ್ಮ ಇಬ್ಬರೂ ದುಡಿಯುವವರೇ.. ಎಷ್ಟು ಬೇಕಾದರೂ ಕೊಡ್ತಾರೆ.. ಗೊತ್ತಾ?" ಎಂದು ದರ್ಪದಿಂದ ನುಡಿದು ಐನೂರು ರೂಪಾಯಿ ನೋಟನ್ನು ಆ ಸೀನಿಯರ್ ಮುಖದ ಮೇಲೆ ಎಸೆದ.
ಸೀನಿಯರ್ ಗೆ ಕೋಪ ಬಂದಿತು. ಆದರೂ ತೋರಿಸಿಕೊಳ್ಳಲು ಹೋಗಲಿಲ್ಲ. ಬೇಕಾದ ತಿಂಡಿ ತಿನಸುಗಳ ಖರೀದಿಸಿ ಎಲ್ಲರೂ ಹೊಟ್ಟೆ ತುಂಬ ತಿಂದು ಮನೆಗೆ ಹಿಂತಿರುಗಿದರು. ಹೀಗೆ ಮರುದಿನವೂ ಹಣ ತಂದಿರಬಹುದೆಂದು ಉಳಿದ ಮಕ್ಕಳು ಕೇಳಿದರು. ಆದರೆ ಜೀವಂತ್  "ನನ್ನ ಸರದಿ ಬಂದಾಗ ಮಾತ್ರ ಕೊಡುವೆ" ಎಂದು ಹೇಳಿದ. ಹೀಗೆ ಎರಡು ಮೂರು ಬಾರಿ ಹೆತ್ತವರಿಗೆ ಸುಳ್ಳು ಹೇಳಿ ಹಣ ಪಡೆದಿದ್ದ. ತಾನೂ ಯಾರಿಗೆ‌ ಕಡಿಮೆಯಿಲ್ಲ ಎಂದು ಉಳಿದ ಮಕ್ಕಳೆದುರು ತೋರಿಸಿದ್ದ.  ಒಮ್ಮೆ ಜೀವಂತ್ ನ ತಂದೆ ನೇರ ಶಾಲಾ ಆಫೀಸಿಗೆ ತೆರಳಿ ಮುಖ್ಯೋಪಾಧ್ಯಾಯರಲ್ಲಿ ಕೇಳಿಯೇ ಬಿಟ್ಟರು. "ಅಲ್ಲಾ ಮಿಸ್, ನಾವು ಫೀಸ್ ಕಟ್ಟೋದೆ ಕಷ್ಟದಲ್ಲಿ. ಅಂತದ್ದರಲ್ಲಿ ಆ ಡೇ.. ಈ ಡೇ.. ಎಂದು ನಡುನಡುವೆ ಐನೂರು ರೂಪಾಯಿ ಕೇಳಿ ಪಡಿತೀರಲ್ಲ , ಒಂದು ರಶೀದಿ ಕೂಡ ಕೊಡುವುದಿಲ್ಲ. ಏನು ಕತೆ ನಿಮ್ಮದು..??" ಎಂದು ಪ್ರಶ್ನಿಸಿದರು‌.
ಮುಖ್ಯೋಪಾಧ್ಯಾಯರಿಗೆ ಆಶ್ಚರ್ಯಕರವಾಯಿತು. "ಏನು? ಹಣವೇ.. ಇಲ್ಲವಲ್ಲ. ನಾವು ಯಾವ ಡೇ.. ಅಂತಾನೂ ಮಾಡಿಲ್ಲ. ಯಾವ ಮಕ್ಕಳ ಹತ್ತಿರವೂ ಹಣ ಕೇಳಿಲ್ಲ.. ನೀವು ಏನು ಹೇಳುತ್ತಿದ್ದೀರಿ? ನಮಗೆ ಒಂದು ಅರ್ಥವಾಗುತ್ತಿಲ್ಲ.." ಎಂದರು. ಆಗ ಜೀವಂತ್ ತಂದೆಗೆ ಏನೋ ತಪ್ಪಾದಂತೆ ಕಂಡಿತು‌‌. ಒಂದಷ್ಟು ಸ್ಪಷ್ಟತೆ ಪಡೆದು ಅಲ್ಲಿಂದ ಹೊರಟು ಹೋದರು‌.
ಜೀವಂತ್ ಶಾಲೆಬಿಟ್ಟು ಮನೆಗೆ ಬರುವಾಗ ತಂದೆ ಬಾಗಿಲಿನಲ್ಲೇ ನಿಂತಿದ್ದರು‌ ಅವರ ಕೋಪದ ಮುಖ ನೋಡಿ ಜೀವಂತ್ ಗೆ ಗಾಬರಿಯಾಯಿತು. ಹಾಗೆಯೇ ಹೊಡೆತ ತಿನ್ನುವುದು ಖಚಿತ ಎನ್ನುವ ಅರಿವಾಯಿತು. ಅಪ್ಪನಿಗೆ ಕೋಪ ಬಂದಿದ್ದರಿಂದ ಚೆನ್ನಾಗಿ ನಾಲ್ಕು ಏಟು ಹೊಡೆದು ನಿಜ ಬಾಯಿ ಬಿಡಿಸಿದರು. ಆಗ ಬೀದಿ ಮಕ್ಕಳ ಸಹವಾಸದ ಕತೆಯನ್ನೆಲ್ಲ ವಿವರಿಸಿ ಹೇಳಿದ. ನನ್ನಿಂದ ತಪ್ಪಾಯಿತು ಎಂದು ಕ್ಷಮೆ ಕೇಳಿದ.
ಸ್ನೇಹಿತರೇ, ಇಲ್ಲಿ ಮಗುವಿನ ತಪ್ಪಿನ ಜೊತೆಗೆ ಹೆತ್ತವರ ತಪ್ಪು ಕೂಡ ಇದೆ. ಕೇವಲ ಉದ್ಯೋಗಕ್ಕೆ ಹೋಗುವುದು, ಮಗುವಿನ ಕಡೆಗೆ ಗಮನ ಹರಿಸದೇ ಇದ್ದ ಕಾರಣ ಅವನು ಸುಳ್ಳು ಹೇಳಿದ್ದ.ಕೆಟ್ಟ ಬುದ್ಧಿ ಕಲಿತಿದ್ದ. ಹಾಗೆಯೇ ಹೆತ್ತವರ ಹತ್ತಿರ ಸುಳ್ಳು ಹೇಳಬಾರದು. ಏನೇ ವಿಷಯವಾದರು ಮುಚ್ಚಿಡಬಾರದು‌. ಎಲ್ಲವನ್ನೂ ಹಂಚಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.
.
.
ಕಥೆಗಾರ್ತಿ: ಸಿಂಧು ಭಾರ್ಗವ್ | ಬೆಂಗಳೂರು