Thursday, 6 June 2019

Kanakadhara stotram behind story in kannada

(Google pick ) Adi Shankaracharyaru

Kanakadhara stotra.( Google pick)

ಪೌರಾಣಿಕ ಕಥೆ : ಶಂಕರಾಚಾರ್ಯ ಕೃತ ಕನಕಧಾರಾ ಸ್ತೋತ್ರ

ಇದು ೮ನೇ ಶತಮಾನದ ಕಥೆ‌ . ತಮ್ಮ ಎಂಟನೇ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ ಬಾಲ ಶಂಕರಾಚಾರ್ಯರು ಎಂದಿನಂತೆ ತಮ್ಮ ಶಿಷ್ಯರೊಡನೆ ಕೇರಳದ ಹಳ್ಳಿಯೊಂದಕ್ಕೆ ಬರುತ್ತಾರೆ. ಮಧುಕರ ವೃತ್ತಿಯನ್ನು ಅನುಸರಿಸುತ್ತಾ ಹೊರಟಿದ್ದರು. ಹೀಗೆ ಮಾರ್ಗಮಧ್ಯದಲ್ಲಿ ಒಂದು ಮುರುಕು‌ಮನೆ ಕಾಣಿಸಿತು. ಆ ಮನೆಯ ಎದುರು ನಿಂತು "ಭವತಿ ಭಿಕ್ಷಾಂದೇಹಿ" ಎಂದು ಕೂಗಿದರು. ಆಗ ಮನೆಯ ಬಡಬ್ರಾಹ್ಮಣ ಹೆಂಗಸಿಗೆ ದಿಗಿಲಾಯಿತು. ಕಾರಣ ಕಿತ್ತು ತಿನ್ನುವ ಬಡತನ. ಭಿಕ್ಷೆಗೆ ಕೊಡಲು ಏನೂ ಅವರಲ್ಲಿ ಇರಲಿಲ್ಲ. ಹಾಗೆಯೆ ಯತಿಗಳಿಗೆ ಇಲ್ಲ ಎಂದು ಮುಂದೆ ಕಳುಹಿಸಲೂ ಆಗದು. ಆದ ಕಾರಣ ಮತ್ತೆ ಮನೆಯನ್ನೆಲ್ಲ ತಡಕಾಡಿದಳು. ಆಗ ಅವಳಿಗೆ ಒಂದು  ಒಣಗಿದ ನೆಲ್ಲಿಕಾಯಿ ಸಿಕ್ಕಿತು‌. ಅದು ಕೂಡ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪಾನಕ ಮಾಡಿ ಕುಡಿಯಲೋಸುಗ ಇಟ್ಟಿದ್ದರು. ಅದನ್ನು ದಾಕ್ಷಣ್ಯದಿಂದಲೇ ವಟುವಿಗೆ ನೀಡಲು‌ ನಿರ್ಧರಿಸಿದಳು‌. ತನ್ನ ಗುಡಿಸಿಲಿನ ಮುಂದೆ ಕಾಯುತ್ತ ನಿಂತಿದ್ದ ಶಂಕರರಿಗೆ ನಮಸ್ಕರಿಸಿ "ಸ್ವಾಮಿ ನಾವು ಕಡುಬಡವರು. ನಿಮಗೆ ಕೊಡಲು ಏನೂ ಇಲ್ಲ. ಹಾಗಾಗಿ ಈ ನೆಲ್ಲಿಕಾಯಿಯನ್ನೇ ಭಕ್ತಿಯಿಂದ ನೀಡುತ್ತಿರುವೆ.ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು" ಎಂದು ಕಾಲಿಗೆ ಬಿದ್ದು ನಮಸ್ಕರಿಸಿದಳು.  
 ಆ ಬಡ ಬ್ರಾಹ್ಮಣ ಹೆಂಗಸಿನ ದಯನೀಯ ಸ್ಥಿತಿ ಕಂಡು ಶಂಕರಾಚಾರ್ಯರಿಗೆ ಮನ ಕಲಕಿತು‌. ಅವಳ ತ್ಯಾಗ ಮತ್ತು ಭಕ್ತಿಯನ್ನು ನೋಡಿ ಅರಿತುಕೊಂಡರು. ಕೂಡಲೇ ಪರಮ ಪಾವನಿ , ಐಶ್ವರ್ಯ ಸ್ವರೂಪಿಣಿ ಜ್ಞಾನಿಗಳ ಅಂತರಂಗದಲ್ಲಿ ನೆಲೆಸಿರುವ ಬುದ್ಧಿಸ್ವರೂಪಿಣಿ, ಬೇಡಿದ ವರಕೊಡುವ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತಾರೆ. ಈ ಬಡ ಕುಟುಂಬವನ್ನು ಉದ್ಧಾರಮಾಡಬೇಕೆಂದು ಕೋರಿಕೆಯನ್ನಿಡುತ್ತಾರೆ. ನಿಂತ ಜಾಗದಲ್ಲಿಯೇ ೨೧ಶ್ಲೋಕವನ್ನು ರಚಿಸಿ ಹಾಡುತ್ತಾರೆ. ಮಹಾಮಾತೆ ಲಕ್ಷ್ಮಿಯನ್ನು ಪರಿ ಪರಿಯಾಗಿ ವರ್ಣಿಸುತ್ತಾರೆ. 

ಸರಸಿಜ ನಿಲಯೇ ಸರೋಜ ಹಸ್ತೇ
ಧನಲ ತಮಾಂಶುಕ ಗಂಧಮಾಲ್ಯ ಶೋಭೆ!
ಭಗವತೀ ಹರಿವಲ್ಲಭೇ ಮನೋಜ್ಞೆ!
 ತ್ರಿಭುವನ ಭುತಿಕರೀ ಪ್ರಸೀದ ಮಹ್ಯಂ!
          ಈ ಇಪ್ಪತ್ತೊಂದು ಶ್ಲೋಕಗಳ ಮಹಾಮಹಿಮ ಸ್ತೋತ್ರವೇ "ಕನಕಧಾರಾ ಸ್ತೋತ್ರ" ಇಲ್ಲ "ಕನಕವೃಷ್ಟಿಸ್ತೋತ್ರ" ವೆಂದು ಕರೆಯಲಾಯಿತು.

ಅವರ ಶ್ರದ್ಧಾ ಭಕ್ತಿಗೆ ಮೆಚ್ಚಿ ಜಗನ್ಮಾತೆ ಮಹಾಲಕ್ಷ್ಮಿ ಗುಡಿಸಲಿನ ಹಿಂದುಗಡೆಯಿಂದ ಪ್ರತ್ಯಕ್ಷಳಾಗಿ "ಎಲೈ ಬಾಲಕನೇ ನಿನಗೆ ಏನು ವರ ಬೇಕು ಕೇಳು" ಎಂದು ಹೇಳಿದಳು. ಆಗ ಬಾಲಕ ಶಂಕರರು ನನಗೇನು ಬೇಡ ತಾಯಿ. ಈ ಬಡ ಕುಟುಂಬದ ಕಷ್ಟವನ್ನೆಲ್ಲ ಬಗೆಹರಿಸಿ ಅವರನ್ನು ಉದ್ಧರಿಸು ಎಂದನು. ಮಹಾಲಕ್ಷ್ಮಿಯು "ಪೂರ್ವಜನ್ಮದ ಕರ್ಮಫಲವಾಗಿ ಈ ಜನ್ಮದಲಿ‌ ಮನುಷ್ಯನ ಜನನವಾಗುತ್ತದೆ. ಅದನ್ನು ಅನುಭವಿಸಲೇ ಬೇಕು. ಅಲ್ಲದೇ ಅವಳು ಪೂರ್ವಜನ್ಮದಲ್ಲಿ ಅಂತಹ ಪುಣ್ಯದ ಕೆಲಸ ಮಾಡಲಿಲ್ಲ. ಹಾಗಾಗಿ ಬದಲಾಯಿಸಲು ಸಾಧ್ಯವಾಗದು " ಎಂದಳು. ಅದಕ್ಕೆ ಶಂಕರಾಚಾರ್ಯರು "ಮಾತೇ ಭಗವತೀ... ಒಂದು ಮಹಿಳೆಗೆ ಮಾತ್ರ ಬ್ರಹ್ಮನೇ ಬರೆದಿರುವ ಹಣೆಬರಹವನ್ನು ಬದಲಾಯಿಸಲು ಸಾಧ್ಯ. ಹಾಗಾಗಿ ಇವಳಿಗೆ ನೀನೇ ಕರುಣೆ ತೋರಿಸಬೇಕು ಎಂದರು. ಮಹಾಲಕ್ಷ್ಮಿಗೆ ಮಂದಸ್ಮಿತಳಾಗಿ ಮೆಚ್ಚಿದೆ ನಿನ್ನ ಮಾತಿಗೆ ಎಂದು ಸಂಪೂರ್ಣ ಚಿನ್ನದ ನೆಲ್ಲಿಕಾಯಿಗಳನ್ನೆ ಮಳೆಗೆರೆದಳು.  ಶಂಕರಭಗವತ್ಪಾದರ ಪವಾಡ, ಅನುಗ್ರಹದಿಂದ ಬಡಬ್ರಾಹ್ಮಣ ಮಹಿಳೆಯ ಮನೆಯ ಚಿತ್ರಣವೇ ಬದಲಾಯಿತು. ಕುಟುಂಬವೇ ಆನಂದದಿಂದ ನಲಿದಾಡಿದರು‌ . ಶಂಕರರ ಶಿಷ್ಯವೃಂದ ಇದನ್ನು ಕಂಡು ದಿಗ್ಮೂಢವಾಗುತ್ತದೆ.  ಬಡಬ್ರಾಹ್ಮಣ ದಂಪತಿಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತದೆ. ಮತ್ತೊಮ್ಮೆ ಶಂಕರರ ದಿವ್ಯ ಪಾದಗಳಿಗೆ ಎರಗಿ ತಮ್ಮನ್ನು ಉದ್ಧಾರ ಮಾಡಿದಕ್ಕಾಗಿ ನಮಸ್ಕರಿಸುತ್ತಾರೆ. ಆಗ ಇದು ನಮ್ಮಲ್ಲಿರುವ ಅಚಲ ಭಗವದ್ಭಕ್ತಿ, ಶ್ರದ್ಧೆ, ಶರಣಾಗತಿ , ಆತ್ಮಸಮರ್ಪಣೆಗಳ ಫಲವೇ ಆಗಿದೆ. ಯಾರು ಸೃವಶಕ್ತನಾದ ಪರಮಾತ್ಮನಲ್ಲಿ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸುಖ, ಆತ್ಮನಿವೇದೆಗಳೆಂಬ ನವವಿಧ ಭಕುತಿಯಿಂದ ಪ್ರಾರ್ಥಿಸುತ್ತಾರೋ ಅವರು ಎಂದೂ ನಾಶವಾಗುವುದಿಲ್ಲ ಎಂದು ಸಾರಿ ತಮ್ಮ ವಿಜಯಯಾತ್ರೆಯನ್ನು ಮುಂದುವರೆಸುತ್ತಾರೆ. 

ಹಾಗಾಗಿ ಅಂದಿನಿಂದ ಇಂದಿನವರೆಗೂ ಭಕ್ತಾದಿಗಳು ಬಹಳ ಶ್ರದ್ಧೆಯಿಂದ ಆತ್ಮನಿವೇದನೆ ಮಾಡಿಕೊಳ್ಳುತ್ತಾರೆ‌ . ಕನಕಧಾರಾ ಸ್ತೋತ್ರವನ್ನು ಪ್ರತೀ ಶುಕ್ರವಾರ ಪಠಿಸಿ ಜಗನ್ಮಾತೆ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. 


ಸಿಂಧು ಭಾರ್ಗವ್.
ಬೆಂಗಳೂರು-೨೧

No comments:

Post a Comment