Friday, 8 May 2020

ಮಕ್ಕಳ ನೀತಿ ಕಥೆಗಳು ಮನಃ ಪರಿವರ್ತನೆ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು :
ಮಕ್ಕಳ ಸಾಹಿತ್ಯವನ್ನು ಬೆಳೆಸುವ ಜವಾಬ್ದಾರಿ ನಮ್ಮಲ್ಲರದ್ದು.


ಮಕ್ಕಳ ಕಥೆ:೦೧
ಮನಃ ಪರಿವರ್ತನೆ (ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬಾಳಿರಿ)

ಒಬ್ಬ ರಾಜ ತನ್ನ ರಾಜ್ಯವನ್ನು ನೋಡಲು ಕುದುರೆಯನೇರಿ ಹೊರಟನು. ಅವನ ರಾಜ್ಯದ ಜನರ ಸ್ಥಿತಿಗತಿಯನ್ನು ಪರೀಕ್ಷಿಸಿ ಕಷ್ಟನೋವುಗಳನ್ನು ಕೇಳಿ ಅವರಿಗೆ ಸಮಾಧಾನ ಮಾಡಿ, ಕೈಲಾದ ಸಹಾಯ ಮಾಡಲು ಹೊರಟಿದ್ದನಂತೆ. ಹೀಗೆ ಒಂದು ಊರಿನ ಹಾದಿಯಲ್ಲಿ ಹೋಗುವಾಗ ತುಂಬಾ ಹಸಿವಾಯಿತಂತೆ. ತಿನ್ನಲು ಏನೂ  ಕೊಂಡೊಯ್ದಿರದ ಕಾರಣ ಸುತ್ತಮುತ್ತ ನೋಡಿದ. ಆಗ ಒಂದು ಬ್ರಹದಾಕಾರದ ಮರದಲ್ಲಿ ತುಂಬಾ ಹಣ್ಣುಗಳು ಜೋತುಬಿದ್ದಿದ್ದವು. ಅದನ್ನು ಕಂಡು ಬಾಯಿಯಲ್ಲಿ ನೀರು ಬಂದಿತು. ಆದರೆ ಆ ಮರ ಎತ್ತರವಿದ್ದ ಕಾರಣ ಒಂದು ಹಣ್ಣೂ ಕೈಗೆ ಎಟಕುತ್ತ ಇರಲಿಲ್ಲ. ಹಾಗಾಗಿ ಅವನಿಗೆ ಬೇಸರವಾಯಿತು‌. ಆಗ ಅಲ್ಲೇ ಇದ್ದ ಒಬ್ಬ ಮರ ಕಡಿಯುವವನಲ್ಲಿ ಆ ಹಣ್ಣುಗಳನ್ನು ಕೊಯ್ದುಕೊಡಲು ಹೇಳಿದನು. ಅವನು "ಓ ನಮ್ಮ ಮಹರಾಜರು. ನಿಮಗೆ ಇಲ್ಲ ಎನ್ನಲಾಗುವುದೇ?.." ಎಂದು ಸಾಕಷ್ಟು ಹಣ್ಣನ್ನು ಕೊಯ್ದು ಅವನಿಗೆ ಬುಟ್ಟಿಯಲ್ಲಿ ತುಂಬಿಸಿಕೊಟ್ಟನಂತೆ. ಆಗ ಮೊದಲೇ ಹಸಿದಿದ್ದ ರಾಜನು ಆ ಹಣ್ಣುಗಳನ್ನು ನೋಡಿ ಗಬಗಬ ತಿಂದನಂತೆ. ದೀರ್ಘವಾಗಿ ಒಂದು ತೇಗು ಬರಿಸಿ "ಮೆಚ್ಚಿದೆ ನಿನ್ನ . ನೀನು ಮಾಡಿದ ಸಹಾಯಕ್ಕೆ ತಗೋ ಕೈತುಂಬಾ ಚಿನ್ನದ ನಾಣ್ಯಗಳನ್ನು ಕೊಡುವೆ .." ಎಂದು ಹೇಳಿ ಒಂದು ರೇಶಿಮೆ ಗಂಟನ್ನು ನೀಡಿದನು‌. ಕುದುರೆಯನ್ನೇರಿ ಮುಂದೆ ಹೋದನು. ಹೀಗೆ ಸಾಗುವಾಗ ಒಂದು ಆಲೋಚನೆ ಹೊಳೆಯಿತಂತೆ. "ನಾನು ರಾಜನಾದರೂ ನನಗೆ ಒಂದು ಮರ ಏರಲು ತಿಳಿದಿಲ್ಲ. ಇದು ಎಂತಹ ಅವಮಾನ.." ಎಂದು ಮನದಲ್ಲೇ ಮರುಗಿದನು.
ನಂತರ ಬಹಳಷ್ಟು ದೂರ ಸಾಗುತ್ತಲೇ ಬಿಸಿಲು ಹೆಚ್ಚಾಗಿ ಸುಸ್ತಿನ ಜೊತೆಗೆ ನಿದಿರೆ ಬರಲು ಶುರುವಾಯಿತು. ಸುತ್ತಮುತ್ತ ನೋಡಿದರೆ ಎಲ್ಲೂ ಮಲಗಲು ಜಾಗವಿಲ್ಲ . ಅವನಿಗೆ ಏನು ಮಾಡುವುದು ಎಂದು ತಿಳಿಯದೇ ಕುದುರೆಯಿಂದ ಕೆಳಗಿಳಿದು  ಅಲ್ಲೇ ಮರದ ಕೆಳಗೆ ಕುಳಿತನು‌ . ಹಾಗೆ ಮಲಗಿದನು. ಆದರೆ ಎಷ್ಟು ಸಮಯವಾದರೂ ನಿದಿರೆ ಬರುತ್ತಿರಲಿಲ್ಲ. ಆಗ ದೂರದಲ್ಲಿ ಒಬ್ಬ ಮರಗೆಲಸದವನು ತನ್ನ ತಲೆಗೆ ಕಟ್ಟಿದ್ದ ತುಂಡು ಬಟ್ಟೆಯನ್ನು ಹಾಸಿ ಗಾಢ ನಿದಿರೆಗೆ ಜಾರಿದ್ದ. ಅವನ ಗೊರಕೆಯ ಸದ್ದು ರಾಜನವರೆಗೂ ಕೇಳಿಸುತಲಿತ್ತು‌ . ರಾಜನಿಗೆ ಮತ್ತೆ ಯೋಚನೆ ಹತ್ತಿತು‌. "ಅವನಿಗೆ ಆ ಭಗವಂತ ಅದೆಷ್ಟು ಸುಖನಿದ್ರೆ ಕರುಣಿಸಿದ್ದಾನೆ. ಏನೂ ಇಲ್ಲದೆ, ಕಲ್ಲು ಮಣ್ಣು ತರಗೆಲೆಯ ಮೇಲೆಯೇ ಗಾಢನಿದಿರೆ ಮಾಡುತ್ತಿರುವನಲ್ಲ.. ನನಗೇಕೆ ನಿದಿರೆ ಬರುತ್ತಿಲ್ಲ.." ಎಂದು. ಮತ್ತೆ ಅವನ ಕರೆದು ಕೇಳಿದನಂತೆ "ನಿನಗೆ ಹೇಗೆ ಇಷ್ಟು ನಿದಿರೆ ಬರುತ್ತದೆ. ಈ ಮಣ್ಣು ಧೂಳಿನಲ್ಲಿ ನನಗೆ ಕೂರಲು ಮನಸ್ಸಾಗುತ್ತಿಲ್ಲ.." ಎಂದು. ಆಗ ಮರಗೆಲಸದವನು ಒಮ್ಮೆ ರಾಜನನ್ನು ನೋಡಿ ಖುಷಿಯಾಗಿ ಮತ್ತೆ ಬೆಸ್ತುಬಿದ್ದು ಸಾವರಿಸಿಕೊಂಡು  ಹೇಳಿದನಂತೆ " ಬುದ್ಧೀ ನೀವು. ನೀವೇಕೆ ಇಲ್ಲಿ ಬಂದಿರಿ‌ ನಮ್ಮ ಬದುಕೇ ಹೀಗೆ. ಕಷ್ಟಪಟ್ಟು ದುಡಿದರೆ ದೇಹಕ್ಕೆ ಆಯಾಸವಾಗುತ್ತದೆ. ಆಗ ಎಲ್ಲಿ ಮಲಗಿದರೂ ನಿದಿರೆ ಬರುತ್ತದೆ. ನಮ್ಮದು ಮರಕಡಿಯುವ ಕೆಲಸ ಸ್ವಾಮಿ. ರೆಟ್ಟೆ ಮುರಿದು ಕೆಲಸ ಮಾಡಬೇಕು. ಆಗಲೇ ಮೂರ್ಕಾಸು ಸಿಗುತ್ತದೆ. ಎಂದು.  ರಾಜನಿಗೆ ಬೇಸರವಾಯಿತು. ತಾನು ತಂದಿದ್ದ ರೇಶಿಮೆ ಗಂಟನ್ನು ಅವನ ಕೈಗಿತ್ತು ಕುದುರೆಯನ್ನೇರಿದನು. ದಾರಿ ಮಧ್ಯೆಯಲ್ಲಿ ಮತ್ತೆ ಚಿಂತೆ ಕಾಡಿತು‌.
ಹೀಗೆ ಮುಂದೆ ಹೋಗುವಾಗ ನದಿ ಕಾಣಿಸಿತು. ರಾಜನಿಗೆ ಈಜು ಬರುತ್ತಿರಲಿಲ್ಲ. ಅಲ್ಲಿ ನೋಡಿದರೆ ಚಿಕ್ಕ ಮಕ್ಕಳೆಲ್ಲ ನೀರಿನಲ್ಲಿ ಈಜುತ್ತಾ ಆಟವಾಡುತ್ತಾ ಇದ್ದರು. ಕತ್ತಲಾಗುತ್ತಾ ಬಂದಿತ್ತು. ರಾಜನಿಗೆ ನದಿ ದಾಟಿ ಅರಮನೆ ತಲುಪಲೇ ಬೇಕಾಯಿತು. ಆದರೆ ಏನು ಮಾಡುವುದು.? ಕೂಡಲೇ ಅಲ್ಲಿದ್ದ ಜನರನ್ನು ಕರೆದ‌. ಹೇಳಲು ಮುಜುಗರವಾಯಿತು. ಆದರೆ ತೋರಿಸಿಕೊಳ್ಳದೇ ಗಾಂಭೀರ್ಯದಿಂದ "ನಾನು ರಾಜ , ಆಜ್ಞೆ ಮಾಡುತ್ತಿರುವೆ. ನನ್ನನ್ನು ಮತ್ತು ಕುದುರೆಯನ್ನು ಈ ನದಿಯಿಂದ ದಾಟಿಸಿ ಆ ದಡಕ್ಕೆ ಕೊಂಡೊಯ್ಯಿರಿ..." ಎಂದು. ಜನರೆಲ್ಲರೂ ಓಡೋಡಿ ಬಂದು ರಾಜನನ್ನೂ ಹೊತ್ತು ನದಿಯಲ್ಲಿ ನಡೆದರು‌ ಕುದುರೆಯನ್ನು ಎಳೆದುಕೊಂಡು ಸಾಗಿ ದಡ ಮುಟ್ಟಿಸಿದರು. ರಾಜನಿಗೆ ಒಳಗೊಳಗೆ ದಡ ಸೇರಿದ ಖುಷಿಯಾಯಿತು. ಮತ್ತೆ ತಂದಿದ್ದ ರೇಶಿಮೆ ಗಂಟನ್ನು ಅವರ ಕೈಗಿಟ್ಟು ಈ ಚಿನ್ನದ ನಾಣ್ಯಗಳನ್ನು ಎಲ್ಲರೂ ಹಂಚಿಕೊಳ್ಳಲು ತಿಳಿಸಿದನು. ಕುದುರೆಯನ್ನೇರಿ ಅರಮನೆ ಕಡೆಗೆ ಸಾಗಿದನು. ಆದರೆ ಏನೇನೋ ಪ್ರಶ್ನೆಗಳು, ಚಿಂತೆಗಳು ಕಾಡಿದವು. ಹಾಗೆ ತಲೆತಗ್ಗಿಸಿಕೊಂಡು ಅರಮನೆಯಲ್ಲಿನ ತನ್ನ ಅಂತಃಪುರಕ್ಕೆ ತೆರಳಿದನು‌.
ತನ್ನ ಮಡದಿ ಮಹಾರಾಣಿಯನ್ನು ಕರೆದು ಬಳಿಯಲ್ಲಿ ಕುಳಿತುಕೊಳ್ಳಲು ಹೇಳಿದನು. ಹಾಗೆಯೇ ಆ ದಿನ ನಡೆದ ಘಟನೆಯನ್ನೆಲ್ಲ ವಿವರಿಸಿದನು. "ನಾನು ರಾಜ. ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲ ಎಂದನಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ..."
"ನಾನು ರಾಜ. ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ. ಎಂದೆನಿಸಿದ್ದೆ.  ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ. ನನಗೆ ಅಲ್ಲಿ ನಿದಿರೆಯೇ ಬರಲಿಲ್ಲ.."
"ನಾನು ರಾಜ. ಆದರೂ ಈಜಿ ನದಿ ದಾಟಲು ತಿಳಿದಿಲ್ಲ.."
"ಈ ಅರಮನೆಯಿಂದ ಒಮ್ಮೆಯೂ ಹೊರಗೆ ಹೋದವನೇ ಅಲ್ಲ. ಈ ಆಸ್ತಿ ಧನಕನಕದಲ್ಲಿಯೇ ನಾನು ಬದುಕುತ್ತಾ ಇದ್ದೇನೆ. ಇದನ್ನೇ ಸುಖ ಜೀವನ ಎಂದು ಭಾವಿಸಿರುವೆ. ಆದರೆ ಅವರೆಲ್ಲ ಅಷ್ಟೋ ಇಷ್ಟೋ ಹಣದಲ್ಲಿ ಹೇಗೆ ಸುಖವಾಗಿದ್ದಾರೆ ನೋಡು.
ಆಗ ಮಹಾರಾಣಿ ಹೇಳಿದಳಂತೆ, "ನೀವು ರಾಜ" ಎಂಬ ಮನಸ್ಥಿತಿಯೇ ನಿಮಗೆ ಮುಳ್ಳಾಗಿದೆ‌. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿರಿ. ಆಗ ಎಲ್ಲವೂ ನಿಮಗೆ ಸಿದ್ಧಿಸುತ್ತದೆ.  ಪ್ರಜೆಗಳು ಬಹಳ ಕಷ್ಟದಲ್ಲಿ ಅವರ ಬದುಕು ನಡೆಸುತ್ತಾ ಇದ್ದಾರೆ. ನೀವು ಅರಿತುಕೊಳ್ಳಿ. ಎಂದು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು‌. ಹಣ-ವೈಭೋಗದಿಂದ ಸುಖಸಿಗುವುದಿಲ್ಲ ಎಂದು. ಮುಂದೆ ಪ್ರಜೆಗಳ ಒಳಿತಿಗಾಗಿ ಅನೇಕ ನಿಯಮಗಳನ್ನು ಜಾರಿಗೆ ತಂದನು. ಅವರಿಗಾಗಿಯೇ ಬದುಕಿದನು.
.
.
ಸಿಂಧು ಭಾರ್ಗವ್. ಬೆಂಗಳೂರು-೨೧


೨)

No comments:

Post a Comment