Tuesday 28 September 2021

ಶಿಶುಗೀತೆಗಳು ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ

 

ಐದು ಶಿಶುಗೀತೆಗಳು - 

ಮಕ್ಕಳ ಸಾಹಿತ್ಯ ವಿಭಾಗ ಸಿಂಧು ಭಾರ್ಗವ ಅವರಿಂದ 



Source Images. Kannada Kids Rhymes


ಶಿಶುಗೀತೆ : ಚಿಟ್ಟೆ

ಕಪ್ಪು ರೆಕ್ಕೆಯ ಚಿಟ್ಟೆಯೇ
ಬಿಳಿಯ ಚುಕ್ಕಿಯನ್ಯಾರು ಇಟ್ಟರು??
ನಿನ್ನಯ ರೂಪ ಸೌಂದರ್ಯವ
ಸುಂದರವಾಗಿಸಿದವರು ಯಾರು??

ಹೂವಿಂದ ಹೂವಿಗೆ ಹಾರುತ
ಗುಸುಗುಸು ಮಾತನಾಡುವೆ ನೀನು
ಹೂವಿನ ಮಧುವನು ಹೀರುತ
ಹೊಟ್ಟೆಯ ತುಂಬಿಸಿಕೊಳ್ಳುವೆ ನೀನು

(೨)

ಕಾಲಗಳು

ಮಳೆಗಾಲ ಬೇಡವೇ ಬೇಡವಮ್ಮ
ಶಾಲೆಗೆ ಹೋಗಲು ಅಡೆತಡೆಯಮ್ಮ
ಸಮವಸ್ತ್ರವು ಹಾಳಾಗುವುದು
ಗುಡುಗು ಮಿಂಚಿಗೆ ಮನ ಹೆದರುವುದು

ಬೇಸಿಗೆ ಕಾಲವೇ ಬಲುಚಂದ
ಮನೆಮಂದಿಯೆಲ್ಲ ಜೊತೆಗೆ ಸೇರಿ
ಹಪ್ಪಳ ಸೆಂಡಿಗೆ ಮಾಡುವ ಚಂದ

ಚಳಿಗಾಲಕೆ ,ಚಳಿ ವಿಪರೀತ
ಗಡಗಡ ನಡುಗುವ ಗಮ್ಮತ್ತ
ಕಂಬಳಿ ಹೊದ್ದು ಮಲಗಿದರೆ
ಮುಂಜಾನೆ ಏಳಲು ಮನಸ್ಸಿಲ್ಲ, ಖರೆ.!!

೩) ಸಾಧನೆ

ಸಾಧನೆ ಮಾಡಿದ ಮಹಾಪುರುಷರ
ಕತೆಯನು ಗುರುಗಳು ಹೇಳುವರು
ಹುರುಪನು ನೀಡುತ ಮಕ್ಕಳ ಮನದಲಿ
ಕನಸುಗಳ ತುಂಬುವರು

ಭವಿಷ್ಯದ ಕುಡಿಗಳು ನಾವೆಲ್ಲರು
ಜೊತೆಯಾಗಿ ಸಾಗೋಣ
ವಿದ್ಯೆ ಕಲಿತು ಯಶವ ಸಾಧಿಸಿ
ಹೆತ್ತವರಿಗೆ ಕೀರ್ತಿಯ ತರೋಣ.

Source Images : Kannada kids rhymes. 


೪) ಸಮಾನತೆ
ಇರಬೇಕು ಎಲ್ಲ ಕಡೆ ಸಮಾನತೆಯ ಗಂಧ
ಹರಡಲಿ ಸ್ನೇಹ ಸೌಹಾರ್ದತೆ ಸೌಗಂಧ
ಜಾತಿಮತದ ಕೊಳೆಯ ತೊಳೆದು ಹಾಕೋಣ
ಮಾನವೀಯತೆಯ ಹೂವ ಕೈಗೆ ನೀಡೋಣ

ಎಲ್ಲರೂ ಒಂದೆ ಇಲ್ಲಿ ಭಾರತಾಂಬೆಯ ಮಕ್ಕಳು
ಎಲ್ಲರ ದೇಹದಲ್ಲಿ ಹರಿವುದು ಕೆಂಪು ನೆತ್ತರು
ಹೊಡೆದಾಟ ಬಡಿದಾಟ ಬೇಡವೇ ಬೇಡ
ಶಾನಮತಿಯ ಪಾರಿವಾಳ ಹಾರಲಿ ಈಗ

೫) ಸಂತೆಗೆ ಹೋಗೋಣ
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ
ಬಣ್ಣ ಬಣ್ಣದ ರಿಬ್ಬನ್ ಬಲೂನನು ನನಗೆ ಕೊಡಿಸಣ್ಣ
ಕಬ್ಬಿನ ಹಾಲನು ಕುಡಿದು ನಾವು ಗಟ್ಟಿಯಾಗೋಣ
ದೊಡ್ಡ ಚಕ್ರದ ತೊಟ್ಟಿಲಲಿ ಕುಳಿತು ಸುತ್ತು ಸುತ್ತೋಣ!!

ಅಮ್ಮನಿಗಾಗಿ ಗಾಜಿನ ಬಳೆಗಳು
ಅಪ್ಪನಿಗಾಗಿ ಕೂಲಿಂಗ್ಲಾಸು
ತಮ್ಮನಿಗಾಗಿ ಆಟಿಕೆ ತೆಗೆದು ಮನೆಗೆ ಸಾಗೋಣ..
ಬಾ ಅಣ್ಣ ನಾನು ನೀನು ಸಂತೆಗೆ ಹೋಗೋಣ!!

- ಸಿಂಧು ಭಾರ್ಗವ, ಬೆಂಗಳೂರು
ಮಕ್ಕಳ ಸಾಹಿತಿ.

No comments:

Post a Comment