Saturday 19 November 2022

ಮಕ್ಕಳ ಸಾಹಿತ್ಯ ನೀತಿಕತೆ : ಆಸಕ್ತಿ


(ಗೂಗಲ್ ಚಿತ್ರ)

ಮಕ್ಕಳ ನೀತಿಕತೆ : ಆಸಕ್ತಿ
ಸಿಂಧು ಭಾರ್ಗವ ಬೆಂಗಳೂರು


ರಾಮಾಪುರ ಎಂಬ ಹಳ್ಳಿಯಲ್ಲಿ ಚಕ್ರಪಾಣಿ ತನ್ನ ಮಗನನ್ನು ಸೈಕಲಿನಲ್ಲಿ ಕೂರಿಸಿಕೊಂಡು ಸಂತೆಗೆ ಹೋಗುತ್ತಿದ್ದ. ಅಲ್ಲದೇ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದ. ಅವನ ಮಗ ರಾಜುವಿಗೆ ಸೈಕಲ್ ಕಲಿಯುವ ಆಸೆಯಾಯಿತು. ತಂದೆಯಲ್ಲಿ ಕೇಳಿದಾಗ ನೀನಿನ್ನು ಚಿಕ್ಕವನು ಇನ್ನೂ ಎರಡು ವರುಷ ಕಳೆಯಲಿ‌ ಎಂದರು. ಐದನೇ ತರಗತಿ ರಜಾ ಸಮಯದಲ್ಲಿ ರಾಜು ತಂದೆಯ ಸೈಕಲ್ ಏರಿ ಸವಾರಿ ಮಾಡಲು ಕಲಿತ. ಒಮ್ಮೆ‌ ಚರಂಡಿಗೆ ಹೋಗಿ ಬಿದ್ದು ಪೆಟ್ಟು ಮಾಡಿಕೊಂಡು ಬಂದ. ತಂದೆಗೆ ತಿಳಿದು ಚೆನ್ನಾಗಿ ಬೈದರು. ಒಂದು ವಾರ ಸೈಕಲ್‌ ಮುಟ್ಟಲು ಹೋಗಲಿಲ್ಲ. ನಂತರ ಮತ್ತೆ ತಂದೆ‌ಯ ಕಣ್ತಪ್ಪಿಸಿ ಸೈಕಲ್‌ ನಲ್ಲಿ ಸುತ್ತಾಡುತ್ತಿದ್ದ. ಅವನಿಗೆ ತುಂಬಾ ಚೆನ್ನಾಗಿ ಅಭ್ಯಾಸವಾಯಿತು. ಭಯ ಓಡಿಹೋಗಿ ಧೈರ್ಯ ಬಂದಿತು.


ವರುಷಗಳು ಕಳೆದವು. ರಾಜು ಹೈಸ್ಕೂಕು ಮೆಟ್ಟಿಲು ಏರಿದಾಗ ಚಕ್ರಪಾಣಿ ದ್ವಿಚಕ್ರ ವಾಹನ ಖರೀದಿಸಿದರು‌. ತನ್ನ ಹೊಲಕ್ಕೆ ಹೋಗುವುದು, ಡೈರಿಗೆ ಹೋಗಿ ಹಾಲುಕೊಡುವುದು ಮಾಡುತ್ತಿದ್ದರು. ಮಗನ ಗಮನ ದ್ವಿಚಕ್ರ ವಾಹನದ ಕಡೆಗೆ ಜಾರಿತು. ತಂದೆ ಹೇಗೆ ಚಲಾಯಿಸುತ್ತಾರೆ ಎಂದು ಗಮನಿಸುತ್ತಲೇ‌ ಇದ್ದ. ಒಮ್ಮೆ ಮಗನ ಗಮನಿಸಿದ ತಂದೆ "ನೋಡು, ಸ್ಕೂಟರ್ ಬಿಡಲು ಹದಿನೆಂಟು ವಯಸ್ಸು ದಾಟಿರಬೇಕು. ಎಲ್ಲಿಯಾದರೂ ಪೋಲಿಸರ‌ ಕೈಗೆ ಸಿಕ್ಕಿಬಿದ್ದರೆ ಅಷ್ಟೆ... ನಾನು ಹೇಳುವ ತನಕ ಸ್ಕೂಟರ್ ಮುಟ್ಟಬೇಡ..." ಎಂದು ಗದರಿಸಿದರು.

ರಾಜು ಸಪ್ಪೆ ಮುಖ ಮಾಡಿಕೊಂಡು ಮನೆಯೊಳಗೆ‌ ನಡೆದ.  ಆದರೂ ಅದನ್ನು ತೊಳೆಯುವುದು, ಚೆನ್ನಾಗಿ ತೊಳೆದು ಒರೆಸಿ ಪಳಪಳ ಹೊಳೆಯುವಂತೆ ಮಾಡುವುದು, ನಿಂತಿದ್ದ ಸ್ಕೂಟರ್ ಏರಿ ಹಾರನ್ ಹಾಕುವುದು, ವಿಪರೀತ ಆಸಕ್ತಿ ತೋರಿಸುತ್ತಿದ್ದ. ನಂತರ ತಂದೆಯೇ ಒಂದೊಳ್ಳೆ ದಿನ ನೋಡಿ ಸ್ಕೂಟರ್ ಕಲಿಸಿಕೊಡಲು ಮುಂದಾದರು. ರಾಜು ಬಹಳ ಉತ್ಸಾಹದಿಂದ ಅದನ್ನು ಕಲಿತ. ನಂತರ ಕಾಲೇಜು ಶಿಕ್ಷಣ ಪಡೆಯಲು ಹಾಸ್ಟೇಲು ಸೇರಿದ. ಅಲ್ಲಿ ಗೆಳೆಯರ ಜೊತೆ ಸೇರಿ ತನಗಿದ್ದ ಆಸಕ್ತಿಯನ್ನು ಬೆಳೆಸಿಕೊಂಡು ಕಾರು ಚಲಾಯಿಸಲು ಕಲಿತ.



ಡಿಗ್ರಿ ಮುಗಿಸಿ ಉದ್ಯೋಗ ಅರಸಿ ನಗರದ ಕಡೆಗೆ ಮುಖ ಮಾಡಿದ ರಾಜುವಿಗೆ ಯಾವ ಕೆಲಸವೂ ಸಿಗಲಿಲ್ಲ. ಬೇಸರವಾಯಿತು. ತಂದೆ ವಾಪಾಸು ಹಳ್ಳಿಗೆ ಬಂದು ಅವರ ಹೈನುಗಾರಿಕೆಯನ್ನೇ ಮುಂದುವರಿಸಲು ಹೇಳಿದರು. ರಾಜುವಿಗೆ ಇಷ್ಟವಿರಲಿಲ್ಲ. ಏನಾದರು ಮಾಡಿ‌ ನಗರದಲ್ಲಿ ಕೆಲಸಗಿಟ್ಟಿಸಿಕೊಳ್ಳಲು ಹೋರಾಡಿದನು. ಕೊನೆಗೆ ಕಾರು ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಳ್ಳಲು ಮುಂದಾದನು.


ಕಾರುಗಳ ಮಾಲಿಕ ಮಹಾದೇವಪ್ಪ ಅವರ ಬಳಿ ಕಾರಿನ ಡ್ರೈವರ್ ಆಗಿ ಕೆಲಸ ಕೇಳಿ ನಿಂತನು. ಆಗ "ನಿನ್ನ ಬಗ್ಗೆ ನಂಬಿಕೆ ಮೂಡಬೇಕಾದರೆ ನೀನು ಮೊದಲು ಕ್ಲೀನರ್ ಆಗಿ ಕೆಲಸ ಮಾಡು. ನಿನ್ನ ನಿಯತ್ತನ್ನು ಪರೀಕ್ಷಿಸಿ ಡ್ರೈವರ್ ಕೆಲಸ ಕೊಡಿಸುವೆ.." ಎಂದರು. ರಾಜು ಒಪ್ಪಿದ. ಕ್ಲೀನರ್ ಕೆಲಸಕ್ಕೆ ಸೇರಿಕೊಂಡನು. ಆದರೆ ಮನೆಗೆ ಕರೆಮಾಡಿ ತಾನು ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿರುವೆ ಎಂದು ಹೇಳಿದನು. ಸುಳ್ಳೆಂದು ಭಾವಿಸಿದರೂ ಅದು ಅವನಲ್ಲಿನ ಆತ್ಮವಿಶ್ವಾಸವಾಗಿತ್ತು. ಹೀಗೆ ಮೂರು ಮಾಸಗಳು ಕಳೆಯುವಷ್ಟರಲ್ಲಿ ಕಾರನ್ನು ಚೆನ್ನಾಗಿ ತೊಳೆಯುವುದಲ್ಲದೇ, ರಿಪೇರಿ ಕೆಲಸ ಮಾಡುವುದನ್ನು ಕಲಿತಿದ್ದ. ಈತನ ಆಸಕ್ತಿ ಹಾಗೂ ಚುರುಕುತನ ಗಮನಿಸಿ ಮಹಾದೇವಪ್ಪನವರು ತಮ್ಮಲ್ಲೇ ಡ್ರೈವರ್ ಕೆಲಸವನ್ನು ಕೊಡಿಸಿದರು.

ನೋಡಿದರಾ ಮಕ್ಕಳೇ ನಮ್ಮಲ್ಲಿರುವ ಆಸಕ್ತಿಯೇ ನಮ್ಮ‌ ಜೀವನಕ್ಕೆ ದಾರಿಯಾಗುವುದು. ಬದುಕು ಕಟ್ಟಿಕೊಡುವುದು. ಹಾಗಾಗಿ ಏನಾದರೂ ಒಂದು ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೊಸತನಕ್ಕೆ ಒಗ್ಗಿಕೊಳ್ಳಬೇಕು. ಏನಾದರೊಂದು ಕಲಿಯುವ ತುಡಿತ ನಮ್ಮಲ್ಲಿರಬೇಕು.

...

 

No comments:

Post a Comment