Friday, 8 May 2020

ಮಕ್ಕಳ ನೀತಿ ಕಥೆ ಏಟಿಗೆ ಎದುರೇಟು


ಮಕ್ಕಳ ಕಥೆ ೧೧: ಏಟಿಗೆ ಎದುರೇಟು

ರಂಗೇಗೌಡರ ಮನೆಯಲ್ಲಿ ರಾಕಿ ನಾಯಿ ಮತ್ತು ಟಿಂಕು ಬೆಕ್ಕು ಬಹಳ ಸ್ನೇಹಿತರಾಗಿದ್ದರು. ಮನೆಯೊಡೆಯನಿಗೆ ಅಚ್ಚುಮೆಚ್ಚಿನ ಸಾಕುಪ್ರಾಣಿಗಳಾಗಿದ್ದವು. ಟಿಂಕುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಲೆ ಸವರುತ್ತ ಇದ್ದ. ಹಾಗೆಯೇ ರಾಕಿಯನ್ನು ಕೂಡ ತನ್ನ ಜೊತೆಗೆ ತೋಟ, ಗದ್ದೆ ಪಕ್ಕದ ಅಂಗಡಿಗೆಲ್ಲ ಕರೆದುಕೊಂಡು ಹೋಗುತ್ತಿದ್ದ. ಅದರಲ್ಲಿ ಟಿಂಕು ತುಂಬಾ ತಂಟೆ ಮಾಡುವ ಬೆಕ್ಕು. ರಾಕಿಯನ್ನು ಮನೆಯಿಂದ ಹೊರಗೆ ಕಟ್ಟಿಹಾಕಿರುತ್ತಾರೆ ಎಂದು ಅದನ್ನು ನೋಡಿ ಅಣಕಿಸುತ್ತ ಇರುವುದು. ಅಲ್ಲದೇ ಅದು ಗಾಢ ನಿದ್ದೆಗೆ ಜಾರುವಾಗಲೇ ಬಂದು ಕೀಟಲೆ ಮಾಡಿ ನಿದ್ದೆ ಕೆಡಿಸುತ್ತ ಇತ್ತು.
ಆಗ ಕೋಪಗೊಳ್ಳುವ ರಾಕಿ ಅಟ್ಟಿಸಿಕೊಂಡು ಹೋದರೆ ಮನೆ ಒಳಗೆ ಓಡಿ ಹೋಗುತ್ತಿತ್ತು. ಟಿಂಕು ಬೆಕ್ಕಿನ ಈ ಹುಚ್ಚಾಟಕ್ಕೆ ರೋಸಿಹೋದ ನಾಯಿ ಏನಾದರು ಮಾಡಿ ಇದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಯೋಚಿಸಿತು.
ಏನು ಮಾಡುವುದು ಎಂದು ತುಂಬಾ ಯೋಚಿಸಿ ಒಂದು ಉಪಾಯ ಮಾಡಿತು. "ಟಿಂಕು ಬೆಕ್ಕಿಗೆ ಮೀನುಗಳೆಂದರೆ ಎಲ್ಲಿಲ್ಲದ ಪ್ರೀತಿ. ಯಜಮಾನ ಮೀನನ್ನು ತಂದು ಅಡುಗೆ ಮಾಡಲು ಹೆಂಡತಿಗೆ ಹೇಳುತ್ತಿದ್ದ. ಆಗ ಮನೆ ಹೊರಗಿನ ತೆಂಗಿನ ಕಟ್ಟೆ ಹತ್ತಿರವೇ ಅದನ್ನು ಸ್ವಚ್ಛ ಮಾಡಿ ತುಂಡುಮಾಡಿ ಮನೆಯೊಳಗೆ ತರುತ್ತಿದ್ದರು. ಉಳಿದ ಭಾಗಗಳೆಲ್ಲ ಈ ಬೆಕ್ಕು ತಿನ್ನುತ್ತಾ ಇತ್ತು. ಹಾಗೆಯೇ ರಾಕಿ ಕೇಳಿದರೆ ಸ್ವಲ್ಪ ಕೊಡುತ್ತಿತ್ತು.
ಇದನ್ನೇ ದಾಳವಾಗಿಸಿಕೊಂಡು ಒಮ್ಮೆ ಯಜಮಾನ ಮೀನುಗಳನ್ನು ತಂದು, ತೆಂಗಿನ ಕಟ್ಟೆಯಲ್ಲಿ ಅದರ ಪಾತ್ರೆಯನ್ನಿಟ್ಟು ಹೆಂಡತಿಯನ್ನು ಕರೆಯಲು ಮನೆಯೊಳಗೆ ಹೋಗಿದ್ದ. ಆಗಲೇ ಚುರುಕಾದ ನಾಯಿ, ಟಿಂಕು ಬೆಕ್ಕನ್ನು ಕರೆದು "ಮೀನು ಬಂತು ..ಮೀನು...ಬಾ... ಬಾ..." ಎಂದು ಮೆಲ್ಲಗೆ ಕರೆಯಿತು. ಬಾಯಲ್ಲಿ ನೀರು ತರಿಸಿಕೊಂಡ ಟಿಂಕು ಮಾರ್ಜಾಲ‌ ನಡಿಗೆಯಿಂದ ಬಂದು ಪಾತ್ರೆಯೊಳಗಿದ್ದ ಒಂದು ದೊಡ್ಡ ಮೀನನ್ನು ಕಚ್ಚಿಕೊಂಡು ತೋಟದ ಕಡೆಗೆ ಓಡಿಹೋಯಿತು. ಅಲ್ಲೇ ಕುಳಿತು ಹೊಟ್ಟೆ ತುಂಬಾ ತಿಂದಿತು.
ಹಾಗೆಯೇ ಏನೂ ತಿಳಿದೇ ಇಲ್ಲವೆಂಬಂತೆ ವಾಪಾಸ್ಸಾಗಿ ಮನೆಯೊಳಗಿನ ಪಡಸಾಲೆಯಲ್ಲಿ ಹೊಟ್ಟೆ ಉಬ್ಬರಿಕೊಂಡು ಮಲಗಿತ್ತು. ನಿದಿರೆ ಮಾಡುತ್ತಿರುವ ಹಾಗೆ ನಟಿಸುತ್ತಿತ್ತು. ಮನೆಯೊಡತಿ ಮೀನುಗಳನ್ನು ಸ್ವಚ್ಛ ಮಾಡಲು ತೆಂಗಿನ ಕಟ್ಟೆ ಹತ್ತಿರ ಹೋಗಿ‌ ನೋಡಿದರೆ ತಂದಿದ್ದ ದೊಡ್ಡ ಎರಡು ಮೀನುಗಳಲ್ಲಿ ಒಂದು ಮೀನು ಕಾಣದಾಗಿತ್ತು. ಆಗ ನಾಯಿ "ಕುಯ್...ಕುಯ್... ಎಂದು ಬಾಲ ಅಲ್ಲಾಡಿಸುತ್ತ ಬೆಕ್ಕಿನ ಕಡೆ ನೋಡಿ ಟಿಂಕುವೇ ಮೀನನ್ನು ತಿಂದದ್ದು.. ಅದರ ಹೊಟ್ಟೆ ನೋಡು.. ಎನ್ನುವ ಹಾಗೆ ಸನ್ನೆ ಮಾಡಿತು.
ಇದನ್ನರಿತ ಮನೆಯೊಡತಿ ಟಿಂಕುವಿಗೆ " ಇನ್ನು ಕದ್ದು ಮೀನು ತಿನ್ನುತ್ತಿಯಾ.." ಎಂದು ಸಿಡುಕುತ್ತಾ ಚೆನ್ನಾಗಿ ಹೊಡೆದು ಓಡಿಸಿಬಿಟ್ಟರು. " ಅಯ್ಯೋ... ಸತ್ತೇ.. ಕಾಪಾಡಿ.. ಇನ್ನು ಹೀಗೆ ಮಾಡುವುದಿಲ್ಲ.." ಎಂದು ಬೆಕ್ಕು ಹೆದರಿ ಓಡಿ ಹೋಗಿ ತನ್ನ ಪ್ರಾಣ ಉಳಿಸಿಕೊಂಡಿತು. ರಾಕಿ ಮನೆ ಹೊರಗಿನಿಂದಲೇ ಇದನ್ನೆಲ್ಲ ನೋಡುತ್ತ ಖುಷಿಯಿಂದ ಒಳಗೊಳಗೆ ನಗುತ್ತಿತ್ತು.
.
.
ಕಥೆಗಾರ್ತಿ : ಸಿಂಧು ಭಾರ್ಗವ್ | ಬೆಂಗಳೂರು

ಮಕ್ಕಳ ನೀತಿ ಕಥೆ ಸುಳ್ಳು ಕಹಿಯಾಗಿರುವುದು


ಮಕ್ಕಳ ಕಥೆ: ೧೦ ಸುಳ್ಳು ಕಹಿಯಾಗಿರುವುದು

.
ಜೀವಂತ್ ಅಪ್ಪ ಅಮ್ಮನ ಮುದ್ದಿನ ಮಗ. ಆದರೂ ಅವನಿಗೆ ಬೇಕು ಬೇಕಾದ್ದನೆಲ್ಲ ಕೊಡಿಸುತ್ತ ಇರಲಿಲ್ಲ. ಹಣದ ಬೆಲೆ ತಿಳಿಯಲೆಂದು ಹಾಗೆ ಮಾಡುತ್ತಿದ್ದರು. ಆದರೆ ಅಪ್ಪ ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದರು. ಆದ ಕಾರಣ ಮನೆಗೆ ಬರುವಾಗ ರಾತ್ರಿ ಎಂಟು ಘಂಟೆಯಾಗುತ್ತಿತ್ತು. ಶಾಲೆಗೆ ಹೋಗುವ ಪುಟ್ಟ ಜೀವಂತ್, ಮನೆಗೆ ಬಂದರೆ ಯಾರೂ ಇರುತ್ತಿರಲಿಲ್ಲ‌. ಹತ್ತು ವರುಷದ ಹುಡುಗನಾದ್ದರಿಂದ ಹೆತ್ತವರಿಗೂ ಏನೂ ಭಯವಿರಲಿಲ್ಲ‌ ಅವನಾಗೇ ಮನೆಗೆ ಬಂದು ಬಾಗಿಲು ತೆರೆದು ಊಟ ಮಾಡಿ, ಹಾಲು ಕುಡಿದು ಟಿ.ವಿ.ನೋಡುತ್ತ ಕುಳಿತು ಕೊಳ್ಳುತ್ತಿದ್ದ. ಆಮೇಲೆ  ಒಂದಷ್ಟು ಹೋಮ್ ವರ್ಕ್ ಮಾಡುತ್ತಿದ್ದ. ಇಷ್ಟಾದರೂ ಮತ್ತೂ ಸಮಯ ಉಳಿಯುವ ಕಾರಣ ಹೊರಗಿನ ಬೀದಿಯಲ್ಲಿ ಅವನ ಅನೇಕ ಸ್ನೇಹಿತರ ಜೊತೆಗೆ ಆಡುತ್ತಿದ್ದ.‌ಆದರೆ ಅಲ್ಲಿನ ಹುಡುಗರ ಮನಸ್ಥಿತಿ ಬೇರೆಯದೇ ಆಗಿತ್ತು. ಗುಂಪುಕಟ್ಟಿಕೊಂಡು  ಜಗಳ ಮಾಡುವುದು. ಸಣ್ಣ ವಯಸ್ಸಿನಲ್ಲಿಯೇ ಹಣದ ವ್ಯವಹಾರ ನಡೆಸುವುದು ಹೀಗೇ ಅಲ್ಲಿನ ವಾತಾವರಣ ಚೆನ್ನಾಗಿರಲಿಲ್ಲ. ಆ ಮಕ್ಕಳ ಗುಂಪಿನಲ್ಲಿ ಒಬ್ಬ ಹುಡುಗನಿದ್ದ. ಅವನು ಉಳಿದ ಮಕ್ಕಳ ವಯಸ್ಸಿಗಿಂತ ದೊಡ್ಡವನಾಗಿದ್ದ. ಅವನೇ ಅಲ್ಲಿ‌ ಬಾಸ್ ಎಂದು ಉಳಿದ ಮಕ್ಕಳಿಗೆ ಹೆದರಿಸುತ್ತ ಇದ್ದ.‌ ಅವನನ್ನು ಎಲ್ಲರೂ "ಸೀನಿಯರ್ " ಎಂದು ಕರೆಯಬೇಕಿತ್ತು.
ಹಾಗಾಗಿ ದಿನವೂ ಅವನಿಗೆ ಉಳಿದ ಮಕ್ಕಳು ಸಂಜೆಗೆ ತಿನ್ನಲು ತಿಂಡಿ ಕೊಡಿಸಬೇಕಿತ್ತು‌. ಎಲ್ಲರೂ ಹೆತ್ತವರ ಹತ್ತಿರ ಹಣ ಕೇಳಿ ತಂದು ಅವನಿಗಾಗಿ ಖರ್ಚು ಮಾಡುತ್ತಿದ್ದರು‌. ಒಮ್ಮೆ ಜೀವಂತ್ ನ ಸರದಿ ಕೂಡ ಬಂದಿತು‌. ಆಗ ಅವನ ಬಳಿ ಹಣವಿರದ ಕಾರಣ ಅವನು "ಏನು ಹೇಳುವುದು? ಅಪ್ಪ ಅಮ್ಮ ಹಣ ಕೊಡುವುದಿಲ್ಲ. ಇವರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಸುಳ್ಳು ಹೇಳಿದ. ಹೀಗೆ ಎರಡು ಮೂರು ಬಾರಿ ಕೈಯಲ್ಲಿ ಹಣವಿಲ್ಲದ ಕಾರಣ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದ. ಕೊನೆಗೆ ಅವನ ಸ್ನೇಹಿತರ ದಂಡು ಹಿಯಾಳಿಸಲು ಶುರು ಮಾಡಿದರು. " ನಿನ್ನಲ್ಲಿ ಒಂದು ಪಪ್ಸ್ ತೆಗಿಸಿಕೊಡಲು ಹಣ ಇಲ್ಲ. ನಮ್ಮ ಗ್ರೂಪ್ ಅಲ್ಲಿ ಇರಲು ಯೋಗ್ಯತೆ ಇಲ್ಲ ನಿನಗೆ ಹೋಗು..." ಎಂದು ಬೈದು ಅವಮಾನ ಮಾಡಿದರು‌‌.
ಇದರಿಂದ ಬೇಸತ್ತ ಹುಡುಗ ದುಃಖಿತನಾಗಿ ಮನೆಗೆ ವಾಪಾಸ್ಸಾದ. ಹಾಗೆಯೇ ಅಪ್ಪನ ಕೈಯಲ್ಲಿ ಹಣಕೇಳಲೇ ಬೇಕು ಎಂದು ಯೋಚಿಸಿದ. ರಾತ್ರಿ ಕೆಲಸ ಮುಗಿಸಿ ಅಪ್ಪ ಬಂದರು. ಊಟ ಮಾಡುವ ತನಕ ಕಾದು ಕುಳಿತ ಜೀವಂತ್ "ಅಪ್ಪ ನನಗೆ ಮಿಸ್ ಹಣ ತರಲು ಹೇಳಿದ್ದಾರೆ. ಸ್ಪೋರ್ಟ್ಸ್ ಡೇ ಇದೆ... ಐನೂರು ರೂಪಾಯಿ ಹಣ ಕೊಡಬೇಕು." ಎಂದು ಸುಳ್ಳು ಹೇಳಿದೆ. ಇದನ್ನು ಅರಿಯದ ತಂದೆ ಹಣ ಕೊಟ್ಟರು. ಇವನೋ ಮರುದಿನ ಹೀರೋ ತರಹ ಹೋಗಿ "ಏನು ಬೇಕು ನಿನಗೆ..?? ಆ ಬೇಕರಿಗೆ ಹೋಗಿ ಎಲ್ಲ ತಗೊಂಡು ತಿನ್ನು. ಹಣ ಇಲ್ಲದವ ಅಂತ ನನಗೇ ಹಿಯಾಳಿಸ್ತೀಯಾ..? ನನ್ನ ಅಪ್ಪ ಅಮ್ಮ ಇಬ್ಬರೂ ದುಡಿಯುವವರೇ.. ಎಷ್ಟು ಬೇಕಾದರೂ ಕೊಡ್ತಾರೆ.. ಗೊತ್ತಾ?" ಎಂದು ದರ್ಪದಿಂದ ನುಡಿದು ಐನೂರು ರೂಪಾಯಿ ನೋಟನ್ನು ಆ ಸೀನಿಯರ್ ಮುಖದ ಮೇಲೆ ಎಸೆದ.
ಸೀನಿಯರ್ ಗೆ ಕೋಪ ಬಂದಿತು. ಆದರೂ ತೋರಿಸಿಕೊಳ್ಳಲು ಹೋಗಲಿಲ್ಲ. ಬೇಕಾದ ತಿಂಡಿ ತಿನಸುಗಳ ಖರೀದಿಸಿ ಎಲ್ಲರೂ ಹೊಟ್ಟೆ ತುಂಬ ತಿಂದು ಮನೆಗೆ ಹಿಂತಿರುಗಿದರು. ಹೀಗೆ ಮರುದಿನವೂ ಹಣ ತಂದಿರಬಹುದೆಂದು ಉಳಿದ ಮಕ್ಕಳು ಕೇಳಿದರು. ಆದರೆ ಜೀವಂತ್  "ನನ್ನ ಸರದಿ ಬಂದಾಗ ಮಾತ್ರ ಕೊಡುವೆ" ಎಂದು ಹೇಳಿದ. ಹೀಗೆ ಎರಡು ಮೂರು ಬಾರಿ ಹೆತ್ತವರಿಗೆ ಸುಳ್ಳು ಹೇಳಿ ಹಣ ಪಡೆದಿದ್ದ. ತಾನೂ ಯಾರಿಗೆ‌ ಕಡಿಮೆಯಿಲ್ಲ ಎಂದು ಉಳಿದ ಮಕ್ಕಳೆದುರು ತೋರಿಸಿದ್ದ.  ಒಮ್ಮೆ ಜೀವಂತ್ ನ ತಂದೆ ನೇರ ಶಾಲಾ ಆಫೀಸಿಗೆ ತೆರಳಿ ಮುಖ್ಯೋಪಾಧ್ಯಾಯರಲ್ಲಿ ಕೇಳಿಯೇ ಬಿಟ್ಟರು. "ಅಲ್ಲಾ ಮಿಸ್, ನಾವು ಫೀಸ್ ಕಟ್ಟೋದೆ ಕಷ್ಟದಲ್ಲಿ. ಅಂತದ್ದರಲ್ಲಿ ಆ ಡೇ.. ಈ ಡೇ.. ಎಂದು ನಡುನಡುವೆ ಐನೂರು ರೂಪಾಯಿ ಕೇಳಿ ಪಡಿತೀರಲ್ಲ , ಒಂದು ರಶೀದಿ ಕೂಡ ಕೊಡುವುದಿಲ್ಲ. ಏನು ಕತೆ ನಿಮ್ಮದು..??" ಎಂದು ಪ್ರಶ್ನಿಸಿದರು‌.
ಮುಖ್ಯೋಪಾಧ್ಯಾಯರಿಗೆ ಆಶ್ಚರ್ಯಕರವಾಯಿತು. "ಏನು? ಹಣವೇ.. ಇಲ್ಲವಲ್ಲ. ನಾವು ಯಾವ ಡೇ.. ಅಂತಾನೂ ಮಾಡಿಲ್ಲ. ಯಾವ ಮಕ್ಕಳ ಹತ್ತಿರವೂ ಹಣ ಕೇಳಿಲ್ಲ.. ನೀವು ಏನು ಹೇಳುತ್ತಿದ್ದೀರಿ? ನಮಗೆ ಒಂದು ಅರ್ಥವಾಗುತ್ತಿಲ್ಲ.." ಎಂದರು. ಆಗ ಜೀವಂತ್ ತಂದೆಗೆ ಏನೋ ತಪ್ಪಾದಂತೆ ಕಂಡಿತು‌‌. ಒಂದಷ್ಟು ಸ್ಪಷ್ಟತೆ ಪಡೆದು ಅಲ್ಲಿಂದ ಹೊರಟು ಹೋದರು‌.
ಜೀವಂತ್ ಶಾಲೆಬಿಟ್ಟು ಮನೆಗೆ ಬರುವಾಗ ತಂದೆ ಬಾಗಿಲಿನಲ್ಲೇ ನಿಂತಿದ್ದರು‌ ಅವರ ಕೋಪದ ಮುಖ ನೋಡಿ ಜೀವಂತ್ ಗೆ ಗಾಬರಿಯಾಯಿತು. ಹಾಗೆಯೇ ಹೊಡೆತ ತಿನ್ನುವುದು ಖಚಿತ ಎನ್ನುವ ಅರಿವಾಯಿತು. ಅಪ್ಪನಿಗೆ ಕೋಪ ಬಂದಿದ್ದರಿಂದ ಚೆನ್ನಾಗಿ ನಾಲ್ಕು ಏಟು ಹೊಡೆದು ನಿಜ ಬಾಯಿ ಬಿಡಿಸಿದರು. ಆಗ ಬೀದಿ ಮಕ್ಕಳ ಸಹವಾಸದ ಕತೆಯನ್ನೆಲ್ಲ ವಿವರಿಸಿ ಹೇಳಿದ. ನನ್ನಿಂದ ತಪ್ಪಾಯಿತು ಎಂದು ಕ್ಷಮೆ ಕೇಳಿದ.
ಸ್ನೇಹಿತರೇ, ಇಲ್ಲಿ ಮಗುವಿನ ತಪ್ಪಿನ ಜೊತೆಗೆ ಹೆತ್ತವರ ತಪ್ಪು ಕೂಡ ಇದೆ. ಕೇವಲ ಉದ್ಯೋಗಕ್ಕೆ ಹೋಗುವುದು, ಮಗುವಿನ ಕಡೆಗೆ ಗಮನ ಹರಿಸದೇ ಇದ್ದ ಕಾರಣ ಅವನು ಸುಳ್ಳು ಹೇಳಿದ್ದ.ಕೆಟ್ಟ ಬುದ್ಧಿ ಕಲಿತಿದ್ದ. ಹಾಗೆಯೇ ಹೆತ್ತವರ ಹತ್ತಿರ ಸುಳ್ಳು ಹೇಳಬಾರದು. ಏನೇ ವಿಷಯವಾದರು ಮುಚ್ಚಿಡಬಾರದು‌. ಎಲ್ಲವನ್ನೂ ಹಂಚಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.
.
.
ಕಥೆಗಾರ್ತಿ: ಸಿಂಧು ಭಾರ್ಗವ್ | ಬೆಂಗಳೂರು

ಮಕ್ಕಳ ನೀತಿ ಕಥೆ ಸೊಕ್ಕಿನ ಕೋಕಿಲ


ಮಕ್ಕಳ ಕಥೆ: ೯ ಸೊಕ್ಕಿನ ಕೋಕಿಲಾ


ಮಾವಿನ ಮರದಲಿ ಜೋಡಿ ಗಿಳಿಗಳು ಗೂಡು ಕಟ್ಟಿಕೊಂಡು ಜೀವನ ನಡೆಸುತ್ತಿದ್ದವು. ಆಗ ವಸಂತ ಮಾಸ. ಮಾವಿನ ಎಲೆ ಚಿಗುರುವ ಸಮಯ. ಅದರ ಸವಿಯ ಸವಿಯುತ ಕೋಗಿಲೆ ಹಾಡು ಹೇಳುತ್ತಿತ್ತು. ಅಳಿಲುಗಳು ರೆಂಬೆಯಿಂದ ರೆಂಬೆಗೆ ಓಡಾಡುತ್ತ ಕುಣಿಯುತ್ತಿದ್ದವು. ಮರಕುಟಿಕವು ಮರವನ್ನು ಕುಟುಕುತ್ತ ಹುಳುಗಳ ಹುಡುಕುತ್ತಿತ್ತು. ಆಗ ಕೋಗಿಲೆಯು "ಎಲೈ ಮರಕುಟಿಕವೇ... ಸಾಕು ಮಾಡು ನಿನ್ನ ಕಿರಿಕಿರಿ. ನನ್ನ ಸುಮಧುರ ಹಾಡಿಗೆ ತಡೆಯಾಗಬೇಡ..." ಎಂದಿತು. ಆಗ ಮರಕುಟಿಕವು ಕೋಗಿಲೆಗೆ ಗೊಣಗುತ್ತಾ ಹಾರಿಹೋಯಿತು. ಕೆಂಪಿರುವೆಗಳು ಸಾಲುಸಾಲಾಗಿ ಓಡಾಡುತ್ತ ತಮ್ಮ ಕೆಲಸದಲ್ಲಿ ತನ್ಮಯವಾಗಿದ್ದವು. ಅಲ್ಲೇ ಪಕ್ಕದಲ್ಲಿ ಝುಳುಝುಳು ಹರಿಯುವ ಸಣ್ಣನದಿಯು ಸಂಗೀತ ಹೊರಡಿಸುತ್ತಿತ್ತು. ಅದರ ಜೊತೆಗೆ ಜೋಡಿಗಿಳಿಗಳು ಕುಳಿತು ಏನೋ ಮಾತನಾಡುತ್ತಿದ್ದವು. ಕೋಗಿಲೆಗೆ ಹಾಡಲು ಮತ್ತೆ ತಡೆಯಾಯಿತು. ಆಗ ಕೋಗಿಲೆಯು "ಹೋಯ್ ಜೋಡಿ ಗಿಳಿಗಳೇ.. ನಿಮ್ಮ ಮಾತುಗಳನ್ನು ಬೇರೇಡೆ ಇಟ್ಟುಕೊಳ್ಳಿ.. ನನಗೆ ಮನಬಿಚ್ಚಿ ಹಾಡಬೇಕಿದೆ" ಎಂದಿತು. ಆಗ ಗಿಳಿಗಳು ಇದರ ಮಾತು ಕೇಳಿ "ಗೊಳ್..!!" ಎಂದು ನಕ್ಕವು. ಕೋಗಿಲೆಗೆ ಅವಮಾನವಾಯಿತು. ಸಹ್ಯ ಎನಿಸದೇ ಸಿಟ್ಟಿನಿಂದ ಬೇರೆಡೆಗೆ ಹಾರಿ ಹೋಯಿತು.
ಮರುದಿನ ಮತ್ತೆ ಅದೇ ಮರಕ್ಕೆ ಚಿಗುರೆಲೆಯ ತಿನ್ನಲು ಅದೇ ಕೋಗಿಲೆಯು ಆಗಮನವಾಯಿತು‌. ಆದರೆ ಮರವೆಲ್ಲ ಖಾಲಿ ಖಾಲಿ. ಆಗ ಗಿಳಿಗಳು ಇರಲಿಲ್ಲ ಬೇರೆ ಪಕ್ಷಿಗಳೂ ಇರಲಿಲ್ಲ. ಕೋಗಿಲೆಗೂ ಖುಷಿಯೋ ಖುಷಿ. ಹೊಟ್ಟೆ ತುಂಬಾ ಎಲೆಗಳ ತಿಂದು ಹಾಡಲು ಪ್ರಾರಂಭಿಸಿತು. ಕುಹೂ...ಕುಹೂ.. ದನಿಯು ಮುಗಿಲೆತ್ತರಕ್ಕೆ ತಾಗಿತು. ಆದರೆ, ಅದರ ದನಿಯು ಮರದ ಬುಡದಲ್ಲಿ ಮನೆ ಮಾಡಿಕೊಂಡಿದ್ದ ಸರ್ಪಕ್ಕೆ ಕರ್ಕಶವಾಗಿ ಕೇಳಿಸಿತು. ಬಹಳ ಕೋಪಬಂತು. ತನ್ನ ನಿದಿರೆಗೆ ಭಂಗ ತರುವ ಕೋಗಿಲೆಯ ಹಿಡಿದು ಸಾಯಿಸಬೇಕೆಂದು ಸರಸರನೆ ಮರವೇರಿತು. ಇದನ್ನು ಗಮನಿಸದ ಕೋಗಿಲೆಯು ತನ್ನ ಪಾಡಿಗೆ ಹಾಡುತ್ತಲೇ ಇತ್ತು. ಇನ್ನೇನು ಸನಿಹ ಬರಬೇಕು ಎನ್ನುವಷ್ಟರಲ್ಲಿ ಜೋಡಿ ಗಿಳಿಗಳು ಅದೇ ಕೊಂಬೆಯ ಮೇಲೆ ಬಂದು ಕುಳಿತವು. ಗಿಜಿಗಿಜಿ ಎಂದು ಸದ್ದು ಮಾಡತೊಡಗಿದವು. ಆಗ ಹಾವಿಗೆ ಭಯವಾಯಿತು‌. ಏನೂ ಮಾಡಲು ಸಾಧ್ಯವಿಲ್ಲ ಎಂದೆನಿಸಿ ಹಾವು ವಾಪಾಸ್ಸಾಯಿತು. ಇದನ್ನು ಗಮನಿಸಿದ ಕೋಗಿಲೆಗೆ ಹಾವನ್ನು ನೋಡಿ ಎದೆ ದಸಕ್ ಎಂದಿತು. ಅಲ್ಲದೇ ತನ್ನ ತಪ್ಪಿನ ಅರಿವಾಯಿತು. ತನ್ನ ಜೀವವನ್ನು ಉಳಿಸಿದ ಗಿಳಿಗಳಿಗೆ ನಮಸ್ಕರಿಸಿ ಅಲ್ಲಿಂದ ಹಾರಿಹೋಯಿತು.
ನೀತಿ: ‌ನೋಡಿದಿರಾ ಮಕ್ಕಳೇ‌. ನಮಗೆ ಎಲ್ಲ ಗೊತ್ತಿದೆ ,ನಾನೇ ಶ್ರೇಷ್ಠ ಎಂದು ಜಂಬ ಪಡಬಾರದು.ಅಹಂಕಾರ ಒಳ್ಳೆಯದಲ್ಲ.
.
.
ಕಥೆಗಾರ್ತಿ : ಸಿಂಧು ಭಾರ್ಗವ್. ಬೆಂಗಳೂರು ೨೧

ಮಕ್ಕಳ ನೀತಿ ಕಥೆ ತುಂಟ ಆನೆ ಮರಿ


ಮಕ್ಕಳ ಕಥೆ :೦೮ ತುಂಟ ಆನೆಮರಿ

ಒಂದು ಕಾಡಿನಲ್ಲಿ ತುಂಟ ಆನೆ ಮರಿ ಓಡಾಡುತ್ತ ಇತ್ತು. ಅದು ಯಾವಾಗಲೂ ಉಳಿದೆಲ್ಲ ಪ್ರಾಣಿಗಳಿಗೂ ಕೀಟಲೆ ಕೊಡುತ್ತಲೇ ಇರುತ್ತಿತ್ತು. ಯಾವ ಪ್ರಾಣಿಯಾದರೂ ಗದರಿಸಲು ಬಂದರೆ ಅಮ್ಮನ ಹತ್ತಿರ ಹೋಗಿ ದೂರು ನೀಡುತಲಿತ್ತು‌. ಆಗ ಅದರ ಅಮ್ಮ ದೊಡ್ಡ ಆನೆ ಬಂದು ಆ ಪ್ರಾಣಿಗೆ ಹೆದರಿಸಿ ಓಡಿಸಿಬಿಡುತ್ತಾ ಇತ್ತು. ಆ ದೊಡ್ಡ ಆನೆಯ ದೊಡ್ಡದೊಡ್ಡ ಕಾಲ್ಗಳು, ಮೊರದಗಲ ಕಿವಿಯಲ್ಲಿ ಪಟಪಟನೇ ಬೀಸಿದರೆ ಅದರ ಗಾಳಿಗೆ ಚಿಕ್ಕ ಪುಟ್ಟ ಮೊಲ ಹೆಗ್ಗಣಗಳೆಲ್ಲ ಗಾಳಿಯಲ್ಲಿ ತೇಲಿ ಹೋಗುತ್ತಲಿದ್ದವು. ದಪ್ಪ ದಪ್ಪ ಕಂಬದಂತಹ ಕಾಲಿನಿಂದ ತುಳಿದರೆ ಸಾಧಾರಣ ಜಾತಿಯ ಪ್ರಾಣಿಗಳೆಲ್ಲ ಸತ್ತೇ ಹೋಗುತ್ತಿದ್ದವು. ಅದಕ್ಕೆ ಆ ಮರಿಆನೆಗೆ "ನನ್ನ ಅಮ್ಮ ಇದ್ದಾಳೆ.." ಎಂಬ ಧೈರ್ಯವಿತ್ತು. ಅದಕ್ಕಾಗಿಯೇ ತುಂಟತನ ಮಾಡುತ್ತಿತ್ತು. ಎಲ್ಲರನ್ನೂ ಪೇಚಿಗೆ ಸಿಲುಕಿಸುತ್ತಾ ಇತ್ತು.
ಇದರಿಂದ ಬೇಸತ್ತ ಉಳಿದ ಪ್ರಾಣಿಗಳು ಆ ಮರಿಆನೆಗೆ ತಕ್ಕ ಪಾಠ ಕಲಿಸಬೇಕು ಎಂದು ಎಲ್ಲರೂ ಸಭೆ ಸೇರಿದರು. ಆಗ ಚಾಣಾಕ್ಷ ನರಿಯು ಒಂದು ಉಪಾಯ ನೀಡಿತು. "ತಿನ್ನುವುದರಲ್ಲಿ ತುಂಬಾ ಇಷ್ಟವಿರುವ ಆನೆಮರಿಗೆ ಅದರಿಂದಲೇ ಪಾಠ ಕಲಿಸುವ.." ಎಂದಿತು. ಉಳಿದೆಲ್ಲ ಪ್ರಾಣಿಗಳು ಆಯಿತು ಎಂದು ಒಪ್ಪಿಕೊ‌ಡವು. "ಆನೆಮರಿಯನ್ನು ಖೆಡ್ಡದಲ್ಲಿ ಬೀಳಿಸಲು ಯಾರು ಮುಂದೆ ಬರುತ್ತೀರಿ?"  ಎಂದು ಕೇಳಿತು‌ .ಆಗ "ಮೊಲವು ನಾನು... ಆ ಕೆಲಸ ಮಾಡುವೆ.." ಎಂದು ಒಪ್ಪಿಕೊಂಡಿತು. ಇನ್ನೊಮ್ಮೆ ನರಿ ಕೇಳಿತು "ಖೆಡ್ಡ ತೋಡಲು ಯಾರು ಮುಂದೆ ಬರುವಿರಿ..?" ಎಂದು. ಆಗ ಹೆಗ್ಗಣಗಳ ತಂಡವು ಮುಂದೆ ಬಂದು "ನಾವು ರೆಡಿ.." ಎಂದವು.
ರಾತ್ರಿಯಾಗುತ್ತಿದ್ದಂತೆಯೇ  ಹೆಗ್ಗಣಗಳ ತಂಡಕ್ಕೆ ಹೇಳಿ ದೊಡ್ಡ ಗುಂಡಿ ತೋಡಿಸಿದವು. ಅದರ ಮೇಲೆ ಸೊಪ್ಪು ಮುಚ್ಚಿ ಯಾರಿಗೂ ಕಾಣದಂತೆ ಮಾಡಿದವು.  ಎಲ್ಲವೂ ತಮ್ ತಮ್ಮ ಗೂಡಿಗೆ ವಾಪಾಸ್ಸಾದವು. ಬೆಳಿಗ್ಗೆ ಆಗುತ್ತಿದ್ದಂತೆ ಮರಿಆನೆ ಎಂದಿನಂತೆ  ಚೇಷ್ಟೆ ಮಾಡಿ, ಬೇರೆ ಪ್ರಾಣಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಖುಷಿ ಪಡೆಯಲು ಬಂದಿತ್ತು. ಕುಣಿಯುತ್ತ ಬರುತ್ತಿರುವ ಆನೆಮರಿಯನ್ನು ತಡೆದು ಚಾಣಾಕ್ಷ ಮೊಲವು "ಆನೆಮರಿ ಆನೆಮರಿ , ನಿನಗೆ ಸೊಪ್ಪು ಹಣ್ಣುಹಂಪಲು ಎಂದರೆ ತುಂಬಾ ಇಷ್ಟ ತಾನೆ.? ನಾವೆಲ್ಲರೂ ಸ್ನೇಹಿತರಲ್ಲವೇ.. ಹಾಗಾಗಿ ನಿನಗೆ ರಾಶಿರಾಶಿ ಹಣ್ಣು ಸೊಪ್ಪು ಕೊಡಬೇಕೆಂದುಕೊಂಡಿದ್ದೇವೆ. ನೀನು‌ ಬರಲೇಬೇಕು ಎಂದಿತು. ಆಗ ತಿನ್ನುವ ಆಸೆಗೆ ಬಿದ್ದು ಆನೆಮರಿ ಒಪ್ಪಿಕೊಂಡಿತು‌. ಕಾಡಿನಿಂದ ಬಹುದೂರವಿರುವ ಆ ಖೆಡ್ಡಾದ ಹತ್ತಿರ ಮೊಲವು ಕರೆದುಕೊಂಡು ಹೋಯಿತು. ಸ್ವಲ್ಪ ದೂರದಲ್ಲಿ ಇರುವಾಗಲೇ ಮೊಲವು ಆನೆಮರಿಗೆ ಹೇಳಿತು. "ಅಗೋ ನೋಡು ನಿನಗೆ ಬೇಕಾದ ಸೊಪ್ಪು ಹಣ್ಣುಹಂಪಲುಗಳಿವೆ. ಓಡಿಹೋಗಿ ತಿನ್ನು .." ಎಂದು.
ಇವರ ಮೋಸವರಿಯದ ಆನೆಮರಿ ಬಾಯಲ್ಲಿ ನೀರು ಸುರಿಸುತ್ತಾ ಓಡಿಓಡಿ ಸೊಪ್ಪು ತಿನ್ನಲು ಮುಂದಾಯಿತು. ಹಾಗೆ ತಿನ್ನುತ್ತಾ ತಿನ್ನುತ್ತಾ ಖೆಡ್ಡದೊಳಗೆ ದುಪಕ್ಕನೆ ಬಿದ್ದಿತು. ಉಳಿದ ಎಲ್ಲ ಪ್ರಾಣಿಗಳು "ಗೊಳ್" ಎಂದು ನಕ್ಕವು.
ನೀತಿ: ಇನ್ನೊಬ್ಬರನ್ನು ಪೇಚಿಗೆ ಸಿಲುಕಿಸಿ ಸಂತೋಷ ಪಡಬಾರದು. ಇಂದು ಅವರದಾದರೆ ನಾಳೆ ನಮ್ಮ ಸರದಿ ಬರುತ್ತದೆ.
.
.
ಕಥೆಗಾರ್ತಿ -ಸಿಂಧು ಭಾರ್ಗವ್ . ಬೆಂಗಳೂರು-೨೧ 

ಮಕ್ಕಳ ನೀತಿ ಕಥೆ ಅರಮನೆಯ ಅರಗಿಣಿ


ಮಕ್ಕಳ ಕಥೆ- ೦೭ ಅರಮನೆಯ ಅರಗಿಣಿ

ಒಂದು ಅರಮನೆಯಲ್ಲಿ ರಾಜ, ರಾಣಿ ತಮ್ಮ‌ ಮಕ್ಕಳ‌ ಜೊತೆಗೆ ಸುಖವಾಗಿದ್ದರು. ಐದು ಜನ ಮಕ್ಕಳಲ್ಲಿ ಕೊನೆಯವಳೇ ಹೆಣ್ಣುಮಗಳು. ಒಬ್ಬಳೆ ಹಾಗೂ ಕೊನೆಯ ಮಗಳಾದ ಕಾರಣ ಮುದ್ದಿನಿಂದ ಸಾಕಿ ಬೆಳೆಸುತ್ತಿದ್ದರು‌. ಹೆಸರು ಕನಕಕಲ್ಯಾಣಿ. ಊಟ-ನಿದಿರೆ ಎಲ್ಲವೂ ಅವಳ ಅಂತಃಪುರದೊಳಗೇ ನಡೆಯುತ್ತಿತ್ತು. ನೆಲದಲ್ಲಿ ಕಾಲಿಡಲೂ ಬಿಡುತ್ತಿರಲಿಲ್ಲ. ಪ್ರತಿಯೊಂದಕ್ಕೂ ಒಬ್ಬ ಕೆಲಸದಾಕೆ ಇದ್ದಳು. ಯುವರಾಣಿಯ ಯೋಗಕ್ಷೇಮ ನೋಡಿಕೊಳ್ಳುತ್ತಾ ಹೊರಗಿನ ಆಗುಹೋಗುಗಳನ್ನು ತಿಳಿಸಲು ತಂತಿಯಾಗಿದ್ದಳು. ಅವಳ ಕೋಣೆಯೊಳಗೆ ಕೇಳಿದ್ದೆಲ್ಲವೂ ಬರುತ್ತಿತ್ತು. ಹಾಗಾಗಿ ಯುವರಾಣಿಗೆ ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಎಲ್ಲವನ್ನೂ ಕೇಳಿ ತಿಳಿದುಕೊಂಡಿದ್ದಳೇ ವಿನಃ ನೋಡಿ, ಅನುಭವಿಸಿ ಖುಷಿ ಪಟ್ಟವಳಲ್ಲ‌. ಹೀಗೆ ಒಮ್ಮೆ ಕೆಲಸದಾಕೆ ತನ್ನ ಗಂಡನ ಬಗ್ಗೆ, ಅವಳ ಊರಿನ ಬಗ್ಗೆ ಪರಿಪರಿಯಾಗಿ ವಿವರಿಸುತ್ತಾ ಇದ್ದಳು. ಆಗ ಯುವರಾಣಿ ಕನಕಕಲ್ಯಾಣಿಗೂ ಅವಳ ಊರು ನೋಡುವ ಆಸೆಯಾಯಿತು‌. "ಈ ದಿನ ನಾನೂ ಬರುವೆ, ನಿಮ್ಮ ಊರಿಗೆ ಕರೆದುಕೊಂಡು ಹೋಗು.." ಎಂದು ಕೇಳಿದಳು. ಆದರೆ ಸಖಿಗೆ ಒಮ್ಮೆಗೆ ಎದೆ 'ದಗ್' ಎಂದು ಭಯವಾಯಿತು‌.
"ಏನಿದು ಹುಚ್ಚು ಬಯಕೆ. ಮಹಾರಾಜರಿಗೆ ಈ ವಿಷಯ ತಿಳಿದರೆ ನನ್ನ ಕೊಂದೇ ಬಿಡುವರು... ಇಲ್ಲ.. ಇಲ್ಲ.. ನಾನು ಕರೆದುಕೊಂಡು ಹೋಗಲಾರೆ.‌." ಎಂದು ಕೋಣೆಯಿಂದ ಓಡಿಹೋದಳು.
ಯುವರಾಣಿಗೆ ಮನದಲ್ಲಿ ಬೇಸರದ ಛಾಯೆ ಮೂಡಿತು‌. ಸಮಾಧಾನ ಮಾಡಿಕೊಂಡಳು. ಸುಮ್ಮನಾದಳು. ಮರುದಿನವೂ ಕೆಲಸದಾಕೆ ಬಂದು ಎಲ್ಲ ಕೆಲಸವನ್ನೂ ಮಾಡುತ್ತ ನಡುನಡುವೆ ಆ ದಿನ ನಡೆದ ಎಲ್ಲ ಕಥೆಯನ್ನು ವಿವರಿಸಿ ಹೇಳಿದಳು. ತಮಾಷೆಯ ವಿಷಯಗಳ ಹಂಚಿಕೊಂಡು ನಗಿಸಿದಳು. ಆಗ ಯುವರಾಣಿಗೆ ಮತ್ತೆ ಆಸೆ ಚಿಗುರಿತು. "ದಯಮಾಡಿ ನನ್ನ  ಕರೆದುಕೊಂಡು ಹೋಗು‌,ಹೊರಗಡೆ ಸುತ್ತಾಡಿಕೊಂಡು ಬರುವ ಬಯಕೆಯಾಗಿದೆ..." ಎಂದು ಒತ್ತಾಯಿಸಿದಳು. ಆಗಲೂ ಕೆಲಸದಾಕೆ "ಇಲ್ಲ..ಇಲ್ಲ ..." ಎಂದು ಓಡಿಹೋದಳು. ಹೀಗೆ ಒಂದು ವಾರದ ನಡೆಯಿತು. ಕೊನೆಗೆ ಒಂದು ದಿನ ಕೆಲಸದಾಕೆ ಕೆಲಸ ಮಾಡುತ್ತಿರುವಾಗ ಯುವರಾಣಿ, "ಹೇಳು. ಇಂದಾದರೂ ನಿನ್ನ ಊರಿಗೆ ಕರೆದುಕೊಂಡು ಹೋಗುವಿಯೇನು?" ಎಂದು ಕೇಳಿದಳು. ಆಗಲೂ ಇಲ್ಲವೆಂದೇ ಉತ್ತರ ಬಂತು. ಅವಳು ರಾಜನ ಮೇಲಿನ ಭಯದಿಂದ ಓಡಿಹೋದಾಗ ಯುವರಾಣಿ ತನ್ನ ರಾಣಿಯ ಪೋಷಾಕು ತೆಗೆದು ಹರಿದುಹೋದ ಚಿಂದಿಬಟ್ಟೆ ಧರಿಸಿ ಮುಖಕ್ಕೆ ಪರದೆ ಹಾಕಿಕೊಂಡು ತನ್ನ ಕೋಣೆಯ ದೊಡ್ಡ ಕಿಟಕಿಯಿಂದ ಕೆಳಗಿಳಿದು ಸಖಿಯನ್ನೇ ಹಿಂಬಾಲಿಸಿದಳು. ಈ ವಿಷಯ ಯಾರಿಗೂ ಗೊತ್ತೇ ಆಗಲಿಲ್ಲ. ರಾಜನು ತನ್ನ ದರ್ಬಾರಿನಲ್ಲಿ ತಲ್ಲೀನನಾಗಿದ್ದನು. ಯುವರಾಣಿ ಮನೆ ಕೆಲಸದವಳನ್ನೇ ಹಿಂಬಾಲಿಸಿ ಅವಳ ಊರು ತಲುಪಿದಳು.
ಅಲ್ಲಿ ನೋಡಿದರೆ ಗುಡಿಸಲಿನ ಮನೆಯೊಂದಿತ್ತು. ಮನೆಯೊಳಗೆ ಕೆಲಸದವಳು ಮತ್ತು ಅವಳ ಗಂಡನಿದ್ದ‌. ಕುಡಿದ ಅಮಲಿನಲ್ಲಿ ಮಲಗಿದ್ದ.  ಯುವರಾಣಿ ಆ ಮನೆಯವರನ್ನು ಮಾತನಾಡಿಸಬೇಕು ಎಂದು ದೂರದಿಂದಲೇ ಕೂಗಿ ಕರೆದಳು. ಆಗ ಕೆಲಸದಾಕೆ ಹೊರಬಂದು "ಯಾರು..?ಯಾರು ಬೇಕು..? ಎಂದು ಕೇಳಿದಳು. "ನಾನು ಈ ಊರಿಗೆ ಅಪರಿಚಿತೆ. ತುಂಬಾ ಬಾಯಾರಿಕೆ ಆಗುತ್ತಿದೆ. ನೀರು ಕೊಡುವಿರಾ?" ಕೇಳಿದಳು. ಆಯ್ತು. ಎಂದು ಒಳಗೆ ಹೋಗಿ ನೀರು ತಂದು ಕುಡಿಯಲು ನೀಡಿದಳು. ದಣಿವಾರಿಸಿಕೊಂಡ ಮೇಲೆ ಮತ್ತೆ ಯುವರಾಣಿ "ತುಂಬಾ ದೂರದಿಂದ ಬಂದಿದ್ದೇನೆ, ನನಗೆ ತುಂಬಾ ಹೊಟ್ಟೆ ಹಸಿವಾಗುತ್ತಿದೆ. ಊಟ ಕೊಡುವಿರಾ?'' ಕೇಳಿದಳು.
ಆಗ ತನಗಾಗಿ ತೆಗೆದಿಟ್ಟಿದ್ದ ನಿನ್ನೆಯ ಅನ್ನವನ್ನು  ಬಿಸಿ ಮಾಡಿ ತಂದು ಊಟಕ್ಕೆ ಬಡಿಸಲು ಮುಂದಾದಳು.
ಯುವರಾಣಿ "ನೀವು ಬನ್ನಿ, ಜೊತೆಗೆ ಊಟ ಮಾಡೋಣ.." ಎಂದಳು
"ಇಲ್ಲ .. ನೀವು ಅತಿಥಿಗಳು. ನೀವೇ ಮೊದಲು ಊಟ ಮಾಡಿ.." ಎಂದಳು.
ಕೊನೆಗೆ ಒತ್ತಾಯಪೂರ್ವಕವಾಗಿ ತನಗೆ ಹಾಕಿದ ಸ್ವಲ್ಪ ಅನ್ನವನ್ನೇ ಅವಳ ತಟ್ಟೆಗೂ ಬಡಿಸಿ ಜೊತೆಗೆ ಕೂತು ಊಟ ಮಾಡಿದರು‌.
ಯುವರಾಣಿ ನಿಧಾನಕ್ಕೆ ಮಾತಿಗಿಳಿದು "ನೀವು ಜೀವನ ಸಾಗಿಸಲು ಏನು ಕೆಲಸ ಮಾಡಿಕೊಂಡಿದ್ದೀರಿ.. ಎಂದು ಕೇಳಿದಳು‌.
"ನಾನು ನಮ್ಮೂರ ರಾಜರ ಅರಮನೆಯಲ್ಲಿ ಯುವರಾಣಿಗೆ ಸೇವಕಿಯಾಗಿರುವೆ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ, ಬೇಕು ಬೇಡಗಳ ತಂದುಕೊಡುವ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ಬೆಳಿಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮುಗಿಸಿ ಸಂಜೆ ತನಕವೂ ಕೆಲಸ ಮಾಡಿ, ಯುವರಾಣಿಯ ಜೊತೆಗೆ ಒಂದಷ್ಟು ಹರಟೆ ಹೊಡೆದು ಈಗ ವಾಪಾಸ್ಸಾದೆ‌..." ಎಂದಳು.
"ಹಾಗಾದರೆ ರಾಜರು ನಿಮಗೆ ದುಡಿಮೆಗೆ ಹಣ ಕೊಡುವುದಿಲ್ಲವೇ.." ಎಂದು ಕೇಳಿದಳು.
ಆಗ "ಇಲ್ಲ.. ಊಟಕ್ಕೆ ಕೊಡುತ್ತಿದ್ದಾರಲ್ಲ‌ ಅಷ್ಟೇ. ನನ್ನ ಗಂಡ ಕುಡಿಯಲು ಸಾಲ ಕೇಳುವ. ಅದನ್ನೇ ನನ್ನ ಸಂಬಳದಲ್ಲಿ ವಸೂಲು ಮಾಡಿಕೊಳ್ಳುವರು‌..." ಎಂದಳು.
ಯುವರಾಣಿಗೆ ಬೇಸರವಾಯಿತು. ರಾತ್ರಿಯಾದ ಕಾರಣ ನಾನಿಲ್ಲೆ ಮಲಗುವೆ ಎಂದಳು. ಅವಳು ಒಪ್ಪಿ ಹರಿದುಹೋದ ಹೊದಿಕೆ , ಚಾಪೆ ನೀಡಿದಳು. ಬಡವಿಯ ಮನೆಯ ಗುಡಿಸಲಿನಿಂದ ಚಂದಿರನ ಬೆಳದಿಂಗಳು ಮೈಮೇಲೆ ಚೆಲ್ಲುತ್ತಿತ್ತು. ಅದನ್ನೆಲ್ಲ ಎಂದೂ ನೋಡದ ಯುವರಾಣಿಯು  ಖುಷಿಪಟ್ಟಳು. ಅಂಗಳದಲ್ಲಿ ಕುಣಿದಾಡಿದಳು. ಹಾಡು ಹೇಳಿದಳು. ಹಾಗೆಯೇ ಒಳ ನಡೆದು ಕಣ್ತುಂಬಾ ನಿದಿರೆ ಮಾಡಿದಳು.
ಕೋಳಿ ಕೂಗಿ, ಸೂರ್ಯ ಬಂದ. ಬೆಳಗಾಯಿತು‌‌‌. ಮನೆ ಕೆಲಸದವಳು ಬೇಗನೆ ಎದ್ದು ಅರಮನೆಗೆ ಕೆಲಸಕ್ಕೆ ಹೊರಟಳು. ಇವಳಿಗೂ ಎಚ್ಚರವಾಯಿತು‌‌. ತಾನೂ ಜೊತೆಗೆ ಬರುವೆ  ಎಂದು ಹೊರಡಲು ಸಿದ್ದತೆ ಮಾಡಿಕೊಂಡಳು. ಜೊತೆಯಾಗಿ ಅರಮನೆ ಸೇರಿದರು. ಅಲ್ಲಿದ್ದ ಭಟರು ಇವರನ್ನು ನೋಡಿ ವಿಶೇಷವಾದ ಗೌರವ ನೀಡಿದರು. ಸೇವಕಿಗೆ ಏಕೆಂದು ಅರ್ಥವಾಗಲಿಲ್ಲ. ಆದರೆ
ಕೆಲಸದವಳ ಜೊತೆಗೆ ತನ್ನ ಮಗಳನ್ನು ನೋಡಿದ ಮಹಾರಾಜನಿಗೆ ಕೋಪ ಬಂದಿತು. "ನೀನು ಎಲ್ಲಿಗೆ ಹೋಗಿದ್ದಿ?? ಈ ಕೆಲಸದವಳು ನಿನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಳು" ಎಂದು ದಬಾಯಿಸಿದನು.
ಅಲ್ಲಿಯ ತನಕವೂ ಕೆಲಸದವಳಿಗೆ ಯುವರಾಣಿ ತನ್ನ ಜೊತೆಗೆ, ತನ್ನ ಮನೆಯಲ್ಲಿ ಒಂದು ರಾತ್ರಿ ತಂಗಿದ್ದಳು ಎಂದು ತಿಳಿದೇ ಇರಲಿಲ್ಲ. ಅವಳಿಗೂ ಅಚ್ಚರಿ ಬಡಿದು ದಂಗಾಗಿ ನಿಂತಳು. ಆಗ ಯುವರಾಣಿ ರಾಜನಿಗೆ ಎದುರುವಾದಿಸಿ ಮಾತಿಗಿಳಿದಳು.
"ಪಿತಾಜಿ.. ನಾನು‌ ನಿಮ್ಮ ಒಬ್ಬಳೇ ಮುದ್ದಿನ‌ ಮಗಳು ಎಂದು ಹೊರಗಡೆ ಎಲ್ಲೂ ಹೋಗದ ಹಾಗೆ ನೋಡಿಕೊಂಡಿರಿ. ನನಗೆ ಬೇಕು ಬೇಡದ್ದನ್ನೆಲ್ಲ ನನ್ನ ಕೋಣೆಗೆ ತರಿಸಿ ಕೊಡುತ್ತಿದ್ದೀರಿ. ಆದರೆ ಈ ಸುಂದರವಾದ ಪ್ರಕೃತಿಯನ್ನು ನಾನು‌ ನೋಡಲೇ ಇಲ್ಲ. ನನಗೂ ಆಸೆಯಾಗಿ ನಾನು ಇವಳಿಗೂ ತಿಳಿಸದೇ ಅವಳ ಊರಿಗೆ ಹೋಗಿ ಬಂದೆ. ಒಂದು ರಾತ್ರಿ ಅವಳ ಮನೆಯಲ್ಲೇ ಇದ್ದೆ‌. ಅವಳ ಹರಕು ಗುಡಿಸಲಿನಲ್ಲೇ ಕಣ್ತುಂಬಾ ನಿದಿರೆ ಮಾಡಿದೆ. ಅಲ್ಲದೇ ನನ್ನ ಇಷ್ಟು ಚೆನ್ನಾಗಿ ವೈಭೋಗದಿಂದ ನೋಡಿಕೊಳ್ಳುವ ನೀವು, ನನ್ನ ಕೆಲಸಕ್ಕೆ ಬರುವ ನನ್ನ ಗೆಳತಿಗೆ ಏಕೆ ಸರಿಯಾದ ಹಣ ಕೊಡುತ್ತಿಲ್ಲ. ಅವಳು ಗುಡಿಸಲಿನಲ್ಲಿ ಬದುಕು ನಡೆಸುತ್ತಾ ಇದ್ದಾಳೆ. ನಿನ್ನೆಯ ಅನ್ನವನ್ನು ಊಟ ಮಾಡುತ್ತಾಳೆ. ಚಿಂದಿಬಟ್ಟೆ ತೊಡುತ್ತಾಳೆ.
ಪಿತಾಜಿ.. ಇಂದಿನಿಂದ ಅವಳು ನಮ್ಮ ಅರಮನೆಯಲ್ಲಿಯೇ ಇರಲಿ. ನನ್ನ ಜೊತೆಗೇ ಇರಬೇಕು. ಇದು ನನ್ನ ಕಟ್ಟಾಜ್ಞೆ...!!" ಎಂದು ಹೇಳಿ ಕೋಪದಿಂದಲೇ ತನ್ನ ಅಂತಃಪುರಕ್ಕೆ ನಡೆದಳು.
ಮಗಳ ಮಾತಿಗೆ ಮರು ನುಡಿಯಲಾಗಲಿಲ್ಲ. ರಾಜ ಆತ್ಮಾವಲೋಕನದಲ್ಲಿ ತೊಡಗಿದ. ಕೊನೆಗೆ ಕೆಲಸದಾಕೆಯನ್ನೂ ಅರಮನೆಯಲ್ಲೇ ಇರಲು ಹೇಳಿದ. ಸೇವಕಿಯ ಜೊತೆಗೆ ಊರೆಲ್ಲ ಸುತ್ತಾಡಲು ಪ್ರಾರಂಭಿಸಿದಳು. ಸೈನಿಕರು ರಕ್ಷಣೆಗೆ ಜೊತೆಗಿದ್ದರು. ಯುವರಾಣಿಯು ಖುಷಿಯಾಗಿ ಜೀವನ ನಡೆಸಲು ಪ್ರಾರಂಭಿಸಿದಳು.
.
.
ಬರೆದವರು: ಸಿಂಧು ಭಾರ್ಗವ್ ..ಬೆಂಗಳೂರು-೨೧

ಮಕ್ಕಳ ನೀತಿ ಕಥೆ ಜೊತೆಗಾರ


ಮಕ್ಕಳ ಕಥೆ: ೦೬ ಜೊತೆಗಾರ

ಬೆಟ್ಟದ ಮೇಲೊಂದು ವೃದ್ಧ ದಂಪತಿಯ ಮನೆಯಿತ್ತು. ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೂ ಸಂಜೆಯಾಗುತ್ತಿದ್ದಂತೇ ಏನೋ ಒಂದು ರೀತಿಯ ಬೇಸರ ಅವರನ್ನು ಕಾಡುತ್ತಿತ್ತು. ಹಾಗಾಗಿ ಮನೆ ಎದುರಿಗೆ ಕೊಳವೊಂದನ್ನು ನಿರ್ಮಾಣ ಮಾಡಿದರು. ಅದರಲ್ಲಿ ಈಜಲು ಜೋಡಿ ಹಂಸಗಳನ್ನು ತಂದು ಸಾಕಿದರು. ಅವುಗಳ ಆಟಪಾಠ ನೋಡಿ ಖುಷಿಪಡುತ್ತಿದ್ದರು. ತಾವೂ ಅವುಗಳ ಜೊತೆಗೆ ಆಟವಾಡುತ್ತಾ ಸಂಜೆ ಕಳೆಯುತ್ತಿದ್ದರು. ಒಮ್ಮೆ ಅನಾಹುತ ನಡೆದೇ ಹೋಯಿತು‌. ಕತ್ತಲಾ ರಾತ್ರಿಯಲಿ ಕಾಡಿನಿಂದ ನರಿಯೊಂದು ಬಂದು ಕೊಳದಲ್ಲಿದ್ದ ಹಂಸವೊಂದನ್ನು ಕಚ್ಚಿಕೊಂಡು ಹೋಯಿತು. ಇನ್ನೊಂದು ಹಂಸ ಎಷ್ಟು ಬಿಡಿಸಿ ಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮುಂಜಾನೆ ಎದ್ದು ಎಂದಿನಂತೆ ವೃದ್ಧ ದಂಪತಿಗಳು ಕೊಳದ ಬಳಿ ಬಂದಾಗ ಅಚ್ಚರಿ ಕಾದಿತ್ತು. ಅಲ್ಲಿ ಒಂದೇ ಹಂಸವಿರುವುದು ನೋಡಿ ಭಯವಾಯಿತು. "ರೆಕ್ಕೆ ಪುಕ್ಕಗಳೆಲ್ಲ ಕಾಡುದಾರಿ ತುಂಬಾ ಚೆಲ್ಲಿರುವುದು ನೋಡಿ ಇದು ಕಾಡುಪ್ರಾಣಿಯದೇ ಕೆಲಸ, ನಮ್ಮ ಹಂಸವನ್ನು ಹೊತ್ತುಕೊಂಡು ಹೋಗಿದೆ.." ಎಂಬ ಅರಿವಾಯಿತು. ಆದರೆ ಇತ್ತ ಉಳಿದ ಒಂದು ಹಂಸಕ್ಕೆ ಬೇಸರದ ಛಾಯೆ ಮೂಡಿತು. ಒಂಟಿತನ ಕಾಡತೊಡಗಿತು. ಇದನ್ನು ಗಮನಿಸಿದ ಅಜ್ಜ ಪೇಟೆಗೆ ಹೋಗಿ ಆ ಒಂದು ಹಂಸವನ್ನು ಪುಟ್ಟ ಮಗುವಿಗೆ ಮಾರಾಟ ಮಾಡಿದರು. ತಿರುಗಿ ಬರುವಾಗ ಜೋಡಿ ಬೆಕ್ಕುಗಳನ್ನು ಕೊಂಡು ತಂದರು‌.
ಅಜ್ಜಿಗೆ ಎಲ್ಲಿಲ್ಲದ ಸಂತಸವಾಯಿತು. ಹಾಗೆಯೇ ಬೆಕ್ಕುಗಳ ಜೊತೆಗೆ ಆಟವಾಡುತ್ತ ದಿನ ಕಳೆಯಲು ಶುರುಮಾಡಿದರು. ಅವುಗಳಿಗೆ ದಿನವೂ ಹಾಲು ಬ್ರೆಡ್ ತಿನ್ನಲು ಕೊಡುತ್ತಿದ್ದರು. ಜೊತೆಗೆ ಪೇಟೆಯಿಂದ ಒಂದಷ್ಟು ಒಣಮೀನು ತಂದಿಟ್ಟುಕೊಂಡಿದ್ದರು. ಅದನ್ನೂ ದಿನವೂ ತಿನ್ನಲು ಕೊಡುತ್ತಿದ್ದರು‌. ಹೀಗಿರುವಾಗ ನೆಮ್ಮದಿಯ ಜೀವನ ಸಾಗುತಲಿತ್ತು. ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಒಮ್ಮೆ ಬೆಕ್ಕು ಕಾಡಿಗೆ ಹೋಗಿದ್ದಾಗ ಅಲ್ಲಿದ್ದ ಗೂಬೆಯೊಂದು ಬೆಕ್ಕಿನ ಮೇಲೆ ದಾಳಿ ಮಾಡಿತು. ಬೆಕ್ಕು ಉಸಿರೊಂದು ಉಳಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡೋಡಿ ಮನೆಯಂಗಳ ತಲುಪುತ್ತದೆ. ಅಷ್ಟರಲ್ಲೇ ಅದರ ಪ್ರಾಣ ಹಾರಿಹೋಯಿತು. ಆಗ ಅಜ್ಜಿಗೆ ಎಲ್ಲಿಲ್ಲದ ಆಘಾತವಾಗುತ್ತದೆ. ಉಳಿದ ಒಂದು ಬೆಕ್ಕಿಗೂ ತನ್ನ ಮಿತ್ರನ ಕಳೆದುಕೊಂಡ ನೋವು ಬಹುವಾಗಿ ಕಾಡಲು ಶುರುವಾಯಿತು. ಸರಿಯಾಗಿ ಏನೂ ತಿನ್ನದೇ ಸಾಯುವ ಸ್ಥಿತಿಗೆ ತಲುಪಿತು. ಹೀಗಿರುವಾಗ ಅಜ್ಜ ಮತ್ತೆ ಪೇಟೆಗೆ ಹೋಗಿ ಆ ಉಳಿದ ಒಂದು ಬೆಕ್ಕನ್ನೂ ಮಾರಲು ಮುಂದಾಗುತ್ತಾನೆ.
ಆಗ ಮಾರುಕಟ್ಟೆಯಲ್ಲಿ ಒಬ್ಬ ಹುಡುಗಿ ಕೆಲಸ ಕೇಳುತ್ತಾ ಅಂಗಡಿ ಬಾಗಿಲಿನಲ್ಲಿ ನಿಂತಿದ್ದಳು. ಅವಳನ್ನು ನೋಡಿ ಅಜ್ಜನು ಕರೆದು "ನೀನು ಯಾರು? ನಿನಗೆ ಅಪ್ಪ ಅಮ್ಮ ಯಾರೂ ಇಲ್ಲವೇ? ಸ್ಕೂಲಿಗೆ ಹೋಗುವುದಿಲ್ಲವೇ...? ಇಲ್ಲಿ ಏಕೆ ತಿರುಗುತ್ತಾ ಇದ್ದೀಯಾ..." ಎಂದು ಪ್ರಶ್ನಿಸುವನು. ಆಗ ಆ ಹುಡುಗಿ "ನಾನು ಲಿಲ್ಲಿ. ನಾನೊಬ್ಬಳು ಅನಾಥೆ. ನನಗೆ ಯಾರೂ ಇಲ್ಲ. ನಾನು ಸ್ಕೂಲಿಗೂ ಹೋಗುತ್ತಿಲ್ಲ. ಭಿಕ್ಷೆ ಬೇಡಲು ನನಗೆ ಇಷ್ಟವಿಲ್ಲ. ಹಾಗಾಗಿ ಯಾರಾದರೂ ಕೆಲಸ ಕೊಟ್ಟರೆ ಮಾಡುವೆನು. ನನಗೆ ಓದಬೇಕೆಂದು ತುಂಬಾ ಆಸೆಯಿದೆ. ಶಾಲೆಗೂ ಹೋಗಬೇಕೆಂಬ ಬಯಕೆಯಿದೆ..." ಎಂದು ತನ್ನ ಕಥೆಯನ್ನೆಲ್ಲ ಹೇಳುವಳು. ಅಜ್ಜನಿಗೆ ಎಲ್ಲಿಲ್ಲದ ಸಂತಸವಾಯಿತು. "ನಮ್ಮ ಮನೆಗೆ ಬರುವೆಯಾ? ಅಲ್ಲಿ ಅಜ್ಜಿ ಇದ್ದಾರೆ, ಅವರಿಗೆ ಸಹಾಯ ಮಾಡಿಕೊಂಡು ಇರಬಹುದು. ಓದಬಹುದು. ಅಲ್ಲಿ ತೋಟ, ಕೊಳ, ಹೂದೋಟ ಎಲ್ಲಾ ಇದೆ.ಸುಂದರ ಪ್ರಕೃತಿಯಿದೆ. ನನ್ನ ಜೊತೆ ಬರುವೆಯಾ...??" ಎಂದನು. ಲಿಲ್ಲಿಯು ಖುಷಿಯಿಂದ ಒಪ್ಪಿದಳು. ಜೊತೆಗೆ ಮಾರಲು ತಂದ ಬೆಕ್ಕನ್ನೂ ಅಜ್ಜ ವಾಪಾಸು ಮನೆಗೆ ಕರೆದುಕೊಂಡು ಹೋದನು. ನಂತರ ಲಿಲ್ಲಿ, ಅಜ್ಜ -ಅಜ್ಜಿಗೆ ಸಹಾಯ ಮಾಡಿಕೊಂಡು ಅವರ ಉದ್ಯಾನವನ, ತರಕಾರಿ ತೋಟದಲ್ಲಿ ಕೆಲಸ ಮಾಡಿಕೊಂಡು ಲವಲವಿಕೆಯಿಂದ ಓಡಾಡಿಕೊಂಡಿದ್ದಳು. ಬೆಕ್ಕೂ ಕೂಡ ಜೊತೆಗಿತ್ತು. ಹೀಗೆ ಎಲ್ಲರೂ ಖುಷಿಖುಷಿಯಿಂದ ಜೀವನ ನಡೆಸುತ್ತಿದ್ದರು.
.
.
ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

ಮಕ್ಕಳ ನೀತ ಕಥೆ ಆತ್ಮಾವಲೋಕನ


ಮಕ್ಕಳ ಕಥೆ : ೦೫ ಆತ್ಮಾವಲೋಕನ

ಒಮ್ಮೆ ಒಂದು ಕಾಗೆ  ಹಾರುತ್ತ ಹೋಗುವಾಗ ಕೋಗಿಲೆಯು ಒಂದು ಮರದಲ್ಲಿ ಕುಳಿತು ಹಾಡುವುದು ಕಾಣಿಸಿತು. ಆಗ ಕೋಗಿಲೆ ಬಳಿ ಹೋಗಿ, "ನೀನೆಷ್ಟು ಸುಂದರವಾಗಿ , ಇಂಪಾಗಿ ಹಾಡುವೆ. ನಿನ್ನ ದನಿಗೆ ಮನಸೋಲುವವರೇ ಇಲ್ಲ. ನಾನು ಹಾಡಿದರೆ ಎಲ್ಲರೂ ಶು..ಶು.. ಎಂದು‌ ಓಡಿಸಿ ಬಿಡುವರು. ನನಗೂ ನಿನ್ನ ಹಾಗೆಯೇ ಹಾಡಬೇಕು ಎನು ಮಾಡುವುದು"?? ಎಂದಿತು.
ಆಗ ಕೋಗಿಲೆಯು " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು.. ಎಂದಿತು.
ಕಾಗೆಗೆ ಬೇಸರವಾಗಿ .. "ಹೋಗು.. ನಿನ್ನ ಜೊತೆ ಮಾತನಾಡೋದಿಲ್ಲ.. ಎಂದು ಹಾರಿಹೋಯಿತು.
ಹೀಗೆ ಮುಂದಕ್ಕೆ ಹೋಗುವಾಗ ಚಿವ್..ಚಿವ್.. ಅಳಿಲು ಹಾಡುತ್ತ ಮರದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಕುಣಿಯುತ್ತಿತ್ತು. ಆಗ ಕಾಗೆಯು ಅಳಿಲಿನ ಬಳಿ ಹೋಗಿ " ಅಳಿಲಣ್ಣ ಅಳಿಲಣ್ಣ, ನಿನ್ನ ಬೆನ್ನ ಮೇಲೆ ಅದೆಷ್ಟು ಸುಂದರ ಗೆರೆಗಳಿವೆ. ಆ ಮೂರುಗೆರೆಗಳು ಎಷ್ಟು ಚೆನ್ನಾಗಿ ಹೊಳೆಯುತ್ತಲಿವೆ. ಎಲ್ಲರ ಕಣ್ಣುಗಳ ಸೆಳೆಯುತ್ತಲಿವೆ. ನನಗೂ ಆ ಮೂರು ಗೆರೆಗಳು ಬೇಕು. ನನ್ನ ಬೆನ್ನಿಗೂ ಹಚ್ಚುವೆಯಾ.. ಎಂದಿತು.
ಆಗ ಅಳಿಲು " ಅಯ್ಯೋ.. ಹುಚ್ಚಿ!! " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು.. ಎಂದಿತು.
ಕಾಗೆಗೆ ಬೇಸರವಾಗಿ .. "ಹೋಗು.. ನಿನ್ನ ಜೊತೆ ಮಾತನಾಡೋದಿಲ್ಲ.. ಎಂದು ಹಾರಿಹೋಯಿತು.
ಮತ್ತೆ ಹಾರುತ್ತ ಮುಂದೆ ಹೋಗುವಾಗ ನವಿಲೊಂದು ಗರಿಬಿಚ್ಚಿ ನರ್ತನ ಮಾಡುತ್ತಲಿತ್ತು. ಅದನ್ನು ನೋಡಿ ಕಾಗೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ನನಗೂ ಈ ರೆಕ್ಕೆ ಕೊಡು. ನಾನೂ ಕುಣಿಯುವೆ.. ಎಂದು ಓಡಿಓಡಿ ಹೋಗಿ ನವಿಲನ್ನು ಕೇಳಿತು. ಆಗ ನವಿಲು ನಿನಗೆ ಈ ಗರಿಗಳು ಹೊಂದುವುದಿಲ್ಲ. ಅಂಟಿಸಿದರೂ ಅದೂ ಬಿದ್ದು ಹೋಗಿ ನಗೆಪಾಟಲಿಗೆ ಬೀಳುವೆ. ಬೇಡ ಬಿಡು. ಮುಂದಕ್ಕೆ ಹೋಗು ಎಂದಿತು.  ಆಗ ಕಾಗೆಗೆ ಕಣ್ಣೀರು ಉಕ್ಕಿ ಬಂತು. ಅಳಲು ಶುರುಮಾಡಿತು.
ಹೀಗೆ ಮುಂದೆ ಹೋಗುವಾಗ ಊರಿನ ಹಾದಿ ಬಂದಿತು. ಅಲ್ಲಿನ ಪುಟ್ಟ ಕೊಳದಲ್ಲಿ ಶ್ವೇತ ವರ್ಣದ ಹಂಸಗಳು ನಯವಾಗಿ ಶೀತಲ ತಿಳಿನೀರಿನಲ್ಲಿ ವಿಹರಿಸುತ್ತಾ ಇದ್ದವು. ಅವುಗಳಿಗೆ ಮರಿಗಳೂ ಜೊತೆಯಾಗಿದ್ದವು. ಅದನ್ನು ಕಂಡು, "ಛೇ!! ನನ್ನ ಬಣ್ಣ ಎಷ್ಟು ಕಪ್ಪಗಿದೆ. ಹಂಸಗಳಂತಾಗಲು ಏನು ಮಾಡಬೇಕು? ಹೋ ನೀರಿನಲ್ಲೇ ಇರಬೇಕೇನೋ , ನನ್ನ ಬಣ್ಣವೂ ಬಿಳಿಯಾಗಬಹುದು" ... ಎಂದೆನಿಸಿ ನೀರಿಗೆ ಧುಮುಕಿತು. ಅದನ್ನು ಕಂಡು ಹಂಸವು ನೀನೇಕೆ ಬಂದಿರುವೆ, ಹೋಗುಹೋಗು ನನ್ನ ಮರಿಗಳಿಗೆ ಭಯವಾಗುತ್ತದೆ... ಎಂದು ಹೋಗಲು ಹೇಳಿತು‌ .ಆಗ ಕಾಗೆಯಕ್ಕ "ಇಲ್ಲ ,‌ನನಗೂ ನಿನ್ನಂತೆ ಬಿಳಿಯಾಗಬೇಕು. ಅದಕ್ಕೆ‌ ನೀರಿನಲ್ಲಿ ಈಜುತ್ತಿರುವೆ.. ಎಂದು ಉತ್ತರಿಸಿತು. ಆಗ ಹಂಸಕ್ಕೆ ಎಲ್ಲಿಲ್ಲದ ನಗು ಬಂದು ಗಹಗಹಿಸಿ ನಕ್ಕಿತು‌. "ಅಯ್ಯೋ.. ಹುಚ್ಚಿ. ನಮ್ಮ ಬಣ್ಣ ನೀರಿನಲ್ಲಿ ಬದಲಾಗುವುದೇ..ನೀನೆಲ್ಲಿಯ ಮೂರ್ಖಿ. ಕತ್ತಲಾಗುತ್ತಾ ಬಂತು‌. ಬೇಗ ಮನೆ ಸೇರು ಎಂದಿತು. ಕಾಗೆಗೆ ಬೇಸರವಾಗಿ ಅಲ್ಲಿಂದ ಹಾರಿಹೋಯಿತು.
ಮನೆ ಕಡೆಗೆ ತಲುಪ ಬೇಕೆನ್ನುವಷ್ಟರಲ್ಲಿ  ಅಲ್ಲೊಬ್ಬ ಪುಟ್ಟ ಹುಡುಗ ತಾನು ತಿನ್ನುತ್ತಿದ್ದ ಆಹಾರವನ್ನು ಕೋಳಿಗಳಿಗೆ ಎಸೆದು ಮನೆಯೊಳಗೆ ಓಡಿದ. ಆಗ ಒಂದೆರಡು ಕೋಳಿಗಳು "ಅದು ನನಗೆ ಬೇಕು.. ನನ್ನ ಆಹಾರ.. ಕೊಡು.." ಎಂದು ಜಗಳ ಮಾಡಿಕೊಳ್ಳಲು ಆರಂಭಿಸಿದವು‌. ನಾಯಿಗಳು ಓಡೋಡಿ ಬಂದು "ಗುರ್...ಗುರ್.." ಎಂದು ಹೆದರಿಸಿ ಕೋಳಿಗಳ ಓಡಿಸಿಬಿಟ್ಟು ತಾವು ತಿನ್ನಲು ಶುರುಮಾಡಿದವು. ಬೆಕ್ಕೊಂದು ಅಲ್ಲೇ ಮೂಲೆಯಿಂದ "ಮಿಯಾವ್.. ಮಿಯಾವ್..  ಎಂದು ಮೆಲು ದನಿಯಲ್ಲೇ ನನಗೂ ಕೊಡು.." ಎಂದು ಹೇಳುತ್ತಿತ್ತು.
ಇದನ್ನೆಲ್ಲ ದೂರದಿಂದಲೇ ನೋಡಿದ ಕಾಗೆಯೇ ಇನ್ನೊಂದು ಅಚ್ಚರಿ ವಿಷಯ ಕಣ್ಣಿಗೆ ಬಿತ್ತು. ಅದೇನೆಂದರೆ " ತನ್ನ ಬಳಗದ ಕಾಗೆಯೊಂದು ಆಹಾರ ಸಿಕ್ಕಿದೆ ಬೇಗ ಬನ್ನಿ ಎಲ್ಲ, ಇಲ್ಲದಿದ್ದರೆ ಈ ನಾಯಿಗಳು ಖಾಲಿ ಮಾಡಿಯಾವು... ಕಾವ್..ಕಾವ್.." ಎಂದು ಎಲ್ಲರನ್ನೂ ಕೂಗಿ‌ ಕರೆಯುತ್ತಲಿತ್ತು.
ಆಗ ಕಾಗೆಗೆ ಉಳಿದ ಸ್ನೇಹಿತರು ಹೇಳಿದ ಮಾತು ನೆನಪಿಗೆ ಬಂದಿತು. " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು..  ಎಂದು. ಕಾಗೆಗಳ ವಿಶೇಷ ಗುಣವೇ ಆಹಾರ ನೋಡಿದಾಗ ತನ್ನ ಬಳಗದವರನ್ನೆಲ್ಲ ಕೂಗಿ ಕರೆದು ಜೊತೆಗೂಡಿ ಸೇವಿಸುವುದು.
ನೋಡಿದಿರಾ ಮಕ್ಕಳೇ.‌ ಎಲ್ಲರಿಗೂ ಅವರದೇ ಆದ ವಿಶೇಷತೆ ಇರುತ್ತದೆ. ಅವರಿವರನ್ನು ನೋಡಿ ಬೇಸರಮಾಡಿಕೊಳ್ಳಬಾರದು.
.
.
ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧