ಆಗ ಕೋಪಗೊಳ್ಳುವ ರಾಕಿ ಅಟ್ಟಿಸಿಕೊಂಡು ಹೋದರೆ ಮನೆ ಒಳಗೆ ಓಡಿ ಹೋಗುತ್ತಿತ್ತು. ಟಿಂಕು ಬೆಕ್ಕಿನ ಈ ಹುಚ್ಚಾಟಕ್ಕೆ ರೋಸಿಹೋದ ನಾಯಿ ಏನಾದರು ಮಾಡಿ ಇದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಯೋಚಿಸಿತು.
ಏನು ಮಾಡುವುದು ಎಂದು ತುಂಬಾ ಯೋಚಿಸಿ ಒಂದು ಉಪಾಯ ಮಾಡಿತು. "ಟಿಂಕು ಬೆಕ್ಕಿಗೆ ಮೀನುಗಳೆಂದರೆ ಎಲ್ಲಿಲ್ಲದ ಪ್ರೀತಿ. ಯಜಮಾನ ಮೀನನ್ನು ತಂದು ಅಡುಗೆ ಮಾಡಲು ಹೆಂಡತಿಗೆ ಹೇಳುತ್ತಿದ್ದ. ಆಗ ಮನೆ ಹೊರಗಿನ ತೆಂಗಿನ ಕಟ್ಟೆ ಹತ್ತಿರವೇ ಅದನ್ನು ಸ್ವಚ್ಛ ಮಾಡಿ ತುಂಡುಮಾಡಿ ಮನೆಯೊಳಗೆ ತರುತ್ತಿದ್ದರು. ಉಳಿದ ಭಾಗಗಳೆಲ್ಲ ಈ ಬೆಕ್ಕು ತಿನ್ನುತ್ತಾ ಇತ್ತು. ಹಾಗೆಯೇ ರಾಕಿ ಕೇಳಿದರೆ ಸ್ವಲ್ಪ ಕೊಡುತ್ತಿತ್ತು.
ಇದನ್ನೇ ದಾಳವಾಗಿಸಿಕೊಂಡು ಒಮ್ಮೆ ಯಜಮಾನ ಮೀನುಗಳನ್ನು ತಂದು, ತೆಂಗಿನ ಕಟ್ಟೆಯಲ್ಲಿ ಅದರ ಪಾತ್ರೆಯನ್ನಿಟ್ಟು ಹೆಂಡತಿಯನ್ನು ಕರೆಯಲು ಮನೆಯೊಳಗೆ ಹೋಗಿದ್ದ. ಆಗಲೇ ಚುರುಕಾದ ನಾಯಿ, ಟಿಂಕು ಬೆಕ್ಕನ್ನು ಕರೆದು "ಮೀನು ಬಂತು ..ಮೀನು...ಬಾ... ಬಾ..." ಎಂದು ಮೆಲ್ಲಗೆ ಕರೆಯಿತು. ಬಾಯಲ್ಲಿ ನೀರು ತರಿಸಿಕೊಂಡ ಟಿಂಕು ಮಾರ್ಜಾಲ ನಡಿಗೆಯಿಂದ ಬಂದು ಪಾತ್ರೆಯೊಳಗಿದ್ದ ಒಂದು ದೊಡ್ಡ ಮೀನನ್ನು ಕಚ್ಚಿಕೊಂಡು ತೋಟದ ಕಡೆಗೆ ಓಡಿಹೋಯಿತು. ಅಲ್ಲೇ ಕುಳಿತು ಹೊಟ್ಟೆ ತುಂಬಾ ತಿಂದಿತು.
ಹಾಗೆಯೇ ಏನೂ ತಿಳಿದೇ ಇಲ್ಲವೆಂಬಂತೆ ವಾಪಾಸ್ಸಾಗಿ ಮನೆಯೊಳಗಿನ ಪಡಸಾಲೆಯಲ್ಲಿ ಹೊಟ್ಟೆ ಉಬ್ಬರಿಕೊಂಡು ಮಲಗಿತ್ತು. ನಿದಿರೆ ಮಾಡುತ್ತಿರುವ ಹಾಗೆ ನಟಿಸುತ್ತಿತ್ತು. ಮನೆಯೊಡತಿ ಮೀನುಗಳನ್ನು ಸ್ವಚ್ಛ ಮಾಡಲು ತೆಂಗಿನ ಕಟ್ಟೆ ಹತ್ತಿರ ಹೋಗಿ ನೋಡಿದರೆ ತಂದಿದ್ದ ದೊಡ್ಡ ಎರಡು ಮೀನುಗಳಲ್ಲಿ ಒಂದು ಮೀನು ಕಾಣದಾಗಿತ್ತು. ಆಗ ನಾಯಿ "ಕುಯ್...ಕುಯ್... ಎಂದು ಬಾಲ ಅಲ್ಲಾಡಿಸುತ್ತ ಬೆಕ್ಕಿನ ಕಡೆ ನೋಡಿ ಟಿಂಕುವೇ ಮೀನನ್ನು ತಿಂದದ್ದು.. ಅದರ ಹೊಟ್ಟೆ ನೋಡು.. ಎನ್ನುವ ಹಾಗೆ ಸನ್ನೆ ಮಾಡಿತು.
ಇದನ್ನರಿತ ಮನೆಯೊಡತಿ ಟಿಂಕುವಿಗೆ " ಇನ್ನು ಕದ್ದು ಮೀನು ತಿನ್ನುತ್ತಿಯಾ.." ಎಂದು ಸಿಡುಕುತ್ತಾ ಚೆನ್ನಾಗಿ ಹೊಡೆದು ಓಡಿಸಿಬಿಟ್ಟರು. " ಅಯ್ಯೋ... ಸತ್ತೇ.. ಕಾಪಾಡಿ.. ಇನ್ನು ಹೀಗೆ ಮಾಡುವುದಿಲ್ಲ.." ಎಂದು ಬೆಕ್ಕು ಹೆದರಿ ಓಡಿ ಹೋಗಿ ತನ್ನ ಪ್ರಾಣ ಉಳಿಸಿಕೊಂಡಿತು. ರಾಕಿ ಮನೆ ಹೊರಗಿನಿಂದಲೇ ಇದನ್ನೆಲ್ಲ ನೋಡುತ್ತ ಖುಷಿಯಿಂದ ಒಳಗೊಳಗೆ ನಗುತ್ತಿತ್ತು.
2.
ಮಾತು ಉಳಿಸಿದ ಚಿಕ್ಕ ಹುಡುಗ
ಒಂದು ಚಿಕ್ಕ ಹಳ್ಳಿಯಲ್ಲಿ ಚಿನ್ನು ಎಂಬ ಹುಡುಗನಿದ್ದ. ಅವನು ತುಂಬಾ ಒಳ್ಳೆಯವನಾಗಿದ್ದರೂ, ಕೆಲವೊಮ್ಮೆ ಆಟದಲ್ಲಿ ಮುಳುಗಿ ಕೊಟ್ಟ ಮಾತನ್ನು ಮರೆತುಬಿಡುತ್ತಿದ್ದ.
ಒಂದು ದಿನ ಚಿನ್ನುವಿನ ಅಜ್ಜಿ ಅವನಿಗೆ ಒಂದು ಚಿಕ್ಕ ಗಿಡವನ್ನು ಕೊಟ್ಟು,
“ಚಿನ್ನು, ನಾನು ಊರಿಗೆ ಹೋಗಿ ಬರುವವರೆಗೆ ಈ ಗಿಡಕ್ಕೆ ಪ್ರತಿದಿನ ನೀರು ಹಾಕುತ್ತೀಯಾ?” ಎಂದು ಕೇಳಿದರು.
ಚಿನ್ನು ಖುಷಿಯಿಂದ,
“ಖಂಡಿತ ಅಜ್ಜಿ! ನಾನು ಪ್ರತಿದಿನ ನೀರು ಹಾಕುತ್ತೇನೆ. ಇದು ನನ್ನ ಮಾತು!” ಎಂದನು.
ಅಜ್ಜಿ ಊರಿಗೆ ಹೋದರು.
ಮೊದಲ ದಿನ ಚಿನ್ನು ಗಿಡಕ್ಕೆ ನೀರು ಹಾಕಿದ. ಎರಡನೇ ದಿನವೂ ಹಾಕಿದ.
ಮೂರನೇ ದಿನ ಅವನ ಸ್ನೇಹಿತರು ಆಟಕ್ಕೆ ಕರೆದರು.
“ಬಾ ಚಿನ್ನು, ಕ್ರಿಕೆಟ್ ಆಡೋಣ!”
ಚಿನ್ನು ಓಡಲು ಹೊರಟ. ಆಗ ಅವನಿಗೆ ಗಿಡ ನೆನಪಾಯಿತು.
“ಅಯ್ಯೋ! ಮೊದಲು ಗಿಡಕ್ಕೆ ನೀರು ಹಾಕಬೇಕು. ನಾನು ಅಜ್ಜಿಗೆ ಮಾತು ಕೊಟ್ಟಿದ್ದೇನೆ,” ಎಂದುಕೊಂಡ.
ಅವನು ಆಟವನ್ನು ಸ್ವಲ್ಪ ತಡಮಾಡಿ ಗಿಡಕ್ಕೆ ನೀರು ಹಾಕಿದ. ನಂತರ ಸ್ನೇಹಿತರ ಜೊತೆ ಆಟವಾಡಲು ಹೋದ.
ಸಂಜೆ ಅಜ್ಜಿ ಮನೆಗೆ ಮರಳಿದರು. ಗಿಡವನ್ನು ನೋಡಿ ತುಂಬಾ ಸಂತೋಷಪಟ್ಟರು.
“ಚಿನ್ನು, ನೀನು ನನ್ನ ಮಾತನ್ನು ಉಳಿಸಿಕೊಂಡಿದ್ದೀಯ. ನಿನ್ನ ಮೇಲೆ ನನಗೆ ಇನ್ನಷ್ಟು ನಂಬಿಕೆ ಬಂದಿದೆ,” ಎಂದು ಅಜ್ಜಿ ಹೇಳಿದರು.
ಚಿನ್ನು ನಗುತ್ತಾ,
“ಅಜ್ಜಿ, ನೀವು ನನಗೆ ಕೊಟ್ಟ ಕೆಲಸ ಚಿಕ್ಕದಾಗಿರಬಹುದು. ಆದರೆ ನಾನು ಕೊಟ್ಟ ಮಾತು ನನಗೆ ದೊಡ್ಡದು,” ಎಂದನು.
ಅಜ್ಜಿ ಅವನನ್ನು ಪ್ರೀತಿಯಿಂದ ಅಪ್ಪಿಕೊಂಡರು.
ಆ ದಿನದಿಂದ ಚಿನ್ನು ಒಂದು ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡನು — ಮಾತು ಕೊಡುವುದು ಸುಲಭ; ಕೊಟ್ಟ ಮಾತನ್ನು ಉಳಿಸುವುದೇ ನಿಜವಾದ ಒಳ್ಳೆಯ ಗುಣ.
ನೀತಿ:
ಕೊಟ್ಟ ಮಾತನ್ನು ಉಳಿಸುವವನ ಮೇಲೆ ಎಲ್ಲರೂ ನಂಬಿಕೆ ಇಡುತ್ತಾರೆ.
No comments:
Post a Comment