Friday, 8 May 2020

ಮಕ್ಕಳ ನೀತ ಕಥೆ ಆತ್ಮಾವಲೋಕನ


ಮಕ್ಕಳ ಕಥೆ : ೦೫ ಆತ್ಮಾವಲೋಕನ

ಒಮ್ಮೆ ಒಂದು ಕಾಗೆ  ಹಾರುತ್ತ ಹೋಗುವಾಗ ಕೋಗಿಲೆಯು ಒಂದು ಮರದಲ್ಲಿ ಕುಳಿತು ಹಾಡುವುದು ಕಾಣಿಸಿತು. ಆಗ ಕೋಗಿಲೆ ಬಳಿ ಹೋಗಿ, "ನೀನೆಷ್ಟು ಸುಂದರವಾಗಿ , ಇಂಪಾಗಿ ಹಾಡುವೆ. ನಿನ್ನ ದನಿಗೆ ಮನಸೋಲುವವರೇ ಇಲ್ಲ. ನಾನು ಹಾಡಿದರೆ ಎಲ್ಲರೂ ಶು..ಶು.. ಎಂದು‌ ಓಡಿಸಿ ಬಿಡುವರು. ನನಗೂ ನಿನ್ನ ಹಾಗೆಯೇ ಹಾಡಬೇಕು ಎನು ಮಾಡುವುದು"?? ಎಂದಿತು.
ಆಗ ಕೋಗಿಲೆಯು " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು.. ಎಂದಿತು.
ಕಾಗೆಗೆ ಬೇಸರವಾಗಿ .. "ಹೋಗು.. ನಿನ್ನ ಜೊತೆ ಮಾತನಾಡೋದಿಲ್ಲ.. ಎಂದು ಹಾರಿಹೋಯಿತು.
ಹೀಗೆ ಮುಂದಕ್ಕೆ ಹೋಗುವಾಗ ಚಿವ್..ಚಿವ್.. ಅಳಿಲು ಹಾಡುತ್ತ ಮರದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಕುಣಿಯುತ್ತಿತ್ತು. ಆಗ ಕಾಗೆಯು ಅಳಿಲಿನ ಬಳಿ ಹೋಗಿ " ಅಳಿಲಣ್ಣ ಅಳಿಲಣ್ಣ, ನಿನ್ನ ಬೆನ್ನ ಮೇಲೆ ಅದೆಷ್ಟು ಸುಂದರ ಗೆರೆಗಳಿವೆ. ಆ ಮೂರುಗೆರೆಗಳು ಎಷ್ಟು ಚೆನ್ನಾಗಿ ಹೊಳೆಯುತ್ತಲಿವೆ. ಎಲ್ಲರ ಕಣ್ಣುಗಳ ಸೆಳೆಯುತ್ತಲಿವೆ. ನನಗೂ ಆ ಮೂರು ಗೆರೆಗಳು ಬೇಕು. ನನ್ನ ಬೆನ್ನಿಗೂ ಹಚ್ಚುವೆಯಾ.. ಎಂದಿತು.
ಆಗ ಅಳಿಲು " ಅಯ್ಯೋ.. ಹುಚ್ಚಿ!! " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು.. ಎಂದಿತು.
ಕಾಗೆಗೆ ಬೇಸರವಾಗಿ .. "ಹೋಗು.. ನಿನ್ನ ಜೊತೆ ಮಾತನಾಡೋದಿಲ್ಲ.. ಎಂದು ಹಾರಿಹೋಯಿತು.
ಮತ್ತೆ ಹಾರುತ್ತ ಮುಂದೆ ಹೋಗುವಾಗ ನವಿಲೊಂದು ಗರಿಬಿಚ್ಚಿ ನರ್ತನ ಮಾಡುತ್ತಲಿತ್ತು. ಅದನ್ನು ನೋಡಿ ಕಾಗೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ನನಗೂ ಈ ರೆಕ್ಕೆ ಕೊಡು. ನಾನೂ ಕುಣಿಯುವೆ.. ಎಂದು ಓಡಿಓಡಿ ಹೋಗಿ ನವಿಲನ್ನು ಕೇಳಿತು. ಆಗ ನವಿಲು ನಿನಗೆ ಈ ಗರಿಗಳು ಹೊಂದುವುದಿಲ್ಲ. ಅಂಟಿಸಿದರೂ ಅದೂ ಬಿದ್ದು ಹೋಗಿ ನಗೆಪಾಟಲಿಗೆ ಬೀಳುವೆ. ಬೇಡ ಬಿಡು. ಮುಂದಕ್ಕೆ ಹೋಗು ಎಂದಿತು.  ಆಗ ಕಾಗೆಗೆ ಕಣ್ಣೀರು ಉಕ್ಕಿ ಬಂತು. ಅಳಲು ಶುರುಮಾಡಿತು.
ಹೀಗೆ ಮುಂದೆ ಹೋಗುವಾಗ ಊರಿನ ಹಾದಿ ಬಂದಿತು. ಅಲ್ಲಿನ ಪುಟ್ಟ ಕೊಳದಲ್ಲಿ ಶ್ವೇತ ವರ್ಣದ ಹಂಸಗಳು ನಯವಾಗಿ ಶೀತಲ ತಿಳಿನೀರಿನಲ್ಲಿ ವಿಹರಿಸುತ್ತಾ ಇದ್ದವು. ಅವುಗಳಿಗೆ ಮರಿಗಳೂ ಜೊತೆಯಾಗಿದ್ದವು. ಅದನ್ನು ಕಂಡು, "ಛೇ!! ನನ್ನ ಬಣ್ಣ ಎಷ್ಟು ಕಪ್ಪಗಿದೆ. ಹಂಸಗಳಂತಾಗಲು ಏನು ಮಾಡಬೇಕು? ಹೋ ನೀರಿನಲ್ಲೇ ಇರಬೇಕೇನೋ , ನನ್ನ ಬಣ್ಣವೂ ಬಿಳಿಯಾಗಬಹುದು" ... ಎಂದೆನಿಸಿ ನೀರಿಗೆ ಧುಮುಕಿತು. ಅದನ್ನು ಕಂಡು ಹಂಸವು ನೀನೇಕೆ ಬಂದಿರುವೆ, ಹೋಗುಹೋಗು ನನ್ನ ಮರಿಗಳಿಗೆ ಭಯವಾಗುತ್ತದೆ... ಎಂದು ಹೋಗಲು ಹೇಳಿತು‌ .ಆಗ ಕಾಗೆಯಕ್ಕ "ಇಲ್ಲ ,‌ನನಗೂ ನಿನ್ನಂತೆ ಬಿಳಿಯಾಗಬೇಕು. ಅದಕ್ಕೆ‌ ನೀರಿನಲ್ಲಿ ಈಜುತ್ತಿರುವೆ.. ಎಂದು ಉತ್ತರಿಸಿತು. ಆಗ ಹಂಸಕ್ಕೆ ಎಲ್ಲಿಲ್ಲದ ನಗು ಬಂದು ಗಹಗಹಿಸಿ ನಕ್ಕಿತು‌. "ಅಯ್ಯೋ.. ಹುಚ್ಚಿ. ನಮ್ಮ ಬಣ್ಣ ನೀರಿನಲ್ಲಿ ಬದಲಾಗುವುದೇ..ನೀನೆಲ್ಲಿಯ ಮೂರ್ಖಿ. ಕತ್ತಲಾಗುತ್ತಾ ಬಂತು‌. ಬೇಗ ಮನೆ ಸೇರು ಎಂದಿತು. ಕಾಗೆಗೆ ಬೇಸರವಾಗಿ ಅಲ್ಲಿಂದ ಹಾರಿಹೋಯಿತು.
ಮನೆ ಕಡೆಗೆ ತಲುಪ ಬೇಕೆನ್ನುವಷ್ಟರಲ್ಲಿ  ಅಲ್ಲೊಬ್ಬ ಪುಟ್ಟ ಹುಡುಗ ತಾನು ತಿನ್ನುತ್ತಿದ್ದ ಆಹಾರವನ್ನು ಕೋಳಿಗಳಿಗೆ ಎಸೆದು ಮನೆಯೊಳಗೆ ಓಡಿದ. ಆಗ ಒಂದೆರಡು ಕೋಳಿಗಳು "ಅದು ನನಗೆ ಬೇಕು.. ನನ್ನ ಆಹಾರ.. ಕೊಡು.." ಎಂದು ಜಗಳ ಮಾಡಿಕೊಳ್ಳಲು ಆರಂಭಿಸಿದವು‌. ನಾಯಿಗಳು ಓಡೋಡಿ ಬಂದು "ಗುರ್...ಗುರ್.." ಎಂದು ಹೆದರಿಸಿ ಕೋಳಿಗಳ ಓಡಿಸಿಬಿಟ್ಟು ತಾವು ತಿನ್ನಲು ಶುರುಮಾಡಿದವು. ಬೆಕ್ಕೊಂದು ಅಲ್ಲೇ ಮೂಲೆಯಿಂದ "ಮಿಯಾವ್.. ಮಿಯಾವ್..  ಎಂದು ಮೆಲು ದನಿಯಲ್ಲೇ ನನಗೂ ಕೊಡು.." ಎಂದು ಹೇಳುತ್ತಿತ್ತು.
ಇದನ್ನೆಲ್ಲ ದೂರದಿಂದಲೇ ನೋಡಿದ ಕಾಗೆಯೇ ಇನ್ನೊಂದು ಅಚ್ಚರಿ ವಿಷಯ ಕಣ್ಣಿಗೆ ಬಿತ್ತು. ಅದೇನೆಂದರೆ " ತನ್ನ ಬಳಗದ ಕಾಗೆಯೊಂದು ಆಹಾರ ಸಿಕ್ಕಿದೆ ಬೇಗ ಬನ್ನಿ ಎಲ್ಲ, ಇಲ್ಲದಿದ್ದರೆ ಈ ನಾಯಿಗಳು ಖಾಲಿ ಮಾಡಿಯಾವು... ಕಾವ್..ಕಾವ್.." ಎಂದು ಎಲ್ಲರನ್ನೂ ಕೂಗಿ‌ ಕರೆಯುತ್ತಲಿತ್ತು.
ಆಗ ಕಾಗೆಗೆ ಉಳಿದ ಸ್ನೇಹಿತರು ಹೇಳಿದ ಮಾತು ನೆನಪಿಗೆ ಬಂದಿತು. " ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು..  ಎಂದು. ಕಾಗೆಗಳ ವಿಶೇಷ ಗುಣವೇ ಆಹಾರ ನೋಡಿದಾಗ ತನ್ನ ಬಳಗದವರನ್ನೆಲ್ಲ ಕೂಗಿ ಕರೆದು ಜೊತೆಗೂಡಿ ಸೇವಿಸುವುದು.
ನೋಡಿದಿರಾ ಮಕ್ಕಳೇ.‌ ಎಲ್ಲರಿಗೂ ಅವರದೇ ಆದ ವಿಶೇಷತೆ ಇರುತ್ತದೆ. ಅವರಿವರನ್ನು ನೋಡಿ ಬೇಸರಮಾಡಿಕೊಳ್ಳಬಾರದು.
.
.

2.

ಹಳೆಯ ಶಾಲೆಯ ಗಂಟೆ

ಅರ್ಜುನ್ ಐದನೇ ತರಗತಿಯಲ್ಲಿ ಓದುತ್ತಿದ್ದ ಚುರುಕಾದ ಹುಡುಗ. ಅವನಿಗೆ ಕ್ರಿಕೆಟ್ ಆಡುವುದು, ಸ್ನೇಹಿತರ ಜೊತೆ ಮಾತನಾಡುವುದು, ಚಿತ್ರ ಬಿಡಿಸುವುದು ಎಂದರೆ ತುಂಬಾ ಇಷ್ಟ. ಆದರೆ ಅವನಿಗೆ ಒಂದು ಕೆಟ್ಟ ಅಭ್ಯಾಸವಿತ್ತು—ಯಾವ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ಮಾಡುತ್ತಿರಲಿಲ್ಲ.

ಬೆಳಿಗ್ಗೆ ಶಾಲೆಗೆ ಹೋಗುವ ಸಮಯವಾದರೂ,

“ಇನ್ನೂ ಐದು ನಿಮಿಷ ಆಡುತ್ತೇನೆ…”

ಎಂದು ಆಟವಾಡುತ್ತಿದ್ದ.

ಮನೆಕೆಲಸ ಮಾಡಲು ಕುಳಿತರೆ,

“ಸ್ವಲ್ಪ ಹೊತ್ತಿನ ನಂತರ ಮಾಡುತ್ತೇನೆ…”

ಎಂದು ಮುಂದೂಡುತ್ತಿದ್ದ.

ಅವನ ತಾಯಿ ಪ್ರತಿದಿನವೂ ಹೇಳುತ್ತಿದ್ದರು,

“ಅರ್ಜುನ್, ಸಮಯ ಯಾರಿಗಾಗಿಯೂ ಕಾಯುವುದಿಲ್ಲ. ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡು.”

ಆದರೆ ಅರ್ಜುನ್ ಆ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.

ಒಂದು ದಿನ ಶಾಲೆಯ ಹಳೆಯ ಕಟ್ಟಡವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿತ್ತು. ಶಾಲೆಯ ಹಿಂಭಾಗದಲ್ಲಿದ್ದ ಒಂದು ಸಣ್ಣ ಕೊಠಡಿಯನ್ನು ಹಲವು ವರ್ಷಗಳಿಂದ ಯಾರೂ ಬಳಸುತ್ತಿರಲಿಲ್ಲ.

ಅರ್ಜುನ್ ಮತ್ತು ಅವನ ಸ್ನೇಹಿತರು ಸ್ವಚ್ಛಗೊಳಿಸುತ್ತಿದ್ದಾಗ, ಅಲ್ಲಿ ಒಂದು ಹಳೆಯ ಶಾಲೆಯ ಗಂಟೆ ಸಿಕ್ಕಿತು.

ಗಂಟೆ ಧೂಳಿನಿಂದ ತುಂಬಿತ್ತು.

ಅರ್ಜುನ್ ಅದನ್ನು ಕೈಯಲ್ಲಿ ಹಿಡಿದು,

“ಇದು ಎಷ್ಟು ಹಳೆಯದಿರಬಹುದು!” ಎಂದು ಆಶ್ಚರ್ಯಪಟ್ಟ.

ಅವರ ಶಿಕ್ಷಕರು ಅಲ್ಲಿಗೆ ಬಂದರು.

“ಅದು ನಮ್ಮ ಶಾಲೆಯ ಹಳೆಯ ಗಂಟೆ. ಹಲವು ವರ್ಷಗಳ ಹಿಂದೆ ಇದೇ ಗಂಟೆ ಶಾಲೆಯ ಆರಂಭ ಮತ್ತು ಮುಕ್ತಾಯದ ಸಮಯವನ್ನು ತಿಳಿಸುತ್ತಿತ್ತು,” ಎಂದರು.

“ಇದು ಇನ್ನೂ ಕೆಲಸ ಮಾಡುತ್ತದೆಯಾ, ಮೇಡಂ?” ಎಂದು ಅರ್ಜುನ್ ಕೇಳಿದ.

“ಪ್ರಯತ್ನಿಸಿದರೆ ನೋಡಬಹುದು,” ಎಂದರು ಶಿಕ್ಷಕಿ.

ಎಲ್ಲರೂ ಸೇರಿ ಗಂಟೆಯನ್ನು ಸ್ವಚ್ಛಗೊಳಿಸಿದರು. ಅದನ್ನು ಸರಿಪಡಿಸಿದ ನಂತರ ಶಿಕ್ಷಕಿ ಗಂಟೆಯನ್ನು ಬಾರಿಸಿದರು.

“ಟಂಗ್… ಟಂಗ್… ಟಂಗ್…”

ಆ ಶಬ್ದ ಇಡೀ ಶಾಲೆಯಲ್ಲಿ ಮೊಳಗಿತು.

ಅರ್ಜುನ್‌ಗೆ ತುಂಬಾ ಸಂತೋಷವಾಯಿತು.

ಮುಂದಿನ ದಿನ ಶಿಕ್ಷಕಿ ಅವನಿಗೆ ಒಂದು ಜವಾಬ್ದಾರಿ ನೀಡಿದರು.

“ಅರ್ಜುನ್, ಇಂದಿನಿಂದ ಶಾಲೆಯ ಪ್ರಾರ್ಥನೆ ಸಮಯಕ್ಕೆ ಆರಂಭವಾಗುವಂತೆ ಈ ಗಂಟೆಯನ್ನು ನೀನೇ ಬಾರಿಸಬೇಕು.”

ಅರ್ಜುನ್ ಹೆಮ್ಮೆಯಿಂದ ಒಪ್ಪಿಕೊಂಡ.

ಆದರೆ ಮರುದಿನ ಬೆಳಿಗ್ಗೆ ಅವನು ಮನೆಯಲ್ಲಿ ಆಟವಾಡುತ್ತಾ ಸಮಯ ಮರೆತ.

ಶಾಲೆಗೆ ಬಂದಾಗ ಪ್ರಾರ್ಥನೆ ಮುಗಿದುಹೋಗಿತ್ತು.

ಅವನಿಗೆ ತುಂಬಾ ಬೇಸರವಾಯಿತು.

ಶಿಕ್ಷಕಿ ಏನೂ ಗದರಿಸಲಿಲ್ಲ.

“ಅರ್ಜುನ್, ನಿನ್ನಿಂದ ಇವತ್ತು ಶಾಲೆಯ ಸಮಯದ ವ್ಯವಸ್ಥೆ ತಪ್ಪಿತು. ಜವಾಬ್ದಾರಿ ತೆಗೆದುಕೊಳ್ಳುವುದು ಎಂದರೆ ಅದನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸುವುದೂ ಹೌದು,” ಎಂದರು.

ಆ ಮಾತು ಅರ್ಜುನ್‌ನ ಮನಸ್ಸಿಗೆ ತಟ್ಟಿತು.

ಅವನು ಅಂದಿನಿಂದ ತನ್ನ ದಿನಚರಿಯನ್ನು ಬದಲಿಸಿಕೊಂಡ.

ರಾತ್ರಿ ಮಲಗುವ ಮೊದಲು ಮುಂದಿನ ದಿನ ಮಾಡಬೇಕಾದ ಕೆಲಸಗಳನ್ನು ಬರೆದುಕೊಳ್ಳುತ್ತಿದ್ದ. ಬೆಳಿಗ್ಗೆ ಬೇಗ ಎದ್ದು ಸಿದ್ಧವಾಗುತ್ತಿದ್ದ. ಮನೆಕೆಲಸವನ್ನು ಸಮಯಕ್ಕೆ ಮಾಡುತ್ತಿದ್ದ.

ಕೆಲವು ದಿನಗಳ ನಂತರ ಅವನು ಮತ್ತೆ ಗಂಟೆಯನ್ನು ಸಮಯಕ್ಕೆ ಸರಿಯಾಗಿ ಬಾರಿಸುತ್ತಿದ್ದ.

ಒಂದು ದಿನ ಮುಖ್ಯೋಪಾಧ್ಯಾಯರು ಅವನನ್ನು ಕರೆದು,

“ಅರ್ಜುನ್, ಈ ಹಳೆಯ ಗಂಟೆ ನಮಗೆ ಸಮಯವನ್ನು ತಿಳಿಸುತ್ತಿದೆ. ಆದರೆ ಅದಕ್ಕಿಂತ ಮುಖ್ಯವಾಗಿ, ನೀನು ಸಮಯದ ಬೆಲೆಯನ್ನು ಕಲಿತಿದ್ದೀಯ,” ಎಂದರು.

ಅರ್ಜುನ್ ಗಂಟೆಯತ್ತ ನೋಡಿದ.

ಅವನಿಗೆ ಆ ಹಳೆಯ ಗಂಟೆ ಕೇವಲ ಒಂದು ವಸ್ತುವಾಗಿ ಕಾಣಲಿಲ್ಲ. ಅದು ಪ್ರತಿದಿನವೂ ಹೇಳುವ ಒಬ್ಬ ಮೌನ ಶಿಕ್ಷಕನಂತೆ ಅನಿಸಿತು—

“ಕಳೆದುಹೋದ ಸಮಯ ಮತ್ತೆ ಬರುವುದಿಲ್ಲ.”

ಆ ದಿನದಿಂದ ಅರ್ಜುನ್ ಸಮಯವನ್ನು ವ್ಯರ್ಥ ಮಾಡದೆ, ಪ್ರತಿಯೊಂದು ಕೆಲಸವನ್ನೂ ಜವಾಬ್ದಾರಿಯಿಂದ ಮಾಡಲು ಕಲಿತ.

ನೀತಿ:

ಸಮಯ ಬಹಳ ಅಮೂಲ್ಯ. ಸಮಯಕ್ಕೆ ಸರಿಯಾಗಿ ಕೆಲಸ ಮಾಡುವ ಅಭ್ಯಾಸ ನಮ್ಮನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಕಳೆದುಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ.

ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

No comments:

Post a Comment