Friday, 8 May 2020

ಮಕ್ಕಳ ನೀತಿ ಕಥೆ ಜೊತೆಗಾರ


ಮಕ್ಕಳ ಕಥೆ: ೦೬ ಜೊತೆಗಾರ

ಬೆಟ್ಟದ ಮೇಲೊಂದು ವೃದ್ಧ ದಂಪತಿಯ ಮನೆಯಿತ್ತು. ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೂ ಸಂಜೆಯಾಗುತ್ತಿದ್ದಂತೇ ಏನೋ ಒಂದು ರೀತಿಯ ಬೇಸರ ಅವರನ್ನು ಕಾಡುತ್ತಿತ್ತು. ಹಾಗಾಗಿ ಮನೆ ಎದುರಿಗೆ ಕೊಳವೊಂದನ್ನು ನಿರ್ಮಾಣ ಮಾಡಿದರು. ಅದರಲ್ಲಿ ಈಜಲು ಜೋಡಿ ಹಂಸಗಳನ್ನು ತಂದು ಸಾಕಿದರು. ಅವುಗಳ ಆಟಪಾಠ ನೋಡಿ ಖುಷಿಪಡುತ್ತಿದ್ದರು. ತಾವೂ ಅವುಗಳ ಜೊತೆಗೆ ಆಟವಾಡುತ್ತಾ ಸಂಜೆ ಕಳೆಯುತ್ತಿದ್ದರು. ಒಮ್ಮೆ ಅನಾಹುತ ನಡೆದೇ ಹೋಯಿತು‌. ಕತ್ತಲಾ ರಾತ್ರಿಯಲಿ ಕಾಡಿನಿಂದ ನರಿಯೊಂದು ಬಂದು ಕೊಳದಲ್ಲಿದ್ದ ಹಂಸವೊಂದನ್ನು ಕಚ್ಚಿಕೊಂಡು ಹೋಯಿತು. ಇನ್ನೊಂದು ಹಂಸ ಎಷ್ಟು ಬಿಡಿಸಿ ಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮುಂಜಾನೆ ಎದ್ದು ಎಂದಿನಂತೆ ವೃದ್ಧ ದಂಪತಿಗಳು ಕೊಳದ ಬಳಿ ಬಂದಾಗ ಅಚ್ಚರಿ ಕಾದಿತ್ತು. ಅಲ್ಲಿ ಒಂದೇ ಹಂಸವಿರುವುದು ನೋಡಿ ಭಯವಾಯಿತು. "ರೆಕ್ಕೆ ಪುಕ್ಕಗಳೆಲ್ಲ ಕಾಡುದಾರಿ ತುಂಬಾ ಚೆಲ್ಲಿರುವುದು ನೋಡಿ ಇದು ಕಾಡುಪ್ರಾಣಿಯದೇ ಕೆಲಸ, ನಮ್ಮ ಹಂಸವನ್ನು ಹೊತ್ತುಕೊಂಡು ಹೋಗಿದೆ.." ಎಂಬ ಅರಿವಾಯಿತು. ಆದರೆ ಇತ್ತ ಉಳಿದ ಒಂದು ಹಂಸಕ್ಕೆ ಬೇಸರದ ಛಾಯೆ ಮೂಡಿತು. ಒಂಟಿತನ ಕಾಡತೊಡಗಿತು. ಇದನ್ನು ಗಮನಿಸಿದ ಅಜ್ಜ ಪೇಟೆಗೆ ಹೋಗಿ ಆ ಒಂದು ಹಂಸವನ್ನು ಪುಟ್ಟ ಮಗುವಿಗೆ ಮಾರಾಟ ಮಾಡಿದರು. ತಿರುಗಿ ಬರುವಾಗ ಜೋಡಿ ಬೆಕ್ಕುಗಳನ್ನು ಕೊಂಡು ತಂದರು‌.
ಅಜ್ಜಿಗೆ ಎಲ್ಲಿಲ್ಲದ ಸಂತಸವಾಯಿತು. ಹಾಗೆಯೇ ಬೆಕ್ಕುಗಳ ಜೊತೆಗೆ ಆಟವಾಡುತ್ತ ದಿನ ಕಳೆಯಲು ಶುರುಮಾಡಿದರು. ಅವುಗಳಿಗೆ ದಿನವೂ ಹಾಲು ಬ್ರೆಡ್ ತಿನ್ನಲು ಕೊಡುತ್ತಿದ್ದರು. ಜೊತೆಗೆ ಪೇಟೆಯಿಂದ ಒಂದಷ್ಟು ಒಣಮೀನು ತಂದಿಟ್ಟುಕೊಂಡಿದ್ದರು. ಅದನ್ನೂ ದಿನವೂ ತಿನ್ನಲು ಕೊಡುತ್ತಿದ್ದರು‌. ಹೀಗಿರುವಾಗ ನೆಮ್ಮದಿಯ ಜೀವನ ಸಾಗುತಲಿತ್ತು. ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಒಮ್ಮೆ ಬೆಕ್ಕು ಕಾಡಿಗೆ ಹೋಗಿದ್ದಾಗ ಅಲ್ಲಿದ್ದ ಗೂಬೆಯೊಂದು ಬೆಕ್ಕಿನ ಮೇಲೆ ದಾಳಿ ಮಾಡಿತು. ಬೆಕ್ಕು ಉಸಿರೊಂದು ಉಳಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡೋಡಿ ಮನೆಯಂಗಳ ತಲುಪುತ್ತದೆ. ಅಷ್ಟರಲ್ಲೇ ಅದರ ಪ್ರಾಣ ಹಾರಿಹೋಯಿತು. ಆಗ ಅಜ್ಜಿಗೆ ಎಲ್ಲಿಲ್ಲದ ಆಘಾತವಾಗುತ್ತದೆ. ಉಳಿದ ಒಂದು ಬೆಕ್ಕಿಗೂ ತನ್ನ ಮಿತ್ರನ ಕಳೆದುಕೊಂಡ ನೋವು ಬಹುವಾಗಿ ಕಾಡಲು ಶುರುವಾಯಿತು. ಸರಿಯಾಗಿ ಏನೂ ತಿನ್ನದೇ ಸಾಯುವ ಸ್ಥಿತಿಗೆ ತಲುಪಿತು. ಹೀಗಿರುವಾಗ ಅಜ್ಜ ಮತ್ತೆ ಪೇಟೆಗೆ ಹೋಗಿ ಆ ಉಳಿದ ಒಂದು ಬೆಕ್ಕನ್ನೂ ಮಾರಲು ಮುಂದಾಗುತ್ತಾನೆ.
ಆಗ ಮಾರುಕಟ್ಟೆಯಲ್ಲಿ ಒಬ್ಬ ಹುಡುಗಿ ಕೆಲಸ ಕೇಳುತ್ತಾ ಅಂಗಡಿ ಬಾಗಿಲಿನಲ್ಲಿ ನಿಂತಿದ್ದಳು. ಅವಳನ್ನು ನೋಡಿ ಅಜ್ಜನು ಕರೆದು "ನೀನು ಯಾರು? ನಿನಗೆ ಅಪ್ಪ ಅಮ್ಮ ಯಾರೂ ಇಲ್ಲವೇ? ಸ್ಕೂಲಿಗೆ ಹೋಗುವುದಿಲ್ಲವೇ...? ಇಲ್ಲಿ ಏಕೆ ತಿರುಗುತ್ತಾ ಇದ್ದೀಯಾ..." ಎಂದು ಪ್ರಶ್ನಿಸುವನು. ಆಗ ಆ ಹುಡುಗಿ "ನಾನು ಲಿಲ್ಲಿ. ನಾನೊಬ್ಬಳು ಅನಾಥೆ. ನನಗೆ ಯಾರೂ ಇಲ್ಲ. ನಾನು ಸ್ಕೂಲಿಗೂ ಹೋಗುತ್ತಿಲ್ಲ. ಭಿಕ್ಷೆ ಬೇಡಲು ನನಗೆ ಇಷ್ಟವಿಲ್ಲ. ಹಾಗಾಗಿ ಯಾರಾದರೂ ಕೆಲಸ ಕೊಟ್ಟರೆ ಮಾಡುವೆನು. ನನಗೆ ಓದಬೇಕೆಂದು ತುಂಬಾ ಆಸೆಯಿದೆ. ಶಾಲೆಗೂ ಹೋಗಬೇಕೆಂಬ ಬಯಕೆಯಿದೆ..." ಎಂದು ತನ್ನ ಕಥೆಯನ್ನೆಲ್ಲ ಹೇಳುವಳು. ಅಜ್ಜನಿಗೆ ಎಲ್ಲಿಲ್ಲದ ಸಂತಸವಾಯಿತು. "ನಮ್ಮ ಮನೆಗೆ ಬರುವೆಯಾ? ಅಲ್ಲಿ ಅಜ್ಜಿ ಇದ್ದಾರೆ, ಅವರಿಗೆ ಸಹಾಯ ಮಾಡಿಕೊಂಡು ಇರಬಹುದು. ಓದಬಹುದು. ಅಲ್ಲಿ ತೋಟ, ಕೊಳ, ಹೂದೋಟ ಎಲ್ಲಾ ಇದೆ.ಸುಂದರ ಪ್ರಕೃತಿಯಿದೆ. ನನ್ನ ಜೊತೆ ಬರುವೆಯಾ...??" ಎಂದನು. ಲಿಲ್ಲಿಯು ಖುಷಿಯಿಂದ ಒಪ್ಪಿದಳು. ಜೊತೆಗೆ ಮಾರಲು ತಂದ ಬೆಕ್ಕನ್ನೂ ಅಜ್ಜ ವಾಪಾಸು ಮನೆಗೆ ಕರೆದುಕೊಂಡು ಹೋದನು. ನಂತರ ಲಿಲ್ಲಿ, ಅಜ್ಜ -ಅಜ್ಜಿಗೆ ಸಹಾಯ ಮಾಡಿಕೊಂಡು ಅವರ ಉದ್ಯಾನವನ, ತರಕಾರಿ ತೋಟದಲ್ಲಿ ಕೆಲಸ ಮಾಡಿಕೊಂಡು ಲವಲವಿಕೆಯಿಂದ ಓಡಾಡಿಕೊಂಡಿದ್ದಳು. ಬೆಕ್ಕೂ ಕೂಡ ಜೊತೆಗಿತ್ತು. ಹೀಗೆ ಎಲ್ಲರೂ ಖುಷಿಖುಷಿಯಿಂದ ಜೀವನ ನಡೆಸುತ್ತಿದ್ದರು.
.
.

ಮಳೆ ನಿಂತ ನಂತರದ ಆಟ

ವಿಹಾನ್‌ಗೆ ಆಟವೆಂದರೆ ತುಂಬಾ ಇಷ್ಟ. ಪ್ರತಿದಿನ ಶಾಲೆ ಮುಗಿದ ತಕ್ಷಣ ತನ್ನ ಸ್ನೇಹಿತರಾದ ಕಿರಣ್, ರೋಹಿತ್ ಮತ್ತು ಮನೋಜ್ ಜೊತೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ.

ಒಂದು ಶನಿವಾರ ಎಲ್ಲರೂ ಬೆಳಗ್ಗೆಯಿಂದಲೇ ಕ್ರಿಕೆಟ್ ಆಡಲು ಸಿದ್ಧರಾಗಿದ್ದರು. ಬ್ಯಾಟ್, ಬಾಲ್ ಎಲ್ಲವನ್ನೂ ತೆಗೆದುಕೊಂಡು ಮನೆಯ ಹತ್ತಿರದ ಮೈದಾನಕ್ಕೆ ಬಂದರು.

ಆದರೆ ಅವರು ಮೈದಾನಕ್ಕೆ ಬರುತ್ತಿದ್ದಂತೆಯೇ ಕಪ್ಪು ಮೋಡಗಳು ಆಕಾಶವನ್ನು ಆವರಿಸಿದವು.

“ಮಳೆ ಬರುತ್ತದೆ ಅನಿಸುತ್ತಿದೆ!” ಎಂದು ಕಿರಣ್ ಹೇಳಿದ.

ಅವನು ಹೇಳಿದ ತಕ್ಷಣವೇ ಜೋರಾಗಿ ಮಳೆ ಸುರಿಯಲು ಆರಂಭವಾಯಿತು.

ಮಕ್ಕಳೆಲ್ಲರೂ ಓಡಿ ಮನೆ ಸೇರಿದರು.

ಮುಂದಿನ ಎರಡು ದಿನವೂ ಮಳೆ ನಿಲ್ಲಲಿಲ್ಲ. ಮೈದಾನವೆಲ್ಲ ನೀರಿನಿಂದ ತುಂಬಿಹೋಯಿತು.

ಮೂರನೇ ದಿನ ಬೆಳಿಗ್ಗೆ ಮಳೆ ನಿಂತಿತು.

ವಿಹಾನ್ ತನ್ನ ಬ್ಯಾಟ್ ತೆಗೆದುಕೊಂಡು ಮೈದಾನಕ್ಕೆ ಓಡಿದ. ಆದರೆ ಅಲ್ಲಿ ಹೋಗಿ ನೋಡಿದಾಗ ಅವನಿಗೆ ಬೇಸರವಾಯಿತು.

ಮೈದಾನದಲ್ಲಿ ಎಲ್ಲೆಡೆ ಕೆಸರು. ದೊಡ್ಡ ದೊಡ್ಡ ನೀರಿನ ಗುಂಡಿಗಳು. ಕ್ರಿಕೆಟ್ ಆಡುವುದು ಅಸಾಧ್ಯವಾಗಿತ್ತು.

“ಇವತ್ತು ಕೂಡ ಆಟ ಇಲ್ಲ,” ಎಂದು ರೋಹಿತ್ ಬೇಸರದಿಂದ ಹೇಳಿದ.

“ನಮ್ಮ ಆಟ ಹಾಳಾಯಿತು,” ಎಂದ ಕಿರಣ್.

ಎಲ್ಲರೂ ನಿರಾಶೆಯಿಂದ ಮನೆಗೆ ಹೋಗಲು ಹೊರಟರು.

ಆಗ ವಿಹಾನ್ ಮೈದಾನದ ಒಂದು ಮೂಲೆಯಲ್ಲಿ ಬಿದ್ದಿದ್ದ ಸಣ್ಣ ಮರದ ತುಂಡುಗಳನ್ನು ಗಮನಿಸಿದ.

ಅವನಿಗೆ ಒಂದು ಯೋಚನೆ ಬಂತು.

“ನಾವು ಕ್ರಿಕೆಟ್ ಆಡಲು ಆಗದಿದ್ದರೆ ಬೇರೆ ಆಟ ಆಡಬಹುದು ಅಲ್ಲವೇ?”

“ಯಾವ ಆಟ?” ಎಂದು ಸ್ನೇಹಿತರು ಕೇಳಿದರು.

“ಈ ಮರದ ತುಂಡುಗಳಿಂದ ಒಂದು ಚಿಕ್ಕ ಅಡ್ಡಗೋಡೆ ಮಾಡೋಣ. ನಂತರ ಕೆಸರನ್ನು ದಾಟುವ ಆಟ ಆಡೋಣ!”

ಮೊದಲಿಗೆ ಎಲ್ಲರೂ ನಕ್ಕರು.

ಆದರೆ ವಿಹಾನ್ ಕೆಲಸ ಆರಂಭಿಸಿದ.

ಅವನು ಮತ್ತು ಸ್ನೇಹಿತರು ಸೇರಿ ಕಲ್ಲು, ಮರದ ತುಂಡು ಮತ್ತು ಒಣಗಿದ ಕೊಂಬೆಗಳನ್ನು ಸಂಗ್ರಹಿಸಿದರು. ಕೆಸರು ಕಡಿಮೆ ಇರುವ ಜಾಗದಲ್ಲಿ ಒಂದರ ಹಿಂದೆ ಒಂದರಂತೆ ಅವುಗಳನ್ನು ಇಟ್ಟುಕೊಂಡರು.

“ಇದು ನಮ್ಮ ‘ಮಳೆ ನಂತರದ ಸಾಹಸ ದಾರಿ’!” ಎಂದು ವಿಹಾನ್ ಘೋಷಿಸಿದ.

ಮೊದಲು ಕಿರಣ್ ಆ ದಾರಿಯಲ್ಲಿ ನಡೆಯಲು ಪ್ರಯತ್ನಿಸಿದ.

ಅವನು ಒಂದು ಮರದ ತುಂಡಿನಿಂದ ಇನ್ನೊಂದಕ್ಕೆ ಜಿಗಿಯುತ್ತಾ ಹೋದ. ಮಧ್ಯದಲ್ಲಿ ಜಾರಿ ಕೆಸರಿನಲ್ಲಿ ಕಾಲಿಟ್ಟ.

“ಅಯ್ಯೋ!” ಎಂದು ಎಲ್ಲರೂ ನಕ್ಕರು.

ಸ್ವಲ್ಪ ಸಮಯದಲ್ಲೇ ಅವರ ಆಟ ಇನ್ನಷ್ಟು ಮೋಜಿನದಾಯಿತು.

ಯಾರು ಕೆಸರನ್ನು ಮುಟ್ಟದೆ ದಾರಿಯನ್ನು ದಾಟುತ್ತಾರೆ ಎಂಬ ಸ್ಪರ್ಧೆ ಶುರುವಾಯಿತು. ನಂತರ ಚಿಕ್ಕ ಕಲ್ಲುಗಳನ್ನು ಗುರಿಯಾಗಿಸಿಕೊಂಡು ಚೆಂಡು ಎಸೆಯುವ ಆಟ ಆಡಿದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಶಾಲೆಯ ಕ್ರೀಡಾ ಶಿಕ್ಷಕರು ಮಕ್ಕಳನ್ನು ನೋಡಿದರು.

“ಇಲ್ಲಿ ಏನು ನಡೆಯುತ್ತಿದೆ?” ಎಂದು ಕೇಳಿದರು.

ವಿಹಾನ್ ಎಲ್ಲವನ್ನೂ ವಿವರಿಸಿದ.

ಶಿಕ್ಷಕರು ನಗುತ್ತಾ,

“ನೀವು ಇಂದು ಒಳ್ಳೆಯ ಪಾಠ ಕಲಿತಿದ್ದೀರಿ. ಸಮಸ್ಯೆ ಬಂದಾಗ ‘ಇನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕುಳಿತುಕೊಳ್ಳಬಾರದು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹೊಸ ಅವಕಾಶ ಹುಡುಕಬೇಕು,” ಎಂದರು.

ಮಕ್ಕಳು ಸಂತೋಷಪಟ್ಟರು.

ಮರುದಿನವೂ ಮೈದಾನದಲ್ಲಿ ಸ್ವಲ್ಪ ನೀರು ಇತ್ತು. ಆದರೆ ಮಕ್ಕಳು ಬೇಸರಪಡಲಿಲ್ಲ.

ಅವರು ಶಾಲೆಯ ಹಳೆಯ ಟೈರ್‌ಗಳನ್ನು ತಂದು ಓಟದ ಆಟ ಮಾಡಿದರು. ಹಗ್ಗಜಿಗಿತ ಆಡಿದರು. ಹೊಸ ಹೊಸ ಆಟಗಳನ್ನು ಕಂಡುಹಿಡಿದರು.

ಕೆಲವು ದಿನಗಳ ನಂತರ ಮೈದಾನ ಒಣಗಿತು.

ಮತ್ತೆ ಎಲ್ಲರೂ ಕ್ರಿಕೆಟ್ ಆಡಲು ಆರಂಭಿಸಿದರು.

ಆದರೆ ಆ ಮಳೆಯ ದಿನಗಳನ್ನು ಅವರು ಮರೆಯಲಿಲ್ಲ.

ವಿಹಾನ್ ತನ್ನ ಸ್ನೇಹಿತರಿಗೆ ಹೇಳಿದ,

“ಮಳೆ ನಮ್ಮ ಕ್ರಿಕೆಟ್ ಆಟವನ್ನು ನಿಲ್ಲಿಸಿತು. ಆದರೆ ಅದೇ ಮಳೆ ನಮಗೆ ಹೊಸ ಆಟಗಳನ್ನು ಕಲಿಸಿತು!”

ಎಲ್ಲರೂ ನಗುತ್ತಾ ತಲೆಯಾಡಿಸಿದರು.

ನೀತಿ:

ಪ್ರತಿಯೊಂದು ಸಮಸ್ಯೆಯಲ್ಲೂ ಒಂದು ಅವಕಾಶ ಅಡಗಿರಬಹುದು. ಸಮಸ್ಯೆಯನ್ನು ನೋಡಿ ಹೆದರುವ ಬದಲು, ಹೊಸ ದಾರಿಯನ್ನು ಹುಡುಕುವ ಮನಸ್ಸಿದ್ದರೆ ಕಷ್ಟದ ಪರಿಸ್ಥಿತಿಯನ್ನೂ ಒಳ್ಳೆಯ ಅನುಭವವಾಗಿ ಬದಲಿಸಬಹುದು.

ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

No comments:

Post a Comment