"ಏನಿದು ಹುಚ್ಚು ಬಯಕೆ. ಮಹಾರಾಜರಿಗೆ ಈ ವಿಷಯ ತಿಳಿದರೆ ನನ್ನ ಕೊಂದೇ ಬಿಡುವರು... ಇಲ್ಲ.. ಇಲ್ಲ.. ನಾನು ಕರೆದುಕೊಂಡು ಹೋಗಲಾರೆ.." ಎಂದು ಕೋಣೆಯಿಂದ ಓಡಿಹೋದಳು.
ಅಲ್ಲಿ ನೋಡಿದರೆ ಗುಡಿಸಲಿನ ಮನೆಯೊಂದಿತ್ತು. ಮನೆಯೊಳಗೆ ಕೆಲಸದವಳು ಮತ್ತು ಅವಳ ಗಂಡನಿದ್ದ. ಕುಡಿದ ಅಮಲಿನಲ್ಲಿ ಮಲಗಿದ್ದ. ಯುವರಾಣಿ ಆ ಮನೆಯವರನ್ನು ಮಾತನಾಡಿಸಬೇಕು ಎಂದು ದೂರದಿಂದಲೇ ಕೂಗಿ ಕರೆದಳು. ಆಗ ಕೆಲಸದಾಕೆ ಹೊರಬಂದು "ಯಾರು..?ಯಾರು ಬೇಕು..? ಎಂದು ಕೇಳಿದಳು. "ನಾನು ಈ ಊರಿಗೆ ಅಪರಿಚಿತೆ. ತುಂಬಾ ಬಾಯಾರಿಕೆ ಆಗುತ್ತಿದೆ. ನೀರು ಕೊಡುವಿರಾ?" ಕೇಳಿದಳು. ಆಯ್ತು. ಎಂದು ಒಳಗೆ ಹೋಗಿ ನೀರು ತಂದು ಕುಡಿಯಲು ನೀಡಿದಳು. ದಣಿವಾರಿಸಿಕೊಂಡ ಮೇಲೆ ಮತ್ತೆ ಯುವರಾಣಿ "ತುಂಬಾ ದೂರದಿಂದ ಬಂದಿದ್ದೇನೆ, ನನಗೆ ತುಂಬಾ ಹೊಟ್ಟೆ ಹಸಿವಾಗುತ್ತಿದೆ. ಊಟ ಕೊಡುವಿರಾ?'' ಕೇಳಿದಳು.
ಆಗ ತನಗಾಗಿ ತೆಗೆದಿಟ್ಟಿದ್ದ ನಿನ್ನೆಯ ಅನ್ನವನ್ನು ಬಿಸಿ ಮಾಡಿ ತಂದು ಊಟಕ್ಕೆ ಬಡಿಸಲು ಮುಂದಾದಳು.
ಯುವರಾಣಿ "ನೀವು ಬನ್ನಿ, ಜೊತೆಗೆ ಊಟ ಮಾಡೋಣ.." ಎಂದಳು
"ಇಲ್ಲ .. ನೀವು ಅತಿಥಿಗಳು. ನೀವೇ ಮೊದಲು ಊಟ ಮಾಡಿ.." ಎಂದಳು.
ಕೊನೆಗೆ ಒತ್ತಾಯಪೂರ್ವಕವಾಗಿ ತನಗೆ ಹಾಕಿದ ಸ್ವಲ್ಪ ಅನ್ನವನ್ನೇ ಅವಳ ತಟ್ಟೆಗೂ ಬಡಿಸಿ ಜೊತೆಗೆ ಕೂತು ಊಟ ಮಾಡಿದರು.
ಯುವರಾಣಿ ನಿಧಾನಕ್ಕೆ ಮಾತಿಗಿಳಿದು "ನೀವು ಜೀವನ ಸಾಗಿಸಲು ಏನು ಕೆಲಸ ಮಾಡಿಕೊಂಡಿದ್ದೀರಿ.. ಎಂದು ಕೇಳಿದಳು.
"ನಾನು ನಮ್ಮೂರ ರಾಜರ ಅರಮನೆಯಲ್ಲಿ ಯುವರಾಣಿಗೆ ಸೇವಕಿಯಾಗಿರುವೆ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ, ಬೇಕು ಬೇಡಗಳ ತಂದುಕೊಡುವ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ಬೆಳಿಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮುಗಿಸಿ ಸಂಜೆ ತನಕವೂ ಕೆಲಸ ಮಾಡಿ, ಯುವರಾಣಿಯ ಜೊತೆಗೆ ಒಂದಷ್ಟು ಹರಟೆ ಹೊಡೆದು ಈಗ ವಾಪಾಸ್ಸಾದೆ..." ಎಂದಳು.
"ಹಾಗಾದರೆ ರಾಜರು ನಿಮಗೆ ದುಡಿಮೆಗೆ ಹಣ ಕೊಡುವುದಿಲ್ಲವೇ.." ಎಂದು ಕೇಳಿದಳು.
ಆಗ "ಇಲ್ಲ.. ಊಟಕ್ಕೆ ಕೊಡುತ್ತಿದ್ದಾರಲ್ಲ ಅಷ್ಟೇ. ನನ್ನ ಗಂಡ ಕುಡಿಯಲು ಸಾಲ ಕೇಳುವ. ಅದನ್ನೇ ನನ್ನ ಸಂಬಳದಲ್ಲಿ ವಸೂಲು ಮಾಡಿಕೊಳ್ಳುವರು..." ಎಂದಳು.
ಯುವರಾಣಿಗೆ ಬೇಸರವಾಯಿತು. ರಾತ್ರಿಯಾದ ಕಾರಣ ನಾನಿಲ್ಲೆ ಮಲಗುವೆ ಎಂದಳು. ಅವಳು ಒಪ್ಪಿ ಹರಿದುಹೋದ ಹೊದಿಕೆ , ಚಾಪೆ ನೀಡಿದಳು. ಬಡವಿಯ ಮನೆಯ ಗುಡಿಸಲಿನಿಂದ ಚಂದಿರನ ಬೆಳದಿಂಗಳು ಮೈಮೇಲೆ ಚೆಲ್ಲುತ್ತಿತ್ತು. ಅದನ್ನೆಲ್ಲ ಎಂದೂ ನೋಡದ ಯುವರಾಣಿಯು ಖುಷಿಪಟ್ಟಳು. ಅಂಗಳದಲ್ಲಿ ಕುಣಿದಾಡಿದಳು. ಹಾಡು ಹೇಳಿದಳು. ಹಾಗೆಯೇ ಒಳ ನಡೆದು ಕಣ್ತುಂಬಾ ನಿದಿರೆ ಮಾಡಿದಳು.
ಕೋಳಿ ಕೂಗಿ, ಸೂರ್ಯ ಬಂದ. ಬೆಳಗಾಯಿತು. ಮನೆ ಕೆಲಸದವಳು ಬೇಗನೆ ಎದ್ದು ಅರಮನೆಗೆ ಕೆಲಸಕ್ಕೆ ಹೊರಟಳು. ಇವಳಿಗೂ ಎಚ್ಚರವಾಯಿತು. ತಾನೂ ಜೊತೆಗೆ ಬರುವೆ ಎಂದು ಹೊರಡಲು ಸಿದ್ದತೆ ಮಾಡಿಕೊಂಡಳು. ಜೊತೆಯಾಗಿ ಅರಮನೆ ಸೇರಿದರು. ಅಲ್ಲಿದ್ದ ಭಟರು ಇವರನ್ನು ನೋಡಿ ವಿಶೇಷವಾದ ಗೌರವ ನೀಡಿದರು. ಸೇವಕಿಗೆ ಏಕೆಂದು ಅರ್ಥವಾಗಲಿಲ್ಲ. ಆದರೆ
ಕೆಲಸದವಳ ಜೊತೆಗೆ ತನ್ನ ಮಗಳನ್ನು ನೋಡಿದ ಮಹಾರಾಜನಿಗೆ ಕೋಪ ಬಂದಿತು. "ನೀನು ಎಲ್ಲಿಗೆ ಹೋಗಿದ್ದಿ?? ಈ ಕೆಲಸದವಳು ನಿನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಳು" ಎಂದು ದಬಾಯಿಸಿದನು.
ಅಲ್ಲಿಯ ತನಕವೂ ಕೆಲಸದವಳಿಗೆ ಯುವರಾಣಿ ತನ್ನ ಜೊತೆಗೆ, ತನ್ನ ಮನೆಯಲ್ಲಿ ಒಂದು ರಾತ್ರಿ ತಂಗಿದ್ದಳು ಎಂದು ತಿಳಿದೇ ಇರಲಿಲ್ಲ. ಅವಳಿಗೂ ಅಚ್ಚರಿ ಬಡಿದು ದಂಗಾಗಿ ನಿಂತಳು. ಆಗ ಯುವರಾಣಿ ರಾಜನಿಗೆ ಎದುರುವಾದಿಸಿ ಮಾತಿಗಿಳಿದಳು.
"ಪಿತಾಜಿ.. ನಾನು ನಿಮ್ಮ ಒಬ್ಬಳೇ ಮುದ್ದಿನ ಮಗಳು ಎಂದು ಹೊರಗಡೆ ಎಲ್ಲೂ ಹೋಗದ ಹಾಗೆ ನೋಡಿಕೊಂಡಿರಿ. ನನಗೆ ಬೇಕು ಬೇಡದ್ದನ್ನೆಲ್ಲ ನನ್ನ ಕೋಣೆಗೆ ತರಿಸಿ ಕೊಡುತ್ತಿದ್ದೀರಿ. ಆದರೆ ಈ ಸುಂದರವಾದ ಪ್ರಕೃತಿಯನ್ನು ನಾನು ನೋಡಲೇ ಇಲ್ಲ. ನನಗೂ ಆಸೆಯಾಗಿ ನಾನು ಇವಳಿಗೂ ತಿಳಿಸದೇ ಅವಳ ಊರಿಗೆ ಹೋಗಿ ಬಂದೆ. ಒಂದು ರಾತ್ರಿ ಅವಳ ಮನೆಯಲ್ಲೇ ಇದ್ದೆ. ಅವಳ ಹರಕು ಗುಡಿಸಲಿನಲ್ಲೇ ಕಣ್ತುಂಬಾ ನಿದಿರೆ ಮಾಡಿದೆ. ಅಲ್ಲದೇ ನನ್ನ ಇಷ್ಟು ಚೆನ್ನಾಗಿ ವೈಭೋಗದಿಂದ ನೋಡಿಕೊಳ್ಳುವ ನೀವು, ನನ್ನ ಕೆಲಸಕ್ಕೆ ಬರುವ ನನ್ನ ಗೆಳತಿಗೆ ಏಕೆ ಸರಿಯಾದ ಹಣ ಕೊಡುತ್ತಿಲ್ಲ. ಅವಳು ಗುಡಿಸಲಿನಲ್ಲಿ ಬದುಕು ನಡೆಸುತ್ತಾ ಇದ್ದಾಳೆ. ನಿನ್ನೆಯ ಅನ್ನವನ್ನು ಊಟ ಮಾಡುತ್ತಾಳೆ. ಚಿಂದಿಬಟ್ಟೆ ತೊಡುತ್ತಾಳೆ.
ಪಿತಾಜಿ.. ಇಂದಿನಿಂದ ಅವಳು ನಮ್ಮ ಅರಮನೆಯಲ್ಲಿಯೇ ಇರಲಿ. ನನ್ನ ಜೊತೆಗೇ ಇರಬೇಕು. ಇದು ನನ್ನ ಕಟ್ಟಾಜ್ಞೆ...!!" ಎಂದು ಹೇಳಿ ಕೋಪದಿಂದಲೇ ತನ್ನ ಅಂತಃಪುರಕ್ಕೆ ನಡೆದಳು.
2.
ಚಿಕ್ಕ ಇರುವೆಯ ದೊಡ್ಡ ಸೇತುವೆ
ಒಂದು ಹಸಿರು ಕಾಡಿನ ಅಂಚಿನಲ್ಲಿ ಸಾವಿರಾರು ಇರುವೆಗಳು ವಾಸಿಸುತ್ತಿದ್ದವು. ಅವು ಪ್ರತಿದಿನ ಗುಂಪಾಗಿ ಆಹಾರ ಹುಡುಕಲು ಹೋಗಿ, ಸಂಜೆ ತಮ್ಮ ಗೂಡಿಗೆ ಮರಳುತ್ತಿದ್ದವು.
ಆ ಇರುವೆಗಳ ಗುಂಪಿನಲ್ಲಿ ಚಿನ್ನು ಎಂಬ ಒಂದು ಪುಟ್ಟ ಇರುವೆ ಇತ್ತು. ಅದು ಗಾತ್ರದಲ್ಲಿ ತುಂಬಾ ಚಿಕ್ಕದಾಗಿತ್ತು. ಆದರೆ ಯಾವಾಗಲೂ ಹೊಸದನ್ನು ಯೋಚಿಸುವ ಸ್ವಭಾವವಿತ್ತು.
ಒಂದು ದಿನ ಬೆಳಿಗ್ಗೆ ಇರುವೆಗಳ ಗುಂಪು ಆಹಾರ ಹುಡುಕುತ್ತಾ ಕಾಡಿನ ಇನ್ನೊಂದು ಭಾಗಕ್ಕೆ ಹೊರಟಿತು. ದಾರಿಯಲ್ಲಿ ಒಂದು ಸಣ್ಣ ಹಳ್ಳ ಎದುರಾಯಿತು.
ಮಳೆ ಬಿದ್ದಿದ್ದರಿಂದ ಹಳ್ಳದಲ್ಲಿ ನೀರು ತುಂಬಿ ವೇಗವಾಗಿ ಹರಿಯುತ್ತಿತ್ತು.
ಇರುವೆಗಳ ನಾಯಕಿ ಹೇಳಿದಳು,
“ನಾವು ಈ ಹಳ್ಳವನ್ನು ದಾಟಬೇಕು. ಆದರೆ ನೀರು ತುಂಬಾ ವೇಗವಾಗಿ ಹರಿಯುತ್ತಿದೆ. ಯಾರೂ ಒಬ್ಬರೇ ದಾಟಲು ಪ್ರಯತ್ನಿಸಬೇಡಿ.”
ಕೆಲವು ಇರುವೆಗಳು ಮುಂದೆ ಹೋಗಿ ನೋಡಿದವು. ಆದರೆ ಎಲ್ಲಿಂದಲೂ ದಾಟಲು ಸಾಧ್ಯವಾಗಲಿಲ್ಲ.
“ಇವತ್ತು ಆಹಾರ ಸಿಗುವುದಿಲ್ಲ. ಹಿಂದಿರುಗೋಣ,” ಎಂದ ಒಂದು ಇರುವೆ.
ಆಗ ಚಿನ್ನು ಸುತ್ತಲೂ ನೋಡಿತು.
ಹಳ್ಳದ ಪಕ್ಕದಲ್ಲಿ ಕೆಲವು ಒಣಗಿದ ಸಣ್ಣ ಕಡ್ಡಿಗಳು ಬಿದ್ದಿದ್ದವು. ಹತ್ತಿರದಲ್ಲೇ ದೊಡ್ಡ ಎಲೆಗಳೂ ಇದ್ದವು.
ಚಿನ್ನುವಿಗೆ ಒಂದು ಯೋಚನೆ ಬಂತು.
“ನಾವು ಎಲ್ಲರೂ ಸೇರಿ ಒಂದು ಸೇತುವೆ ಮಾಡಬಹುದಲ್ಲವೇ?”
ಕೆಲವು ಇರುವೆಗಳು ನಕ್ಕವು.
“ನಾವು ಇಷ್ಟು ಚಿಕ್ಕವರು. ಇಷ್ಟು ದೊಡ್ಡ ಹಳ್ಳಕ್ಕೆ ಸೇತುವೆ ಮಾಡುವುದು ಹೇಗೆ?”
ಚಿನ್ನು ಹೇಳಿತು,
“ಒಬ್ಬೊಬ್ಬರಾಗಿ ಮಾಡಿದರೆ ಕಷ್ಟ. ಆದರೆ ಎಲ್ಲರೂ ಸೇರಿ ಮಾಡಿದರೆ ಸಾಧ್ಯ.”
ನಾಯಕಿಗೂ ಆ ಯೋಚನೆ ಇಷ್ಟವಾಯಿತು.
“ಸರಿ. ಪ್ರಯತ್ನಿಸೋಣ,” ಎಂದಳು.
ಕೆಲವು ಇರುವೆಗಳು ಕಡ್ಡಿಗಳನ್ನು ಎಳೆದುಕೊಂಡು ಬಂದವು.
ಕೆಲವು ಇರುವೆಗಳು ಎಲೆಗಳನ್ನು ತಂದವು.
ಇನ್ನೂ ಕೆಲವು ಇರುವೆಗಳು ಮಣ್ಣನ್ನು ತಂದು ಕಡ್ಡಿಗಳ ಮಧ್ಯದ ಜಾಗವನ್ನು ಗಟ್ಟಿಗೊಳಿಸಿದವು.
ಒಂದು ಗಂಟೆ ಕಳೆದರೂ ಸೇತುವೆ ಪೂರ್ಣವಾಗಲಿಲ್ಲ.
ಕೆಲವು ಇರುವೆಗಳು ಸುಸ್ತಾದವು.
“ಇದು ಆಗುವುದಿಲ್ಲ ಅನಿಸುತ್ತಿದೆ,” ಎಂದವು.
ಚಿನ್ನು ಅವುಗಳಿಗೆ ಧೈರ್ಯ ತುಂಬಿತು.
“ನಾವು ಈಗಾಗಲೇ ಅರ್ಧದಷ್ಟು ಮಾಡಿದ್ದೇವೆ. ಇನ್ನೂ ಸ್ವಲ್ಪ ಪ್ರಯತ್ನಿಸೋಣ.”
ಎಲ್ಲರೂ ಮತ್ತೆ ಕೆಲಸ ಆರಂಭಿಸಿದರು.
ಕೊನೆಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ತಲುಪುವಷ್ಟು ಸಣ್ಣ ಸೇತುವೆ ಸಿದ್ಧವಾಯಿತು.
ಮೊದಲು ಚಿನ್ನು ನಿಧಾನವಾಗಿ ಸೇತುವೆಯ ಮೇಲೆ ನಡೆಯಿತು.
ಸೇತುವೆ ಗಟ್ಟಿಯಾಗಿತ್ತು.
“ಬನ್ನಿ! ಇದು ಸುರಕ್ಷಿತ!” ಎಂದು ಅದು ಕೂಗಿತು.
ಒಂದರ ಹಿಂದೆ ಒಂದರಂತೆ ಸಾವಿರಾರು ಇರುವೆಗಳು ಸೇತುವೆಯನ್ನು ದಾಟಿದವು.
ಎಲ್ಲರೂ ಸುರಕ್ಷಿತವಾಗಿ ಇನ್ನೊಂದು ಬದಿಗೆ ತಲುಪಿದರು.
ಅಲ್ಲಿ ಅವರಿಗೆ ಸಾಕಷ್ಟು ಆಹಾರ ಸಿಕ್ಕಿತು.
ಸಂಜೆ ಆಹಾರವನ್ನು ಗೂಡಿಗೆ ತಂದು ಹಂಚಿಕೊಂಡರು.
ಇರುವೆಗಳ ನಾಯಕಿ ಚಿನ್ನುವನ್ನು ಕರೆದು ಹೇಳಿದಳು,
“ಇಂದು ನೀನು ನಮಗೆ ದೊಡ್ಡ ಪಾಠ ಕಲಿಸಿದ್ದೀಯ. ಸೇತುವೆ ಕಟ್ಟಿದ್ದು ಒಂದೇ ಇರುವೆಯ ಶಕ್ತಿಯಿಂದಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸ ಮಾಡಿದ ಕಾರಣ ಅದು ಸಾಧ್ಯವಾಯಿತು.”
ಚಿನ್ನು ನಗುತ್ತಾ,
“ನಾನು ಒಂದು ಯೋಚನೆ ಮಾಡಿದೆ ಅಷ್ಟೇ. ಅದನ್ನು ಯಶಸ್ವಿಗೊಳಿಸಿದ್ದು ನಮ್ಮೆಲ್ಲರ ಒಗ್ಗಟ್ಟು,” ಎಂದಿತು.
ಆ ದಿನದಿಂದ ಇರುವೆಗಳ ಗುಂಪಿನಲ್ಲಿ ಯಾರೂ ತಮ್ಮ ಕೆಲಸ ಚಿಕ್ಕದು ಎಂದು ಭಾವಿಸಲಿಲ್ಲ.
ಯಾರೋ ಕಡ್ಡಿ ತಂದರು, ಯಾರೋ ಮಣ್ಣು ತಂದರು, ಯಾರೋ ಸೇತುವೆಯನ್ನು ಪರೀಕ್ಷಿಸಿದರು.
ಪ್ರತಿಯೊಬ್ಬರ ಸಣ್ಣ ಪ್ರಯತ್ನವೂ ಸೇರಿ ದೊಡ್ಡ ಕೆಲಸವನ್ನು ಯಶಸ್ವಿಗೊಳಿಸಿತು.
ಅಂದಿನಿಂದ ಆ ಸೇತುವೆಯನ್ನು ಕಾಡಿನಲ್ಲಿರುವ ಎಲ್ಲರೂ “ಚಿಕ್ಕ ಇರುವೆಯ ದೊಡ್ಡ ಸೇತುವೆ” ಎಂದು ಕರೆಯತೊಡಗಿದರು.
ನೀತಿ:
ಒಬ್ಬರ ಶಕ್ತಿ ಸೀಮಿತವಾಗಿರಬಹುದು. ಆದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ದೊಡ್ಡ ಸಮಸ್ಯೆಯನ್ನೂ ಪರಿಹರಿಸಬಹುದು. ತಂಡದಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಮುಖ್ಯ.
No comments:
Post a Comment