Thursday, 14 May 2020

ಶಿಶುಗೀತೆ ಎಂದರೆ ಏನು? ಹೇಗೆ ಬರೆಯುವುದು?

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು
ಮಕ್ಕಳ ಸಾಹಿತ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಲೇಖನ.

*ಸ್ನೇಹಿತರೇ,*
*ಶಿಶುಗೀತೆ ಎಂದರೆ* ಐದು ವರುಷದೊಳಗಿನ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ, ಅವರಿಗೆ ಹಾಡಿಸಿ ಕುಣಿಸುವ ರೀತಿಯಲ್ಲಿ ಬರೆಯುವುದು. (ನಲಿ-ಕಲಿ ಪದ್ದತಿ)

*ಶಿಶುಗೀತೆಯ ಮೂಲ ಉದ್ದೇಶ :*
ಆ ಮಗು ಒಂದು ವಸ್ತುವಿನ ಆಕಾರ, ಬಣ್ಣ, ಶಬ್ದ ಎಲ್ಲವನ್ನೂ ಅರಿತುಕೊಳ್ಳಲು, ಗುರುತಿಸಲು  ಕಲಿಸುವ ವಿಧಾನ.

*ಶಿಶುಗೀತೆಯ ಸಾಲುಗಳು* : ಆರರಿಂದ ಎಂಟುಗಳು ಸಾಲು, ಅಥವಾ ಹತ್ತು‌ ಸಾಲುಗಳೂ ಇರಬಹುದು. ಮಕ್ಕಳ ಪದ್ಯಗಳು ೨೦-೨೮ ಸಾಲುಗಳು ಇರಬಹುದು, ಕಥನ ಕವನ ಅದಕ್ಕಿಂತ ಹೆಚ್ಚಾಗಿ ಇರಲೂ ಬಹುದು.

*ಉದಾ:*
ಶಿಶುಗೀತೆ : ಬುಗುರಿ
ಬಣ್ಣದ ಬುಗುರಿ, ದುಂಡನೆ ಬುಗುರಿ
ನನ್ನಯ ನೆಚ್ಚಿನ ಆಟದ ಬುಗುರಿ
ದಾರವ ಸುತ್ತಿ ನೆಲಕ್ಕೆ ಬಡಿದರೆ
ಗಿರ ಗಿರ ತಿರುಗುವ ಉಂಡೆ ಬುಗುರಿ
ಬಣ್ಣ ಬಣ್ಣದ ಗೆರೆಗಳ ಎಳೆದು
ಚಂದ ಗಾಣಿಸೋ ನನ್ನಯ ಬುಗುರಿ
ಅಣ್ಣನ ಜೊತೆಯಲಿ ಪಂಥಕೆ ಇಳಿದರೆ
ನನ್ನನೆ ಗೆಲ್ಲಿಸೋ ಮುದ್ದಿನ ಬುಗುರಿ

ರಚನೆ:- ಸಿಂಧು ಭಾರ್ಗವ್ ಬೆಂಗಳೂರು

ಇಲ್ಲಿ ನೀವು ಗಮನಿಸುವಂತೆ:
➡ ಬುಗುರಿಯು ದುಂಡಗಾಗಿದೆ(ಆಕಾರ, size)
➡ ಗಿರಗಿರ ತಿರುಗುವುದು ( ಶಬ್ದ sound)
(( ಇಲ್ಲಿ ಜೋಡಿಪದಗಳ ಬಳಕೆ ಹೆಚ್ಚಾಗಿ ಬಳಸಬೇಕು.
ಅಂದರೆ ಗಿರ-ಗಿರ, ಪಟ-ಪಟ, ಗಬ-ಗಬ, ಝಣ-ಝಣ, ಟನ್-ಟನ್ ಇತ್ಯಾದಿ.))
➡ ಅನೇಕ ಬಣ್ಣಗಳಿಂದ ಕೂಡಿರುತ್ತದೆ.
➡ ದಾರವನ್ನು ಸುತ್ತಿ ಎಸೆಯುತ್ತಾರೆ

ಹೀಗೆ ಎಲ್ಲ ವಿಷಯವಸ್ತುವನ್ನು ಒಳಗೊಂಡ ಹಾಡು ಹಾಡಿದಾಗ ಆ ಮಗುವಿಗೆ ನೆನಪಿನಲ್ಲಿ ಉಳಿಯುವುದು. ಅಲ್ಲದೇ ಮುಂದೆ ಎಲ್ಲಿ ಬುಗುರಿಯನ್ನು ನೋಡಿದರು ಅದು ಗುರುತಿಸಲು ಶಕ್ತವಾಗುತ್ತದೆ. 🥰🥰
ಅಲ್ಲದೇ ಶಿಶುಗೀತೆಯ ಮೂಲಕ ಅಂಕೆಗಳನ್ನು, ಅಕ್ಷರಗಳನ್ನು, ಹಣ್ಣುಗಳ ಬಗೆ, ಆಕಾರಗಳನ್ನು ನಾವು ಕಲಿಸಿಕೊಡುತ್ತೇವೆ.
*ಹಾಗೆಯೇ ಮಗುವಿನ‌ ಮನಸ್ಸಿನಾಳಕ್ಕೆ ಇಳಿದು ಬರೆದರೆ ಮಾತ್ರ ಅದು ಶಿಶುಗೀತೆಯಾಗುತ್ತದೆ.*  ಹೆಚ್ಚಿನವರು ಜೀವನ ಸಂದೇಶವನ್ನು ಬರೆಯುತ್ತಾರೆ.ಅದು ಮಗುವಿಗೆ ಹೇಗೆ ಅರ್ಥವಾಗುತ್ತದೆ 😊 ಹೇಳಿ???
ಕೆಲವರು ಹನಿಗವನವನ್ನು ಬರೆಯುತ್ತಾರೆ. ಅದು ಶುದ್ಧತಪ್ಪು❌❌✍️ ಬೇಡವೇ ಬೇಡ. ಹಾಗೆ ಬರೆಯಬೇಡಿ.

*ಇನ್ನೊಂದು ವಿಷಯ:* ಮಕ್ಕಳ ಹಾಡು ಬೇರೆಯಾಗಿದೆ. ಅದಕ್ಕೆ ಶಿಶುಗೀತೆ ಎಂಬ ತಲೆಬರಹ ಕೊಡಬೇಡಿ. *ಕೆಲವು ವಾಟ್ಸ್ ಆಪ್,ಮುಖಪುಸ್ತಕದ ಗ್ರೂಪಿನಲ್ಲಿ ನೋಡಿದ್ದೇನೆ. ಮಕ್ಕಳ ಸಾಹಿತ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸ್ಪರ್ಧೆ ನಡೆಸುತ್ತಾರೆ. ೨೦-೨೪ ಸಾಲುಗಳಲ್ಲಿ ಶಿಶುಗೀತೆ ಬರೆಯಿರಿ ಎಂದು ಹೇಳುತ್ತಾರೆ* *ಅದು ತಪ್ಪು❌✍️*
*~ಶಿಶುಗೀತೆ~ ಅಲ್ಲ ❌.  ಮಕ್ಕಳ ಹಾಡು ಅಥವಾ ಮಕ್ಕಳ ಪದ್ಯ ಬರೆಯಿರಿ✔️ ಎಂದಾಗಬೇಕು.  ಪದ ಪ್ರಯೋಗದ ಕಡೆಗೆ ಗಮನ ಹರಿಸಬೇಕು.*
*ಮೂರು ನಾಲ್ಕು ವರ್ಷದ ಮಗುವಿಗೆ  ೨೦-೨೪ ಸಾಲುಗಳ ಪದ್ಯ. ಹೇಗೆ ಅರ್ಥವಾಗುತ್ತದೆ.*?? ಶಿಶು ಎಂದರೆ ಸಣ್ಣ ಮಗು ಎಂಬ ಅರ್ಥವಿರುವುದು ತಾನೆ. ಅಂಗನವಾಡಿ ( ಶಿಶುಕೇಂದ್ರ) ಹೌದಲ್ಲವೇ??
ದಯಮಾಡಿ ಬದಲಾಯಿಸಿಕೊಳ್ಳಿ. ಎಲ್ಲರೂ ಮಾಡುವ ತಪ್ಪನ್ನೇ ನೀವೂ ಮಾಡಬೇಡಿ.

- ಭಾಗ ೦೨ -
*ಕೆಲವರು ಶಿಶುಗೀತೆ ಎಂದಾಗ ಹನಿಗವನ ಬರೆಯುತ್ತೀರಿ.*
"ಆರರಿಂದ ಎಂಟು ಸಾಲುಗಳಲ್ಲಿ ಬರೆಯಿರಿ"....ಎಂದಾಗ
ಅದನ್ನು ಹನಿಗವನದ ತರಹವೇ ಎಂದು ಏಕೆ ಯೋಚಿಸುತ್ತೀರಿ?
ಅಲ್ಲದೇ ಹನಿಗವನ ಎಂದು ಹೇಗೆ ಪರಿಗಣಿಸುತ್ತೀರಿ?
ಮೊಂಡುವಾದ ಬೇರೆ ಮಾಡುವುದು..
*ಶಿಶುಗೀತೆ ಎಂದರೆ ಏನು?? :* ನರ್ಸರಿ ರೈಮ್ಸ್. ಅಂಗನವಾಡಿ ಮಕ್ಕಳಿಗೆ ಹೇಳಿಕೊಡುವ ಹಾಡು.‌ Nursery Rhymes. ಪುಟಾಣಿ ಮಕ್ಕಳಿಗೆ ಹೇಳಿಕೊಡುವ ಹಾಡು. ಅವರ ಮುಗ್ಧತೆ, ತುಂಟತನ ಹಾಡಿನಲ್ಲಿ ಮೇಳೈಸಬೇಕು. ಪದಗಳ ಬಳಕೆ ಕೂಡ ಅಷ್ಟೇ ಮುಗ್ಧವಾಗಿರಬೇಕು.‌ಒಂದು ಸಾಲನ್ನು ಪದೇ‌ಪದೇ ಹೇಳಿಸಿ ನೃತ್ಯ ಮಾಡಿಸುವಂತಿರಬೇಕು.*

*ಪ್ರಾರ್ಥಮಿಕ , ಪ್ರೌಢ , ಕಾಲೇಜು ಮಕ್ಕಳು ಎಂದು ಮೂರು ವಿಭಾಗವಿದೆ ತಾನೆ. ಅದರಲ್ಲಿ ಮಕ್ಕಳ‌ ಪದ್ಯವೇ ಬೇರೆ. ಅದು ಐದಾರು ಪಾರಾ ಇಲ್ಲ‌ ಜಾಸ್ತಿಯೂ ಇರಬಹುದು. ಅದರಲ್ಲಿ ಆಯಾಯ ಮಕ್ಕಳ ವಯೋಮಿತಿಗೆ ಹೊಂದಿ ಕಥನ ಕವನವನ್ನು ಬರೆಯಬಹುದು. ಐತಿಹಾಸಿಕ, ಪುರಾಣದ ಕಥೆಯನ್ನು ಅಥವಾ ನೀತಿಕಥೆಯನ್ನು ಲಯಬದ್ಧವಾಗಿ ಕವನ ರೂಪದಲ್ಲಿ ಬರೆಯುವುದೇ ಕಥನ ಕವನವಾಗಿರುತ್ತದೆ.*
ಗಮನಿಸಿ. ‌ಬರೆಯಲು ಅಭ್ಯಾಸ ಮಾಡಿರಿ.
ಶುಭವಾಗಲಿ💐

ಕೆಲವು ಉದಾಹರಣೆಗಾಗಿ ಶಿಶುಗೀತೆ ಹಾಗು ಮಕ್ಕಳ‌ ಪದ್ಯಗಳು.

)೧(

ಶಿಶುಗೀತೆ : ಅಂಕೆಗಳು

ಒಂದು ಎರಡು
ಬೇಸಿಗೆ ಬರಡು

ಮೂರು ನಾಲ್ಕು
ಮಳೆ ಬರಬೇಕು

ಐದು ಆರು
ಒಣಗಿದೆ ಬೇರು

ಏಳು ಎಂಟು
ರುಚಿಸದ ದಂಟು

ಒಂಭತ್ತು ಹತ್ತು
ಊಟಕೆ ಒಪ್ಪೊತ್ತು

ಒಂದರಿಂದ ಹತ್ತು ಹೀಗಿತ್ತು.
ಬೇಸಿಗೆ ಬಿಸಿಲು‌ ಜೋರಿತ್ತು.

- ಸಿಂಧು ಭಾರ್ಗವ್ ಬೆಂಗಳೂರು
✍️📚📚✍️🧸📚✍️📚🧸🧸📚✍️

೨)
ಶಿಶುಗೀತೆ : ಬುಗುರಿ

ಬಣ್ಣದ ಬುಗುರಿ, ದುಂಡನೆ ಬುಗುರಿ
ನನ್ನಯ ನೆಚ್ಚಿನ ಆಟದ ಬುಗುರಿ
ದಾರವ ಸುತ್ತಿ ನೆಲಕ್ಕೆ ಬಡಿದರೆ
ಗಿರಕಿ ಹೊಡೆಯುವ ಉಂಡೆ ಬುಗುರಿ
ಬಣ್ಣ ಬಣ್ಣದ ಗೆರೆಗಳ ಎಳೆದು
ಚಂದ ಗಾಣಿಸೋ ನನ್ನಯ ಬುಗುರಿ
ಅಣ್ಣನ ಜೊತೆಯಲಿ ಪಂಥಗೆ ಇಳಿದರೆ
ನನ್ನನೆ ಗೆಲ್ಲಿಸೋ ಮುದ್ದಿನ ಬುಗುರಿ

ರಚನೆ:- ಸಿಂಧು ಭಾರ್ಗವ್ |ಬೆಂಗಳೂರು


೩)

ಶಿಶುವಿಗೆ ಲಾಲಿಹಾಡು : ಮುದ್ದು ಮಗುವೆ

ಮಲಗು ಮಲಗೆನ್ನ ಮುದ್ದು ಮಗುವೇ
ಚಂದಿರನ ತಂದು ನಿನ್ನ ಜೋಕಾಲಿಯಲ್ಲಿಡುವೆ
ಚುಕ್ಕಿಗಳ ಪೋಣಿಸಿ ಸುತ್ತ ನಿಲ್ಲಿಸುವೆ
ಜೋಗುಳವ ಹಾಡಲು ಕೋಗಿಲೆಯ ಕೋರುವೆ//ಮಲಗು//

ಕನಸಿನ ಊರಿಗೆ ಕಥೆಯೊಂದಿಗೆ ಕರೆದೊಯ್ವೆ
ಬೆಚ್ಚಗಿನ ಪ್ರೀತಿಯ ಹೊದಿಕೆ ಹೊದೆಸುವೆ
ನಿದಿರೆಯಲು ನಿನ್ನ ನಗುಮೊಗವ ನೋಡುವೆ//ಮಲಗು//

ರಚನೆ:- ಸಿಂಧು ಭಾರ್ಗವ್ ಬೆಂಗಳೂರು

೪)

ಶಿಶುಗೀತೆ ಶೀರ್ಷಿಕೆ : ಚಂದಮಾಮ
🤰🤱🤰🤱🤰🤱🤰🤱
ಚಂದಮಾಮ ಓಡಿ ಬಾ
ಗುಂಡುಮಾಮ ಓಡಿ ಬಾ
ನನ್ನ ಜೊತೆಗೆ ಆಡಲು ಬಾ
ನನ್ನ ಜೊತೆಗೆ ನಲಿಯಲು ಬಾ
ಮಿಠಾಯಿ ಕೊಡುವೆ ನಾ ನಿನಗೆ
ಗೊಂಬೆಯ ಕೊಡುವೆ ನಾ ನಿನಗೆ
ಬೆಣ್ಣೆಯಂತೆ ಹೊಳೆಯುವೆ ನೀ
ಹಣ್ಣೆನಂತೆ ಕಾಣುವೆ ನೀ// ಚಂದಮಾಮ‌//

ರಚನೆ:- ಸಿಂಧು ಭಾರ್ಗವ್ ಬೆಂಗಳೂರು


೫))
ಶಿಶುವಿಗೆ ಲಾಲಿಹಾಡು : ಜೋಗುಳ

ಮಲಗು ಮಗುವೆ ನನ್ನ ಮುದ್ದು ಮಗುವೇ
ಜೋಗುಳವ ಹಾಡುತ ನಾ ನಿನ್ನ ತೂಗುವೆ
ಜೋ ..ಜೋ.. ಜೋ...
ಕನಸಿನ‌ ಲೋಕಕೆ  ನೀ ಕರೆತರುವೆ
ನಾ ನಿನ್ನ ಜೊತೆಗೂಡಿ ನಲಿಯಲು ಬರುವೆ
ಜೋ ..ಜೋ ..ಜೋ...
ಗುಮ್ಮನು ಬಂದ ಎಂದು ನೀ ಹಟ ಹಿಡಿಯುವೆ
ಬಿಗಿದಪ್ಪಿ ಸಂತೈಸಿ ನಾ ನಿನ್ನ ಜೊತೆಗಿರುವೆ
ಜೋ ..ಜೋ ..ಜೋ...

ರಚನೆ:- ಸಿಂಧು ಭಾರ್ಗವ್ ಬೆಂಗಳೂರು


೬))
 ಶಿಶುಗೀತೆ: ಪುಟ್ಟ ಪಾಪು

ನಮ್ಮ ಮನೆಯ ಪುಟ್ಟ ಪಾಪು
ಆಟಪಾಠದಲ್ಲಿ ಅವನೆ ಮೊದಲು
ಅಣ್ಣನ ಜೊತೆ ಜಗಳ ಮಾಡುವ
ಅಪ್ಪನ ಕೈಲಿ‌ ಒದೆಯ ತಿನ್ನುವ
ಅವನ ಮಾತು ಅರಳಿನಂತೆ
ನಗುವು ಬಿರಿದ ಸುಮಗಳಂತೆ
ನೋವ ಮರೆಸಲೆಂದು ಬಂದ
ನಮ್ಮ‌ ಬಾಳಿಗೆ ಬೆಳಕ ತಂದ

ರಚನೆ:- ಸಿಂಧು ಭಾರ್ಗವ್ ಬೆಂಗಳೂರು

೭))

ಶಿಶುಗೀತೆ: ಆನೆ ಮತ್ತು ಪುಟ್ಟ

ಆನೆ ಬೆನ್ನ ಏರಿ ಪುಟ್ಟ ಊರು ಸುತ್ತುವ
ಕಾಡು ದಾರಿಯಲ್ಲಿ‌ ಹೋಗಿ ಜೇನ‌ ಕೀಳುವ
ಆನೆ ಬೆನ್ನ ಏರಿ ಪುಟ್ಟ ಜಾತ್ರೆ ಸುತ್ತುವ
ಬಣ್ಣ ಬಣ್ಣದ ಮಿಠಾಯಿಯನ್ನು ಕೊಂಡು ತಿನ್ನುವ
ಕಬ್ಬು ತಿನ್ನೋ ಆಸೆಯಾಗಿ ಆನೆ ಹೊಲಕೆ ಓಡಿತು
ತುಂಟತನ ಮಾಡಿ ಆನೆ ಸಿಕ್ಕಿ ಬಿದ್ದಿತು
"ಕಳ್ಳ" ಎಂದು ಊರ ಜನರ ಹೊಡೆತ ತಿಂದಿತು
ನೋವು ತಾಳಲಾಗದೇ ಆನೆ ನೆಲಕೆ ಬಿದ್ದಿತು

ರಚನೆ:- ಸಿಂಧು ಭಾರ್ಗವ್ ಬೆಂಗಳೂರು


೮))

ಮಕ್ಕಳ ಸಾಹಿತ್ಯ ಮಕ್ಕಳ ಪದ್ಯ : ಅಣ್ಣ ಬಾರಣ್ಣ

ಅಣ್ಣ ಅಣ್ಣ ನನ್ನ ಜೊತೆಗೆ ಆಡಲು ಬಾರಣ್ಣ
ಬ್ಯಾಟು ಬಾಲು ತಂದು ಇಡುವೆನು ಬೇಗ ಬಾರಣ್ಣ
ಸ್ಕೂಲ್ ಗೆ ಹೋಗುವೆ ನನ್ನನು ಬಿಟ್ಟು ಏಕೆ ಹೇಳಣ್ಣ
ತಿರುಗಿ ಬರುವ ತನಕ ಕಾಯುವೆ ನಿನ್ನೀ ಹಾದಿಯನ್ನ
ಅಣ್ಣ ಅಣ್ಣ ನನ್ನ ಜೊತೆಗೆ ಅಂಗಡಿಗೆ ಬಾರಣ್ಣ
ಮಿಠಾಯಿ ಕೊಡಿಸು ಆಟಿಕೆ ಕೊಡಿಸು ಎಂದು ಕೇಳೆನಣ್ಣ.
ನಿನ್ನ ಕೈಹಿಡಿದೇ ಸಾಗುವೆ ಪೂರ ಬೀದಿಯನ್ನ
ಅಣ್ಣ ಅಣ್ಣ ನನ್ನ ಜೊತೆಗೆ ಊಟಕೆ ಬಾರಣ್ಣ
ನಾನೊಂದು ತುತ್ತು ನೀನೊಂದು  ತುತ್ತು ಊಟವ ಮಾಡೋಣ‌
ಅಣ್ಣ ಬೇಗ ಬಾರಣ್ಣ, ತಟ್ಟೆ ಹಾಕಿ ಕಾಯುತಿರುವೆ ನಾ

ರಚನೆ: ಸಿಂಧು ಭಾರ್ಗವ್ ಬೆಂಗಳೂರು


೯))
ಮಕ್ಕಳ‌ ಪದ್ಯ : ಆನೆಮರಿ

ಆನೆಮರಿ ಆನೆಮರಿ
ಊರಿಗೊಂದು ಆನೆಮರಿ
ಆನೆಮರಿ ಆನೆಮರಿ
ನಮ್ಮ ಪ್ರೀತಿಯ ಆನೆಮರಿ

ಆನೆಮರಿ ಆನೆಮರಿ
ಕಬ್ಬು ಮುರಿದು ತಿನ್ನೊ ಮರಿ
ಆನೆಮರಿ ಆನೆಮರಿ
ಕೆರೆಯಲ್ಲಿ ಆಡುವ ಪೋಕರಿ

ಆನೆಮರಿ ಆನೆಮರಿ
ದೇವಸ್ಥಾನಕೆ ಹೋಗುವ ಮರಿ
ಆನೆಮರಿ ಆನೆಮರಿ
ದೇವರ ಘಂಟೆ ಬಾರಿಸೋ ಮರಿ

ಆನೆಮರಿ ಆನೆಮರಿ
ಡೊಳ್ಳ ಹೊಟ್ಟೆಯ ಆನೆಮರಿ
ಆನೆಮರಿ ಆನೆಮರಿ
ತುಂಟತನದ ಆನೆಮರಿ

ಆನೆಮರಿ ಆನೆಮರಿ
ತಲೆಯನಾಡಿಸುವ ಮರಿ
ಆನೆಮರಿ ಆನೆಮರಿ
ಹಾಡಿಗೆ ಕುಣಿಯೋ ಮುದ್ದುಮರಿ

ಆನೆಮರಿ ಆನೆಮರಿ
ಅದರ‌ ಮೇಲೆರಿ ನನ್ನ ಸವಾರಿ
ಆನೆಮರಿ ಆನೆಮರಿ
ಊರೆಲ್ಲ ತಿರುಗಿಸೋ ಜಾಣಮರಿ

ರಚನೆ: ಸಿಂಧು ಭಾರ್ಗವ್ ಬೆಂಗಳೂರು

೧೦))

ಮಕ್ಕಳ ಪದ್ಯ : ಮತ್ತೆ ಶಾಲೆ ಶುರುವಾಯಿತು

ದಸರ ಮುಗಿಯಿತು
 ಶಾಲೆ ಶುರುವಾಯಿತು
ಪುಟ್ಟಿಗೆ ಮಾತ್ರ ಮನಸಿಲ್ಲ
ರಜೆಯ ಗುಂಗು ಹೋಗಿಲ್ಲ

ಪಾಠೀಚೀಲ ಎಲ್ಲಿದೆಯಮ್ಮ
ಪುಸ್ತಕಗಳು ಕಾಣದಮ್ಮ
ಪೆನ್ಸಿಲ್ ರಬ್ಬರ್ ಬೇಕು ಅಮ್ಮ
ಅಂಗಡಿಗೆ ಹೋಗಿ ತರಬೇಕಮ್ಮ!!

ಅಜ್ಜಿ ಮನೆಯು ಮಜವಾಗಿತ್ತು
ಅಣ್ಣ ತಮ್ಮದಿರ ಜೊತೆ ಆಟವು ಇತ್ತು
ಸವಿಯಲು ಬಗೆಬಗೆ ಹಣ್ಣುಗಳಿತ್ತು
ಅಜ್ಜಿಯ ಕೈರುಚಿ ಸೊಗಸಾಗಿತ್ತು!!

ಬರೆಯಲು ತುಂಬಾ ಕೊಟ್ಟಿಹರಮ್ಮ
ಇನ್ನೂ ಬರೆದು ಮುಗಿದಿಲ್ಲಮ್ಮ
ಮಿಸ್ಸು ಬೈದರೆ ಏನು ಮಾಡಲಿ?
ತಲೆಕೆಳ ಮಾಡಿ ನಾನು ನಿಲ್ಲಲೇ!?

ಎಷ್ಟು ಸಲಿ ಹೇಳಿದೆ ಪುಟ್ಟಿ
ಪಾಠವು ಮೊದಲು ಮುಗಿಸಬೇಕು
ಆಟವ ನಂತರ ಆಡಬೇಕು
ಸಮಯವ ಹಾಳುಮಾಡದಿರೆಂದು
ರಜೆಯ ಮೋಜಲಿ ಮುಳುಗದಿರೆಂದು!!

ಸಿಟಿಯಲಿ ಸಂಭ್ರಮ ಏನಿದೆಯಮ್ಮ
ಅಜ್ಜಿಯ ಮನೆಯೇ ಸ್ವರ್ಗವಮ್ಮ
ಪಾಠಿಚೀಲವ ಧರಿಸಿ ನಾನು
ಶಾಲೆಯ ಕಡೆಗೆ ನಡೆಯುವೆನಮ್ಮ!!

ರಚನೆ : ಸಿಂಧು ಭಾರ್ಗವ್. ಬೆಂಗಳೂರು

೧೨))
ಮಕ್ಕಳ ಸಾಹಿತ್ಯ ಮಕ್ಕಳ‌ಪದ್ಯ :  ಗುಬ್ಬಿಯಕ್ಕ

ಗುಬ್ಬಿಯಕ್ಕ ಗುಬ್ಜಿಯಕ್ಕ ನಾನು ಬರಲೇ
ನಿನ್ನ ಪುಟ್ಟ ಗೂಡಿನಲ್ಲಿ ನಾನು ಇರಲೇ

ನಿನ್ನ ಪುಟ್ಟ ಹೊಟ್ಟೆ ನೋಡಿ ಅಚ್ಚರಿಯಾಗಿದೆ
ಅನ್ನ ಸಾರು ಮಾಡಿ ಕೊಡಲೇ ಎಂದು ಕೇಳಿದೆ
ಬೇಡ ಪುಟ್ಟ
ಹುಳು ಹುಪ್ಪಟೆ ಹೆಕ್ಕಿ ತರುವೆ
ಗುಟುಕನಿಕ್ಕಿ ಮರಿಗಳ ಹಸಿವ ನೀಗಿಸುವೆ

ನಿನ್ನ ಪುಟ್ಟ ಗೂಡು ನೋಡಿ ಅಚ್ಚರಿಯಾಗಿದೆ
ಮನೆಗೆ ಬಾ ನಿನಗೆ ಒಂದು ಕೋಣೆಯ ಕೊಡುವೆ
ಬೇಡ ಪುಟ್ಟ
ಕಸಕಡ್ಡಿ  ಹೆಕ್ಕಿ ತರುವೆ
ಒಪ್ಪವಾಗಿ ಜೋಡಿಸಿ ಪುಟ್ಟ ಗೂಡು ಕಟ್ಟುವೆ

ಗುಬ್ಬಿ ಗುಬ್ಬಿ ಚಿವ್ ಚಿವ್ ಗುಬ್ಬಿ ಆಡಲು ಬಾರೇ
ಗುಬ್ಬಿ ಗುಬ್ಬಿ ಚಿವ್ ಚಿವ್ ಗುಬ್ಬಿ ನಲಿಯುವ ಬಾರೇ
ಬೇಡ ಪುಟ್ಟ
ಭಯವು ಎನಗೆ ಕುಳಿತಿರುವೆ ಮರದಲೇ
ನಿಮ್ಮ ಮನೆಯ ಬೆಕ್ಕಿನಿಂದ ನನ್ನ ಮರಿಗಳ ಕಾಯುವೆ

ರಚನೆ : ಸಿಂಧು ಭಾರ್ಗವ್ .ಬೆಂಗಳೂರು-೨೧

೧೩))
ಮಕ್ಕಳ ಪದ್ಯ : - ಮಳೆ

ಬಾ ಬಾ ಮಳೆಯೇ
ಹನಿಹನಿ ಮಳೆಯೇ
ನೆನೆಯುತ ಕುಣಿಯುವೆ ನಿನ್ನೊಡನೆ
ಥೈ ಥೈ ಎನುತ
ಗೆಜ್ಜೆಯ ಕುಣಿಸುತ
ಹಾಡನು‌ ಹಾಡುವೆ ನಿನ್ನೊಡನೆ

ಕರಿ ಕರಿ ಮೋಡವು ಕರಗಿ ಬೀಳುತ
ಬಾಳೆ ಎಲೆಯನು ತೋಯಿಸಿದೆ
ಗುಡುಗುಡು ಸದ್ದನು ಮಾಡುತ ಗುಡುಗು
ಮನದಲಿ ಭಯವನು ಹುಟ್ಟಿಸಿದೆ

ನಾಯಿ ಮರಿಯು ಗಡ ಗಡ ನಡುಗುತ
ಗೋಣಿಯ ಮೇಲೆ ಮಲಗಿ ಇದೆ
ಬೆಕ್ಕು ತನ್ನ ಮರಿಗಳ ಜೊತೆಗೆ
ಒಲೆ ದಂಡೆಯನು ಹುಡುಕುತಿದೆ

ಹಕ್ಕಿಗಳೆಲ್ಲ ತಂಡಿಗಟ್ಟಿ
ಗೂಡನು ಸೇರಲು ಹಾರುತಿವೆ
ನೆರೆಯು ಬಂದ ನೆಪವನು ಒಡ್ಡಿ
ಶಾಲೆಗೆ ರಜೆಯು ಘೋಷಿಸಿದೆ

ಕೊಡೆಯನು ಹಿಡಿದು ಅಂಗಳದಲ್ಲಿ
ಗೆಳೆಯರ ಜೊತೆಗೆ ನಾ ನಲಿವೆ
ಬಿಸಿ ಬಿಸಿ ಬಜ್ಜಿ ಬೋಂಡವ ಮಾಡಿ
ಅಮ್ಮನು ಒಳಗೆ ಕರೆದಿಹಳೇ..

ರಚನೆ :- ಸಿಂಧು ಭಾರ್ಗವ್. ಬೆಂಗಳೂರು-೨೧

೧೪))
ಶಿಶುಗೀತೆ : ನಮ್ಮ ಮನೆ

ನಮ್ಮ‌ ಮನೆ ಇದು ನಮ್ಮ ಮನೆ
ಅಪ್ಪ ಅಮ್ಮನ ಕನಸಿನ ಮನೆ
ಅಕ್ಕ ಅಣ್ಣನು ಆಡಿದ ಮನೆ
ಜಾರಿ ಬಿದ್ದು ನಾನತ್ತ ಮನೆ // ನಮ್ಮ ಮನೆ//

ರಾಖಿ ನಾಯಿ‌ ಕಾಯುವ ಮನೆ
ಡಿಂಕು ಬೆಕ್ಕು ತಿರುಗಾಡುವ ಮನೆ
ಹಸಿರು ಹೊದ್ದಿರೋ ತೋಟದ ಮನೆ
ಚಳಿಗಾಲಕೆ ಬೆಚ್ಚಗೆ ಇರಿಸುವ ಮನೆ  //ನಮ್ಮ‌ ಮನೆ//

ಸಿಂಧು ಭಾರ್ಗವ್ ಬೆಂಗಳೂರು-೨೧


೧೫))
ಕಥನ ಕವನ : ಅರಸನ ಅನುಭವ

ಅರಸನು‌ ಪ್ರಜೆಗಳ ನೋಡುವ ತವಕದಿ
ಕುದುರೆಯನೇರಿ ಹೊರಟಿಹನು
ಸುತ್ತಲು ಹಸಿರಿನ ವನಗಳ ನಡುವೆ
ಅರಸನು ಹರುಷದಿ ಸಾಗಿದನು

ಕಾವಲಿಗಾಗಿ ಭಟರು ಕುದುರೆಯನೇರಿ
ಅರಸನ ಸುತ್ತುವರೆದಿಹರು
ಸವಿನುಡಿಯಿಂದ ನಗುಮುಖದಿಂದ
ಅರಸನು ಊರೊಳ ಸಾಗಿದನು

ಬಿಸಿಲಿನ ಕಾವು ಹೆಚ್ಚಿದ ಕೂಡಲೆ
ಅರಸಗೆ ತಲೆಯು ತಿರುಗೋಯ್ತು
ಮಟ-ಮಟ ಸೂರ್ಯನ ಶಾಖಕೆ
ಉದರದಿ ಹಸಿವು ಹೆಚ್ಚಾಯ್ತು

ಗುಡಿಸಲಿನಜ್ಜಿ ಬಿಸಿ-ಬಿಸಿ ಗಂಜಿಯ
ಅರಸನಿಗೆಂದು ನೀಡಿದಳು
ಗಬ-ಗಬ ತಿಂದು ನೀರನು ಕುಡಿದು
ಅರಸನು  ಹರುಷದಿ‌ ತೇಗಿದನು

ಅಜ್ಜಿಗೆ ವಂದನೆ ತಿಳಿಸುತ ಅರಸನು
ಹಾದಿಯ ಮುಂದಕೆ ಸಾಗಿದನು
ಆ ಊರಿಂದ ಈ ಊರಿಗೆಂದು
ನಡುವಲಿ ಹೊಳೆಯು ಒಂದಿತ್ತು

ಅರಸಗೆ ಕುದುರೆಯನೇರಿ ಹೊಳೆಯನು
ದಾಟಲು ಕಠಿಣವಾಗಿತ್ತು
ಭಟರನು‌ ಕೂಗಿ ಕರೆದು ದೋಣಿಯ ತರಲು
ಆಜ್ಞೆಯ ಮಾಡಿದನು

ದೋಣಿಯನೇರಿ ಅರಸನು ಸುಖದಿ
ದಡವಾ ಸೇರಿದನು
ನೀರಿನ ನಡುವಲಿ ಸಾಗುವ ಅನುಭವ
ಅರಸಗೆ ಖುಷಿಯ ನೀಡಿತ್ತು

ಕೇರಿಯ ಅಲೆದ ಅರಸನ ಕುದುರೆ
ಅರಮನೆ ಕಡೆಗೆ ಸಾಗಿತ್ತು
ಹೊಸ ಹೊಸ ಅನುಭವ ಗಳಿಸಿದ ಅರಸನು
ರಾಣಿಯ ಬಳಿಯಲಿ ಹೇಳಿದನು

ಬಡತನದಲ್ಲಿ ಪ್ರೀತಿ ಭರವಸೆ
ಹೊನ್ಹೊಳೆಯಾಗಿ ಹರಿಯುವುದು
ಹಸಿವಿಗೆ ಅನ್ನ ಮಲಗಲು ಭೂಮಿಯೇ
ಬಡವರ ಆಸ್ತಿಯು ಆಗಿಹುವು

ಸಿರಿತನ ಮರೆತು ಪ್ರಜೆಗಳ ಜೊತೆಯಲಿ
ಬೆರೆತಾಗಲೇ ಸಗ್ಗವಿದೆ
ನಗ ನಾಣ್ಯಗಳ ಮೂಟೆಗಿಂತ
ಹಿಡಿ ಅನ್ನದಲೇ ಬಾಳು ಇದೆ

ರಚನೆ : ಸಿಂಧು ಭಾರ್ಗವ್ | ಬೆಂಗಳೂರು

ಹೃತ್ಪೂರ್ವಕ ವಂದನೆಗಳು💐
ಸಿಂಧು ಭಾರ್ಗವ್ | ಬೆಂಗಳೂರು
ಮಕ್ಕಳ ಸಾಹಿತಿ,  ಲೇಖಕಿ, ಸಂಪಾದಕರು, ಕವಯಿತ್ರಿ, ಚಿಂತಕರು.
೨೦ ಸಂಪಾದಕತ್ವ ಕೃತಿಗಳಲ್ಲಿ ತಮ್ಮ ಬರಹಗಳು ಪ್ರಕಟವಾಗಿವೆ.
ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು
ಕಾವ್ಯಸಿರಿ ಪ್ರಶಸ್ತಿ
ಅಭಿರುಚಿ ಸಾಧನಾ ಶ್ರೀ ಪ್ರಶಸ್ತಿ
ಭೂಮಿ ಕಾವ್ಯ ಪುರಸ್ಕಾರ ಪಡೆದವರು
ನವಪರ್ವ ನಕ್ಷತ್ರ ಪ್ರಶಸ್ತಿ
ಉಪಾಧ್ಯಕ್ಷರು
ನವಪರ್ವ ಫೌಂಡೇಶನ್ (ರಿ.) ಬೆಂಗಳೂರು

No comments:

Post a Comment