ಮಕ್ಕಳ ಕಥೆ: ೯ ಸೊಕ್ಕಿನ ಕೋಕಿಲಾ
ಮಾವಿನ ಮರದಲಿ ಜೋಡಿ ಗಿಳಿಗಳು ಗೂಡು ಕಟ್ಟಿಕೊಂಡು ಜೀವನ ನಡೆಸುತ್ತಿದ್ದವು. ಆಗ ವಸಂತ ಮಾಸ. ಮಾವಿನ ಎಲೆ ಚಿಗುರುವ ಸಮಯ. ಅದರ ಸವಿಯ ಸವಿಯುತ ಕೋಗಿಲೆ ಹಾಡು ಹೇಳುತ್ತಿತ್ತು. ಅಳಿಲುಗಳು ರೆಂಬೆಯಿಂದ ರೆಂಬೆಗೆ ಓಡಾಡುತ್ತ ಕುಣಿಯುತ್ತಿದ್ದವು. ಮರಕುಟಿಕವು ಮರವನ್ನು ಕುಟುಕುತ್ತ ಹುಳುಗಳ ಹುಡುಕುತ್ತಿತ್ತು. ಆಗ ಕೋಗಿಲೆಯು "ಎಲೈ ಮರಕುಟಿಕವೇ... ಸಾಕು ಮಾಡು ನಿನ್ನ ಕಿರಿಕಿರಿ. ನನ್ನ ಸುಮಧುರ ಹಾಡಿಗೆ ತಡೆಯಾಗಬೇಡ..." ಎಂದಿತು. ಆಗ ಮರಕುಟಿಕವು ಕೋಗಿಲೆಗೆ ಗೊಣಗುತ್ತಾ ಹಾರಿಹೋಯಿತು. ಕೆಂಪಿರುವೆಗಳು ಸಾಲುಸಾಲಾಗಿ ಓಡಾಡುತ್ತ ತಮ್ಮ ಕೆಲಸದಲ್ಲಿ ತನ್ಮಯವಾಗಿದ್ದವು. ಅಲ್ಲೇ ಪಕ್ಕದಲ್ಲಿ ಝುಳುಝುಳು ಹರಿಯುವ ಸಣ್ಣನದಿಯು ಸಂಗೀತ ಹೊರಡಿಸುತ್ತಿತ್ತು. ಅದರ ಜೊತೆಗೆ ಜೋಡಿಗಿಳಿಗಳು ಕುಳಿತು ಏನೋ ಮಾತನಾಡುತ್ತಿದ್ದವು. ಕೋಗಿಲೆಗೆ ಹಾಡಲು ಮತ್ತೆ ತಡೆಯಾಯಿತು. ಆಗ ಕೋಗಿಲೆಯು "ಹೋಯ್ ಜೋಡಿ ಗಿಳಿಗಳೇ.. ನಿಮ್ಮ ಮಾತುಗಳನ್ನು ಬೇರೇಡೆ ಇಟ್ಟುಕೊಳ್ಳಿ.. ನನಗೆ ಮನಬಿಚ್ಚಿ ಹಾಡಬೇಕಿದೆ" ಎಂದಿತು. ಆಗ ಗಿಳಿಗಳು ಇದರ ಮಾತು ಕೇಳಿ "ಗೊಳ್..!!" ಎಂದು ನಕ್ಕವು. ಕೋಗಿಲೆಗೆ ಅವಮಾನವಾಯಿತು. ಸಹ್ಯ ಎನಿಸದೇ ಸಿಟ್ಟಿನಿಂದ ಬೇರೆಡೆಗೆ ಹಾರಿ ಹೋಯಿತು.
ಮರುದಿನ ಮತ್ತೆ ಅದೇ ಮರಕ್ಕೆ ಚಿಗುರೆಲೆಯ ತಿನ್ನಲು ಅದೇ ಕೋಗಿಲೆಯು ಆಗಮನವಾಯಿತು. ಆದರೆ ಮರವೆಲ್ಲ ಖಾಲಿ ಖಾಲಿ. ಆಗ ಗಿಳಿಗಳು ಇರಲಿಲ್ಲ ಬೇರೆ ಪಕ್ಷಿಗಳೂ ಇರಲಿಲ್ಲ. ಕೋಗಿಲೆಗೂ ಖುಷಿಯೋ ಖುಷಿ. ಹೊಟ್ಟೆ ತುಂಬಾ ಎಲೆಗಳ ತಿಂದು ಹಾಡಲು ಪ್ರಾರಂಭಿಸಿತು. ಕುಹೂ...ಕುಹೂ.. ದನಿಯು ಮುಗಿಲೆತ್ತರಕ್ಕೆ ತಾಗಿತು. ಆದರೆ, ಅದರ ದನಿಯು ಮರದ ಬುಡದಲ್ಲಿ ಮನೆ ಮಾಡಿಕೊಂಡಿದ್ದ ಸರ್ಪಕ್ಕೆ ಕರ್ಕಶವಾಗಿ ಕೇಳಿಸಿತು. ಬಹಳ ಕೋಪಬಂತು. ತನ್ನ ನಿದಿರೆಗೆ ಭಂಗ ತರುವ ಕೋಗಿಲೆಯ ಹಿಡಿದು ಸಾಯಿಸಬೇಕೆಂದು ಸರಸರನೆ ಮರವೇರಿತು. ಇದನ್ನು ಗಮನಿಸದ ಕೋಗಿಲೆಯು ತನ್ನ ಪಾಡಿಗೆ ಹಾಡುತ್ತಲೇ ಇತ್ತು. ಇನ್ನೇನು ಸನಿಹ ಬರಬೇಕು ಎನ್ನುವಷ್ಟರಲ್ಲಿ ಜೋಡಿ ಗಿಳಿಗಳು ಅದೇ ಕೊಂಬೆಯ ಮೇಲೆ ಬಂದು ಕುಳಿತವು. ಗಿಜಿಗಿಜಿ ಎಂದು ಸದ್ದು ಮಾಡತೊಡಗಿದವು. ಆಗ ಹಾವಿಗೆ ಭಯವಾಯಿತು. ಏನೂ ಮಾಡಲು ಸಾಧ್ಯವಿಲ್ಲ ಎಂದೆನಿಸಿ ಹಾವು ವಾಪಾಸ್ಸಾಯಿತು. ಇದನ್ನು ಗಮನಿಸಿದ ಕೋಗಿಲೆಗೆ ಹಾವನ್ನು ನೋಡಿ ಎದೆ ದಸಕ್ ಎಂದಿತು. ಅಲ್ಲದೇ ತನ್ನ ತಪ್ಪಿನ ಅರಿವಾಯಿತು. ತನ್ನ ಜೀವವನ್ನು ಉಳಿಸಿದ ಗಿಳಿಗಳಿಗೆ ನಮಸ್ಕರಿಸಿ ಅಲ್ಲಿಂದ ಹಾರಿಹೋಯಿತು.
ನೀತಿ: ನೋಡಿದಿರಾ ಮಕ್ಕಳೇ. ನಮಗೆ ಎಲ್ಲ ಗೊತ್ತಿದೆ ,ನಾನೇ ಶ್ರೇಷ್ಠ ಎಂದು ಜಂಬ ಪಡಬಾರದು.ಅಹಂಕಾರ ಒಳ್ಳೆಯದಲ್ಲ.
.
.
ಕಥೆಗಾರ್ತಿ : ಸಿಂಧು ಭಾರ್ಗವ್. ಬೆಂಗಳೂರು ೨೧
No comments:
Post a Comment