ಮಕ್ಕಳ ಕಥೆ ೧೩: ಜಂಭದ ಡಿಂಕು ಮೊಲ
ಒಮ್ಮೆ ಬಂಟಿ ಆಮೆ ನಿಧಾನವಾಗಿ ಹಾದಿಯಲ್ಲಿ ಹೋಗುತ್ತಿದ್ದಾಗ ಅದಕ್ಕೆ ಡಿಂಕು ಮೊಲವೊಂದು ಮಾರ್ಗಮಧ್ಯದಲ್ಲಿ ಭೇಟಿಯಾಯಿತು. ಮೊಲಕ್ಕೆ ತಾನು ಅತೀವೇಗವಾಗಿ ಓಡುವೆನೆಂದು ಜಂಭವಿರುವ ಕಾರಣ ಬೇಕಂತಲೇ ಆಮೆಯ ಹತ್ತಿರ ಒಂದು ಪಂದ್ಯ ಏರ್ಪಡಿಸಿ "ನಮ್ಮಿಬ್ಬರಲ್ಲಿ ಯಾರು ವೇಗವಾಗಿ ನಡೆಯುವುದು ನೋಡುವ" ಎಂದು ಕೇಳಿತು. ಆಮೆಗೆ ಮೊದಲೆ ಗೊತ್ತಿರುವ ಕಾರಣ, "ಇದೆಲ್ಲ ಬೇಡ. ನೀನೇ ವೇಗವಾಗಿ ಓಡುವುದು ಎಂದು ಈ ಕಾಡಿನ ಎಲ್ಲ ಸ್ನೇಹಿತರಿಗೂ ಗೊತ್ತಿದೆ. ಹಾಗಾಗಿ ನೀನೇ ಗೆಲ್ಲುವುದು, ಮತ್ತೆ ಸ್ಪರ್ಧೆ ಏಕೆ.." ಎಂದು ಹೇಳಿತು.
ಅದೆಲ್ಲ ಹಳೆಯ ಕತೆ. ಈಗ ಇನ್ನೊಮ್ಮೆ ಸ್ಪರ್ಧೆ ನಡೆಸುವ. "ಯಾರು ವೇಗವಾಗಿ ನಡೆಯಿತ್ತಾರೆ" ಎಂದು ಒತ್ತಾಯಿಸಿತು. ಆಗ ಬಂಟಿ ಆಮೆಯು "ಸರಿ ಹಾಗಾದರೆ, ಮಂಗಣ್ಣನನ್ನು ಕರೆ. ಅವನೇ ಹೇಳಲಿ ಯಾರು ವೇಗವಾಗಿ ನಡೆಯುತ್ತಾರೆ ಎಂದು. ಅಲ್ಲದೇ ಉಳಿದ ಎಲ್ಲ ಸ್ನೇಹಿತರನ್ನು ವೀಕ್ಷಕರಾಗಿ ಬರಲು ಹೇಳು, ನಾವಿಬ್ಬರೇ ಭಾಗವಹಿಸಿದರೆ ಸರಿಯಾಗದು ಎಂದು ಹೇಳಿತು. ಬಂಟಿಯ ಮಾತಿಗೆ ಒಪ್ಪಿ ಡಿಂಕುವು ಕಾಡಿನ ಎಲ್ಲ ಪ್ರಾಣಿಗಳನ್ನು ಸಾಕ್ಷಿಗೆ ಕರೆಯಿಸಿದವು. ಮಂಗವು ಒಂದು ಪ್ರಾರಂಭದ ಗೆರೆ ಎಳೆದು ಸೀಟಿ ಊದಿತು. ಆಮೆ ನಡೆಯಲು ಪ್ರಾರಂಭಿಸಿತು. ಮೊಲಕ್ಕೆ ನಡೆಯುವುದೆಂದರೆ ಕಷ್ಟವೇ ಸರಿ. ಹಾಗಾಗಿ ಓಡಲು ಶುರುಮಾಡಿತು. ಆಮೆ "ಇದು ಮೋಸ ನೀನು ನಡೆಯಲೇ ಬೇಕು. ಓಡಬಾರದು" ಎಂದು ಹೇಳಿತು. ಅದಕ್ಕೆ ಮೊಲವು "ನಾನು ಒಂದಷ್ಟು ದೂರ ಓಡಿ ಮರದಡಿಯಲ್ಲಿ ಕುಳಿತಿರುತ್ತೇನೆ. ನೀನು ಬಾ. ಹೇಗೂ ನಾನೇ ಗೆಲ್ಲುವುದು.." ಎಂದು ನಗುತ್ತ ಜಂಭದಿಂದ ಓಡಲು ಪ್ರಾರಂಭಿಸಿತು. ಉಳಿದ ಪ್ರಾಣಿಗಳು "ಇದು ಮೋಸ ಬಂಟಿ ಮೊಲವು ಮೋಸಗಾರ ಎಂದು ಜೋರಾಗಿ ಬೊಬ್ಬೆ ಹಾಕಲು ಪ್ರಾರಂಭಿಸಿದವು.
ಆದರೆ ಇದನ್ನೆಲ್ಲ ಕೇಳಿಸಿಕೊಳ್ಳದೇ ಮೊಲವು ಓಡುತ್ತಲೇ ಇತ್ತು. ಸುಸ್ತಾಗಿ ಒಂದು ದೊಡ್ಡ ಮರದ ಕೆಳಗೆ ಕುಳಿತುಕೊಂಡಿತು. ಆ ಮರದ ಮೇಲೆ ಕಾಡುಬೆಕ್ಕು ತನ್ನ ಅಂದಿನ ಆಹಾರಕ್ಕಾಗಿ ಕಾದು ಕುಳಿತಿತ್ತು. ದಣಿದ ಮೊಲವನ್ನು ನೋಡಿ ಸುತ್ತಮುತ್ತ ಯಾರು ಇಲ್ಲದ್ದನ್ನು ಗಮನಿಸಿತು. ಕದಲದೇ ಕುಳಿತಿರುವುದನ್ನು ನೋಡಿ ಹೊಂಚುಹಾಕಿ ಅದರ ಮೇಲೆ ಎರಗಿ ಕತ್ತಿಗೆ ಬಾಯಿ ಹಾಕಿತು. ಡಿಂಕು ಮೊಲಕ್ಕೆ ಕೂಗಲು ಆದರೆ ಉಸಿರು ಕಟ್ಟಿ ಸತ್ತುಹೋಯಿತು. ಇತ್ತ ಬಂಟಿಆಮೆ ನಿಧಾನವಾಗಿ ನಡೆಯುತ್ತ ಬಂದು ಒಂದೊಂದೇ ಮರದ ಕೆಳಗೆ ನೋಡಿದರೂ ಮೊಲವು ಕಾಣಿಸಲಿಲ್ಲ. ನಂತರ ತನ್ನ ಗುರಿಯತ್ತ ಸಾಗಿ ನೋಡಿದರೂ ಅಲ್ಲಿ ಕೂಡ ಮೊಲವಿರಲಿಲ್ಲ. ಉಳಿದ ಪ್ರಾಣಿಗಳೆಲ್ಲ ಆಮೆಯೇ ವಿಜೇತ ಎಂದು ಸಂತಸದಿಂದ ಕುಣಿದಾಡಿದವು. ಮೊಲವು ಇನ್ನೂ ಬರಲಿಲ್ಲ ಎಂದು ಹೇಳಿ ಹುಡುಕಲು ಶುರುಮಾಡಿದವು.
ಕೊನೆಗೆ ರಕ್ತಸಿಕ್ತ ಮೊಲವನ್ನು ಕಾಡುಬೆಕ್ಕು ತಿನ್ನುತ್ತಿರುವುದು ಕಾಣಿಸಿತು. ಉಳಿದ ಪ್ರಾಣಿಗಳು ಬಂದುದನ್ನು ನೋಡಿ ಹೆದರಿ ಸತ್ತ ಮೊಲವನ್ನು ಅಲ್ಲೇ ಬಿಟ್ಟು ಓಡಿ ಹೋಯಿತು. "ನಾನೇ ಶ್ರೇಷ್ಠ" ಎಂದು ಜಂಭ ಪಡಬಾರದು. ಅಲ್ಲದೇ ಅವಸರವೇ ಅಪಾಯಕ್ಕೆ ಕಾರಣವಾಗಿ ಮೊಲದ ಜೀವವೇ ಹೋಯಿತು.
.
.
ಕಥೆಗಾರ್ತಿ :- ಸಿಂಧು ಭಾರ್ಗವ್ .ಬೆಂಗಳೂರು-೨೧
No comments:
Post a Comment