Friday, 8 May 2020

ಮಕ್ಕಳ ನೀತಿ ಕಥೆ ಸ್ವಾರ್ಥಿಯಾಗದಿರಿ


ಮಕ್ಕಳ ಕಥೆ ೦೩:  ಸ್ವಾರ್ಥಿಯಾಗದಿರಿ


ಕಾನನದ ಮಧ್ಯದಲ್ಲಿ ಒಂದು ವಿಶಾಲವಾದ ಮರವಿತ್ತು. ಅದು‌ ಮುಗಿಲಿನಷ್ಟು ಎತ್ತರ ಹಾಗೆಯೇ ತನ್ನ ಅಗಲವಾದ ರೆಂಬೆಗಳನ್ನು ಚಾಚಿ ಎಲ್ಲಾ ಕಡೆ ಹರಡಿಕೊಂಡು ಬೆಳೆದಿತ್ತು. ಅದರಲ್ಲಿ ಒಂದಷ್ಟು ಗಿಡುಗನ ಗೂಡುಗಳು ಹಾಗೂ ಕಾಗೆಯ ಗೂಡುಗಳಿದ್ದವು.  ಎಲ್ಲವೂ ತಮ್ತಮ್ಮ ಗೂಡಿನಲ್ಲಿ ಮರಿಗಳ ಜೊತೆಗೆ ವಾಸವಾಗಿದ್ದವು. "ಚೀವ್ ಚೀವ್..." ಎಂಬ ಚಿಲಿಪಿಲಿಯು ಯಾವಾಗಲೂ  ಕೇಳಿ ಬರುತ್ತಿತ್ತು. ಗಿಡುಗನು ತನ್ನ ಗೂಡಿನ ಮೇಲೆಯೇ ಗಸ್ತು ಹೊಡೆಯುತ್ತಾ ಇರುತ್ತಿತ್ತು. ದೂರ-ದೂರಕೆ ಹಾರಿ ಹೋಗಿ ಗಂಡು ಗಿಡುಗವು ಆಹಾರ ತರುವ ತನಕ ಹೆಣ್ಣು ಗಿಡುಗವು ಮರಿಗಳನ್ನು ಕಾಯುವುದು ಅದರ ಜವಾಬ್ದಾರಿ ಆಗಿತ್ತು. ಒಮ್ಮೆ ಇದನ್ನೆಲ್ಲ ದೂರದಿಂದ ಗಮನಿಸುತ್ತಿದ್ದ ಕಾಗೆಗೆ, "ಆ ಗೂಡಿನಲ್ಲೇನಿರಬಹುದು. ಈ ಗಿಡುಗ ಏಕೆ ಗಸ್ತು ಹೊಡೆಯುತ್ತಿದೆ.."ಎಂಬ ಪ್ರಶ್ನೆ ಮೂಡಿತು‌. ಒಮ್ಮೆ ಹೋಗಿ ನೋಡಲೇಬೇಕು ಎಂಬ ಕುತೂಹಲ ಹೆಚ್ಚಿತು. ಆದರೆ ಆ ಹೆಣ್ಣು ಗಿಡುಗವೂ ಎಲ್ಲಿಗೂ ಕದಲುತ್ತ ಇರಲಿಲ್ಲ‌. ಅದರಿಂದ ಕಾಗೆಯೆ ಅತ್ತ ಕಡೆ ಹೋಗಲು ಭಯವಾಗುತ್ತಿತ್ತು.
ಒಮ್ಮೆ ಆ ಸಮಯ ಬಂದೇ ಬಿಟ್ಟಿತು. ಹೆಣ್ಣು ಗಿಡುಗ ಆಕಾಶದೆತ್ತರಕ್ಕೆ ಹಾರಿ ಮೋಡದ ಮರೆಯಲಿ ಮಾಯವಾಯಿತು. ಆಗ ಕಾಗೆಗೆ ತನ್ನ ಕೆಲಸಕ್ಕೆ ಇದೇ ಸರಿಯಾದ ಸಮಯ ಎಂದು ಮನದಲ್ಲೇ ಬಗೆದು ಗಿಡುಗನ ಗೂಡಿನ ಬಳಿ ಹಾರಿ ಬಂದಿತು. ಅಲ್ಲಿ ನೋಡಿದರೆ ಪರಮಾಶ್ಚರ್ಯ. "  ಹದ್ದಿಗೆ ಪುಟ್ಟಪುಟ್ಟ ಮೂರು ಮರಿಗಳಿದ್ದವು. ಎಳೆಮರಿಗಳ ನೋಡಿ ಕಾಗೆಯ ಬಾಯಲ್ಲಿ ನೀರು ಬಂದಿತು. ಹೇಗಾದರೂ ಮಾಡಿ ಇದನ್ನು ಹೊತ್ತೊಯ್ದು ತನ್ನ ಮರಿಗಳಿಗೆ ಆಹಾರವಾಗಿ ಕೊಡಬೇಕು ಎಂಬ ಕೆಟ್ಟ ಆಲೋಚನೆ ಮಾಡಿತು. ಹಾಗೆಯೇ ಒಂದನ್ನು ಅಲ್ಲಿಯೇ ತಿಂದು, ಒಂದನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಸಾಯಿಸಿತು. ಹಾಗೆಯೇ ಸತ್ತ ಗಿಡುಗನ ಮರಿಯನ್ನು ಕಾಲಿನಲ್ಲಿ ಬಿಗಿಹಿಡಿತು ತನ್ನ ಗೂಡಿನತ್ತ ಹಾರಿಹೋಯಿತು.
ಅಲ್ಲಿ ನೋಡಿದರೆ ಏನ್ ಆಶ್ಚರ್ಯ. ಗಾಬರಿ ಹುಟ್ಟಿಸುವ ಘಟನೆ ನಡೆದಿತ್ತು. ತನ್ನ ಮರಿಗಳ ಪುಕ್ಕಗಳೆಲ್ಲ ಚೆಲ್ಲಪಿಲ್ಲಿಯಾಗಿ ಬಿದ್ದಿದ್ದವು. ಮರಿಗಳು ಕಾಣಿಸುತ್ತಿಲ್ಲ. "ಅಯ್ಯೋ... ನನ್ನ ಮರಿಗಳೆಲ್ಲಿ ??" ಎಂದು ಗೋಳಾಡಿತು. "ನಾನು ಅವುಗಳಿಗೆ ತಂದ ಈ ಹಸಿ ಮಾಂಸವನ್ನು ಏನು ಮಾಡಲಿ. ಇದನ್ನು ತಿನ್ನಲು ಈಗ ನನ್ನ ಮರಿಗಳೇ ಇಲ್ಲವಲ್ಲ .." ಎಂದು ರೋಧಿಸಿತು. ಆಗ ಮರದಿಂದ ಸರಕ್ಕನೇ ಸರಿದು ಹೋಗುತ್ತಿರುವ ಸರ್ಪವೊಂದು ಕಾಣಿಸಿತು. ಏನೆಂದು ಕಾಗೆ ಅದರ ಕಡೆಗೆ ಧಾವಿಸಿ ನೋಡಿದರೆ ತನ್ನ ಮರಿಯ ಹಸಿಮಾಂಸವನ್ನು ಬಾಯಲ್ಲಿ ಕಚ್ಚಿಕೊಂಡಿತ್ತು. ಸರಸರನೆ ಸರಿದು ಮಾಯವಾಯಿತು. ಆದರೆ ಆಗಸದಲ್ಲಿ ಗಿಡುಗ ಗಸ್ತು ಹೊಡೆಯುತ್ತಲೇ ಇದೆ. ಅಲ್ಲದೇ ಉಳಿದ ಒಂದು ಮರಿಯು ಗಾಬರಿಯಿಂದ ಕಿರುಚುತ್ತ ತಾಯಿ ಗಿಡುಗ ಬರುವುದನ್ನೇ ಕಾಯುತಲಿತ್ತು.
.
.
ನೀತಿ: ನಾವು ಕೇಡು ಬಯಸಿದರೆ ನಮಗೂ ಕೇಡು ಸಂಭವಿಸುತ್ತದೆ. ಕಾಗೆಯು ಹೇಗೆ ಗಿಡುಗನ ಮರಿಗಳನ್ನು ಸಾಯಿಸಿತೋ ಹಾಗೆಯೇ ಸರ್ಪವೂ ಕಾಗೆಯ ಮರಿಯನ್ನು ಸಾಯಿಸಿತ್ತು. ಹೆತ್ತ ಕರುಳಿನ ಸಂಕಟ ಎಲ್ಲದಕ್ಕೂ ಒಂದೇ ತೆರನಾಗಿರುತ್ತದೆ.
.
.

2.

ಚಂದ್ರನಿಗೆ ಪತ್ರ ಬರೆದ ಬಾಲಕಿ

ನಿಹಾರಿಕಾ ಎಂಬ ಒಂಬತ್ತು ವರ್ಷದ ಬಾಲಕಿಗೆ ರಾತ್ರಿ ಆಕಾಶವನ್ನು ನೋಡುವುದೆಂದರೆ ತುಂಬಾ ಇಷ್ಟ. ಪ್ರತಿದಿನ ಮಲಗುವ ಮುನ್ನ ಮನೆಯ ಮೇಲ್ಛಾವಣಿಗೆ ಹೋಗಿ ಚಂದ್ರನನ್ನು ನೋಡುತ್ತಿದ್ದಳು.

“ಚಂದ್ರನೇ, ನೀನು ಅಷ್ಟು ಎತ್ತರದಲ್ಲಿದ್ದರೂ ಪ್ರತಿದಿನ ನಮ್ಮನ್ನು ನೋಡುತ್ತೀಯಲ್ಲ!” ಎಂದು ಅವಳು ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತಿದ್ದಳು.

ಒಂದು ದಿನ ಶಾಲೆಯಲ್ಲಿ ಶಿಕ್ಷಕಿ ಮಕ್ಕಳನ್ನು ಕೇಳಿದರು,

“ನಿಮ್ಮ ಜೀವನದ ದೊಡ್ಡ ಕನಸು ಏನು?”

ಯಾರೋ ವೈದ್ಯರಾಗಬೇಕು ಎಂದರು. ಇನ್ನೊಬ್ಬರು ಶಿಕ್ಷಕರಾಗಬೇಕು ಎಂದರು. ಮತ್ತೊಬ್ಬರು ವಿಜ್ಞಾನಿಯಾಗಬೇಕು ಎಂದರು.

ನಿಹಾರಿಕಾ ಮಾತ್ರ ಮೌನವಾಗಿ ಕುಳಿತಿದ್ದಳು.

ಶಿಕ್ಷಕಿ ಅವಳನ್ನು ಕೇಳಿದರು,

“ನಿಹಾರಿಕಾ, ನಿನ್ನ ಕನಸು ಏನು?”

ಅವಳು ನಿಧಾನವಾಗಿ,

“ನಾನು ಒಂದು ದಿನ ಆಕಾಶದತ್ತ ಹೋಗಿ ಚಂದ್ರನನ್ನು ಹತ್ತಿರದಿಂದ ನೋಡಬೇಕು,” ಎಂದಳು.

ಕೆಲವು ಮಕ್ಕಳು ನಕ್ಕರು.

“ಚಂದ್ರನಿಗೆ ಹೋಗುತ್ತೀಯಾ? ಅದು ಹೇಗೆ ಸಾಧ್ಯ?” ಎಂದು ಒಬ್ಬ ಹುಡುಗ ಕೇಳಿದ.

ನಿಹಾರಿಕಾ ಏನೂ ಹೇಳಲಿಲ್ಲ. ಆದರೆ ಅವಳ ಕನಸು ಮಾತ್ರ ಇನ್ನಷ್ಟು ಗಟ್ಟಿಯಾಯಿತು.

ಆ ರಾತ್ರಿ ಅವಳು ಒಂದು ಬಿಳಿ ಕಾಗದ ತೆಗೆದುಕೊಂಡು ಚಂದ್ರನಿಗೆ ಪತ್ರ ಬರೆದಳು.

“ಪ್ರಿಯ ಚಂದ್ರನೇ,

ನಾನು ಒಂದು ದಿನ ನಿನ್ನನ್ನು ಹತ್ತಿರದಿಂದ ನೋಡಬೇಕು ಎಂದು ಕನಸು ಕಾಣುತ್ತಿದ್ದೇನೆ. ಈಗ ನೀನು ತುಂಬಾ ದೂರದಲ್ಲಿದ್ದೀಯ. ಆದರೆ ನಾನು ನನ್ನ ಕನಸನ್ನು ಬಿಟ್ಟುಕೊಡುವುದಿಲ್ಲ. ನಾನು ಓದುತ್ತೇನೆ, ಕಲಿಯುತ್ತೇನೆ ಮತ್ತು ಪ್ರಯತ್ನಿಸುತ್ತೇನೆ.

ಒಂದು ದಿನ ನಿನ್ನನ್ನು ಹತ್ತಿರದಿಂದ ನೋಡಲು ಸಾಧ್ಯವಾದರೆ, ನಿನಗೆ ಈ ಪತ್ರವನ್ನು ಓದಿ ತೋರಿಸುತ್ತೇನೆ.

ನಿನ್ನ ಸ್ನೇಹಿತೆ,
ನಿಹಾರಿಕಾ.”

ಅವಳು ಆ ಪತ್ರವನ್ನು ಮನೆಯ ಮೇಲ್ಛಾವಣಿಯಲ್ಲಿ ಕುಳಿತು ಚಂದ್ರನ ಕಡೆ ಎತ್ತಿ ತೋರಿಸಿದಳು.

ಮರುದಿನದಿಂದ ಅವಳು ತನ್ನ ಕನಸಿಗಾಗಿ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದಳು.

ವಿಜ್ಞಾನ ಪುಸ್ತಕಗಳನ್ನು ಓದಲು ಆರಂಭಿಸಿದಳು. ಗ್ರಹಗಳು, ನಕ್ಷತ್ರಗಳು ಮತ್ತು ಬಾಹ್ಯಾಕಾಶದ ಬಗ್ಗೆ ತಿಳಿದುಕೊಂಡಳು. ಶಾಲೆಯ ವಿಜ್ಞಾನ ಶಿಕ್ಷಕರನ್ನು ಪ್ರಶ್ನೆಗಳನ್ನು ಕೇಳುತ್ತಿದ್ದಳು.

ಒಮ್ಮೆ ಅವಳು ವಿಜ್ಞಾನ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಳು.

ಅವಳಿಗೆ ತುಂಬಾ ಬೇಸರವಾಯಿತು.

“ನನಗೆ ವಿಜ್ಞಾನವೇ ಸರಿಯಾಗಿ ಬರುತ್ತಿಲ್ಲ. ನಾನು ಹೇಗೆ ಬಾಹ್ಯಾಕಾಶದ ಬಗ್ಗೆ ಕಲಿಯಲಿ?” ಎಂದು ಅಳುತ್ತಾ ತಾಯಿಯ ಬಳಿ ಕೇಳಿದಳು.

ತಾಯಿ ಅವಳನ್ನು ಸಮಾಧಾನಪಡಿಸಿ,

“ಒಂದು ಪರೀಕ್ಷೆಯ ಅಂಕ ನಿನ್ನ ಕನಸಿನ ಗಾತ್ರವನ್ನು ನಿರ್ಧರಿಸುವುದಿಲ್ಲ. ತಪ್ಪಾದ ಜಾಗವನ್ನು ಕಂಡುಕೊಂಡಿದ್ದೀಯ. ಈಗ ಅದನ್ನು ಸರಿಪಡಿಸಿ ಮತ್ತೆ ಪ್ರಯತ್ನಿಸು,” ಎಂದರು.

ನಿಹಾರಿಕಾ ಮತ್ತೆ ಓದಲು ಪ್ರಾರಂಭಿಸಿದಳು.

ಪ್ರತಿದಿನ ಅರ್ಧ ಗಂಟೆ ವಿಜ್ಞಾನ ಓದುತ್ತಿದ್ದಳು. ಅರ್ಥವಾಗದ ವಿಷಯಗಳನ್ನು ಶಿಕ್ಷಕರನ್ನು ಕೇಳುತ್ತಿದ್ದಳು. ಕೆಲವು ತಿಂಗಳುಗಳ ನಂತರ ಅವಳ ಅಂಕಗಳು ಉತ್ತಮವಾದವು.

ಒಂದು ದಿನ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ನಡೆಯಿತು. ನಿಹಾರಿಕಾ “ನಮ್ಮ ಸೌರಮಂಡಲ” ಎಂಬ ಮಾದರಿಯನ್ನು ತಯಾರಿಸಿದಳು.

ಅವಳ ಮಾದರಿ ಎಲ್ಲರ ಗಮನ ಸೆಳೆಯಿತು.

ಶಿಕ್ಷಕಿ ಅವಳನ್ನು ವೇದಿಕೆಗೆ ಕರೆದು,

“ನಿಹಾರಿಕಾ, ನಿನ್ನ ಮಾದರಿ ಚೆನ್ನಾಗಿದೆ. ಆದರೆ ಅದಕ್ಕಿಂತ ನನಗೆ ಇಷ್ಟವಾದದ್ದು ನಿನ್ನ ಪ್ರಯತ್ನ,” ಎಂದರು.

ನಿಹಾರಿಕಾ ನಗುತ್ತಾ,

“ಮೇಡಂ, ನಾನು ಚಂದ್ರನಿಗೆ ಬರೆದ ಪತ್ರವನ್ನು ಇನ್ನೂ ಇಟ್ಟುಕೊಂಡಿದ್ದೇನೆ,” ಎಂದಳು.

ವರ್ಷಗಳು ಕಳೆದವು.

ನಿಹಾರಿಕಾ ದೊಡ್ಡವಳಾದಳು. ಅವಳು ವಿಜ್ಞಾನವನ್ನು ಆಸಕ್ತಿಯಿಂದ ಕಲಿತು, ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂದುವರಿಯುವ ಕನಸು ಕಂಡಳು.

ಒಂದು ದಿನ ತನ್ನ ಹಳೆಯ ಪೆಟ್ಟಿಗೆಯನ್ನು ತೆರೆದಾಗ ಬಾಲ್ಯದಲ್ಲಿ ಚಂದ್ರನಿಗೆ ಬರೆದಿದ್ದ ಪತ್ರ ಅವಳಿಗೆ ಸಿಕ್ಕಿತು.

ಅವಳು ಅದನ್ನು ಓದಿ ನಗುತ್ತಾ,

“ನಾನು ಇನ್ನೂ ಆ ಕನಸಿನ ದಾರಿಯಲ್ಲೇ ಇದ್ದೇನೆ,” ಎಂದಳು.

ಅವಳಿಗೆ ಆಗ ಒಂದು ವಿಷಯ ಸ್ಪಷ್ಟವಾಯಿತು.

ಕನಸು ಕಾಣುವುದು ಮೊದಲ ಹೆಜ್ಜೆ.

ಆದರೆ ಕನಸನ್ನು ನನಸಾಗಿಸಲು ಪ್ರತಿದಿನ ಮಾಡುವ ಸಣ್ಣ ಪ್ರಯತ್ನಗಳೇ ನಿಜವಾದ ಪ್ರಯಾಣ.

ಆ ರಾತ್ರಿ ನಿಹಾರಿಕಾ ಮತ್ತೆ ಆಕಾಶದತ್ತ ನೋಡಿದಳು.

ಚಂದ್ರನು ಎಂದಿನಂತೆ ದೂರದಲ್ಲಿದ್ದ.

ಆದರೆ ಈ ಬಾರಿ ಅವಳಿಗೆ ಅವನು ಇನ್ನಷ್ಟು ಹತ್ತಿರವಾಗಿರುವಂತೆ ಅನಿಸಿತು.

ನೀತಿ:

ದೊಡ್ಡ ಕನಸು ಕಾಣಲು ಹೆದರಬೇಡಿ. ಕನಸು ಎಷ್ಟೇ ದೂರದಲ್ಲಿದ್ದರೂ, ಅದನ್ನು ಸಾಧಿಸಲು ಪ್ರತಿದಿನ ಸಣ್ಣ ಹೆಜ್ಜೆ ಇಟ್ಟರೆ ಒಂದು ದಿನ ಗುರಿಯ ಹತ್ತಿರ ತಲುಪಬಹುದು.

ಕಥೆಗಾರ್ತಿ: ಸಿಂಧು ಭಾರ್ಗವ್. ಬೆಂಗಳೂರು-೨೧

No comments:

Post a Comment